ಸಿಂಧೂ– ಜಂಸ್ಕರ್ ಸಂಗಮ

7

ಸಿಂಧೂ– ಜಂಸ್ಕರ್ ಸಂಗಮ

Published:
Updated:
Deccan Herald

ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸುವ ಹಿಮದ ಚಾದರ ಹೊದ್ದ ಬೆಟ್ಟಗಳು, ಇವುಗಳ ಮಧ್ಯೆ ಹೆಬ್ಬಾವಿನಂತೆ ಬಳಸಿ ಹಾದುಹೋಗುವ ರಸ್ತೆ. ಇಕ್ಕೆಲದಲ್ಲಿ ಆಗಾಗ ಕಾಣಿಸುವ ಬೌದ್ಧ ಸ್ತೂಪಗಳು, ಅಪರೂಪವಾಗಿ ಕಂಗೊಳಿಸುವ ಹಸಿರು ಹೊಲದಲ್ಲಿ ಅರಳಿದ ಹಳದಿ ಸಾಸಿವೆ ಹೂಗಳು, ಬಾರ್ಲಿಯ ತೆನೆಗಳು...

ಹೀಗೆ ಪ್ರತಿ ನೋಟವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯೋಣ ಎನಿಸುವ ಭೂಚಿತ್ರಣಗಳನ್ನು ನೋಡುತ್ತಾ ಲೇಹ್ ನಗರದಿಂದ ಒಂದೂವರೆ ಗಂಟೆಗಳ ಕಾಲ ಕಾರಿನಲ್ಲಿ (ಅಂದಾಜು 40 ಕಿ.ಮೀ.) ಕ್ರಮಿಸಿದರೆ ನಾವು ಜಂಸ್ಕರ್ ಕಣಿವೆಯ ‘ನಿಮೊ’ ಎಂಬ ಹಳ್ಳಿಯನ್ನು ತಲುಪಿರುತ್ತೇವೆ.

‘ನಿಮೊ’ನಲ್ಲಿ ರಸ್ತೆಯ ಎಡಗಡೆಯಲ್ಲಿ ಎರಡು ನದಿಗಳ ಸಂಗಮ ಕಾಣಿಸುತ್ತದೆ. ಈ ಸಂಗಮದಲ್ಲಿ ಸೃಷ್ಟಿಯಾಗಿರುವ ವರ್ಣವೈವಿಧ್ಯವು ಕ್ಯಾಮೆರಾದ ಕಣ್ಣಿಗೂ ನಮ್ಮ ಮನಸ್ಸಿಗೂ ದೃಶ್ಯಕಾವ್ಯ. ಯಾಕೆಂದರೆ, ಈ ಸಂಗಮದಲ್ಲಿ, ಅಚ್ಚ ನೀಲಿ ಬಣ್ಣದಿಂದ ಕಂಗೊಳಿಸುವ ನದಿಯು ಭಾರತದ ಪ್ರಾಚೀನ ಇತಿಹಾಸದಲ್ಲಿ ‘ಸಿಂಧೂ ನದಿ ಕಣಿವೆ ಸಂಸ್ಕೃತಿ’ಯ ಸ್ಮೃತಿಗೆ ಕಾರಣವಾದ ಚಾರಿತ್ರಿಕ ನದಿ. ಸಿಂಧೂ ನದಿಯೊಂದಿಗೆ ಕಂದು-ಹಳದಿ ಕೆಸರು ರಾಡಿಯ ಬಣ್ಣದ, ಜಂಸ್ಕರ್ ನದಿಯು ಸೇರುವ ಈ ಜಾಗದಲ್ಲಿ, ಮಿಶ್ರವಾದ ನದಿನೀರಿನ ಬಣ್ಣ ಬದಲಾವಣೆಯ ಹಂತಗಳು ಸ್ಪಷ್ಟವಾಗಿ ಕಾಣಿಸುತ್ತವೆ.

ಜಂಸ್ಕರ್ ನದಿ ಕಣಿವೆಯಲ್ಲಿ ಚಳಿಗಾಲದಲ್ಲಿ ನದಿಯ ನೀರು ಮಂಜುಗಡ್ಡೆಯಾಗುತ್ತದೆ. ಆ ಸಮಯದಲ್ಲಿ, ನದಿಯ ಮೇಲೆ ಹಲವಾರು ಸಾಹಸ ಕ್ರೀಡೆಗಳನ್ನು ಆಡಲು ಅವಕಾಶವಿರುತ್ತದೆ. ಇಲ್ಲಿ ಜನವಸತಿ ಅತಿ ಕಡಿಮೆ. ಶೀತವುಳ್ಳ ಅರೆ ಮರುಭೂಮಿಯಂತಹ ಜಾಗವಿದು. ಸಮುದ್ರ ಮಟ್ಟದಿಂದ 11,000 ಅಡಿ ಮೇಲೆ ಇದೆ. ವರ್ಷದ ಹೆಚ್ಚಿನ ತಿಂಗಳುಗಳಲ್ಲಿ ಹಿಮಪಾತವಾಗಿ, ತಾಪಮಾನ ಮೈನಸ್ 30 ಡಿಗ್ರಿ ಸೆಲ್ಶಿಯಸ್‌ವರೆಗೂ ಇಳಿಯುವ ಜಾಗದಲ್ಲಿ ಅದು ಹೇಗೆ ಜನರು ಬದುಕುತ್ತಾರೋ ಎಂದು ಅಚ್ಚರಿಯಾಗುತ್ತದೆ. ಇಲ್ಲಿನ ಹಲವು ಸ್ಥಳಗಳಿಗೆ ಇದುವರೆಗೂ ಮನುಷ್ಯರು ತಲುಪಲು ಸಾಧ್ಯವಾಗಿಲ್ಲ. ಜಂಸ್ಕರ್ ಕಣಿವೆಯಲ್ಲಿರುವ ಹೆಚ್ಚಿನವರು ಟಿಬೆಟ್‌ ಮೂಲದ ಬೌದ್ಧರು. ಅವರ ಜನಜೀವನ ಮತ್ತು ಸಂಸ್ಕೃತಿ ಲಡಾಕ್‌ನ ಇತರರಿಗಿಂತ ಸ್ವಲ್ಪ ಭಿನ್ನ. ಜ಼ಂಸ್ಕರ್ ಭಾಷೆಯನ್ನು ಮಾತನಾಡುತ್ತಾರೆ.

ಜೂನ್‌ನಿಂದ ಅಕ್ಟೋಬರ್‌ವರೆಗಿನ ಸಮಯದಲ್ಲಿ, ಜಂಸ್ಕರ್ ಕಣಿವೆಯಲ್ಲಿದ್ದು ಕೃಷಿಯೋಗ್ಯ ಭೂಮಿಯಲ್ಲಿ ಗೋಧಿ, ಬಾರ್ಲಿ, ಸಾಸಿವೆ ಇತ್ಯಾದಿ ಬೆಳೆಯುವ ಈ ಜನರು ಪರಸ್ಪರ ಸಹಕಾರ ಮತ್ತು ಅವಲಂಬನೆಯಿಂದ ಕೃಷಿ ಕೆಲಸಗಳನ್ನು ಮಾಡುತ್ತಾರೆ. ಯಾಕ್ ಮೃಗಗಳನ್ನು ಮೇಯಿಸುತ್ತಾ, ಯಾಕ್ ಹಾಲಿನಿಂದ ವಿವಿಧ ಹೈನುಗಾರಿಕೆಯ ಉತ್ಪನ್ನಗಳನ್ನು ತಯಾರಿಸುತ್ತಾ, ಸಾಮೂಹಿಕವಾಗಿ ಹಾಡು, ನೃತ್ಯ ಮಾಡುತ್ತಾ ನೆಮ್ಮದಿಯಿಂದ ಇರುವ ಈ ಜನರು, ಚಳಿಗಾಲ ಆರಂಭವಾಗುತ್ತಿದ್ದಂತೆ ತಮಗೆ ಹಾಗೂ ಸಾಕುಪ್ರಾಣಿಗಳಿಗೆ ಆಹಾರ ವಸ್ತುಗಳು ದೊರೆಯುವ ತಗ್ಗಿನ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !