ಶನಿವಾರ, ಅಕ್ಟೋಬರ್ 16, 2021
22 °C

ವಾರ ಭವಿಷ್ಯ: 3-10-2021ರಿಂದ 9-10-2021ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ತಿಳಿ ಹೇಳುವುದರ ಜೊತೆಗೆ ಪ್ರೋತ್ಸಾಹ ಸಿಗುತ್ತದೆ. ವಾಹನ ಚಾಲನೆ ಮಾಡುವವರು ಜಾಗರೂಕರಾಗಿರುವುದು ಉತ್ತಮ. ಕೃಷಿ ಕಾರ್ಯಗಳ ವೆಚ್ಚಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುವಿರಿ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ವಿಷಯವೊಂದನ್ನು ಬಹಳ ದೃಢನಿರ್ಧಾರ ಮಾಡಿ ಕೈಗೆತ್ತಿಕೊಳ್ಳುವಿರಿ. ಉದ್ಯೋಗಸ್ಥ ಮಹಿಳೆಯರಿಗೆ  ವರಮಾನ ಹೆಚ್ಚಿಗೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. ವಿದೇಶಗಳಿಗೆ ಸಿದ್ಧಪಡಿಸಿದ ಆಹಾರ ವಸ್ತು ರಫ್ತು ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಹಿತಶತ್ರುಗಳಿಂದ ಉದ್ಯೋಗ ಕ್ಷೇತ್ರದಲ್ಲಿ ತೊಂದರೆ ಬರುವ ಸಾಧ್ಯತೆ ಇದೆ. ವ್ಯವಹಾರಕ್ಕೆ ತಾಯಿಯಿಂದ ಮಾರ್ಗದರ್ಶನದ ಜೊತೆಗೆ ಸ್ವಲ್ಪ ಧನಸಹಾಯವೂ ದೊರೆಯುವುದು. ಸಂಬಂಧಿಕರೊಡನೆ ಸುಧೀರ್ಘ ಸಮಾಲೋಚನೆಯಿಂದ ಬಾಂಧವ್ಯದಲ್ಲಿ  ವೃದ್ಧಿಯನ್ನು ಕಾಣಬಹುದು. ಸಹಕಾರ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಹೆಸರು ಬರುತ್ತದೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಬಹಳ ಕಾಳಜಿಯನ್ನು ವಹಿಸಬೇಕಾದೀತು. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ಹಣ ತೊಡಗಿಸುವಿರಿ.  ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸಾಲ ಹೆಚ್ಚಿರುವವರು ಈಗ ತೀರಿಸಲು ಪ್ರಯತ್ನ ಪಡಬಹುದು. ಸ್ತ್ರೀಯರ ಅಭಿವೃದ್ಧಿಯು ಉತ್ತಮವಾಗಿರುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಮಹಿಳೆಯರು ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿಯುವ ಸಾಮರ್ಥ್ಯವನ್ನು ಹೊಂದುತ್ತಾರೆ. ಹಣದ ಹರಿವು ನಿಮ್ಮ ಅಗತ್ಯದಷ್ಟು ಇರುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ನೆರೆಹೊರೆಯವರೊಂದಿಗೆ ಇದ್ದ ಮುನಿಸುಗಳು ದೂರವಾಗುತ್ತವೆ. ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಕೊಡಿರಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ದೃಢಮನಸ್ಸಿನಿಂದ ಹೋರಾಡಿದರೆ ನಿಮಗೆ ಯಶಸ್ಸು ಇರುತ್ತದೆ. ಸಹೋದರಿಯರಿಗೆ ಉಡುಗೊರೆಯನ್ನು ಕೊಟ್ಟು ಸಂತಸ ಪಡೆಯುವಿರಿ. ಮೂಳೆ ನೋವು ಹೆಚ್ಚು ಬಾಧಿಸಬಹುದು. ಕಮಿಷನ್ ವ್ಯವಹಾರವನ್ನು ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಇರುತ್ತದೆ. ವಿದ್ಯಾರ್ಥಿಗಳು  ಅಧ್ಯಯನದಲ್ಲಿ ಹೆಚ್ಚಿನ ಶ್ರದ್ಧೆ ವಹಿಸಬೇಕು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಉನ್ನತ ಹುದ್ದೆಯಲ್ಲಿರುವವರಿಗೆ ಜನರಿಂದ ಅಭಿಮಾನದ ಮಾತುಗಳು ಕೇಳಿಬರುತ್ತವೆ. ಮಹಿಳೆಯರ ಕೆಲವು ಇಷ್ಟಾರ್ಥಗಳು ಪೂರ್ಣಗೊಂಡು ಸಂತಸ ಪಡುವರು. ಮನೆಯವರ ಅಸಮ್ಮತಿಯ ನಡುವೆಯೂ ಕಚೇರಿ ಕೆಲಸದ ನಿಮಿತ್ತವಾಗಿ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಂಬಂಧಿಕರ ಮಧ್ಯಸ್ಥಿಕೆಯಿಂದ ಕುಟುಂಬದ ಕೆಲ ಸಮಸ್ಯೆಗಳು ದೂರವಾಗುವವು. ಜನಸಾಮಾನ್ಯರಿಗೆ ಉಪಕಾರ ಮಾಡಿ ಸಂತಸ ಪಡುವಿರಿ. ಪ್ರಾಮಾಣಿಕ ಪ್ರಯತ್ನದಿಂದ ಹಿಡಿದ ಕೆಲಸವನ್ನು ಪೂರ್ಣಗೊಳಿಸುವಿರಿ. ಕೇಂದ್ರ ಸರ್ಕಾರದ ಕೆಲವು ಅಧಿಕಾರಿಗಳಿಗೆ ಬೇರೊಂದು ವಿಭಾಗದಲ್ಲಿ ಉನ್ನತ ಹುದ್ದೆ ಸಿಗುವ ಲಕ್ಷಣಗಳಿವೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾಗುತ್ತದೆ. ಅನಗತ್ಯ ಸುತ್ತಾಟದಿಂದ ದೇಹಾಲಸ್ಯ ಆಗಬಹುದು. ಕೆಲವು ಅರೆಕಾಲಿಕ ನೌಕರರಿಗೆ ಖಾಯಂ ನೌಕರಿ ಒದಗುವ ಸಾಧ್ಯತೆ ಇದೆ. ಸೈನಿಕರು ಬಿಡುವಿಲ್ಲದ ರೀತಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಆತ್ಮಗೌರವ ಹೆಚ್ಚಾಗಿ ವ್ಯಾಪಾರ ಮತ್ತು ವ್ಯವಹಾರಗಳಿಗೆ ಧಕ್ಕೆಯಾಗಬಹುದು. ಹಣದ ಒಳಹರಿವು ಸಮಾಧಾನಕರವಾಗಿರುತ್ತದೆ. ತಾಂತ್ರಿಕ ಶಿಕ್ಷಣವನ್ನು ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ತಾಯಿಯೊಂದಿಗೆ ಸಂಬಂಧ ಹಳಸುವ ಲಕ್ಷಣಗಳಿವೆ. ವಿದೇಶದಲ್ಲಿ ಉದ್ಯೋಗವನ್ನು ಮಾಡುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ವ್ಯಾಪಾರ ಮತ್ತು ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಆದಾಯ ಬರುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನೆರೆಹೊರೆಯವರೊಂದಿಗೆ ವಿನಾ ಕಾರಣ ವೈಮನಸ್ಸು ಮೂಡಬಹುದು. ಸಂಯಮದ ಮಾತುಗಳಿಂದಲೇ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಅಧ್ಯಯನದಲ್ಲಿ ಆಸಕ್ತಿಯು ಹೆಚ್ಚಾಗುವ ಸಂದರ್ಭವಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಗೆ ಗೌರವ ದೊರೆಯುತ್ತದೆ. ರೈತಾಪಿವರ್ಗದವರು ಉತ್ತಮ ಬೆಳೆಯನ್ನು ಮತ್ತು ಬೆಲೆಯನ್ನು ನಿರೀಕ್ಷೆ ಮಾಡಬಹುದು. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿರುವುದರಿಂದ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ನಿಮಗೆ ಅನುಕೂಲಕರ. ಆಸೆಪಟ್ಟ ವಸ್ತುವೊಂದನ್ನು ಈಗ ಪಡೆಯುವ ಅವಕಾಶವಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ಸಿಗುತ್ತದೆ. ಗರ್ಭಿಣಿಯರು ಸ್ವಲ್ಪ ಎಚ್ಚರವಾಗಿರುವುದು ಒಳ್ಳೆಯದು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ತಾಪಗಳು ಎದುರಾಗುವ ಸಂದರ್ಭವಿದೆ. ಮಹಿಳೆಯರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಜಮೀನಿನಲ್ಲಿ ಹೆಚ್ಚಿನ ಕೃಷಿ ಕೆಲಸಗಳನ್ನು ಆರಂಭಿಸುವಿರಿ. ಅಪೇಕ್ಷಿಸಿದ್ದ ಸಾಲ ಹಣಕಾಸು ಸಂಸ್ಥೆಗಳಿಂದ ದೊರೆಯುತ್ತದೆ. ವಿದೇಶಿ ಕಂಪನಿಯೊಂದು ನಿಮಗೆ ಪಾಲುದಾರಿಕೆಗೆ ಆಹ್ವಾನ ನೀಡಬಹುದು. ಹಣದ ಒಳಹರಿವು ಸಮಾಧಾನಕರವಾಗಿ ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ನಿರೀಕ್ಷಿಸಿದ್ದ ಸ್ಥಾನಮಾನಗಳಲ್ಲಿ ವ್ಯತ್ಯಾಸವಾಗಬಹುದು. ಸಂಸಾರದಲ್ಲಿ ಹೆಚ್ಚಿನ ಮಾತುಗಳಿಗೆ ಅವಕಾಶಕೊಡದೆ ಮೌನವಾಗಿರುವುದು ಒಳ್ಳೆಯದು. ಲೇವಾದೇವಿಯನ್ನು ಮಾಡುವವರಿಗೆ ಹಿನ್ನಡೆಯಾಗಬಹುದು. ಮೂಳೆಯ ತೊಂದರೆ ಕೆಲವರಿಗೆ ಬಾಧಿಸಬಹುದು.

ವೃಶ್ಚಿಕ ರಾಶಿ (ವಿಶಾಖಾ 4  ಅನುರಾಧ  ಜೇಷ್ಠ)
ಸ್ಥಿರಾಸ್ತಿಯ ಬೆಲೆಯಲ್ಲಿ ಏರಿಕೆ ಕಾಣಬಹುದು. ಹೂವು ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ನೌಕರಿಯಲ್ಲಿರುವವರು ಅಧಿಕಾರಿಗಳ ಸೂಚನೆಯಂತೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಹಿತ ಮಿತವಾದ ಮಾತುಗಳಿಂದ ನೆರೆಹೊರೆಯವರನ್ನು ಗೆಲ್ಲುವಿರಿ. ಸಗಟು ವ್ಯಾಪಾರಗಾರರ ವ್ಯವಹಾರಗಳಲ್ಲಿ ಏರಿಕೆ ಕಂಡುಬರುತ್ತದೆ. ಮಕ್ಕಳಿಗಾಗಿ ಹೆಚ್ಚಿನ ಹಣವನ್ನು ಖರ್ಚುಮಾಡಬೇಕಾಗುತ್ತದೆ. ರಾಜಕೀಯ ಪಟುಗಳಿಗೆ ಕೆಲವು ಆಪಾದನೆಗಳಿಂದ ಮಾನಸಿಕವಾಗಿ ಒತ್ತಡಗಳು ಹೆಚ್ಚಬಹುದು. ಒಡಹುಟ್ಟಿದವರು ವಿನಾಕಾರಣ ನಿಮ್ಮ ಮೇಲೆ ಕೂಗಾಡಬಹುದು. ಸಂತಾನಕ್ಕಾಗಿ ಅಪೇಕ್ಷಿಸುತ್ತಿದ್ದವರಿಗೆ ಸ್ವಲ್ಪ ನಿರಾಸೆ ಆಗಬಹುದು.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಉದ್ಯೋಗದಲ್ಲಿ ಅಭಿವೃದ್ಧಿಗೊಂಡು ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಉದ್ದಿಮೆದಾರರು ತಾಂತ್ರಿಕ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಯೋಗವಿದೆ. ಹಿರಿಯ ಅಧಿಕಾರಿಗಳು ಹೆಚ್ಚಿನ ರೀತಿಯ ಅಧಿಕಾರ ಅಥವಾ ಮೇಲ್ದರ್ಜೆಗೆ ಏರುವ ಸಂದರ್ಭವಿದೆ. ಯೋಗ್ಯ ವಯಸ್ಕರಿಗೆ ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ಪರಿಚಯದ ಗಣ್ಯರೊಂದಿಗೆ ವೇದಿಕೆಯನ್ನು  ಹಂಚಿಕೊಳ್ಳುವಂತಹ ಸಾಧ್ಯತೆ ಇದೆ. ಮಾಡಬೇಕಾದ ಕೆಲಸಗಳ ಬಗ್ಗೆ ಸರಿಯಾಗಿ ಚಿಂತನೆ ಮಾಡಿ ದೃಢ ನಿರ್ಧಾರಗಳಿಂದ ಮುಂದುವರೆಯಿರಿ. ಚಿನ್ನದ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ತನ್ಮೂಲಕ ಆದಾಯವೂ ಹೆಚ್ಚಾಗುವುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಕೃಷಿ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲೇ ಬೇಕಾಗುತ್ತದೆ. ಸಿಹಿ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರ ವಿಸ್ತರಣೆಯಾಗುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕೆಲಸಗಾರರ ಕೊರತೆಯಿಂದಾಗಿ ಉದ್ದಿಮೆಗಳಲ್ಲಿ ತಯಾರಿಕೆಗೆ ಬಹಳ ಅಡಚಣೆ ಉಂಟಾಗುತ್ತದೆ. ಕೃಷಿ ಕ್ಷೇತ್ರದಲ್ಲಿನ ಯಂತ್ರೋಪಕರಣಗಳನ್ನು ತಯಾರಿಸುವವರಿಗೆ ಅಭಿವೃದ್ಧಿ ಇರುತ್ತದೆ. ಚಿನ್ನಾಭರಣಗಳ ವ್ಯಾಪಾರವನ್ನು ಆರಂಭಿಸಬೇಕೆಂದು  ಇಚ್ಛಿಸುವವರು ವ್ಯಾಪಾರವನ್ನು ಆರಂಭಿಸಬಹುದು. ತೆರಿಗೆ ತಜ್ಞರು ಲೆಕ್ಕಪತ್ರಗಳ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾಗಬಹುದು ಹಾಗೂ ಹೆಚ್ಚಿನ ಆದಾಯವನ್ನು ಪಡೆಯಬಹುದು. ಸ್ವಂತ ಶಕ್ತಿಯೇ ನಿಮ್ಮ ಆಧಾರವಾಗಿ ಕೆಲಸಕಾರ್ಯಗಳಲ್ಲಿ ಜಯವನ್ನು ಸಾಧಿಸುವಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ವಾಹನ ಮಾರಾಟದಲ್ಲಿ ತೊಡಗಿಸಿಕೊಂಡಿರುವವರಿಗೆ ಮಾರಾಟದಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸಗಳು ಪೂರ್ಣಗೊಂಡು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತವೆ. ಮಕ್ಕಳ ವಿವಾಹದ ವಿಷಯದಲ್ಲಿ ನಿಮ್ಮ ಸಂಬಂಧಿಕರಿಂದ ಕೆಲವು ಒತ್ತಾಯಗಳು ಬರಬಹುದು. ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವವರಿಗೆ ಜನರಿಂದ ಸಹಾಯಹಸ್ತ ದೊರೆಯುತ್ತದೆ. ಪ್ರೀತಿಪಾತ್ರರ ಭೇಟಿಯಿಂದ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಿರಿ. ಲೇವಾದೇವಿ ವ್ಯವಹಾರವನ್ನು ಮಾಡುವವರಿಗೆ ಅಂತಹ ಪ್ರಗತಿ ಇರುವುದಿಲ್ಲ. ಈ ರಾಶಿಯ ಮಕ್ಕಳಿಂದ ಹಿರಿಯರಿಗೆ ಬೇಸರ ಉಂಟಾಗಬಹುದು. ಪ್ರೀತಿ ಪ್ರೇಮದ ವಿಚಾರದಲ್ಲಿ ಬಹಳ ಎಚ್ಚರದಿಂದ ಇರುವುದು ಒಳ್ಳೆಯದು. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಧಾನ್ಯಗಳ ಸಗಟು ವ್ಯಾಪಾರವನ್ನು ಮಾಡುತ್ತಿರುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇದ್ದೇ ಇರುತ್ತದೆ. ಕೈಗೆತ್ತಿಕೊಂಡ ಕೆಲಸಗಳನ್ನು ಶಕ್ತ್ಯಾನುಸಾರ ಪೂರೈಸುವಿರಿ. ಸರ್ಕಾರದಿಂದ ಆಗಬೇಕಾದ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣುವಿರಿ. ಹಣದ ಒಳಹರಿವು ತೃಪ್ತಿದಾಯಕವಾಗಿರುತ್ತದೆ. ತಾಂತ್ರಿಕ ವರ್ಗದ ಕಂಪ್ಯೂಟರ್ ಇಲಾಖೆಯವರು ಹೆಚ್ಚಿನ ಪ್ರಗತಿಯನ್ನು ಕಾಣಬಹುದು.   ತೈಲ ವ್ಯಾಪಾರಿಗಳಿಗೆ ಸ್ವಲ್ಪ ಹಿನ್ನಡೆಯಾದರೂ ನಂತರ ಮುನ್ನಡೆ ಇರಲಿದೆ. ಸರ್ಕಾರಿ ನೌಕರರಿಗೆ ಇಲಾಖೆಯ ಸಹೋದ್ಯೋಗಿಗಳ ಸಹಾಯದಿಂದ ವೃತ್ತಿಯಲ್ಲಿ ಮೇಲೇರುವ ಅವಕಾಶವಿದೆ. ಪುಸ್ತಕ ಪ್ರಕಾಶಕರಿಗೆ ಬಹುಬೇಡಿಕೆಯ ಬರಹಗಾರನ ಪುಸ್ತಕ ಪ್ರಕಟ ಮಾಡುವ ಅವಕಾಶ ಸಿಗುತ್ತದೆ. ಒಡಹುಟ್ಟಿದವರ ಜೊತೆಗಿನ ಸಂಬಂಧ ಕಡಿಮೆಯಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.