ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ: ಸೃಷ್ಟಿಯ ಅಳತೆಗೋಲು

Last Updated 27 ಜನವರಿ 2023, 22:13 IST
ಅಕ್ಷರ ಗಾತ್ರ

ವೇದಗಳಲ್ಲಿ ಸೂರ್ಯನನ್ನು ಸೃಷ್ಟಿಕ್ರಿಯೆಯ ಮಾನದಂಡ ಎಂದು ಕರೆಯಲಾಗಿದೆ. ಇದೊಂದು ವಿಶೇಷವಾದ ವಿಶೇಷಣ. ಯಾವುದೇ ನಿರ್ಮಾಣಕಾರ್ಯಕ್ಕೂ ನಮಗೊಂದು ಅಳತೆಗೋಲು ಬೇಕು. ಹೀಗೆಯೇ ಸೃಷ್ಟಿಕಾರ್ಯಕ್ಕೂ ದೇವತೆಗಳಿಗೆ ಅಳತೆಗೋಲೊಂದು ಬೇಕಾಯಿತಂತೆ. ಯಾವ ಲೆಕ್ಕಾಚಾರದಲ್ಲಿ ಸೃಷ್ಟಿಯ ವಿವರಗಳು ಸಿದ್ಧವಾಗಬೇಕು ಎಂಬ ಎಣಿಕೆಗೆ ಒದಗುವ ಮಾನದಂಡ. ಹೀಗೆ ಒದಗಿದ ಮಾನದಂಡವೇ ಸೂರ್ಯ.

ಸೃಷ್ಟಿಕಾರ್ಯದಲ್ಲಿ ಸೂರ್ಯನು ಮಾನದಂಡವಾಗಿ ಒದಗಿದ್ದು ಒಂದು ಸಂಕೇತವೇ ಇರಬಹುದು. ಆದರೆ ನಮ್ಮ ನಿತ್ಯಜೀವನದ ನಿರ್ಮಾಣಕ್ಕಂತೂ ಸೂರ್ಯನೇ ಮಾನದಂಡ ಎನ್ನುವುದು ದಿಟ. ಇಡಿಯ ನಮ್ಮ ಜೀವನವೇ ಸೂರ್ಯನನ್ನು ಆಶ್ರಯಿಸಿದೆ; ಅವನ ಬೆಳಕು ಮತ್ತು ಶಾಖ – ಎರಡೂ ಜೀವಸಂಕುಲಕ್ಕೆ ಅನಿವಾರ್ಯವಾಗಿರುವ ಶಕ್ತಿಯ ಮೂಲಗಳೇ ಹೌದು. ಈ ವಾಸ್ತವವನ್ನು ನಮ್ಮವರು ಬಹಳ ಹಿಂದೆಯೇ ತಿಳಿದುಕೊಂಡಿದ್ದರು. ನಮ್ಮ ಜೀವನವನ್ನು ಕಟ್ಟಿಕೊಡುವ ಸೂರ್ಯನಿಗೆ ಸಲ್ಲಿಸುವ ಕೃತಜ್ಞತೆಯ ದ್ಯೋತಕವಾಗಿ ಅವನನ್ನು ಆರಾಧಿಸುವ ಪದ್ಧತಿಯೂ ಆರಂಭವಾಯಿತು. ನಮ್ಮ ಹಲವು ಹಬ್ಬ–ಹರಿದಿನಗಳು ಸೂರ್ಯಕೇಂದ್ರಿತವಾಗಿಯೇ ಆಚರಣೆಗೆ ಬಂದಿರುವುಸು ಸ್ಪಷ್ಟ. ಸೂರ್ಯನು ಕಾಲಗಣನೆಗೂ ಸಂಕೇತವಷ್ಟೆ. ಸೂರ್ಯನ ರಥಗಳು ಏಳು; ಇದು ವಾರಗಳಿಗೆ ಸಂಕೇತ. ಅವನ ರಥಕ್ಕೆ ಹನ್ನೆರಡು ಅರಗಳು; ಇವು ಮಾಸಗಳಿಗೆ ಸಂಕೇತ. ಹೀಗೆಲ್ಲ ಎಣಿಕೆ ಮಾಡಬಹುದೆನ್ನಿ.

ಸೂರ್ಯನ ಹೆಸರಿನಲ್ಲಿ ನಡೆಯುವ ಪರ್ವಗಳಲ್ಲಿ ‍ಪ್ರಮುಖವಾಗಿರುವುದು ’ರಥಸಪ್ತಮಿ’. ಸೂರ್ಯನು ಇಂದು ರಥವನ್ನು ಏರುತ್ತಾನಂತೆ. ನಾವು ಈ ನಂಬಿಕೆಯ ಧ್ವನಿಯನ್ನು ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳ ಮೂಲಕ ಗ್ರಹಿಸಬಹುದು. ರಥವನ್ನು ಏರುವುದು – ಎಂದರೆ ಸೂರ್ಯನು ಸಂಚಾರಕ್ಕೆ ಹೊರಟ ಎಂದು ಅರ್ಥ. ಎಂದರೆ ಅವನ ಶಾಖ–ಬೆಳಕುಗಳು ನಮಗೆ ಸಮೃದ್ಧವಾಗಿ ಸಿಗುವ ಕಾಲ ಸನ್ನಿಹಿತವಾಯಿತು ಎಂದು ತಾತ್ಪರ್ಯ. ಚಳಿ ಕಡಿಮೆಯಾಗುತ್ತಿದೆ; ನಾವು ಬೇಸಿಗೆಗೆ ಹತ್ತಿರವಾಗುತ್ತಿದ್ದೇವೆ ಎಂಬುದನ್ನು ರಥಸಪ್ತಮಿ ಸೂಚಿಸುತ್ತದೆ. ಇಂದು ಸೂರ್ಯನು ಜನಿಸಿದ ದಿನ ಎಂಬ ಎಣಿಕೆಯೂ ಉಂಟು.

ರಥಸಪ್ತಮಿಯಂದು ಸೂರ್ಯನ ಪೂಜೆಯನ್ನು ಹಲವು ವಿಧಗಳಲ್ಲಿ ನೆರವೇರಿಸುವುದುಂಟು. ಅವನಿಗೆ ಇಂದು ವಿಶೇಷ ಅರ್ಘ್ಯವನ್ನು ಕೊಡಲಾಗುತ್ತದೆ. ವೈದಿಕ ಮಾರ್ಗದಲ್ಲಿಯೋ ಅಥವಾ ಅವೈದಿಕ ಮಾರ್ಗದಲ್ಲಿರೋ – ಒಟ್ಟಿನಲ್ಲಿ ಪ್ರತಿಯೊಬ್ಬ ಶ್ರದ್ಧಾಳುವೂ ಬೆಳಗ್ಗೆ ಎದ್ದ ಕೂಡಲೇ ಮಾಡುವ ಮೊದಲ ಕರ್ತವ್ಯ ಎಂದರೆ ಸೂರ್ಯನಿಗೆ ಕೈ ಮುಗಿಯುವುದೇ ಹೌದು. ಪ್ರತಿದಿನದ ಸಂಧ್ಯಾವಂದನೆಯಲ್ಲೂ ನಾವು ಮಾಡುವುದು ಸೂರ್ಯನ ಪ್ರಾರ್ಥನೆಯನ್ನೇ. ನಮ್ಮ ಬುದ್ಧಿಶಕ್ತಿಯು ಒಳ್ಳೆಯ ದಿಕ್ಕಿನ ಕಡೆಗೆ ಮುಖ ಮಾಡಲಿ ಎಂಬುದೇ ಗಾಯತ್ರೀಮಂತ್ರದ ತಾತ್ಪರ್ಯ. ಸೂರ್ಯನು ಜ್ಞಾನಕ್ಕೂ ಸಂಕೇತ. ಬೆಳಕನ್ನು ನಾವು ಅರಿವಿನ ರೂಪ ಎಂದೇ ಎಣಿಸುತ್ತೇವೆ. ಬೆಳಕಿಲ್ಲದೆ ಏನೂ ಕಾಣದು; ಹೀಗೆಯೇ ಅರಿವಿಲ್ಲದೆ ಜೀವನವೇ ಕಾಣದು – ಎಂಬ ಸೂತ್ರವನ್ನು ಸೂರ್ಯೋಪಾಸನೆಯಲ್ಲಿ ಕಾಣಬಹುದು.

ಆರೋಗ್ಯಕ್ಕೂ ಸೂರ್ಯನಿಗೂ ನೇರ ನಂಟು. ಸೂರ್ಯನ ಕಿರಣಗಳು ನಮ್ಮ ಆರೋಗ್ಯದ ರಕ್ಷಣೆಗೆ ಅತ್ಯಂತ ಆವಶ್ಯಕ. ನಮ್ಮೆಲ್ಲರ ಚಟುವಟಿಕೆಗಳು ಅವನ ಬೆಳಕನ್ನೇ ಆಶ್ರಯಿಸಿವೆ. ಈ ತತ್ತ್ವವನ್ನು ಸೂಚಿಸಲು ಈ ದಿನ ‘ಸೂರ್ಯನಮಸ್ಕಾರ‘ವನ್ನು ಮಾಡುವುದುಂಟು. ಸೂರ್ಯನಮಸ್ಕಾರದ ಮಂತ್ರಗಳು ಇಡಿಯ ಸೂರ್ಯತತ್ತ್ವದ ಮೇಲೆ ಬೆಳಕನ್ನು ಚೆಲ್ಲುತ್ತವೆ. ಇಂದು ಎಕ್ಕದ ಎಲೆಗಳನ್ನು ನಮ್ಮ ಶರೀರಕ್ಕೆ ಅಲಂಕರಿಸಿಕೊಂಡು ಸ್ನಾನ ಮಾಡುವುದುಂಟು. ಎಕ್ಕದ ಗಿಡ ಸೂರ್ಯನ ಪ್ರತಿನಿಧಿ. ಒಟ್ಟಿನಲ್ಲಿ ರಥಸಪ್ತಮಿಯ ಸೂರ್ಯನ ಆರಾಧನೆಯಲ್ಲಿ ನಾವು ನಮ್ಮ ನೆಲದ ಸಾಂಸ್ಕೃತಿಕ ಆಧ್ಯಾತ್ಮಿಕ ಆಧಿಭೌತಿಕ ವಿವರಗಳನ್ನು ಧಾರಾಳವಾಗಿಯೇ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT