ಶ್ರೀರಾಮ ನಮಗೆ ಸಾವಿರಾರು ವರ್ಷಗಳಿಂದ ಆದರ್ಶಪ್ರಾಯನಾಗಿದ್ದಾನೆ. ಆದರ್ಶ ಎನ್ನುವುದು ನಾವು ಈಗಿರುವ ಸ್ಥಿತಿಯ ಸೂಚಕ ಅಲ್ಲ, ಅದು ನಾವು ತಲುಪಬೇಕಾದ ಸ್ಥಿತಿ. ಶ್ರೀರಾಮನು ಆದರ್ಶಗಳಿಗೇ ಆದರ್ಶನಾಗಿದ್ದಾನೆ. ಋಜುಮಾರ್ಗದ ಜೀವನವಿಧಾನದ ಪರಿಪೂರ್ಣತೆಯನ್ನು ಅವನಲ್ಲಿ ಮಾತ್ರವೇ ನಾವು ಕಾಣುವುದು. ಪರಿಪೂರ್ಣತೆ ಎಂಬುದು ಯಾರೂ ಮುಟ್ಟಲಾರದ ಸ್ಥಿತಿ; ಆದರೆ ಆ ಸ್ಥಿತಿಯಲ್ಲೇ ಹುಟ್ಟಿರುವವನು ಶ್ರೀರಾಮ. ರಾಮಾಯಣದ ಆರಂಭದಲ್ಲಿಯೇ ನಾವು ಈ ಪೂರ್ಣತೆಯ ದರ್ಶನವನ್ನು ಮಾಡಬಹುದು. ನಾರದರನ್ನು ವಾಲ್ಮೀಕಿ ಮಹರ್ಷಿಗಳು ‘ಲೋಕದಲ್ಲಿ ಈಗ ಗುಣವಂತ ಯಾರಿದ್ದಾರೆ’ – ಎಂದೋ, ಅಥವಾ ‘ಧರ್ಮಿಷ್ಠ ಯಾರಿದ್ದಾರೆ’ ಎಂದೋ ಕೇಳಬಹುದಿತ್ತು. ಆದರೆ ಗುಣಗಳ ರಸಮಾಲೆಯನ್ನೇ ವಾಲ್ಮೀಕಿಗಳ ಪ್ರಶ್ನೆ ಪೋಣಿಸಿದೆ; ಧರ್ಮದ ವ್ಯಾಪಕ ಲಕ್ಷಣವನ್ನೇ ಅವರ ಪ್ರಶ್ನೆ ಸ್ಥಿರೀಕರಿಸಿದೆ. ಸುಗುಣಗಳ ಎಲ್ಲ ನಿಲುವುಗಳ ವಿಗ್ರಹವಾಗಿಯೂ, ಧರ್ಮದ ಎಲ್ಲ ಅಭಿವ್ಯಕ್ತಿಗಳ ಉತ್ಸವವಾಗಿಯೂ ’ರಾಮ’ ಎಂಬ ಮಹಾತತ್ತ್ವವು ರಾಮಾಯಣ ಎಂಬ ನುಡಿಗುಡಿಯಲ್ಲಿ ಪ್ರತಿಷ್ಠಾಪಿತವಾಗಿದೆ. ರಾಮನು ಧರ್ಮದ ವಿಗ್ರಹರೂಪ – ಎಂಬ ವಾಲ್ಮೀಕಿಗಳ ಹೇಳಿಕೆ ಸಾಧಾರಣವಾದುದಲ್ಲ.

ಧರ್ಮ ಎಂದರೆ ಏನು – ಎಂದು ವಿವರಿಸುವುದು ಸುಲಭವಲ್ಲ. ಅಂಥದ್ದರಲ್ಲಿ ವಾಲ್ಮೀಕಿಗಳು ರಾಮನನ್ನು ಧರ್ಮದ ವಿಗ್ರಹರೂಪವಾಗಿಯೇ ಕಾಣಿಸಿದ್ದಾರೆ. ‘ಧರ್ಮದ ವ್ಯಾಖ್ಯೆಯು ಮಾತಿಗೂ ಸಿಗುವಷ್ಟು ಆಕಾರನಿಷ್ಠವಾದುದಲ್ಲ ಎನ್ನುತ್ತೀರಲ್ಲವೆ? ನಾನು ಧರ್ಮದ ಭೌತಿಕರೂಪವನ್ನು, ಅಷ್ಟೇಕೆ ಜೀವಂತರೂಪವನ್ನೇ ತೋರಿಸಿಕೊಡುವೆ’ ಎಂಬ ಸಂಕಲ್ಪದಿಂದ ವಾಲ್ಮೀಕಿಗಳು ರಾಮನ ಕಥೆಯನ್ನು ರಾಮಾಯಣದಲ್ಲಿ ಕಂಡರಿಸಿದ್ದಾರೆ. ಧರ್ಮವೇ ರಾಮನ ರೂಪದಲ್ಲಿ ಅವತರಿಸಿ ಬಂದಿದೆ – ಎನ್ನುತ್ತಾರೆ, ಅವರು. ಈ ಮಾತನ್ನು ಪ್ರಜೆಗಳ ಮೂಲಕ ಹೇಳಿಸಿರುವುದೂ ವಿಶಿಷ್ಟವಾಗಿದೆ. ನಮಗೂ ಧರ್ಮ ಎಂದರೇನು ಎಂದು ಸ್ಫುರಣೆಯಾಗುತ್ತಿರುತ್ತದೆ. ಆದರೆ ಅದರ ದಾರಿಯಲ್ಲಿ ನಡೆಯುವ ಸಾಹಸವನ್ನು ನಾವು ಮಾಡಲಾರೆವು; ರಾಮ ಅವನ ಜೀವನದುದ್ದಕ್ಕೂ ಇಂಥ ಸಾಹಸವನ್ನೇ ಮಾಡಿದವನು. ಹೀಗಾಗಿಯೇ ರಾಮನನ್ನು ವಾಲ್ಮೀಕಿಗಳು ಕೇವಲ ‘ಪರಾಕ್ರಮಿ’ ಎಂದಷ್ಟೆ ಹೇಳುವುದಿಲ್ಲ, ಅವನು ‘ಸತ್ಯಪರಾಕ್ರಮಿ’ ಎಂದು ಮತ್ತೆ ಮತ್ತೆ ಕೊಂಡಾಡುತ್ತಾರೆ. ಶ್ರೀರಾಮನು ಕೋದಂಡದಿಂದ ಹೊರಗಿನ ರಕ್ಕಸರನ್ನಷ್ಟೆ ಕೊಂದವನಲ್ಲ; ಅದಕ್ಕೂ ಮೊದಲು ಅವನು ತನ್ನೊಳಗೆ ಯಾವ ರಾಕ್ಷಸಬುದ್ಧಿಯ ಪ್ರವೇಶಕ್ಕೂ ಅವಕಾಶವನ್ನೇ ಕೊಟ್ಟವನಲ್ಲ; ಶತ್ರುಗಳ ಪ್ರವೇಶಕ್ಕೇ ಅವಕಾಶ ಕೊಡದಷ್ಟು ಅವನು ತನ್ನ ಅಂತರಂಗವನ್ನು ಹುಟ್ಟಿನಿಂದಲೇ ಕಾಪಾಡಿಕೊಂಡಿದ್ದ. ಇದು ಅವನ ಸತ್ಯಪರಾಕ್ರಮದ ಶಕ್ತಿ. ರಾಮನು ಧರ್ಮದ ವ್ಯಾಖೆಯನ್ನಷ್ಟೆ ಮಾಡಿದವನಲ್ಲ, ಅದರಂತೆ ನಡೆದವನು. ಧರ್ಮ ತನ್ನ ಸ್ವರೂಪವನ್ನು ಕಂಡುಕೊಂಡದ್ದೇ ರಾಮನ ಮೂಲಕ.

‘ಧರ್ಮವನ್ನು ರಕ್ಷಿಸಿದವರನ್ನು ಧರ್ಮ ರಕ್ಷಿಸುತ್ತದೆ’ ಎಂಬ ಸೂತ್ರವೊಂದಿದೆಯಲ್ಲವೆ? ಶ್ರೀರಾಮನು ಧರ್ಮವನ್ನು ತನ್ನ ಹೃದಯದಲ್ಲೇ ಇಟ್ಟುಕೊಂಡು, ಅದನ್ನು ಪ್ರೀತಿಯಿಂದ ಕಾಪಾಡಿ ಪೋಷಿಸಿದವನು. ಹಾಗಾದರೆ ಧರ್ಮ ಅವನನ್ನು ಹೇಗೆ ರಕ್ಷಿಸಿತು? ಶ್ರೀರಾಮ ಎಂದಿಗೂ ಸಂತೋಷದಿಂದ ವಂಚಿತನಾಗಲಿಲ್ಲ. ಶಾಶ್ವತ ಸೌಖ್ಯ; ಇದೇ ಧರ್ಮ ಅವನಿಗೆ ಕೊಟ್ಟ ಬಳುವಳಿ. ಅವನನ್ನು ಎಂದೂ ಉದ್ವೇಗ, ವಿಷಾದಗಳಂಥವು ಕಾಡಲಿಲ್ಲ; ಅವನು ಸದಾ ತನ್ನಲ್ಲಿ ತಾನು, ಎಂದರೆ ತನ್ನ ಧರ್ಮದಲ್ಲಿ ತಾನು, ನೆಮ್ಮದಿಯಿಂದ ಇದ್ದವ. ತನ್ನನ್ನು ಅಯೋಧ್ಯೆಗೆ ಹಿಂದಕ್ಕೆ ಕರೆದುಕೊಂಡು ಹೋಗಲು ಬಂದಿದ್ದ ಭರತನಿಗೆ ಅವನು ಹೇಳುವ ಮಾತೊಂದನ್ನು ಮೆಲುಕು ಹಾಕಬಹುದು: ‘ನೀನು ಅಯೋಧ್ಯೆಯಲ್ಲಿ ರಾಜನಾಗಿ ಬೆಳಗು; ನಾನಿಲ್ಲಿ ಕಾಡಿನಲ್ಲಿ ರಾಜನಾಗಿ ವಿಹರಿಸುವೆ. ನೀನು ಅಲ್ಲಿ ಶ್ವೇತಚ್ಛತ್ರದ ನೆರಳಿನಲ್ಲಿ ಸುಖವಾಗಿರು; ನಾನಿಲ್ಲ ಮರದ ನೆರಳಿನಲ್ಲಿ ಹಾಯಾಗಿರುವೆ.’ ಧರ್ಮವನ್ನು ನಾವು ಕಾಪಾಡಿದರೆ, ಅದು ನಮ್ಮನ್ನು ಕಾಪಾಡುವ ಪರಿ ಹೀಗೆ; ಅದು ನಮ್ಮ ನೆಮ್ಮದಿಯನ್ನು ಎಲ್ಲಿದ್ದರೂ ಹೇಗಿದ್ದರೂ ಎಂದಿಗೂ ಕೆಡಲು ಬಿಡದು. ಶ್ರೀರಾಮನಲ್ಲಿ ನಾವು ಕಾಣುವ ಧರ್ಮದ ಹೊಳಪು ಇಂಥದ್ದು: ಎಂದೂ ಕೆಡದ ಧರ್ಮದ ಹುರುಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.