ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ಒಲೆಯ ಬೆಂಕಿ ಒಡಲನ್ನು ಸುಡದೆ...

Last Updated 4 ಜೂನ್ 2020, 3:27 IST
ಅಕ್ಷರ ಗಾತ್ರ

ಕುಡಿವ ನೀರೆನ್ನಬಹುದೆ ನೀರಲ್ಲದ್ದುವಾಗ?
ಅಡುವ ಕಿಚ್ಚೆನ್ನಬಹುದೆ ಮನೆಯ ಸುಡುವಾಗ?
ಒಡಲು ತನ್ನದೆನಬಹುದೆ ಪುಣ್ಯ ಪಾಪವನುಂಬಾಗ?
ಜೀವ ತನ್ನದೆನ್ನಬಹುದೆ ಮಿಕ್ಕು ಹೋಹಾಗ?
ಇವನೊಡೆ ಬಡಿದು ಕಳೆ ಎಂದಾತ ಅಂಬಿಗರ ಚೌಡಯ್ಯ

ಬಸವಣ್ಣನವರ ಸಮಕಾಲೀನನಾಗಿದ್ದ ಚೌಡಯ್ಯನು ದೋಣಿ ನಡೆಸುವ ಕಾಯಕ ಮಾಡುತ್ತಿದ್ದರಿಂದ ಅಂಬಿಗರ ಚೌಡಯ್ಯ ಎಂದು ನಾಮಾಂಕಿತಗೊಂಡಿದ್ದನು. ಆ ಕಾಲದ ಶೋಷಿತ ವರ್ಗದ ಪ್ರತಿನಿಧಿಯಾಗಿ, ಶ್ರೇಷ್ಠ ಅನುಭಾವಿಯಾಗಿ ಮತ್ತು ನೇರ-ನಿಷ್ಠುರ ನುಡಿಯ ವಚನಕಾರನಾಗಿ ಹೆಸರುವಾಸಿಯಾಗಿದ್ದನು. ಇವನ 278 ವಚನಗಳು ಲಭ್ಯ.

ಪ್ರಸ್ತುತ ಸಂದರ್ಭಕ್ಕೆ ಸೂಕ್ತವಾಗುವ ಈ ವಚನಕ್ಕೆ ಅಪರಿಮಿತ ಅರ್ಥವಿಸ್ತಾರವಿದೆ. ಜನಜೀವನವು ಸಾಮಾನ್ಯವಾದ ಸ್ಥಿತಿಯಲ್ಲಿದ್ದಾಗ ನಾವು ಬದುಕುವ ಕ್ರಮಕ್ಕೂ ಗಂಡಾಂತರದ ವೇಳೆಯಲ್ಲಿ ಬದುಕನ್ನು ಉಳಿಸಿಕೊಳ್ಳಲು ಹೆಣಗುವ ರೀತಿಗೂ ಬಹಳ ವ್ಯತ್ಯಾಸವಿರುತ್ತದೆಯೆಂಬ ಮಾತು ವರ್ತಮಾನಕ್ಕೂ ಯೋಗ್ಯವಾದ ಉಪದೇಶವೇ ಆಗಿದೆ.

ನೀರನ್ನು ಜೀವದಾಯಿನಿ ಎಂದು ಕರೆಯುತ್ತೇವೆ. ಸಕಲ ಜೀವಿಗಳಿಗೂ ಕುಡಿಯಲು ಬೇಕಾದ ಅಮೃತವೆಂದೇ ಭಾವಿಸುತ್ತೇವೆ. ಆದರೆ ನೀರಿನ ಮಡುವಿನಲ್ಲಿ ಅದ್ದಿ ಮುಳುಗಿಸಿ ಕೊಲ್ಲುವಾಗ ನೀರನ್ನು ನಾವು ನೋಡುವ ದೃಷ್ಟಿ ಬದಲಾಗಲೇ ಬೇಕಲ್ಲವೆ? ಮೂರು ಹೊತ್ತು ಅಡುಗೆ ಮಾಡುವಾಗ ಪದಾರ್ಥಗಳನ್ನು ಬೇಯಿಸಲು ಬೆಂಕಿ ಬೇಕೇ ಬೇಕು. ಹಾಗೆಂದು ಬೆಂಕಿಯ ರೌದ್ರರೂಪವನ್ನು ನಾವು ಮರೆಯುವಂತಿಲ್ಲ. ಮನೆಯನ್ನು ಸುಡುತ್ತಿರುವಾಗ ಅದೇ ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತೇವೆ. ಈ ಎರಡೂ ಉದಾಹರಣೆಗಳ ಮೂಲಕ ಚೌಡಯ್ಯನವರು ಹೇಳಬೇಕೆಂದಿರುವುದೇನೆಂದರೆ ಸಾಂದರ್ಭಿಕವಾಗಿ ವಿವೇಚನೆಯ ಮೂಲಕ ವಸ್ತುಪ್ರಪಂಚದ ಮಹಿಮೆಯನ್ನು ಗ್ರಹಿಸಬೇಕೇ ಹೊರತು ಇಲ್ಲಿ ‘ಇದಮಿತ್ಥಂ‘ ಎಂಬ ಕುರುಡುಜ್ಞಾನದಿಂದ ಬದುಕಲು ಸಾಧ್ಯವಿಲ್ಲ. ನೀರಾಗಲೀ ಬೆಂಕಿಯಾಗಲೀ ನಮ್ಮ ಬದುಕಿಗೆ ಪೂರಕವಾದ ಸಾಂಗತ್ಯವನ್ನು ನೀಡುತ್ತವೆ. ಹಾಗೆಂದು ಅವುಗಳ ಜೊತೆಗಿನ ಸಹವಾಸದಲ್ಲಿ ನಿರಂತರವಾದ ಎಚ್ಚರಿಕೆ ನಮಗಿರಲೇಬೇಕು. ಯಾವಾಗ ಅನಾದರದೊಂದಿಗೆ ಉಪೇಕ್ಷೆಯ ಭಾವನೆಯಿಂದ ಅವುಗಳನ್ನು ತುಚ್ಛವಾಗಿ ನೋಡುತ್ತೇವೆಯೋ ಆಗ ಪ್ರವಾಹ ಅಥವಾ ಅಗ್ನಿ ದುರಂತಗಳು ಸಂಭವಿಸಿ ಜೀವಹಾನಿಯ ಅವಘಡಗಳು ಜರುಗುತ್ತವೆ.

ಈ ದೇಹ ಎನ್ನುವುದು ನಮ್ಮದು ನಿಜ. ಹಾಗೆಂದು ಪುಣ್ಯ-ಪಾಪಗಳ ಫಲವಾಗಿ ಬಂದಂತಹ ನೋವು-ನಲಿವುಗಳನ್ನು ನಿರಾಕರಿಸುವುದು ಅಸಹಜವಾಗುತ್ತದೆ. ಆ ಕ್ಷಣದಲ್ಲಿ ಈ ದೇಹದ ಮೋಹವನ್ನು ನಾವು ಮೀರಲೇಬೇಕು. ಯಾವಾಗ ಬೇಕಾದರೂ ನಮ್ಮ ದೇಹ ನಮ್ಮ ಆಸೆ-ಅಪೇಕ್ಷೆಗಳನ್ನು ಮೀರಿ ವೈಕಲ್ಯಕ್ಕೆ ಒಳಗಾಗಬಹುದು. ಹೇಗೆ ಈ ದೇಹದ ಸುಖವೂ ಶಾಶ್ವತವಲ್ಲವೋ ಅದೇ ರೀತಿಯಲ್ಲಿ ಜೀವವೂ ನಶ್ವರವಾದುದೇ ಆಗಿದೆ. ಈ ಸೃಷ್ಟಿಯ ಚರಾಚರ ಜೀವಿಗಳನ್ನು ನಡೆಸುವವನು ಬ್ರಹ್ಮಾಂಡದ ರಹಸ್ಯವನ್ನು ಮುಷ್ಠಿಯಲ್ಲಿರಿಸಿಕೊಂಡವನೂ ಆದ ಪರಮಾತ್ಮನನ್ನು ಸೇರುವುದೇ ನಮ್ಮೆಲ್ಲರ ಅಂತಿಮ ಗುರಿಯಾಗಿದೆ. ಅದಕ್ಕೆ ಪೂರಕವಾಗಿ ನಮ್ಮ ಸುತ್ತಲಿನ ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ನಮಗೆ ತಿಳಿದಿದೆ ಎಂದುಕೊಂಡಿದ್ದು ಹಾಗೆ ಅಲ್ಲವೇ ಅಲ್ಲ ಎಂದು ಮರುಕ್ಷಣದಲ್ಲಿ ಭಾಸವಾಗುವುದೇ ಈ ಜೀವನದ ಮರ್ಮವಾಗಿದೆ. ಪ್ರತಿ ಕ್ಷಣ ಹುಟ್ಟಿಕೊಳ್ಳುವ ಹೊಸ ಜ್ಞಾನವು ಮನುಷ್ಯನನ್ನು ಅಜ್ಞಾನಿಯೆಂದು ಸಾಬೀತುಪಡಿಸುತ್ತಲೇ ಇರುತ್ತದೆ. ಔóಷಧಿ ಕಂಡುಹಿಡಿದಷ್ಟೂ ಹೊಸ ವೈರಾಣುಗಳು ಹುಟ್ಟುತ್ತ ಸವಾಲು ಹಾಕುತ್ತವೆ. ಈ ಎಲ್ಲ ವೈರುದ್ಧ್ಯಗಳ ಜೊತೆ ಬಡಿದಾಡುತ್ತ ಕಳೆಯುವುದೇ ನಮ್ಮ ಬದುಕಿನ ಚೋದ್ಯ. ಸಂಘರ್ಷಗಳಿಂದ ಕೂಡಿದ ಜೀವನವೇ ನಮಗೆ ಗುರುವಾಗಿ ಪಾಠ ಕಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT