ಭಾನುವಾರ, ಜನವರಿ 16, 2022
28 °C

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ | ಕುಮುದನ ರಕ್ಷಿಸಿದ ಸುಬ್ರಹ್ಮಣ್ಯ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ತಾರಕನು ಸತ್ತ ನಂತರ ಅವನ ಕಡೆಯವನಾದ ಬಾಣಾಸುರನು ಯುದ್ಧದಿಂದ ಹಿಮ್ಮೆಟ್ಟಿ ಓಡಿಹೋಗಿ ತನ್ನ ಅಪಾರವಾದ ಸೇನೆಯೊಂದಿಗೆ ಕ್ರೌಂಚಪರ್ವತದಲ್ಲಿ ನೆಲೆಸಿ ಅದನ್ನು ಹಿಂಸಿಸುತ್ತಿದ್ದನು. ಬಾಣಾಸುರನ ಕಾಟ ತಡೆಯಲಾರದೆ ಕ್ರೌಂಚಪರ್ವತವು ಸುಬ್ರಹ್ಮಣ್ಯನ ಕಡೆ ಆರ್ತನಾದದಿಂದ ರಕ್ಷಿಸು ಅಂತ ಭಕ್ತಿಯಿಂದ ಬೇಡಿತು. ‘ಸ್ಕಂದನೇ, ನೀನು ದೇವತೆಗಳಿಗೆ ಪ್ರಭುವಾಗಿ ತಾರಕಾಸುರನ ಕೊಂದೆ. ಯುದ್ಧದಲ್ಲಿ ನಿನ್ನ ಏಟನ್ನು ತಾಳಲಾರದೇ ಓಡಿ ಹೋದ ಬಾಣಾಸುರ ನನ್ನಲ್ಲಿಗೆ ಬಂದು ನನ್ನ ಹಿಂಸಿಸುತ್ತಿದ್ದಾನೆ. ನನ್ನನ್ನು ಕಾಪಾಡು. ಕರುಣಾಕರನಾದ ನೀನು ನನ್ನಲ್ಲಿ ದಯವಿಡು’ ಎಂದು ಕ್ರೌಂಚಪರ್ವತ ಕೋರಿತು.

ಕ್ರೌಂಚನೋವನ್ನು ಆಲಿಸಿದ ಭಕ್ತಪಾಲಕನಾದ ಸುಬ್ರಹ್ಮಣ್ಯ ತನ್ನ ತಂದೆ ಶಿವನನ್ನು ಮನದಲ್ಲಿ ಧ್ಯಾನಿಸಿ, ಮಹತ್ತರವಾದ ಶಕ್ತ್ಯಾಯುಧವನ್ನು ತೆಗೆದುಕೊಂಡು ಬಾಣಾಸುರನ ಮೇಲೆರಗುವಂತೆ ಹೊಡೆದ. ಶಕ್ತ್ಯಾಯುಧದ ಪ್ರಯೋಗದಿಂದ ಮಹಾಶಬ್ದವಾಗಿ ದಶದಿಕ್ಕುಗಳು, ಆಕಾಶ ಪ್ರಜ್ವಲಿಸಿದವು. ಗುಹನ ಶಕ್ತ್ಯಾಯುಧವು ಬಾಣಾಸುರ ಮತ್ತವನ ಸೈನಿಕರನ್ನೂ ಸುಟ್ಟು ಭಸ್ಮಮಾಡಿ ಪುನಃ ಗುಹನ ಸಮೀಪಕ್ಕೆ ಬಂದಿತು. ಆಗ ಸುಬ್ರಹ್ಮಣ್ಯ ಕ್ರೌಂಚಪರ್ವತಕ್ಕೆ ’ನೀನು ನಿರ್ಭಯನಾಗಿ ನಿನ್ನ ಮನೆಗೆ ಹೋಗು. ಬಾಣಾಸುರನೂ ಅವನ ಸೈನಿಕರು ಸತ್ತುಹೋದರು’ ಎಂದು ಹೇಳಿದ. ಗಿರಿರಾಜನು ಸುಬ್ರಹ್ಮಣ್ಯನ ಮಾತು ಕೇಳಿ ಸಂತೋಷದಿಂದ ಗುಹನನ್ನು ಸ್ತುತಿಸುತ್ತಾ ತನ್ನ ಮನೆಗೆ ಹೊರಟುಹೋದ.

ಅನಂತರ ಸ್ಕಂದನು ಆ ಸ್ಥಳದಲ್ಲಿ ಪ್ರತಿಜ್ಞೇಶ್ವರ, ಕಪಾಲೇಶ್ವರ, ಕುಮಾರೇಶ್ವರ ಎಂಬ ಮೂರು ಲಿಂಗಗಳನ್ನು ಪ್ರತಿಷ್ಠಾಪಿಸಿದನು. ಇವು ಪಾಪವನ್ನು ನಾಶಮಾಡಿ ಸರ್ವೇಷ್ಟಾರ್ಥಗಳನ್ನೂ ಕೊಡುವುದು ಎಂದನು. ಪುನಃ ಸರ್ವೇಶ್ವರನಾದ ಕುಮಾರನು ಸ್ತಂಭೇಶ್ವರವೆಂಬ ಲಿಂಗವನ್ನು ಜಯಸ್ತಂಭದ ಸಮೀಪದಲ್ಲಿ ಸ್ಥಾಪಿಸಿದನು. ವಿಷ್ಣುವೇ ಮೊದಲಾದ ದೇವತೆಗಳೂ ಸಹ ದೇವದೇವನಾದ ಪರಮೇಶ್ವರನ ಲಿಂಗವನ್ನು ಅಲ್ಲಿ ಸ್ಥಾಪಿಸಿದರು. ಅಲ್ಲಿ ಪ್ರತಿಷ್ಠೆ ಮಾಡಿದ ಶಿವಲಿಂಗಗಳೆಲ್ಲಾ ಅದ್ಭುತ ಮಹಿಮೆಯಿಂದ ಕೂಡಿ ಇಷ್ಟಾರ್ಥದಾಯಕವಾಗಿದ್ದವು. ಭಕ್ತರಿಗೆ ಮುಕ್ತಿಯನ್ನೂ ಉಂಟುಮಾಡುತ್ತಿದ್ದವು. ಹೀಗೆ ಎಲ್ಲ ಕಾರ್ಯ ಮುಗಿದ ನಂತರ ವಿಷ್ಣು ಮೊದಲಾದ ದೇವತೆಗಳೆಲ್ಲರೂ ಸಂತೋಷದಿಂದ ಗುಹನನ್ನು ಕರೆದುಕೊಂಡು ಕೈಲಾಸಪರ್ವತಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಆದಿಶೇಷನ ಮಗನಾದ ಕುಮುದ ಎಂಬುವವನು ರಾಕ್ಷಸರ ಬಾಧೆಯನ್ನು ತಾಳಲಾರದೇ ಓಡಿಬಂದು ಶಿವಕುಮಾರನ ಕಾಲಿಡಿದು ಕಾಪಾಡು ಅಂತ ಪ್ರಾರ್ಥಿಸಿದ.

ಬಾಣಾಸುರನಂತೆ ಪ್ರಲಂಬನೆಂಬ ರಾಕ್ಷಸನು ಸಹ ಯುದ್ಧದಲ್ಲಿ ತಾರಕನು ಮೃತನಾದ ನಂತರ ಓಡಿ ಹೋಗಿ, ಅಮಾಯಕ ಕುಮುದನನ್ನು ಹಿಂಸಿಸುತ್ತಿದ್ದ. ಕುಮುದ ಫಣೀಂದ್ರನಾದ ಆದಿಶೇಷನ ಮಗ. ಸುಬ್ರಹ್ಮಣ್ಯನ ಬಳಿ ತನಗೆ ರಕ್ಷಣೆ ನೀಡುವಂತೆ ಕೋರಿದ. ಕುಮುದನಿಗೆ ಅಭಯ ಹಸ್ತ ನೀಡಿದ ಸುಬ್ರಹ್ಮಣ್ಯ ಕೈಲಾಸಯಾತ್ರೆಯನ್ನು ಕೆಲಕಾಲ ಮುಂದೂಡಿ ಪ್ರಲಂಬಾಸುರನ ಸಂಹಾರಕ್ಕೆ ನಿರ್ಧಾರ ಮಾಡಿದ. ತನ್ನ ತಂದೆ ಶಿವನ ಚರಣಕಮಲವನ್ನು ಧ್ಯಾನಿಸುತ್ತಾ, ಶಕ್ತ್ಯಾಯುಧವನ್ನು ಕೈಗೆ ತೆಗೆದುಕೊಂಡು ಪ್ರಲಂಬಾಸುರನ ಕಡೆಗೆ ಹೊಡೆದನು. ಆಗ ಮಹಾಶಬ್ದವುಂಟಾಗಿ ದಶದಿಕ್ಕುಗಳೂ ಪ್ರಜ್ವಲಿಸಿದವು. ಆ ಶಕ್ತ್ಯಾಯುಧವು ಪ್ರಲಂಬಾಸುರನನ್ನು ಸೈನ್ಯ ಸಮೇತವಾಗಿ ಸುಟ್ಟು ಭಸ್ಮಮಾಡಿ, ನಂತರ ಗುಹನ ಬಳಿಗೆ ಬಂದು ಸೇರಿತು.

ಕುಮಾರನು ’ಆ ಪ್ರಲಂಬಾಸುರನು ಸೈನ್ಯಸಮೇತನಾಗಿ ಮಡಿದ. ನೀನು ನಿರ್ಭಯನಾಗಿ ಮನೆಗೆ ಹೋಗು’ ಎಂದಾಗ ಶೇಷಸುತನಾದ ಕುಮುದನು ವಂದಿಸಿ, ತನ್ನ ಪಾತಾಳಲೋಕಕ್ಕೆ ಹೋದ. ತಾರಕವಧೆ ಮತ್ತು ಕುಮಾರನ ವಿಜಯದ ಕತೆಗಳನ್ನು ಕೇಳಿದವರಿಗೆ ಸರ್ವಪಾಪವೂ ನಾಶವಾಗುವುದು, ಇಷ್ಟಾರ್ಥಗಳೆಲ್ಲವೂ ನೆರವೇರುವುದು. ಸತ್ಪುರುಷರಿಗೆ ಕೀರ್ತಿಯ, ಆಯುಸ್ಸು, ಭುಕ್ತಿ, ಮುಕ್ತಿ ಉಂಟಾಗುವುದು. ದಿವ್ಯವಾದ ಶಿವಕುಮಾರನ ಚರಿತ್ರೆಯನ್ನು ಶ್ರದ್ಧೆಯಿಂದ ಆಲಿಸಿದವರು, ಇಹಲೋಕದಲ್ಲಿ ಪರಮಸುಖವನ್ನನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಶಿವಲೋಕವನ್ನು ಪಡೆಯುವರು ಎಂದು ಬ್ರಹ್ಮ ತನ್ನ ಮಗ ನಾರದ ಮತ್ತಿತರ ಮುನಿವರ್ಯರಿಗೆ ತಿಳಿಸಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು