ಶನಿವಾರ, ಅಕ್ಟೋಬರ್ 23, 2021
20 °C

ವಾರ ಭವಿಷ್ಯ: 10-10-2021 ರಿಂದ 16-10-2021 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

**
ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಗೃಹ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತವೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭ ಬರಬಹುದು. ಭೂಮಿಯನ್ನು ಮಾರುವ ಮುಂಚೆ ಸರಿಯಾಗಿ ಅದರ ಬಗ್ಗೆ ತಿಳಿಯಿರಿ. ಅನಿರೀಕ್ಷಿತ ವ್ಯಕ್ತಿಯಿಂದ ಪಾಲುದಾರಿಕೆ ವ್ಯವಹಾರದ ಬಗ್ಗೆ ಆಹ್ವಾನ ಬರಬಹುದು. ಪೂರ್ಣ ವಿಷಯ ತಿಳಿದು ನಂತರ ತೀರ್ಮಾನಿಸಿರಿ. ವಿದ್ಯಾರ್ಥಿಗಳು ವಿಶೇಷ ಅಧ್ಯಯನಕ್ಕಾಗಿ ಆಯ್ಕೆಯಾಗುವ ಸಂದರ್ಭವಿದೆ. ಹಂತ ಹಂತವಾಗಿ ಹಣದ ಸಮಸ್ಯೆಗೆ ದಾರಿ ಕಂಡುಕೊಳ್ಳುವಿರಿ. ಸಂಬಂಧಿಕರೊಡನೆ ಕೆಲವು ವಿಷಯಗಳನ್ನು ಸಮಾಲೋಚನೆ ಮಾಡುವುದರಿಂದ ಸಂಬಂಧ ಗಟ್ಟಿಗೊಳ್ಳುತ್ತದೆ. ನಿಮ್ಮ ಆತ್ಮೀಯ  ಬಂಧುಗಳು ಮನೆಗೆ ಬರುವ ಸಾಧ್ಯತೆಯಿದೆ. ಮಕ್ಕಳ ಪ್ರತಿಭೆಗಳು ಹೊರಬಂದು ಸಂತೋಷವಾಗುತ್ತದೆ.

**
ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿ ನಿಂತುಹೋಗಿದ್ದ ದಾವೆಗಳು ಪುನಃ ಆರಂಭಗೊಂಡು ನಿಮಗೆ ತುಸು ನೆಮ್ಮದಿ ಅನಿಸುತ್ತದೆ. ವ್ಯಾಪಾರದ ಅಭಿವೃದ್ಧಿಗಾಗಿ ಹೆಚ್ಚಿನ ಚಿಂತೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಮನೆಯವರನ್ನು ಒಪ್ಪಿಸಿ ಉದ್ಯೋಗದಲ್ಲಿನ ಒಂದು ಕೆಲಸಕ್ಕಾಗಿ ದೂರ ಪ್ರಯಾಣ ಮಾಡುವಿರಿ. ಸಮಾಜಸೇವೆಯಲ್ಲಿ  ಭಾಗಿಯಾಗಿ ಸಂತಸ ಪಡುವುದರ ಜೊತೆಗೆ ಹಿರಿಯರಿಂದ ಪ್ರಶಂಸೆ ಕೂಡಾ ಬರುತ್ತದೆ. ಹಣದ ಒಳಹರಿವು ತಕ್ಕ ಮಟ್ಟಿಗೆ ಇರುತ್ತದೆ. ಅನಾವಶ್ಯಕವಾದ ಮಾತುಗಳಿಂದ ಉದ್ವೇಗಕ್ಕೆ ಒಳಗಾಗಬಹುದು.

**
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಉನ್ನತ ಅಧ್ಯಯನ ಮಾಡಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯಹಸ್ತ ದೊರೆಯುತ್ತದೆ. ನಿಮ್ಮ ವಿವೇಚನೆಯಿಂದ ಸ್ವಂತ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವಿರಿ. ಕೆಲವು ಉದ್ಯೋಗಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಬಹುದು. ಷೇರುಪೇಟೆಗಳಲ್ಲಿನ ಹೂಡಿಕೆಯಲ್ಲಿ ಲಾಭಗಳಿಸಬಹುದು. ರೇಷ್ಮೆ ನೇಕಾರರಿಗೆ ಉತ್ತಮ ಕೆಲಸ ದೊರೆಯುವ ಸಾಧ್ಯತೆ ಇದೆ. ಹೊಸ ವಸ್ತ್ರವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ವೆಚ್ಚದ ಮೇಲೆ ಹಿಡಿತ ಸಾಧಿಸಿ ಹಣ ಉಳಿಸಲು ಯತ್ನಿಸುತ್ತೀರಿ. ಶೀತಬಾಧೆ ಇರುವವರಿಗೆ ಸ್ವಲ್ಪ ತೊಂದರೆಯಾಗಬಹುದು. ಮಹಿಳೆಯರು ಆಭರಣದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು  ತೆಗೆದುಕೊಳ್ಳಬೇಕು. ಅನಿರೀಕ್ಷಿತ ಆದಾಯವನ್ನು ಕಾಣುವ ಸಾಧ್ಯತೆ ಇದೆ.

**
ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)
ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಾಧ್ಯತೆಗಳಿವೆ. ಧೈರ್ಯ ಮತ್ತು ವಿಶ್ವಾಸದ ಪ್ರಯತ್ನ ಬಲದಿಂದ ಕಾರ್ಯ ಅನುಕೂಲವಾಗುತ್ತದೆ. ಕೆಲವು ಮಹಿಳೆಯರಿಗೆ ಇಷ್ಟಾರ್ಥಗಳು ಈಡೇರುವ ಸಾಧ್ಯತೆಗಳಿವೆ. ಚಿನ್ನಾಭರಣ ತಯಾರಕರಿಗೆ ಉತ್ತಮ ಬೇಡಿಕೆ ಬರುವ ಸಾಧ್ಯತೆ ಇದೆ. ತೆರಿಗೆ ತಜ್ಞರಿಗೆ ಹೆಚ್ಚಿನ ಬೇಡಿಕೆ ಒದಗಿ ಉತ್ತಮ ಆದಾಯವಿರುತ್ತದೆ. ಉದ್ದೇಶಿತ ಕಾರ್ಯಗಳಿಗೆ ಹಣದ ಅಡಚಣೆ ಕಂಡುಬಂದರೂ ಪುನಃ ಹಣ ಒದಗಿ ಕಾರ್ಯಸಿದ್ದಿ ಆಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಆಸಕ್ತಿ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರ ವ್ಯವಹಾರ ವಿಸ್ತರಣೆಯಾಗುವ ಎಲ್ಲಾ ಲಕ್ಷಣಗಳಿವೆ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

**
ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ವಿದೇಶಿ ವ್ಯವಹಾರಸ್ಥರೊಂದಿಗಿನ ಪರಿಚಯದಿಂದಾಗಿ ವ್ಯವಹಾರಕ್ಕೆ ಹೊಸ ತಿರುವು ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಾಮಾನ್ಯ ಯಶಸ್ಸು ಇರುತ್ತದೆ. ಅಪೂರ್ವ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಂಪನ್ಮೂಲಗಳನ್ನು ಕ್ರೋಡೀಕರಣ ಮಾಡುವಿರಿ. ವಾಹನಗಳ ವ್ಯಾಪಾರವನ್ನು ಮಾಡುವವರಿಗೆ ಹಂತಹಂತವಾಗಿ  ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ಬರಹಗಾರರಿಗೆ ತಮ್ಮ ಕೃತಿಗಳನ್ನು ಈಗ ಪ್ರಕಟಿಸುವ ಅವಕಾಶ ದೊರೆಯುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಅಪೇಕ್ಷಿಸಿದ ಬ್ಯಾಂಕು ಸಾಲಗಳು ದೊರೆಯುತ್ತವೆ. ಸ್ಥಿರಾಸ್ತಿಯನ್ನು ಕೊಳ್ಳುವ ಯತ್ನದಲ್ಲಿ ಯಶಸ್ಸನ್ನು ಕಾಣುವಿರಿ.

**
ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಹಮ್ಮಿಕೊಂಡಿರುವ ಕೆಲಸಗಳನ್ನು ಪೂರೈಸಲು ಸಾಕಷ್ಟು ಅನಾನುಕೂಲಗಳು ಎದುರಾಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕೃಷಿ ಸಂಬಂಧಿತ ಕೈಗಾರಿಕೆಗಳನ್ನು ನಡೆಸುವವರಿಗೆ ಲಾಭ ಹೆಚ್ಚುವ ಸಾಧ್ಯತೆಗಳಿವೆ. ಹೊಸ ಯೋಜನೆಗಳನ್ನು ಜಾರಿಗೆ ತರಲು ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. ನ್ಯಾಯಾಲಯದಲ್ಲಿನ ನಿಮ್ಮ ಖಟ್ಲೆಗಳು ನಿಮಗೆ ಅನುಕೂಲಕರವಾಗಿರುತ್ತವೆ. ಅಧ್ಯಯನದಲ್ಲಿನ ಆಸಕ್ತಿ ಹೆಚ್ಚಾಗಿ ಪುನಃ ಓದಲಾರಂಭಿಸುವಿರಿ. ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಹೊಸ ಹೊಸ ಸುದ್ದಿಗಳು ದೊರೆತು ಉತ್ಸಾಹ ಹೆಚ್ಚಾಗುವುದು. ಕೆಲವು ತಾಂತ್ರಿಕ ಇಂಜಿನಿಯರುಗಳಿಗೆ ಧನ ಲಾಭದೊಂದಿಗೆ ಉನ್ನತ ಸ್ಥಾನ ದೊರೆಯುವ ಸಾಧ್ಯತೆ ಇದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ.

**
ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗುತ್ತವೆ. ಗಹನವಾದ ವಿಚಾರವೊಂದನ್ನು ಗೆಳೆಯರೊಡನೆ ಮುಕ್ತವಾಗಿ ಚರ್ಚೆಮಾಡುವಿರಿ ಮತ್ತು ಅದಕ್ಕೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಲು ಯತ್ನಿಸುವಿರಿ. ಸ್ವಲ್ಪ ಕಾಲ ಶಾರೀರಿಕ ಆಯಾಸ ನಿಮ್ಮನ್ನು ಕಾಡಬಹುದು. ಯಂತ್ರೋಪಕರಣಗಳ ಖರೀದಿ ಅಥವಾ ದುರಸ್ತಿಗಾಗಿ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇದೆ. ಪ್ರತಿಭಾವಂತ ಮಹಿಳೆಯರಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತದೆ. ಆಸೆಪಟ್ಟು ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸಗಳು ಸರಾಗವಾಗಿ ನಡೆಯುವುದನ್ನು ಕಂಡು ನಿಮಗೆ ಸ್ವಲ್ಪ ನಿರಾಳವೆನಿಸುವುದು. ಹಣಕಾಸಿನ ವ್ಯವಹಾರವನ್ನು ಮಾಡುವವರು ಸಾಕಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ರೇಷ್ಮೆ ಬೆಳೆ ಬೆಳೆಯುವುದು ಅಥವಾ ರೇಷ್ಮೆ ಉದ್ಯಮದಲ್ಲಿ ತೊಡಗಿಕೊಂಡಿರುವವರ ಲಾಭ ಹೆಚ್ಚುತ್ತದೆ.

**
ವೃಶ್ಚಿಕ ರಾಶಿ ( ವಿಶಾಖಾ 4  ಅನುರಾಧ  ಜೇಷ್ಠ) 
ಕಾರ್ಮಿಕ ವರ್ಗದವರಿಗೆ ಬಿಡುವಿಲ್ಲದ ಕೆಲಸದ ಜೊತೆಗೆ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸೂಚನೆಗಳಿವೆ. ಬಹಳ ದಿನದ ಒಂದು ಬಯಕೆಯು ಈಡೇರುವ ಸಾಧ್ಯತೆ ಇದೆ. ನಿಮ್ಮ ವೈಯಕ್ತಿಕ ವಿಚಾರಗಳತ್ತ ಸರಿಯಾಗಿ ಗಮನಹರಿಸಿರಿ. ನೆರೆಹೊರೆಯವರೊಂದಿಗೆ ಬಾಂಧವ್ಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ಕೆಲವರಿಗೆ ವಾಸಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಕೋರ್ಟು ಕಚೇರಿ ಕೆಲಸಗಳಲ್ಲಿ ನಿರೀಕ್ಷಿತ ಯಶಸ್ಸು ಇರುತ್ತದೆ. ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಕೆ ಮಾಡುವವರ ವ್ಯವಹಾರ ವೃದ್ಧಿಸುತ್ತದೆ. ಮಕ್ಕಳ ಓದಿಗಾಗಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಿರಿ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ.

**
ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಮಾಡುವ ಕೆಲಸಗಳಲ್ಲಿ ಹೆಚ್ಚಿನ ಅನುಕೂಲತೆ ಒದಗಿಬರುತ್ತದೆ. ವ್ಯಾಪಾರಗಾರರಿಗೆ ನಿಧಾನವಾಗಿ ಯಶಸ್ಸು ಒದಗುತ್ತದೆ. ನಿಮ್ಮ ವ್ಯವಹಾರಗಳ ಬಗ್ಗೆ ಸರಿಯಾಗಿ ಗಮನಕೊಡಿ ಹಾಗೂ ಬೇರೆಯವರೊಡನೆ ವ್ಯವಹಾರದ ಒಳಗುಟ್ಟುಗಳನ್ನು ಹಂಚಿಕೊಳ್ಳಬೇಡಿರಿ. ಹಣ್ಣು-ತರಕಾರಿಗಳ ಬೆಳೆಗಾರರಿಗೆ ಮತ್ತು ಮಾರಾಟಗಾರರಿಗೆ ಆದಾಯ ವೃದ್ಧಿಸುತ್ತದೆ. ದಿನಸಿ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭವಿರುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇದ್ದೇ ಇರುತ್ತದೆ. ಸಿಮೆಂಟು, ಇಟ್ಟಿಗೆ ಮುಂತಾದ ಕಟ್ಟಡ ಸಾಮಗ್ರಿಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ. ಕುಟುಂಬ ಸಮೇತರಾಗಿ ದೈವತಾ ದರ್ಶನಕ್ಕೆ ಹೋಗಿ ಬರುವ ಸಾಧ್ಯತೆ ಇದೆ. ಕೃಷಿಯುಕ್ತ ಚಟುವಟಿಕೆಯನ್ನು ಹೆಚ್ಚು ಮುತುವರ್ಜಿಯಿಂದ ಮಾಡುವಿರಿ.

**
ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಕಚೇರಿಯ ಬಿಡುವಿಲ್ಲದ ಕೆಲಸದಿಂದಾಗಿ ವೈಯಕ್ತಿಕ ಕೆಲಸಗಳು ನಿಧಾನವಾಗುವುದು. ನಿಂತಿದ್ದ ವಿದ್ಯಾಭ್ಯಾಸವನ್ನು ಈಗ ಮುಂದುವರಿಸಬಹುದು. ನಿಮ್ಮ ಸಂಶೋಧನಾ ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಗೌರವವೂ ದೊರೆಯುತ್ತದೆ. ವೈಯಕ್ತಿಕ ಹಣಕಾಸಿನ ಅನುಕೂಲತೆಗಳು ಹೆಚ್ಚುತ್ತವೆ. ವಿವಾಹ ಅಪೇಕ್ಷಿತರಿಗೆ ಸಂಬಂಧ ಒದಗಿಬರುವ ಸಾಧ್ಯತೆಗಳಿವೆ. ಹೊಸ ವಾಹನ ಖರೀದಿ ಮಾಡಬೇಕೆಂಬ ಬಯಕೆ ಹೆಚ್ಚುತ್ತದೆ. ಮಕ್ಕಳಿಗಾಗಿ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ರಕ್ತ ಸಂಬಂಧಿ ಕಾಯಿಲೆ ಇರುವವರು ಚಿಕಿತ್ಸೆಯನ್ನು ಪಡೆಯಬೇಕಾದ ಸಂದರ್ಭವಿದೆ. ಪಿತ್ರಾರ್ಜಿತ  ಆಸ್ತಿಯನ್ನು ಪಡೆಯುವ ಯೋಗ ಒದಗಿಬರುತ್ತದೆ.

**
ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ವೃತ್ತಿಯಲ್ಲಿ ಆಮಿಷಕ್ಕೆ ಒಳಗಾಗದಿರಿ. ಇದು ನಿಮ್ಮ ವೃತ್ತಿಯನ್ನು ಹಾಳುಗೆಡವಬಹುದು ಹಾಗೂ ಶಿಕ್ಷಾರ್ಹ ಅಪರಾಧವಾಗಬಹುದು.  ಯುವಕರಲ್ಲಿನ ಸಂಶಯ ಪ್ರವೃತ್ತಿಯ ಗುಣದಿಂದ ಜನರು ಅವರಿಂದ ದೂರವಾಗುವರು. ಕೆಲವು ಹಿರಿಯರಿಗೆ ಗಣ್ಯರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಸಾಧ್ಯತೆಗಳಿವೆ ಮತ್ತು ಸಹಾಯವನ್ನು ಕೋರಿ ಬರುವವರಿಗೆ ಸಲಹೆಗಳನ್ನು ನೀಡಿ ಸಂತಸಪಡುವ ಯೋಗವಿದೆ. ಬಟ್ಟೆ ವ್ಯಾಪಾರಿಗಳಿಗೆ ಲಾಭವಾಗುತ್ತದೆ. ದ್ರವರೂಪದ ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳವಿದೆ. ಕೃಷಿಕರ ಬೆಳೆಗಳು ಉತ್ತಮವಾಗಿ ಫಲ ನೀಡುತ್ತವೆ. ಆದಾಯಕ್ಕಿಂತ ವೆಚ್ಚ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಖರ್ಚಿಗೆ ಕಡಿವಾಣ ಹಾಕಿರಿ.

**
ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಹೊಗಳಿಕೆಯಿಂದ ನಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ. ಇತರರ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳದಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಹೋದ್ಯೋಗಿಗಳೊಡನೆ ಉತ್ತಮ ಬಾಂಧವ್ಯವನ್ನು ಸ್ಥಾಪಿಸಿಕೊಳ್ಳುವಿರಿ. ರಾಜಕೀಯದಲ್ಲಿ ಇರುವವರಿಗೆ ಮಾನಸಿಕವಾಗಿ ಕೆಲವು ದ್ವಂದ್ವಗಳು ಏರ್ಪಡಬಹುದು ಮತ್ತು ಸ್ಥಾನಮಾನದ ಚಿಂತೆಗಳು ಕಾಡಬಹುದು. ಅವಿವಾಹಿತರಿಗೆ ವಿವಾಹ ಸಂಬಂಧ ಒದಗಿಬರುವ ಸಾಧ್ಯತೆಗಳಿವೆ. ಸಂತಾನ ಭಾಗ್ಯಕ್ಕಾಗಿ ಕಾಯುತ್ತಿರುವವರಿಗೆ ಶುಭ ಸಮಾಚಾರ ದೊರೆಯುತ್ತದೆ. ಕಾರ್ಯಕ್ಷೇತ್ರದಲ್ಲಿನ ಸನ್ನಿವೇಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಿರಿ.   ಆರೋಗ್ಯ ಸುಧಾರಣೆಗಾಗಿ ಹಣ ಖರ್ಚು ಮಾಡಬೇಕಾದೀತು. ಹಣದ ಒಳಹರಿವು ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.