ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ದಕ್ಷನ ತಪಸ್ಸಿಗೆ ಒಲಿದ ಆದಿಶಕ್ತಿ

ಭಾಗ -142
ಅಕ್ಷರ ಗಾತ್ರ

ದೇವಿಯು ದಕ್ಷಬ್ರಹ್ಮನ ಪುತ್ರಿಯಾಗಿ ಹೇಗೆ ಜನಿಸಿದಳು – ಎಂಬುದನ್ನು ಹೇಳು ಎಂದು ನಾರದ ಕೇಳುತ್ತಾನೆ. ಅದಕ್ಕೆ ಬ್ರಹ್ಮ ‘ಎಲೈ ನಾರದ! ದಕ್ಷಬ್ರಹ್ಮನು ನನ್ನ ಅಪ್ಪಣೆಯಂತೆ ಶಕ್ತಿದೇವಿಯನ್ನು ತನ್ನ ಮಗಳಾಗಿ ಪಡೆಯುವ ಉದ್ದೇಶದಿಂದ ತಪಸ್ಸು ಪ್ರಾರಂಭಿಸಿದ. ಕ್ಷೀರಸಮುದ್ರದ ದಡದಲ್ಲಿ ಕುಳಿತು ದೇವಮಾನದಿಂದ ಮೂರುಸಾವಿರ ವರ್ಷಗಳವರೆಗೆ ದೃಢವಾದ ನಿಯಮದಿಂದ ಜಿತೇಂದ್ರಿಯನಾಗಿ ತಪಸ್ಸನ್ನಾಚರಿಸಿದ.

ಕೆಲವು ಕಾಲ ಗಾಳಿಯನ್ನೇ ಆಹಾರವಾಗಿ ಸೇವಿಸುತ್ತ, ಕೆಲವು ಕಾಲ ಯಾವ ಆಹಾರವೂ ಇಲ್ಲದೆ, ಕೆಲವು ಕಾಲ ಜಲವನ್ನು, ಕೆಲವು ಕಾಲ ಎಲೆಗಳನ್ನು ಸೇವಿಸುತ್ತಾ, ಜಗದ್ರೂಪಳಾದ ಚಂಡಿಕೆಯನ್ನು ಧ್ಯಾನಿಸುತ್ತಾ ಕಾಲವನ್ನು ಕಳೆದ. ಇದರಿಂದ ದೇವಿಯು ಪ್ರಸನ್ನಳಾಗಿ ಪ್ರತ್ಯಕ್ಷಳಾದಳು. ಜಗದ್ರೂಪಳೂ ಜಗನ್ಮಾತೆಯೂ ಆದ ದೇವಿಯನ್ನು ನೋಡಿ ದಕ್ಷಬ್ರಹ್ಮ ಕೃತಾರ್ಥನಾದೆನೆಂದು ಸಂಭ್ರಮಿಸಿದ. ಸಿಂಹದ ಮೇಲೆ ಕುಳಿತ ದೇವಿ ನೀಲವರ್ಣದ ಶರೀರಕಾಂತಿಯಿಂದ ಬೆಳಗುತ್ತಿದ್ದಳು. ನಾಲ್ಕು ಬಾಹುಗಳಲ್ಲಿ ಒಂದು ಕೈ ವರದಮುದ್ರೆಯನ್ನು, ಮತ್ತೊಂದು ಕೈ ಅಭಯಮುದ್ರೆಯನ್ನು ತೋರಿಸುತ್ತಿದ್ದರೆ, ಉಳಿದೆರಡು ಕೈಗಳು ಕನ್ನೈದಿಲೆ ಮತ್ತು ಖಡ್ಗ ಹಿಡಿದಿದ್ದವು. ಸುಂದರವಾದ ಆಕೆಯ ಮೊಗದಲ್ಲಿ ಕಣ್ಣುಗಳೆರಡು ನಸುಗೆಂಪಾಗಿ ಹೊಳೆಯುತ್ತಿದ್ದವು. ಕೆದರಿದ ಅವಳ ಕೇಶಪಾಶವು ಅಪೂರ್ವಕಾಂತಿಯನ್ನು ಬೀರುತ್ತಿತ್ತು.

ಜಗನ್ಮಾತೆಯನ್ನು ದಕ್ಷಬ್ರಹ್ಮ ಸ್ತುತಿಸಿದ. ಪರಮೇಶ್ವರಿಯು ದಕ್ಷನ ಇಷ್ಟವನ್ನು ತಿಳಿದವಳಾದರೂ ತಿಳಿಯದವಳಂತೆ ‘ಎಲೈ ದಕ್ಷನೇ! ನಿನ್ನ ಸದ್ಭಕ್ತಿಯಿಂದ ಸಂತುಷ್ಟಳಾಗಿರುವೆ. ಬೇಕಾದ ವರವನ್ನು ಕೇಳು’ ಎಂದಳು.

ಆಗ ದಕ್ಷಬ್ರಹ್ಮ ‘ಓ ದೇವಿ! ಜಗತ್ಪ್ರಭುವಾದ ಶಂಕರನು ಬ್ರಹ್ಮನ ಪುತ್ರನಾಗಿ ರುದ್ರನೆಂಬ ಹೆಸರಿನಿಂದ ಜನಿಸಿರುವನು. ಅವನು ಪರಮಾತ್ಮನಾದ ಶಿವನ ಸಂಪೂರ್ಣವಾದ ಅವತಾರ. ಆದರೆ ಇದುವರೆಗೂ ನಿನ್ನ ಅವತಾರವೇ ಆಗಿಲ್ಲ. ಅದಕ್ಕಾಗಿ ನೀನು ಭೂಮಿಯಲ್ಲಿ ಅವತರಿಸಿ ರುದ್ರನನ್ನು ಮೋಹಗೊಳಿಸಬೇಕು. ನಿನ್ನ ಹೊರತು ಬೇರೆ ಯಾವುದೇ ಸ್ತ್ರೀ ರುದ್ರನನ್ನು ಮೋಹಗೊಳಿಸಲಾರರು. ಆದಕಾರಣ ನೀನು ನನ್ನ ಪುತ್ರಿಯಾಗಿ ಜನಿಸಿ, ಮುಂದೆ ಹರನ ಪತ್ನಿಯಾಗಬೇಕು. ರುದ್ರನು ಸಂಸಾರಿಯಾಗದಿದ್ದರೆ ಲೋಕಕಲ್ಯಾಣವಾಗುವುದಿಲ್ಲ. ಇದು ನನ್ನ ಸ್ವಾರ್ಥದ ಕೋರಿಕೆಯಲ್ಲ, ಜಗಕ್ಕೆ ಉಪಕಾರದ ಬೇಡಿಕೆ’ ಎಂದು ಪ್ರಾರ್ಥಿಸಿದ.

ಜಗನ್ಮಾತೆಯು ದಕ್ಷಬ್ರಹ್ಮನಿಗೆ ಮನಸ್ಸಿನಲ್ಲಿಯೇ ಶಿವನನ್ನು ಸ್ಮರಿಸಿ ಹೇಳಿದಳು ‘ಎಲೈ ದಕ್ಷಬ್ರಹ್ಮನೇ, ಪರಮೇಶ್ವರಿಯಾದ ನಾನು ನಿನ್ನ ಭಕ್ತಿಗೆ ಮೆಚ್ಚಿ, ನಿನ್ನ ಪತ್ನಿಯಲ್ಲಿ ಮಗಳಾಗಿ ಜನಿಸಿ ನಿನ್ನ ಅಧೀನಳಾಗಿರುವೆ. ಯೌವನ ಕಾಲದಲ್ಲಿ ಅಸಾಧ್ಯವಾದಂತಹ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿ ಅವನ ಪತ್ನಿಯಾಗಲು ಪ್ರಯತ್ನಿಸುತ್ತೇನೆ. ಆ ಪರಮೇಶ್ವನು ಯಾವ ವಿಕಾರವೂ ಇಲ್ಲದವನು. ಬ್ರಹ್ಮ, ವಿಷ್ಣು ಸಹಿತ ದೇವತೆಗಳು ಪೂಜಿಸುವ ಶಿವನು ಪೂರ್ಣಪರಬ್ರಹ್ಮಸ್ವರೂಪನು. ಸದಾ ಮಂಗಳಸ್ವರೂಪನಾದ ಅವನಿಗೆ ನಾನು ಚರಣದಾಸಿ. ಪ್ರತಿ ಅವತಾರದಲ್ಲೂ ನಾನೇ ಅವನ ಪ್ರಿಯೆ. ಅನೇಕ ಅವತಾರಗಳನ್ನು ಧರಿಸಿದರೂ ಆ ಶಿವನೇ ನನ್ನ ಸ್ವಾಮಿ. ಪರಮಶಿವನು ಬ್ರಹ್ಮನಿಗೆ ಕೊಟ್ಟ ವರವನ್ನು ಈಡೇರಿಸುವುದಕ್ಕಾಗಿ ಬ್ರಹ್ಮನ ಲಲಾಟದಿಂದ ಜನಿಸಿ ರುದ್ರನಾಗಿ ಅವತಾರ ತಾಳಿದ್ದಾನೆ. ಈಗ ನಾನು ಸಹ ಆ ವರದಂತೆ ಅವತಾರ ಮಾಡುವೆ. ಸ್ವಲ್ಪಕಾಲದಲ್ಲಿಯೇ ಶಿವದೂತಿಯಾದ ನಾನು ನಿನ್ನ ಪುತ್ರಿಯಾಗಿ ಜನಿಸಿ ಶಿವನ ಪತ್ನಿಯಾಗುವೆ. ಆದರೆ ಒಂದು ಮಾತು ನೆನಪಿಟ್ಟುಕೋ, ನಿನ್ನ ಪುತ್ರಿಯಾದ ನನ್ನಲ್ಲಿ ನೀನು ಯಾವಾಗಲಾದರೂ ತಿರಸ್ಕಾರ ಭಾವವನ್ನು ತೋರಿಸಿದರೆ ಆ ಕೂಡಲೇ ಶರೀರವನ್ನು ತ್ಯಜಿಸುವೆನು’ ಎಂದು ಜಗನ್ಮಾತೆ ಆದಿಶಕ್ತಿಯು ದಕ್ಷಬ್ರಹ್ಮನನ್ನು ಎಚ್ಚರಿಸುತ್ತಾಳೆ.

ಇದಕ್ಕೆ ದಕ್ಷ ಬ್ರಹ್ಮನು ಒಪ್ಪಿ ಕೃತಜ್ಞತಾಭಾವದಿಂದ ನಮಸ್ಕರಿಸುತ್ತಿರುವಂತೆಯೇ ಪರಮೇಶ್ವರಿಯು ಅಂತರ್ಧಾನಳಾದಳು. ದಕ್ಷಬ್ರಹ್ಮ ತುಂಬಾ ಸಂತೋಷದಿಂದ ತನ್ನ ಆಶ್ರಮಕ್ಕೆ ತೆರಳಿದ. ಮಹಾಶಕ್ತಿದೇವಿಯು ತನ್ನ ಪುತ್ರಿಯಾಗುವಳೆಂದು ನೆನಪಿಸಿಕೊಂಡಾಗಲೆಲ್ಲಾ ತುಂಬಾ ಹರ್ಷಗೊಳ್ಳುತ್ತಿದ್ದ ಎಂಬಲ್ಲಿಗೆ ವೇದವ್ಯಾಸರ ಶಿವಪುರಾಣದ ಎರಡನೇ ಸಂಹಿತೆಯಾದ ರುದ್ರಸಂಹಿತೆಯಲ್ಲಿನ ಸತೀಖಂಡದ ಹನ್ನೆರಡನೆಯ ಅಧ್ಯಾಯವು ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT