ಶನಿವಾರ, ಏಪ್ರಿಲ್ 4, 2020
19 °C
Vachanamrutha

ಪರರ ಸತ್ಯ ನಮ್ಮದಲ್ಲ

ಪ್ರಜ್ಞಾ ಮತ್ತಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿಯುವವರನಾರನೂ ಕಾಣೆ
ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ
ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚವ
ಕೆಡಿಸುವವರನಾರನೂ ಕಾಣೆನಯ್ಯಾ
ಆದ್ಯರ ವೇದ್ಯರ ವಚನಗಳಿಂದ
ಅರಿದೆನೆಂಬುವರು ಅರಿಯಲಾರರು ನೋಡಾ
ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು
ಅಮುಗೇಶ್ವರಲಿಂಗವ ನಾನೆ ಅರಿಯಬೇಕು

ಜಗತ್ತಿಡೀ ಮಹಿಳಾ ದಿನಾಚರಣೆಯ ಸಂಭ್ರಮದ ಹೊಸ್ತಿಲಲ್ಲಿ ನಿಂತಿದೆ. ನಾವಿನ್ನೂ ಮಹಿಳೆಯರು ವೈಚಾರಿಕ ಸ್ವಾಂತಂತ್ರ್ಯವಂಚಿತೆಯರು.  ಆದರೆ ಹದಿನೈದನೇ ಶತಮಾನದಲ್ಲಿಯೇ ವೈಚಾರಿಕತೆಯ ಕಿಡಿಯನ್ನು ಪ್ರಖರವಾಗಿ ಚಿಮ್ಮಿಸುವ ಈ ವಚನವನ್ನು ಓದಿದಾಗ ಇದರಲ್ಲಿರುವ ಸ್ವಾವಲಂಬನೆಯ ಉಜ್ವಲ ಹೊಳಪಿಗೆ ಮನಸೋಲದಿರಲು ಸಾಧ್ಯವೇ ಇಲ್ಲ.

ಇದು ಅಮುಗೆ ರಾಯಮ್ಮನ ವಚನ. ಅತ್ಯಂತ ಆಧುನಿಕರು ಎಂದು ತಮ್ಮನ್ನು ತಾವು ಕರೆದುಕೊಳ್ಳುವ ನವಯುಗದ ಸ್ತ್ರೀಯರೂ ಕೂಡ ತಮ್ಮ ಸಹಾಯಕ್ಕಾಗಿ ಗಂಡನನ್ನೋ ಮಗನನ್ನೋ ತಂದೆಯನ್ನೋ ಅವಲಂಬಿಸುತ್ತಾರೆ. ಆದರೆ ರಾಯಮ್ಮ ಎಷ್ಟು ಕಠೋರವಾಗಿ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡಿದ್ದಾಳೆ ಎಂದು ಆಶ್ಚರ್ಯವೆನಿಸುತ್ತದೆ.

ಕಣ್ಣೊಳಗಣ ಕಟ್ಟಿಗೆ ಎಂದರೆ ದೃಷ್ಟಿಯ ತೊಡಕು. ಅಂದರೆ ಸತ್ಯವನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಇರುವ ಅಡಚಣೆಗಳು. ಜೀವನದ ಕಠೋರ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳಲು ಹಲವಾರು ಅಡ್ಡಿ-ಆತಂಕಗಳು ಇರುತ್ತವೆ. ಕೆಲವರಂತೂ ಹುಸಿಭ್ರಮೆಗಳಲ್ಲಿಯೇ ಇಡೀ ಜೀವನವನ್ನು ಕಳೆದುಬಿಡುತ್ತಾರೆ. ಬೇರೆ ಯಾರಿಂದಲೋ ನಮ್ಮ ಉದ್ಧಾರವಾಗುತ್ತದೆ ಎಂದು ನಂಬಿಕೊಳ್ಳುವುದೇ ಅತ್ಯಂತ ದೊಡ್ಡ ಮೂರ್ಖತನ. ಹೆಣ್ಣುಮಕ್ಕಳಂತೂ ಇಂತಹ ಭ್ರಮೆಯಲ್ಲಿಯೇ ತಮ್ಮ ಜೀವನವನ್ನು ಪರಾವಲಂಬಿಯಾಗಿ ಮಾಡಿಕೊಂಡು ಆಲಸ್ಯದ ಘೋರ ಕೂಪದಲ್ಲಿ ಮುಳುಗಿರುತ್ತಾರೆ. ರಾಯಮ್ಮ ಬಹಳ ದಿಟ್ಟ ಹಾಗೂ ನೇರ ನುಡಿಗಳಿಂದ ಹೇಳುತ್ತಾಳೆ: ನಮ್ಮ ಕಾಲೊಳಗಿನ ಮುಳ್ಳು ಅಂದರೆ ಚಲನೆಗೆ ಇರುವ ಅಡ್ಡಿ-ಆತಂಕಗಳನ್ನು ನಾವೇ ನಿವಾರಿಸಿಕೊಳ್ಳಬೇಕು. ಅನೇಕ ಯುವತಿಯರು ತಮ್ಮ ಕುಟುಂಬದ ಬೆಂಬಲವಿಲ್ಲ ಅಥವಾ ಗಂಡ-ಮಕ್ಕಳು ಪ್ರೋತ್ಸಾಹಿಸುವುದಿಲ್ಲೆಂಬ ವಿಚಾರವನ್ನೇ ವೈಭವೀಕರಿಸಿಕೊಂಡು ಕ್ರಿಯಾಹೀನರಾಗಿ ಕುಳಿತಿರುತ್ತಾರೆ. ಅವರ ಮುಖಕ್ಕೆ ಹೊಡೆದಂತೆ ರಾಯಮ್ಮ ಸತ್ಯವನ್ನು ಬಿಚ್ಚಿಡುತ್ತಾಳೆ.

ಜೀವನಯಾನದಲ್ಲಿ ವೈಯಕ್ತಿಕ ಸಾಧನೆಗೆ ಇರುವ ಎಲ್ಲ ಅಡ್ಡಿ–ಆತಂಕಗಳನ್ನು ನಾವೇ ಖುದ್ದಾಗಿ ನಿವಾರಿಸಿಕೊಳ್ಳಬೇಕು. ಎಷ್ಟೋ ಸಲ ನಾವು ಇತರರಲ್ಲಿ ದೋಷ ಹೊರಿಸಿ ಸುಮ್ಮನಾಗಲು ಮುಖ್ಯ ಕಾರಣವೆಂದರೆ ನಮ್ಮೊಳಗಿನ ಅಹಂಕಾರ. ಅದರಿಂದಲೇ ನಾವು ಮಾನ-ಅವಮಾನ ಎಂಬಿತ್ಯಾದಿ ನೆಪವೊಡ್ಡಿ ಕುಳಿತಿರುತ್ತೇವೆ. ನಮ್ಮೊಳಗಿನ ಎಷ್ಟೋ ಕ್ಷುಲ್ಲಕ ಬುದ್ಧಿಗೆ ಕಾರಣವಾಗುವುದು ಆಂತರ್ಯದಲ್ಲಿರುವ ಮಾಯಾಪ್ರಪಂಚ. ಅದನ್ನು ನಾವೇ ಸ್ವತಃ ಸುಟ್ಟು ಹಾಕಬೇಕು. ನಮ್ಮ ಜೀವನದ ಅಂತಿಮ ಗುರಿಯೇನೆಂಬುದು ನಮಗಲ್ಲದೇ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವೇ ಇಲ್ಲ. ಆ ಗುರಿಯನ್ನು ತಲುಪುವುದನ್ನೇ ನಾವು ಸಾಕ್ಷಾತ್ಕಾರ. ಅದೇ ನಮ್ಮ ದೇವರು. ಅದನ್ನು ರಾಯಮ್ಮ ಅಮುಗೇಶ್ವರಲಿಂಗ ಎನ್ನುತ್ತಾಳೆ. ಅದೇನೆಂಬ ದಿವ್ಯಜ್ಞಾನವನ್ನು ನಾವೇ ಸಂಪಾದಿಸಿಕೊಳ್ಳಬೇಕು. ನಮ್ಮ ಆತ್ಮೋದ್ಧಾರ ನಮ್ಮಿಂದ ಮಾತ್ರ ಸಾಧ್ಯವೆನ್ನುವುದು ಆಕೆಯ ಅಭಿಮತ. ನನಗೆ ನಾನೇ ದಿಕ್ಕು.

ನನಗೆ ನಾನೇ ಗುರಿ ಮತ್ತು ಗುರು ಎಂಬ ದಿವ್ಯಮಂತ್ರವನ್ನು ಎಷ್ಟು ಚೆನ್ನಾಗಿ ವಿವರಿಸಿದ್ದಾಳೆ. ಆದ್ಯರ ವೇದ್ಯರ ಅಂದರೆ ತಿಳಿವಳಿಕೆಯುಳ್ಳವರ ಅಥವಾ ಜ್ಞಾನಿಗಳ ವಚನಗಳನ್ನು ಓದುವುದರ ಮೂಲಕ ತಾನೂ ಅರಿವನ್ನು ಪಡೆದುಕೊಂಡೆ ಎಂದು ಹೇಳುವವರು ಯಾರೂ ಇಲ್ಲ. ಏಕೆಂದರೆ ಪ್ರತಿಯೊಬ್ಬರೂ ತಮ್ಮ ಜೀವನದಿಂದಲೇ ತಮ್ಮ ದರ್ಶನವನ್ನು ಪಡೆಯಬೇಕು. ಬೇರೆಯವರು ಕಂಡುಕೊಂಡ ಸತ್ಯ ನಮ್ಮದಾಗಲು ಸಾಧ್ಯವಿಲ್ಲ. ನಮ್ಮ ಒಳಗಿನ ಅಡಚಣೆಗಳನ್ನು ನಿವಾರಿಸಿಕೊಂಡು, ತನ್ಮೂಲಕ ಆಂತರ್ಯದ ಶಕ್ತಿಯನ್ನು ಹೆಚ್ಚಿಸಿಕೊಂಡು ನಮ್ಮ ಗುರಿಗಳ ಕಡೆಗೆ ಚಲಿಸಬೇಕು. ಇಂತಹ ಸ್ವಾವಲಂಬಿ ನಿಲುವಿನಲ್ಲಿಯೇ ನಮ್ಮ ಉದ್ಧಾರ ಅಡಗಿಕೊಂಡಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)