ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ಒಡಲಿರುವವರೆಗೆ ಹಸಿವು ತಪ್ಪಿದ್ದಲ್ಲ

Last Updated 30 ಅಕ್ಟೋಬರ್ 2020, 13:31 IST
ಅಕ್ಷರ ಗಾತ್ರ

ಹಸಿವು ಮಾನವನನ್ನು ಕಾಡುವ ಮೂಲಭೂತ ಸಮಸ್ಯೆ. ಅದರ ಸ್ವರೂಪ, ತೀವ್ರತೆ ಹಾಗೂ ಪರಿಣಾಮಗಳನ್ನು ದಾಸಿಮಯ್ಯನವರು ಮನೋಜ್ಞವಾಗಿ ಅಭಿವ್ಯಕ್ತಿಸಿರುವರು.

ಒಡಲಿರುವವರೆಗೆ ಹಸಿವು ತಪ್ಪಿದ್ದಲ್ಲ. ಹುಸಿ ನುಡಿದಾದರೂ ಹಸಿವು ಹಿಂಗಿಸಿಕೊಳ್ಳುವ ಅನಿವಾರ್ಯತೆ ಬರಬಹುದು. ಅನ್ನಕ್ಕಾಗಿ ಮನುಷ್ಯ ಏನಾದರೂ ಮಾಡಲು ಸಿದ್ಧ. ಹಸಿದವರಿಗೆ ಮಾತ್ರ ಹಸಿವಿನ ತೀವ್ರತೆ ಗೊತ್ತು. ಹಸಿವಿಲ್ಲದ ಕಲ್ಯಾಣರಾಜ್ಯ ನಿರ್ಮಾಣ ಶರಣರ ಗುರಿಯಾಗಿತ್ತು.

ಹಸಿವಿಲ್ಲದಿದ್ದರೆ ಹುಸಿ, ಮೋಸ, ವಂಚನೆಗಳಿಲ್ಲ. ಅನ್ನ ಮಾತ್ರವಲ್ಲ ಬದುಕನ್ನೇ ಸಮಾಜದೊಂದಿಗೆ ಹಂಚಿಕೊಂಡು ಬದುಕಿದವರು ಶರಣರು. ಅದುವೇ ದಾಸೋಹ.

ದ್ರವ್ಯ ಸದಾ ದ್ರವಿಸುತ್ತಿರಬೇಕು. ಅದು ಯಾವುದೋ ಒಂದೆಡೆಯಲ್ಲಿ ನಿಂತರೆ ಮಲೆಯುತ್ತದೆ. ಸಂಪತ್ತಿನ ಕ್ರೋಢೀಕರಣವೇ ವರ್ಗಭೇದಕ್ಕೆ ಕಾರಣ. ವರ್ಗಗಳಿಲ್ಲದ ಸಮಾನತೆಯ ಸಮಾಜ ಕಟ್ಟುವ ಕನಸು ಶರಣರದು.

ಕಾಯಕದಿಂದ ಗಳಿಸಿದ ಸಂಪಾದನೆಯನ್ನು ಹಂಚಿಕೊಂಡು ಉಪಭೋಗಿಸುವುದೇ ಪ್ರಸಾದಯೋಗ. ಅಂದಂದಿನ ಕೂಲಿ ಅಂದಂದಿಗೆ ಎಂಬ ಸರಳ ಸಿದ್ಧಾಂತ ಅವರದು. ಧನದ ಸಂಗ್ರಹಕ್ಕೆ ಶರಣರ ವಿರೋಧವಿತ್ತು. ಸಂಗ್ರಹದಿಂದ ಆಸೆ ಬೆಳೆದು ಅದು ಮಾಯೇಯಾಗಿ ಕಾಡುವುದೆಂಬ ನಂಬಿಕೆ ಅವರದು. ಅದಕ್ಕಾಗಿ ಕಾಯಕದ ಸದ್ವಿನಿಯೋಗಕ್ಕಾಗಿ ದಾಸೋಹಿಗಳಾದರು.

‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದಳೆಯ ಅನ್ನದೊಳಗೊಂದಗುಳ ಇಂದಿಂಗೆ ನಾಳಿಂಗೆ ಬೇಕೆಂದನಾದಡೆ ನಿಮ್ಮಾಣೆ, ನಿಮ್ಮಪ್ರಥಮರಾಣೆ...’ ದಾಸೋಹವೆಂದರೆ ಭೃತ್ಯಾಚಾರ, ಪಂಚಾಚಾರಗಳಲ್ಲಿ ಭೃತ್ಯಾಚಾರವು ಐದನೆಯದು. ಭಕ್ತ ಸಮಾಜದ ದಾಸ.

‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ವೆಂಬ ವಿನಯ ಬೆಳೆದಾಗ ಭಕ್ತನ ಅಹಂಕಾರ ಲಯವಾಗುತ್ತದೆ. ಜೊತೆಗೆ ಸ್ವಾರ್ಥದಿಂದ ಮುಕ್ತವಾಗುತ್ತವುದು ಸಾಧ್ಯವಾಗುತ್ತದೆ. ಆಂತರಿಕವಾಗಿ ಇದು ಸ್ವಾರ್ಥ ಮತ್ತು ಅಹಂಕಾರದಿಂದ ಮನಸ್ಸನ್ನು ಬಿಡಿಸಿಕೊಳ್ಳುವ ದಾರಿ. ಬಹಿರಂಗದಲ್ಲಿ ಸಮಾಜ ಸೇವೆಯೆ ಒಂದು ವಿಧ. ಸಾಮಾನ್ಯವಾಗಿ ಭಕ್ತನಾದವನು ಜಂಗಮನಿಗೆ ಅನ್ನ ದಾಸೋಹ ಮಾಡಿದರೆ ಜಂಗಮ ಭಕ್ತನಿಗೆ ಜ್ಞಾನದಾಸೋಹ ಮಾಡುವನು. ಇಬ್ಬರು ದಾಸೋಹಿಗಳೇ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT