ಶನಿವಾರ, ನವೆಂಬರ್ 28, 2020
18 °C

ಸಚ್ಚಿದಾನಂದ ಸತ್ಯ ಸಂದೇಶ: ಧರ್ಮವಿಲ್ಲದೆ ಮನುಷ್ಯನಿಲ್ಲ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

Ganapati

ಧರ್ಮ ಎಂಬುದು ದೈವನಿಯಮ. ನೈತಿಕವಾಗಿ ಮನುಷ್ಯ ಬಾಳಿ-ಬದುಕಲು ಬೇಕಾದ ಚೌಕಟ್ಟನ್ನು ಹಾಕಿಕೊಡುವುದೇ ಧರ್ಮ. ಧರ್ಮದ ಚೌಕಟ್ಟಿನಲ್ಲಿ ಬದುಕಿದ ಮನುಷ್ಯರು ಚೆನ್ನಾಗಿ ಬಾಳಿದ್ದಾರೆ. ಧರ್ಮದ ಚೌಕಟ್ಟು ಮೀರಿ ಬಾಳಲೆತ್ನಿಸಿದ ಮನುಷ್ಯರು ನಾನಾ ಯಾತನೆಗಳನ್ನು ಅನುಭವಿಸಿದ್ದಾರೆ. ಇಂತಹ ಅನುಭವಗಳನ್ನು ಕಾಲದಿಂದ ಕಾಲಕ್ಕೆ ಮನುಷ್ಯ ಅನುಭವಿಸಿಕೊಂಡು ಬಂದಿದ್ದರಿಂದಲೇ ಧರ್ಮದ ಮಹತ್ವ ಮತ್ತು ಅಸ್ತಿತ್ವ ಉಳಿದುಕೊಂಡು ಬಂದಿರುವುದು. ಧರ್ಮವು ಯಾವತ್ತೂ ಹಾದಿ ತಪ್ಪಿಲ್ಲ. ಧರ್ಮವನ್ನು ಮನುಷ್ಯ ಹಾದಿ ತಪ್ಪಿಸಲು ಯತ್ನಿಸಿದ್ದಾನೆ. ಅವನ ಅಂತಹ ಯತ್ನ ಯಾವತ್ತೂ ಫಲಿಸಿಲ್ಲ. ಧರ್ಮದ ತಂಟೆಗೆ ಹೋದವರೆಲ್ಲಾ ದೇವರ ಅವಕೃಪೆಗೆ ಒಳಗಾಗಿ ತಕ್ಕ ಶಿಕ್ಷೆ ಅನುಭವಿಸಿದ್ದಾರೆ.

ಮನುಷ್ಯನ ದುರಾಲೋಚನೆ ಅಳಿದು, ಜಗತ್ತು ಶಾಂತವಾಗಿರಲೆಂದು ಆಶಿಸಿ, ಪ್ರತಿಯೊಂದು ಹಬ್ಬ-ಉತ್ಸವವನ್ನು ಹರ್ಷದಿಂದಲೇ ಆಚರಿಸುತ್ತೇವೆ. ಎಲ್ಲರ ಹೃದಯದಲ್ಲಿ ಹೊಸ ಆಶಯಗಳನ್ನು ಬಿತ್ತಿ, ಪರಸ್ಪರ ಶುಭಾಶಯಗಳನ್ನೂ ವಿನಿಮಯ ಮಾಡಿಕೊಳ್ಳುತ್ತೇವೆ. ಆದರೆ, ಯಾವ ಹಬ್ಬವೂ ನಮ್ಮಲ್ಲಿನ ಸಣ್ಣತನಗಳನ್ನು ತೊಡೆದು, ದೊಡ್ಡತನಗಳನ್ನು ಬೆಳೆಸಿದ್ದಿಲ್ಲ. ಅದೇ ಅಶಾಂತ ಮನಃಸ್ಥಿತಿ ಎಲ್ಲರ ಮನದಲ್ಲಿ ನೆಲೆಸಿರುತ್ತೆ. ಯಾರ ಮನದಲ್ಲೂ ಸುಧಾರಣೆ ಕಾಣದೇ, ಜಗತ್ತು ವಿಪತ್ತಿಗೆ ಸಿಲುಕುತ್ತಿದೆ. ಇದರಿಂದ ಮಾನವರ ಪ್ರತಿ ವಿಪ್ಲವವೂ ಮ್ಲಾನವದನೀಯವಾಗಿಯೇ ಅಂತ್ಯ ಕಾಣುತ್ತಿದೆ.

ದುರಾಸೆ ಮನುಷ್ಯನ ಹುಟ್ಟು ಗುಣ. ಅವನ ಮೃಗೀಯತನ ಅಳಿಸಿ, ಮಾನವನನ್ನಾಗಿಸುವ ಶಕ್ತಿ ಇರುವುದು ಧರ್ಮಕ್ಕೆ ಮಾತ್ರ. ಪುರಾಣಗಳು ಹೇಳುವಂತೆ ಪ್ರತಿ ಒಂದು ಮನ್ವಂತರದ ಅಂತ್ಯಕ್ಕೆ ಪ್ರಳಯವಾಗಿ ಹೊಸ ಯುಗ ಉದಯಿಸುತ್ತೆ. ಆದರೆ ಆ ಪ್ರಳಯದ ಮೂಲವೇ ಮಾನವನ ವಿಕೃತಬುದ್ದಿ ಅನ್ನೋದು ಸುಳ್ಳಲ್ಲ. ಏಕೆಂದರೆ ರಾಮಾಯಣ-ಮಹಾಭಾರತ ಕಾಲದಿಂದಲೂ ಮನುಷ್ಯರ ಮನದೊಳಗಿನಿಂದ ಉಗಿವ ದ್ವೇಷ-ಮತ್ಸರ-ಕ್ಲೇಷಗಳು ಪರಸ್ಪರ ಕಾದಾಟವಾಗಿ ಯುಗಾಂತ್ಯವಾಗುತ್ತಿದೆ. ಪ್ರತಿ ಯುಗದಲ್ಲೂ ಮಾನವನೇ ಸರ್ವನಾಶಕ್ಕೆ ಕಾರಣೀಭೂತನಾಗಿದ್ದಾನೆ. ಆದರೆ, ಯಾವ ಹೊಸ ಮನ್ವಂತರದಲ್ಲೂ ಮನುಷ್ಯನ ಗುಣ ಬದಲಾವಣೆ ಮಾತ್ರ ಕಾಣುತ್ತಿಲ್ಲ. ಅದೇ ದ್ವೇಷಾಸೂಯೆ, ಸ್ವಾರ್ಥ-ನೀಚತನಗಳು ಅವನಲ್ಲಿ ಮೇಳೈಸುತ್ತಲೇ ಬರುತ್ತಿದೆ.

ಪ್ರತಿ ಮನ್ವಂತರದ ಅಂತ್ಯದಲ್ಲೂ ವಿಕೃತ ಮಾನವರ ಅಟ್ಟಹಾಸ ಅನಾವರಣಗೊಳ್ಳುತ್ತಲೇ ಸಾಗಿದೆ. ಆತನೊಳಗಿನ ಅರಿಷಡ್ವರ್ಗಗಳಾಗಲಿ, ನವಮದಗಳಲ್ಲಾಗಲಿ ಯಾವುದೂ ಸುಧಾರಣೆಯಾಗಿಲ್ಲ. ಪುರಾಣಗಳು ಹೇಳುವ ಸತ್ಯಯುಗದ ನರಸಿಂಹಾವತಾರದಲ್ಲಾಗಲಿ, ತ್ರೇತಾಯುಗದ ರಾಮಾಯಣದಲ್ಲಾಗಲಿ, ದ್ವಾಪರಯುಗದ ಮಹಾಭಾರತದಲ್ಲಾಗಲಿ ಮಾನವರ ಕುಕೃತ್ಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮೂರು ಯುಗದಲ್ಲು ಹೆಣ್ಣು-ಹೊನ್ನು-ಮಣ್ಣು ಕಬಳಿಸುವ ಮೂರು ದುರ್ಗುಣ ಅವನಲ್ಲಿ ಆರ್ಭಟಿಸಿಕೊಂಡೇ ಬಂದಿದೆ. ಪ್ರಸ್ತುತ ಕಲಿಯುಗದಲ್ಲೂ ಮನುಷ್ಯನ ದುರ್ಗುಣದಿಂದಲೇ ಕೆಟ್ಟ ಚರಿತ್ರೆ ಪುನರಾವರ್ತನೆಗೊಳ್ಳುತ್ತಿದೆ.
ಇದನ್ನೆಲ್ಲಾ ಗಮನಿಸಿದರೆ ಈ ಭೂಮಿಗೆ ನಿಜಕ್ಕೂ ಅಪಾಯವಿರುವುದು ಮನುಷ್ಯನಿಂದಲೇ ಹೊರತು, ಇನ್ನಾವುದೇ ಪ್ರಕೃತಿ ವಿಕೋಪಗಳಿಂದಲ್ಲ ಎಂಬುದು ನಿಚ್ಚಳವಾಗುತ್ತೆ. ಆದ್ದರಿಂದಲೇ ಮನುಷ್ಯನಲ್ಲಿ ದುರ್ಗುಣ ನಿಗ್ರಹಿಸಲು ಧರ್ಮ ಹುಟ್ಟಿದೆ. ಆದರೆ ಧರ್ಮದ ಮಹತ್ತನ್ನು ಅರಿಯದ ಮಾನವ ಹಾದಿ ತಪ್ಪುತ್ತಿದ್ದಾನೆ. ಧರ್ಮವಿಲ್ಲದೆ ಮನುಷ್ಯನಿಲ್ಲ ಎಂಬ ಸತ್ಯ ಅರಿವಾಗುವವರೆಗೂ ಅವನಲ್ಲಿನ ದುರ್ಗುಣ ಮರೆಯಾಗುವುದಿಲ್ಲ. ಅವನ ಹುಚ್ಚಾಸೆ ಸಹ ನಿಲ್ಲುವುದಿಲ್ಲ.

ಮನುಷ್ಯನ ವಿಕೃತ ಮನಸಿಗೆ ಕಡಿವಾಣ ಹಾಕಲು ಧರ್ಮಮಾರ್ಗ ಒಂದೇ ಸೂಕ್ತ. ಇದರಿಂದ ನಮ್ಮ ಪರಿಸರ ಜೀವ-ಜೀವನ ಯೋಗ್ಯವಾಗಿ ಬೆಳೆಯುತ್ತದೆ. ಪ್ರತಿಯೊಬ್ಬರ ಹೃದಯ ಮತ್ತೊಬ್ಬರ ಒಳಿತಿಗೆ ಮಿಡಿದು, ಯಾರಿಗೂ ತೊಂದರೆಯಾಗದಂತೆ ಬದುಕುವುದೇ ಜೀವನಮಾರ್ಗ. ಸುತ್ತಲ ವಾತಾವರಣವನ್ನು ಉತ್ತಮವಾಗಿಟ್ಟುಕೊಳ್ಳುವುದೇ ನಿಜವಾದ ಕರ್ಮಮಾರ್ಗ. ಇಂಥ ಉತ್ತಮಿಕರನ್ನು ರೂಪಿಸುವ ಶಕ್ತಿ ಇರುವುದು ಧರ್ಮಕ್ಕೆ ಮಾತ್ರ. ಇಂಥ ಧರ್ಮಮಾರ್ಗಿಗಳನ್ನು ‘ಸಚ್ಚಿದಾನಂದ’ ಪ್ರಭು ಸದಾ ಪ್ರೋತ್ಸಾಹಿಸುತ್ತಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು