ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ರುದ್ರನ ನಿಂದಿಸಿದ ದಕ್ಷಬ್ರಹ್ಮ

ಭಾಗ 169
ಅಕ್ಷರ ಗಾತ್ರ

ನಾರದನಿಗೆ ಪ್ರಯಾಗದಲ್ಲಿ ನಡೆದ ಅಹಿತಕರ ಪ್ರಸಂಗವನ್ನು ಹೇಳುತ್ತಾನೆ, ಬ್ರಹ್ಮ. ‘ಹಿಂದೆ ಪ್ರಯಾಗಕ್ಷೇತ್ರದಲ್ಲಿ ಮಹಾಯಾಗವೊಂದು ನಡೆಯಿತು. ಅಲ್ಲಿಗೆ ಸಿದ್ಧರೂ ಪ್ರಸಿದ್ಧರಾದ ಸನಕ ಮೊದಲಾದ ಮಹರ್ಷಿಗಳು, ನವಬ್ರಹ್ಮರು, ದೇವತೆಗಳು, ವೇದವಿದ್ವಾಂಸರು ಬಂದಿದ್ದರು. ನಾನೂ ಯಾಗಕ್ಕೆ ಪರಿವಾರದೊಡನೆ ಹೋಗಿದ್ದೆ.

ನನ್ನೊಡನೆ ವೇದಗಳು, ಮತ್ತು ಶಾಸ್ತ್ರಗಳು ಸಶರೀರವನ್ನು ಧರಿಸಿ ಬಂದಿದ್ದವು. ರುದ್ರ ಸಹ ತನ್ನ ಪತ್ನಿ ಭವಾನಿ ಮತ್ತು ಗಣಗಳೊಡನೆ ಬಂದಿದ್ದ. ಶಿವನನ್ನು ನೋಡಿ, ನಾನು ಸೇರಿದಂತೆ ಅಲ್ಲಿ ನೆರೆದಿದ್ದ ದೇವತೆಗಳು, ಸಿದ್ಧರು, ಮುನಿಗಳೆಲ್ಲರೂ ಭಕ್ತಿಯಿಂದ ನಮಸ್ಕರಿಸಿ ಸ್ತುತಿಸಿದೆವು. ಅದೇ ಸಮಯದಲ್ಲಿ ದಕ್ಷಬ್ರಹ್ಮ ಅಲ್ಲಿಗೆ ಅಕಸ್ಮಾತ್ತಾಗಿ ಬಂದ. ದಕ್ಷನು ತಾನೇ ಬ್ರಹ್ಮಾಂಡಕ್ಕೆ ಅಧಿಪತಿ ಎಂಬ ಗರ್ವವುಳ್ಳ ಅವಿವೇಕಿಯಾಗಿದ್ದ. ಇಂತಹ ದಕ್ಷಬ್ರಹ್ಮ ತಂದೆಯಾದ ನನಗೆ ನಮಸ್ಕರಿಸಿ, ಆಸನದಲ್ಲಿ ಕುಳಿತ. ಆದರೆ ಪರಮೇಶ್ವರನಿಗೆ ನಮಸ್ಕರಿಸಲಿಲ್ಲ. ಬದಲಿಗೆ, ಶಿವ ತನಗೆ ನಮಸ್ಕಾರಮಾಡಲಿಲ್ಲ ಅಂತ ದಕ್ಷಬ್ರಹ್ಮ ಅಸಮಾಧಾನಗೊಂಡು, ಕೋಪಗೊಂಡ. ತುಂಬಾ ಗರ್ವಿಷ್ಠನಾದ ದಕ್ಷಬ್ರಹ್ಮ ರುದ್ರನನ್ನು ಮೂದಲಿಸಿದ. ‘ಇಲ್ಲಿ ಸೇರಿರುವ ದೇವಾಸುರರೂ ಮತ್ತು ಋಷಿಗಳೆಲ್ಲರೂ ನನಗೆ ನಮಸ್ಕರಿಸಿದರು. ಆದರೆ ಭೂತಪ್ರೇತಗಳೊಂದಿಗೆ ಇರುವ ರುದ್ರ ಮಾತ್ರ ನನಗೆ ನಮಸ್ಕರಿಸಲಿಲ್ಲ. ಸದಾ ಸ್ಮಶಾನದಲ್ಲಿಯೇ ಇರುವ ಈ ರುದ್ರನಿಗೆ ಮಾನಮರ್ಯಾದೆಗಳ ತಿಳಿವಳಿಕೆಯೇ ಇಲ್ಲ. ಇವನು ಸದಾಚಾರಿಯಲ್ಲ. ಭೂತ ಮತ್ತು ಪಿಶಾಚಿಗಳಿಂದ ಬದುಕುವ ಕಡುಮೂರ್ಖ. ನಾಸ್ತಿಕರು, ದುಷ್ಟರು, ಪಾಪಿಗಳು, ಪರನಿಂದಕರು, ಕಾಮುಕರು ಸೇವಿಸುವ ಇವನಿಗೆ ಜಾತಿಯಿಲ್ಲ. ಸದಾ ಸ್ತ್ರೀ(ಸತಿ)ಯಲ್ಲಿ ಆಸಕ್ತನಾಗಿರುವ ರುದ್ರನಿಗೆ ಯಾಗದಲ್ಲಿ ಪ್ರವೇಶವಿಲ್ಲ. ದೇವತೆಗಳೊಡನೆ ಯಜ್ಞಭಾಗವೂ ಇವನಿಗಿಲ್ಲ’ – ಎಂದು ದಕ್ಷಬ್ರಹ್ಮ ಶಪಿಸಿ, ದೂಷಿಸಿದ.

‘ದಕ್ಷನ ಮಾತನ್ನು ಕೇಳಿ ಕೋಪಗೊಂಡ ನಂದಿಕೇಶ್ವರನು ‘ಎಲೈ ದಕ್ಷ. ನೀನು ಮಹಾಮೂಢ, ದುಷ್ಟ. ಆದಕಾರಣವೇ ನನ್ನ ಪ್ರಭುವಾದ ಶಿವನನ್ನು ಯಜ್ಞಬಾಹ್ಯನಾಗುವಂತೆ ಶಪಿಸಿರುವೆ. ಯಾರನ್ನು ಸ್ಮರಿಸಿದುದರಿಂದಲೇ ಯಾಗಗಳು ಸಾರ್ಥಕವಾಗುವುವೋ, ತೀರ್ಥಗಳು ಪವಿತ್ರಗಳಾಗುವುವೋ, ಅಂತಹ ಈ ಶಂಕರನನ್ನು ತಿಳಿವಳಿಕೆಯಿಲ್ಲದೆ ನೀನು ಶಪಿಸಿರುವೆ. ಕೇವಲ ಬ್ರಹ್ಮಚಾಪಲ್ಯದಿಂದಲೇ ನೀನು ಶಿವನನ್ನು ಶಪಿಸಿರುವೆ, ಅಪಹಾಸ್ಯಮಾಡಿರುವೆ. ಇದು ವ್ಯರ್ಥವಾದುದು. ಶಂಕರನೇ ಈ ಜಗತ್ತಿನ ಮಹಾಪ್ರಭು. ಅವನೇ ಈ ಜಗತ್ತನ್ನು ಸೃಷ್ಟಿಸುವವನು, ಸಲಹುವವನು, ಕೊನೆಯಲ್ಲಿ ನಾಶಮಾಡುವವನು. ಇಂತಹ ರುದ್ರನನ್ನು ಹೇಗೆ ಶಪಿಸುವೆ?’ ಎಂದ.

‘ನಂದಿಯ ತಿರಸ್ಕಾರದ ಮಾತುಗಳನ್ನು ಕೇಳಿದ ದಕ್ಷಪ್ರಜಾಪತಿ ಮತ್ತಷ್ಟು ಕೋಪಗೊಂಡು, ‘ಎಲೈ ನಂದಿ ರುದ್ರಗಣಗಳಾದ ನೀವು ವೇದಬಾಹ್ಯರಾಗಿ, ವೇದಮಾರ್ಗವನ್ನು ತ್ಯಜಿಸಿರಿ. ಮಹರ್ಷಿಗಳೂ ನಿಮ್ಮನ್ನು ಬಹಿಷ್ಕರಿಸುವರು. ಕೇವಲ ನಾಸ್ತಿಕರಾಗಿದ್ದು, ಶಿಷ್ಟಾಚಾರವನ್ನು ಬಿಟ್ಟು ಮದ್ಯಪಾನಾದಿಗಳನ್ನು ಮಾಡುತ್ತಾ ಅಪವಿತ್ರವಾದ ಮೂಳೆಗಳನ್ನು ಧರಿಸಿರಿ’ ಎಂದು ಶಪಿಸಿದ.

ದಕ್ಷನು ರುದ್ರಗಣಗಳನ್ನು ಶಪಿಸಿದ್ದನ್ನು ಕೇಳಿ ಶಿವಪ್ರಿಯನಾದ ನಂದಿಯು ತುಂಬಾ ಕೋಪಗೊಂಡ. ಮಹಾತೇಜಸ್ವಿಯಾದ ಶಿಲಾದನ ಪುತ್ರನಾದ ನಂದಿಯು ಶಿವನಿಗೆ ತುಂಬಾ ಪ್ರಿಯನಾದವನು. ಮಹಾತೇಜಸ್ಸುಳ್ಳ ನಂದಿಯು ಗರ್ವಿಷ್ಠನೂ ದುಷ್ಠನೂ ಆದ ದಕ್ಷನನ್ನುದ್ದೇಶಿಸಿ, ‘ಎಲೈ ದಕ್ಷ, ನೀನು ದುರ್ಬುದ್ಧಿಯುಳ್ಳ ಮೂರ್ಖ. ನಿನಗೆ ಶಿವನಮಹಿಮೆ ತಿಳಿಯದು. ಆದಕಾರಣ ಶಿವನನ್ನು ಮತ್ತು ಅವನ ಗಣಗಳಾದ ನಮ್ಮನ್ನು ವೃಥಾ ಶಪಿಸಿರುವೆ. ಭೃಗುಮುನಿ ಮೊದಲಾದ ಮೂಢರೂ ಮಹಾಪ್ರಭುವಾದ ಶಿವನನ್ನು ತಿಳಿವಳಿಕೆಯಿಲ್ಲದೇ ಅಹಂಕಾರದಿಂದ ಅಪಹಾಸ್ಯಮಾಡಿರುವರು. ಇನ್ನೂ ನಿನ್ನಂತೇ ರುದ್ರನನ್ನು ನಿಂದಿಸುವ ಯಾವ ಮೂರ್ಖರಿರುವರೋ, ಅವರೆಲ್ಲರನ್ನೂ ರುದ್ರನ ತೇಜಸ್ಸಿನ ಮಹಿಮೆಯಿಂದ ನಾನು ಶಪಿಸುವೆ’ ಎಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT