ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ದೇವತಾಸ್ತ್ರೀಯರಿಂದ ವಿನೋದಾವಳಿ

ಅಕ್ಷರ ಗಾತ್ರ

ಶಿವ–ಪಾರ್ವತಿಯರು ಸಿಂಹಾಸನದ ಮೇಲೆ ಕುಳಿತ ಮೇಲೆ ದೇವತಾಸ್ತ್ರೀಯರೆಲ್ಲ ವಿನೋದದ ಮಾತಾಡಿ, ನವದಂಪತಿ ಮುಖ ರಂಗೇರುವಂತೆ ಮಾಡುತ್ತಾರೆ. ಮೊದಲಿಗೆ ಮಾತನಾಡಿದ ಬ್ರಹ್ಮನ ಪತ್ನಿಸರಸ್ವತಿ ‘ಮಹಾದೇವ, ನಿನ್ನ ಪ್ರಾಣಪ್ರಿಯಳಾದ ಸತಿದೇವಿಯು ಮತ್ತೆ ನಿನಗೆ ಲಭಿಸಿರುವಳು. ನಿನ್ನ ಹಿಂದಿನ ವಿರಹತಾಪವನ್ನು ಬಿಡು’ ಎಂದಳು. ನಂತರ ವಿಷ್ಣುವಲ್ಲಭೆ ಲಕ್ಷ್ಮಿಯು ‘ಪರಮೇಶ್ವರ, ಲಜ್ಜೆಯನ್ನು ಬಿಟ್ಟು, ಗಿರಿಜೆಯನ್ನು ನಿನ್ನ ಎದೆಯಲ್ಲಿ ಆಲಂಗಿಸು; ಇವಳಿಲ್ಲದಿದ್ದರೆ ನಿನ್ನ ಪ್ರಾಣವೇ ಉಳಿಯಲಾರದು’ ಎಂದರೆ, ಸತ್ಯವಾನ್ ಸಾವಿತ್ರಿಯು ‘ಶಂಕರ, ವ್ಯಥೆಯನ್ನು ಬಿಡು. ಗಿರಿಜೆಗೆ ಭೋಜನವನ್ನು ಮಾಡಿಸಿ, ನೀನೂ ಭೋಜನ ಮಾಡು. ಆಮೇಲೆ ಆಚಮನಮಾಡಿ ಪಾರ್ವತಿಗೆ ಪ್ರೀತಿಯಿಂದ ಪಚ್ಚಕರ್ಪೂರಮಿಶ್ರಿತವಾದ ತಾಂಬೂಲವನ್ನು ಕೊಡು’ ಎನ್ನುತ್ತಾಳೆ, ನಗುತ್ತಾ.

ಕಶ್ಯಪಬ್ರಹ್ಮನ ಪತ್ನಿ ಅದಿತಿ ‘ಮಹೇಶ್ವರ, ಭೋಜನವಾದಮೇಲೆ ಗಿರಿಜೆಗೆ ಮುಖಶುದ್ಧಿಗಾಗಿ ಪ್ರೀತಿಯಿಂದ ಜಲವನ್ನು ಕೊಡು’ ಎಂದರೆ, ಇಂದ್ರನ ಪತ್ನಿ ಶಚಿದೇವಿ, ‘ಪಾರ್ವತಿಯನ್ನು ಚೆನ್ನಾಗಿ ನೋಡಿಕೋ’ ಎಂದು ಶಿವನನ್ನು ಹುರಿದುಂಬಿಸುತ್ತಾಳೆ. ಅರುಂಧತಿ, ‘ಶಂಕರ, ಮೇನಾದೇವಿ-ಹಿಮವಂತರು ಗಿರಿಜೆಯನ್ನು ನಿನಗೆ ಕೊಡಲು ಇಷ್ಟವಿರಲಿಲ್ಲ. ನಾನು ಪ್ರಯತ್ನಪಟ್ಟು ನಿನಗೆ ಕೊಡಿಸಿರುವೆ. ಇವಳನ್ನು ಚೆನ್ನಾಗಿ ನೋಡಿಕೊ’ ಎಂದಳು.

ಗೌತಮಮುನಿಯ ಪತ್ನಿ ಅಹಲ್ಯೆ, ‘ಶಂಕರ, ನೀನು ವೃದ್ಧಾವಸ್ಥೆಯನ್ನು ಬಿಟ್ಟು ನವತರುಣನಾಗು. ಅದರಿಂದ ಮಗಳ ಹಿತದಲ್ಲಿಯೇ ಆಸಕ್ತಳಾದ ಮೇನಾದೇವಿಗೆ ಸಂತೋಷವಾಗುವುದು’ ಎಂದರೆ, ಜಲಂಧರನ ಪತ್ನಿ ತುಳಸಿದೇವಿ ‘ಶಂಕರ, ಮೊದಲು ನೀನು ವೈರಾಗ್ಯದಿಂದ ಗಿರಿಜೆಯನ್ನು ಪರಿತ್ಯಜಿಸಿದೆ. ಮನ್ಮಥನನ್ನು ಸುಟ್ಟುಹಾಕಿದೆ. ಆದರೆ ಈಗ ಮತ್ತೆ ಗಿರಿಜೆಯನ್ನೇ ಮದುವೆಯಾಗಲು ವಸಿಷ್ಠನನ್ನು ಕಳುಹಿದೆ ಏಕೆ?’ ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾಳೆ.

ಬೃಹಸ್ಪತಿಯ ಮಗಳು ಮತ್ತು ಅಗ್ನಿಯ ಪತ್ನಿಯಾದ ಸ್ವಾಹಾದೇವಿ ‘ಮಹಾದೇವ, ಈಗ ನೀನು ಸ್ತ್ರೀಯರು ಹೇಳಿದಂತೆ ಕೇಳಬೇಕು. ಅವರಿಗೆ ಅಧಿಕಾರವು ಹೆಚ್ಚಾಗಿರುತ್ತೆ. ಸಾಧ್ವಿಯಾದವಳು ತನ್ನ ಪತಿಯನ್ನಲ್ಲದೇ ಈಶ್ವರಮಾರ್ಗವನ್ನೂ ರಕ್ಷಿಸುತ್ತಾಳೆ’ ಎಂದು ಶಿವನಿಗೆ ಕಿವಿಮಾತು ಹೇಳಿದರೆ, ಅದೃಷ್ಟದ ಭಾಗ್ಯದೇವತೆ ಜಂಭಲನ ಪತ್ನಿ ವಸುಂಧರೆ, ‘ಶಂಭು, ಭಾವಜ್ಞನಾದ ನೀನು ಸ್ತ್ರೀಯರ ಭಾವವನ್ನು ಚೆನ್ನಾಗಿ ತಿಳಿದಿರುವೆ’ ಎಂದು ಹೇಳುತ್ತಾಳೆ.

ಸೂರ್ಯನ ಪತ್ನಿ ಹಾಗೂ ಯಮ, ಅಶ್ವಿನಿ ದೇವತೆ, ರೇವಂತನ ತಾಯಿ ಸಂಜ್ಞಾದೇವಿ, ‘ಎಲೈ ಗೆಳತಿಯರೇ, ನಿಮ್ಮ ಮಾತುಗಳು ಇನ್ನು ಸಾಕು’ ಎಂದು ಸೂಚಿಸುತ್ತಾಳೆ.

ಕೊನೆಯಲ್ಲಿ ದೇವತಾಸ್ತ್ರೀಯರ ಮಾತಿಗೆ ಉತ್ತರಿಸಿದ ಮಹಾಶಿವ, ‘ಎಲೈ ದೇವತಾಸ್ತ್ರೀಯರೇ, ನೀವೆಲ್ಲರೂ ಜಗನ್ಮಾತೆಯರು, ಮಹಾಪತಿವ್ರತೆಯರು. ನೀವೂ ಸಾಮಾನ್ಯ ಹುಡುಗಿಯರಂತೆ ಮಾತಾಡುವುದು ಸರಿಯೇ’ ಎಂದಾಗ ದೇವತಾಸ್ತ್ರೀಯರು ಲಜ್ಜೆಗೊಳ್ಳುತ್ತಾರೆ. ನಂತರ ಶಿವನು ಮೃಷ್ಟಾನ್ನ ಭೋಜನ ಮತ್ತು ಆಚಮನವನ್ನು ಮಾಡಿ, ಸಂತೋಷದಿಂದ ಗಿರಿಜೆಯೊಡನೆ ಕರ್ಪೂರಮಿಶ್ರಿತವಾದ ತಾಂಬೂಲವನ್ನು ಸೇವಿಸಿದ.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ಐವತ್ತನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT