ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ ವಿಚಾರ | ಜ್ಞಾನದ ‘ಜ್ಞಾನ’

Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

‘ಕೇಳಿದ ಪ್ರಶ್ನೆಗೆ ಅತ್ಯಂತ ನಿಖರ ಉತ್ತರ ನೀಡಿದವರಿಗೆ ಆ ವಿಷಯದ ಬಗ್ಗೆ ಜ್ಞಾನವಿದೆ’ ಎನ್ನಬಹುದೇ?

ಅಮೆರಿಕದ ತತ್ತ್ವಶಾಸ್ತ್ರಜ್ಞ ಜಾನ್ ಸೆರ್ಲ್ ಈ ನಂಬಿಕೆಯನ್ನು ಪ್ರಶ್ನಿಸಿದ್ದರು. ‘ಅಂಕಿ 2 ರ ವರ್ಗಮೂಲ ಏನು?’ ಎಂದಾಗ, ‘ಯಾವ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಗುಣಿಸಿದರೆ ಉತ್ತರ 2 ಎಂದಾಗುವುದೋ ಅದೇ’ ಎನ್ನುವ ಉತ್ತರ ಅತ್ಯಂತ ನಿಖರ. ಆದರೆ, ಇದು ಜ್ಞಾನವಲ್ಲ; ಜಾಣತನ, ಸಮಯಸ್ಫೂರ್ತಿ ಅಷ್ಟೇ!

ಸೆರ್ಲ್ ಅವರ ಒಂದು ಪ್ರಯೋಗವಿದೆ. ಅಜ್ಞಾತಭಾಷೆಯ ಅಕ್ಷರಗಳನ್ನು ಹಚ್ಚಿರುವ ಪೆಟ್ಟಿಗೆಗಳು ತುಂಬಿರುವ ಕೋಣೆಯಲ್ಲಿ ನೀವಿದ್ದೀರಿ ಎಂದು ಭಾವಿಸಿ. ಅಜ್ಞಾತಭಾಷೆ ತಿಳಿಯದ ನಿಮ್ಮಲ್ಲಿ ಆ ಅಕ್ಷರಗಳ ಇಂಗ್ಲಿಷ್ ಸಮಾನಾರ್ಥದ ಕೈಪಿಡಿಯಿದೆ. ಕಿಟಕಿಯ ಮೂಲಕ ಇಂಗ್ಲೀಷ್‌ಚೀಟಿ ನೀಡುತ್ತಾರೆ. ಕೈಪಿಡಿಯ ಸಹಾಯದಿಂದ ಅದಕ್ಕೆ ಸಂಬಂಧಿಸಿದ ಪೆಟ್ಟಿಗೆಗಳನ್ನು ಹುಡುಕಿ ಅವರಿಗೆ ನೀಡುತ್ತೀರಿ. ಕೆಲಕಾಲದಲ್ಲೇ ನಿಮ್ಮ ಪರಿಣತಿ ಬೆಳೆಯುತ್ತದೆ. ಆದರೆ, ನಿಮ್ಮ ಜ್ಞಾನ ಬೆಳೆಯಿತೇ? ಕಂಪ್ಯೂಟರ್ ಕೂಡ ಇದೇ ಕೆಲಸ ಮಾಡುತ್ತದೆಯಾದರೂ, ಅದು ಜ್ಞಾನಿ ಆಗುವುದಿಲ್ಲ! ಅಜ್ಞಾತಭಾಷೆಯನ್ನು ಅರಿಯುವವರೆಗೆ ಜ್ಞಾನ ಮೂಡುವುದಿಲ್ಲವಷ್ಟೆ?

ಅಂದರೆ, ‘ಜ್ಞಾನ’ ಎನ್ನುವುದು ಕೇವಲ ಸರಿಯಾದ ಉತ್ತರದಲ್ಲೂ ಇಲ್ಲ; ಅಥವಾ ಅನುಭವಜನ್ಯ ಕೆಲಸದ ಪರಿಣತಿಯಲ್ಲೂ ಇಲ್ಲ! ಅದು ಇರುವುದು ಅರಿವಿನಲ್ಲಿ; ಆ ಅರಿವು ನಮ್ಮಲ್ಲಿ ಮೂಡಿಸುವ ಚಿಂತನೆಯ ಪ್ರಕ್ರಿಯೆಯಲ್ಲಿ. ಮಾತು ಮತ್ತು ಕೃತಿಗಳ ಮಿತಿಗಳನ್ನು ಮೀರಿದ್ದು ಜ್ಞಾನ! ಶಕಪೂರ್ವ 6ನೆಯ ಶತಮಾನದ ಗ್ರೀಕ್ ತತ್ತ್ವಜ್ಞಾನಿ ಹೆರಕ್ಲೈಟಸ್ ಇದೇ ‘ಜ್ಞಾನ’ದ ಬಗೆಗೆ ಚರ್ಚೆ ಮಾಡುತ್ತಾರೆ. ‘ಸಂಪ್ರದಾಯಗಳ ಹಿಂದಿನ ಮರ್ಮವನ್ನು ಅರಿಯುವುದು, ಅದನ್ನು ಪಾಲಿಸುವುದಕ್ಕಿಂತ ದೊಡ್ಡದು’ ಎನ್ನುವ ನಿಲುವು ಅವರದ್ದು. ಭಾರತೀಯ ತತ್ತ್ವಜ್ಞಾನ ಪ್ರಾಚೀನ ಕಾಲದಿಂದಲೂ ಇದೇ ನಿಲುವನ್ನೇ ತಾಳಿದೆ; ಶಬ್ದಜಾಲದ ನಿರರ್ಥಕತೆ, ಚಿತ್ತಭ್ರಾಮಕತೆಯನ್ನು ಸೊಗಸಾಗಿ ಬಿಂಬಿಸಲಾಗಿದೆ.

ಪ್ರಸ್ತುತ ಭಾಷಾಶಾಸ್ತ್ರ ‘ಜ್ಞಾನ’ ಎಂಬುದಕ್ಕೆ ಸಾಕಷ್ಟು ಅರ್ಥಗಳನ್ನು ಕೊಡುತ್ತದೆ. ಪ್ರಾಯೋಗಿಕ ದೃಷ್ಟಿಯಿಂದ ಅವುಗಳಿಗೆಲ್ಲಾ ಏನೋ ಒಂದು ಮಹತ್ವ ಇರುತ್ತದೆ! ವಿಭಿನ್ನ ಭಾಷೆಗಳ ನಡುವೆ ಸಮಾನಾರ್ಥಕ ಪದಗಳ ಹುಡುಕಾಟ ನಡೆಯುತ್ತದೆ. ಇಂತಹ ಪ್ರಯೋಗಗಳ ಮಧ್ಯೆ ನೈಜಾರ್ಥ ಯಾವುದೋ ಒಂದು ಹಂತದಲ್ಲಿ ಕಳೆದುಹೋಗುವ ಅಪಾಯ ಇದ್ದೇ ಇದೆ.

ಇದು ಕೃತಕ ಬುದ್ಧಿಮತ್ತೆಯ ಯುಗ! ಅನುಭವಜನ್ಯವಾದ ಜಾಣತನವನ್ನು ಯಂತ್ರಗಳಿಗೆ ಕಲಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜ್ಞಾನದ ಪರಿಭಾಷೆ ಮತ್ತೊಮ್ಮೆ ಬದಲಾಗುವ ಸ್ಥಿತ್ಯಂತರದ ಕಾಲ ಬಂದಿದೆ. ಉದ್ಯಾನದಲ್ಲಿ ನೀರಿನ ಒತ್ತಡದಿಂದ ಎದ್ದು ನಿಲ್ಲುವ ಗೊಂಬೆಗಳ ಜೊತೆಗಿನ ಇಂತಹದೇ ಒಂದು ಅನುಭವ, ಫ್ರೆಂಚ್ ತತ್ತ್ವಜ್ಞಾನಿ ಡೆಕಾರ್ಟೆ ಅವರಲ್ಲಿ ಅಸ್ತಿತ್ವದ ಕುರಿತಾಗಿ ಪ್ರಶ್ನೆ ಹುಟ್ಟುಹಾಕಿತು. ಯುರೋಪಿನ ಆಧುನಿಕ ತತ್ತ್ವಜ್ಞಾನದ ಆರಂಭ ಕೂಡ ಪ್ರಾಚೀನ ಪ್ರಶ್ನೆಗಳನ್ನೇ ಆಧಾರವಾಗಿ ಹೊಂದಿದೆ ಎಂದಾಯಿತು! ಜ್ಞಾನದ ಪರಿಭಾಷೆ ಪುನರುಜ್ಜೀವನಗೊಳ್ಳುವುದು ಸಹ ಪ್ರಾಚೀನ ಭಾರತೀಯ ಮತ್ತು ಗ್ರೀಕ್ ತತ್ತ್ವಜ್ಞಾನಿಗಳು ಹೇಳಿದ್ದ ‘ಆವರ್ತನ’ ಪ್ರಕ್ರಿಯೆಯ ಭಾಗವೇ ಸರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT