ಗುರುವಾರ , ಅಕ್ಟೋಬರ್ 6, 2022
26 °C
ಭಾಗ 229

ವೇದವ್ಯಾಸರ ಶಿವಪುರಾಣಸಾರ: ಕಾಮದಹನದ ಸಮರ್ಥನೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀ Updated:

ಅಕ್ಷರ ಗಾತ್ರ : | |

ಶಿವನ ಬಳಿಗೆ ದೇವತೆಗಳು ಮತ್ತು ಋಷಿಮುನಿಗಳು ಬಂದು ಭಕ್ತಿಯಿಂದ ಸ್ತುತಿಸುತ್ತಾರೆ.

‘ಓ ದೇವ, ನೀನು ಎಲ್ಲರಿಗೂ ತಂದೆತಾಯಿಯಾಗಿರುವೆ. ನಿನ್ನ ಹೊರತು ಇನ್ನಾರೂ ನಮ್ಮ ದುಃಖವನ್ನು ಹೋಗಲಾಡಿಸಲಾರರು’ ಎಂದು ಪ್ರಾರ್ಥಿಸುತ್ತಾರೆ.

ದೇವತೆಗಳು ದೈನ್ಯದಿಂದ ಸ್ತುತಿಮಾಡುತ್ತಿರುವುದನ್ನು ನೋಡಿ ನಂದಿಕೇಶ್ವರನಿಗೆ ತುಂಬಾ ಕನಿಕರವಾಗಿ ‘ಪರಮೇಶ್ವರ,  ದೇವತೆಗಳು, ಮುನಿಗಳು, ಸಿದ್ಧರು ನಿನ್ನ ದರ್ಶನಕ್ಕಾಗಿ ಬಂದು ನಿನ್ನನ್ನು ಸ್ತುತಿಸುತ್ತಿದ್ದಾರೆ. ಅವರು ರಾಕ್ಷಸರಿಂದ ಪೀಡಿತರಾಗಿ ನೊಂದು, ನಿನ್ನ ಸಹಾಯ ಬೇಡಲು ಬಂದಿದ್ದಾರೆ. ದೀನಬಂಧುವೂ, ಭಕ್ತವತ್ಸಲನೂ ಆದ ನೀನು ಅವರೆಲ್ಲರ ಕಷ್ಟ ಪರಿಹರಿಸಬೇಕು’ ಎಂದು ವಿಜ್ಞಾಪಿಸಿದ.

ನಂದಿಯ ವಿಜ್ಞಾಪನೆ ಕೇಳಿದ ಶಂಕರ ಕಣ್ಣುಗಳನ್ನು ತೆರೆದು ಮೆಲ್ಲಮೆಲ್ಲಗೆ ಧ್ಯಾನದಿಂದ ಬಹಿರ್ಮುಖನಾದ.  ದೇವತೆಗಳೆಲ್ಲರನ್ನು ಉದ್ದೇಶಿಸಿ ‘ಈಗ ನೀವು ನನ್ನ ಬಳಿಗೆ ಬಂದಿರುವ ಕಾರಣವೇನು’ ಎಂದ. ಶಂಕರನ ಮಾತನ್ನು ಕೇಳಿ ದೇವತೆಗಳೆಲ್ಲರೂ ವಿಜ್ಞಾಪಿಸುವುದಕ್ಕಾಗಿ ಹರಿಯ ಮುಖವನ್ನು ನೋಡಿದರು.

ಹರಿಯು ಮಹತ್ತರವಾದ ದೇವಕಾರ್ಯವನ್ನು ಸಾಧಿಸುವ ಉದ್ದೇಶದಿಂದ ಹೀಗೆ ಹೇಳಿದ’ ‘ಶಂಕರ, ತಾರಕಾಸುರನೆಂಬ ದೈತ್ಯನು ದೇವತೆಗಳಿಗೆ ಮಹಾಕಷ್ಟವನ್ನು ಕೊಡುತ್ತಿದ್ದಾನೆ. ಅದನ್ನು ವಿಜ್ಞಾಪಿಸಲು ದೇವತೆಗಳೆಲ್ಲರೂ ನಿನ್ನ ಬಳಿಗೆ ಬಂದಿದ್ದಾರೆ. ತಾರಕಾಸುರನೆಂಬ ರಾಕ್ಷಸನ ಉಪಟಳದಿಂದ ಅವರೆಲ್ಲ ಕಂಗಾಲಾಗಿದ್ದಾರೆ. ನಿನ್ನ ಔರಸಪುತ್ರನಿಂದಲೇ ಮರಣಹೊಂದುವ ವರವನ್ನು ಬ್ರಹ್ಮನಿಂದ ಪಡೆದಿದ್ದಾನೆ. ಇದಕ್ಕಾಗಿ ನೀನು ಗಿರಿಜೆಯ ಪಾಣಿಗ್ರಹಣ ಮಾಡಬೇಕು. ತಾರಕಾಸುರನ ಬಾಧೆಯಿಂದ ದೇವತೆಗಳನ್ನು ರಕ್ಷಿಸಿ, ನಮ್ಮನ್ನು ಅನುಗ್ರಹಿಸು’.

ವಿಷ್ಣುವಿನ ಮಾತನ್ನು ಕೇಳಿ ಯೋಗಿರಾಜನಾದ ಶಿವನು ಪ್ರಸನ್ನನಾಗಿ ‘ದೇವತೆಗಳಿರಾ, ಯಾವಾಗ ನಾನು  ಗಿರಿಜೆಯನ್ನು ಮದುವೆಯಾಗುವೆನೋ ಆಗ ನಿಮ್ಮೆಲ್ಲರಿಗೂ ಕ್ಷೇಮವಾಗುವುದು. ನಿಮ್ಮಿಷ್ಟವು ಪೂರ್ತಿಯಾಗುವುದು. ಅಲ್ಲಿವರೆಗೂ ಶತ್ರುಗಳು ನಿಮ್ಮನ್ನು ಏನೂ ಮಾಡಲಾರರು. ಮದುವೆಯಾದ ಮೇಲೆ ನಾನು ಭಸ್ಮಮಾಡಿದ ಮದನನನ್ನು ಗಿರಿಜೆಯೇ ಎಲ್ಲರ ಕ್ಷೇಮಕ್ಕಾಗಿ ಬ್ರಹ್ಮನ ಮಾತಿನಂತೆ ಬದುಕಿಸುವಳು. ಇದರಲ್ಲಿ ಸಂಶಯವಿಲ್ಲ.

ನಾನು ಮನ್ಮಥನನ್ನು ದಹನಮಾಡಿದುದರಿಂದ ದೇವತೆಗಳಿಗೆ ಮಹೋಪಕಾರವಾಗಿದೆ. ಈಗ ನೀವು ಆ ಕಾಮನ ಬಾಧೆ ಇಲ್ಲದೆ ನಿಶ್ಚಿಂತೆಯಿಂದ ನನ್ನಂತೆ ಜಿತೇಂದ್ರಿಯರಾಗಿ ಮಹಾತಪಸ್ಸನ್ನು ಅನಾಯಾಸವಾಗಿ ಆಚರಿಸಿ. ಈ ಹಿಂದೆ ಮನ್ಮಥ ನಿಮಗೆ ತುಂಬಾ ತೊಂದರೆಯನ್ನು ಉಂಟುಮಾಡಿರುವುದನ್ನು ಮರೆತಿರುವಿರಿ. ಅದನ್ನು ವಿಮರ್ಶೆ ಮಾಡಿದರೆ ನಿಮಗೇ ಸತ್ಯದ ಅರಿವಾಗುವುದು. ಮನ್ಮಥನ ಬಲಾತ್ಕಾರದಿಂದ ನಿಮ್ಮೆಲ್ಲರ ಧ್ಯಾನ ಭಂಗಗೊಳ್ಳುತ್ತಿತ್ತು. ಈಗ ನಿಮಗೆ ಧ್ಯಾನ ಮಾಡಲು ಯಾವುದೇ ಅಡ್ಡಿಗಳಿಲ್ಲ.

‘ಕಾಮೇಚ್ಛೆಯು ಬಹಳ ಕೆಟ್ಟದ್ದು. ಅದರಿಂದ ನರಕವು ಲಭಿಸುವುದು. ಕಾಮವು ನಿಮ್ಮೊಳಗೇ ಇದ್ದು, ತಣಿಯದಿದ್ದರೆ ಕ್ರೋಧವುಂಟಾಗುವುದು. ಕ್ರೋಧದಿಂದ ಮೋಹ ತೀವ್ರವಾಗುವುದು. ಮೋಹದಿಂದ ತಪಸ್ಸು ಹಾಳಾಗುವುದು. ಆದುದರಿಂದ ಕಾಮ-ಕ್ರೋಧಗಳನ್ನು ನೀವೆಲ್ಲರೂ ಬಿಡಬೇಕು. ನನ್ನ ಈ ಮಾತು ಸತ್ಯವಾದುದು ಮತ್ತು ನಿಮಗೆಲ್ಲರಿಗೂ ಹಿತ ನೀಡುವುದು’ ಎಂದ.

ಹೀಗೆ ಮಹಾದೇವನು ದೇವತೆಗಳಿಗೆ ಉಪದೇಶಿಸಿ, ಧ್ಯಾನದ ಮಹತ್ವ ಮತ್ತು ಕಾಮದ ಕೆಡುಕನ್ನು ಮನದಟ್ಟು ಮಾಡಿಸಿದ. ನಂತರ ಸದಾಶಿವ ಮತ್ತೆ ಧ್ಯಾನಮಾಡುತ್ತಾ ತನ್ನ ಆತ್ಮಸ್ವರೂಪವನ್ನು ಆತ್ಮನಲ್ಲಿಯೇ ನೋಡುತ್ತಾ ಚಿಂತಿಸತೊಡಗಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು