ಮಂಗಳವಾರ, ಸೆಪ್ಟೆಂಬರ್ 21, 2021
22 °C

ಮಾತಾ ಕೈವಲ್ಯಮಯಿ: ಅಜ್ಞಾನದ ಅದ್ಭುತ ಶಕ್ತಿ ಮಾಯೆ!

ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ Updated:

ಅಕ್ಷರ ಗಾತ್ರ : | |

Prajavani

ಎಷ್ಟೇ ಬಾರಿ ನಾವು ಬಯಸಿದ್ದು ಸಿಕ್ಕಿದ ಮೇಲೆ ನಮಗದು ನಿಜವಾಗಿಯೂ ಬೇಕಾಗಿರಲಿಲ್ಲ ಎಂಬ ಭಾವನೆ ಬರುತ್ತಿರುತ್ತದೆ. ಅದರ ಜಾಗದಲ್ಲಿ ಇನ್ನೊಂದು ಆಸೆ ಮೂಡಿರುತ್ತದೆ. ಅನೇಕ ಜನರು ತಮ್ಮ ಬೇಡಿಕೆಯ ನಿಜವಾದ ಸ್ವರೂಪ ಏನೆಂದು ತಿಳಿಯದೆ ಅದನ್ನು ಪ್ರಾಪಂಚಿಕ ವಸ್ತುವಿನ ಕಡೆಗೆ ತಿರುಗಿಸುತ್ತಾರೆ. ಆದರೆ, ನಮಗೆ ತೃಪ್ತಿ ದೊರೆಯುವುದು ಯಾವುದು ಶಾಶ್ವತವೋ, ಬದಲಾಗದ್ದೋ ಅದರಿಂದ ಮಾತ್ರ.

ಸಾಮಾನ್ಯವಾಗಿ ನಮಗೆ ಕಷ್ಟ ಬಂದಾಗ ಅದರೊಂದಿಗೆ ಹೊಂದಿಕೊಂಡು ನಮ್ಮ ಕಾಮನೆಗಳಿಗೆ ಅಂಟಿ ಕೊಳ್ಳುತ್ತೇವೆಯೇ ಹೊರತು, ನಮ್ಮ ದಾರಿ ಬದಲಿಸಿ ಸತ್ಯ, ಆನಂದಗಳ ಕಡೆಗೆ ನಮ್ಮ ಮನಸ್ಸನ್ನು ತಿರುಗಿಸುವುದಿಲ್ಲ.

ನಾವು ಎಷ್ಟೊಂದು ದೇಹ ಬದ್ಧರಾಗಿದ್ದೇವೆ ಎಂದರೆ ಎಲ್ಲಕ್ಕಿಂತ ಹೆಚ್ಚಾಗಿ ದೇಹ ಸುಖಕ್ಕೆ ಪ್ರಾಧಾನ್ಯತೆ ನೀಡುತ್ತೇವೆ. ಎಷ್ಟೇ ಹೊಡೆತ ಬಿದ್ದರೂ ನಾವು ಅದಕ್ಕೇ ಹತಾಶರಾಗಿ ಅಂಟಿಕೊಳ್ಳುತ್ತೇವೆ.

ಶ್ರೀಶಂಕರಾಚಾರ್ಯರು ತಮ್ಮ ವಿವೇಕ ಚೂಡಾಮಣಿಯಲ್ಲಿ ಹೇಳಿರುವಂತೆ...‘ಜಿಂಕೆಯು ಬೇಟೆಗಾರನು ಮಾಡುವ ಶಬ್ಧದಿಂದಲೂ, ಆನೆಯು ಹೆಣ್ಣಾನೆಯ ಸ್ಪರ್ಶದಿಂದಲೂ, ಮಿಡತೆಯು ದೀಪದ ರೂಪದಿಂದಲೂ, ಮೀನು ಗಾಳದ ಹುಳುವಿನ ರುಚಿಯಿಂದಲೂ, ದುಂಬಿಯು ಪುಷ್ಪದ ಪರಿಮಳದಿಂದಲೂ ನಾಶವಾಗುತ್ತವೆ’  ಹೀಗೆ ಒಂದೊಂದು ಇಂದ್ರಿಯದ ವಶಕ್ಕೆ ಒಳಪಟ್ಟ ಜಂತುವಿನ ಅವಸ್ಥೆಯೇ ಹೀಗಾದರೆ ಪಂಚೇಂದ್ರಿಯಗಳ ‌ಹೊಡೆತಕ್ಕೆ ಸಿಕ್ಕಿ ಬಿದ್ದಿರುವ ಮನುಷ್ಯನ ಗತಿಯೇನು?

ಪ್ರಾಪಂಚಿಕ ಸಂಬಂಧಗಳಲ್ಲಿ ಪ್ರೀತಿ, ವಾತ್ಸಲ್ಯಗಳಲ್ಲಿ ಇರುವ ಸುಖ ತಾತ್ಕಾಲಿಕವಾದದ್ದು, ಅದೇ ನಿಜವಾದ ಸುಖವಲ್ಲ. ನಿಜವಾದ ಸುಖ ಆತ್ಮನ ಆಂತರಿಕ ಸ್ವರೂಪ. ನಮ್ಮ ಸ್ವ ಸ್ವರೂಪವನ್ನು, ಆತ್ಮವನ್ನು ತಿಳಿಯುವುದರಿಂದ ಮಾತ್ರ ನಿಜವಾದ ಧನ್ಯತೆಯನ್ನು ಪಡೆಯುವುದು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.