ಶುಕ್ರವಾರ, ಮೇ 29, 2020
27 °C

ಕೊರೊನಾ ಭೀತಿ | ಸಂಗಾತಿಯಿಂದ ದೂರವಿರಬೇಕೆ?

ಡಾ. ನಿರ್ಮಲಾ ಚಂದ್ರಶೇಖರ್‌ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕು ಲೈಂಗಿಕವಾಗಿ ಹರಡುತ್ತದೆಯೇ ಎಂಬ ಶಂಕೆ ಹಲವರಲ್ಲಿದೆ. ಇದು ಲೈಂಗಿಕವಾಗಿ ನೇರವಾಗಿ ಹರಡುವುದಿಲ್ಲ. ಆದರೆ ಒಬ್ಬ ಸಂಗಾತಿಗೆ ಸೋಂಕಿನ ಲಕ್ಷಣಗಳಿದ್ದರೆ, ಸಾಮೀಪ್ಯದಿಂದ ಹರಡುವುದರಿಂದ ದೂರ ಇರುವುದು ಒಳಿತು.

ಈ ನೋವೆಲ್‌ ಕೊರೊನಾ ವೈರಸ್‌ ಜಗತ್ತಿನ ಎಲ್ಲಾ ಕಡೆ ಮಿಂಚಿನ ವೇಗದಲ್ಲಿ ಸೋಂಕನ್ನು ಹರಡುತ್ತಿದೆ. ತಜ್ಞರ ಪ್ರಕಾರ ಈ ವೈರಸ್‌ (ಸಾರ್ಸ್‌ ಕೋವ್‌– 2) ಉಸಿರಾಟ ವ್ಯವಸ್ಥೆಯ (ಮೂಗು, ಗಂಟಲು ಇತ್ಯಾದಿ) ಸ್ರಾವದಲ್ಲಿ ಇರುವುದು ಈಗಾಗಲೇ ಗೊತ್ತಾಗಿದೆ. ಹೀಗಾಗಿ ಸೋಂಕಿತ ವ್ಯಕ್ತಿಯ ಸಾಮೀಪ್ಯ ಹೊಂದಿದ ಇನ್ನೊಬ್ಬರಿಗೆ ಈ ಸೋಂಕು ಹರುಡುವುದು ಸ್ವಾಭಾವಿಕ.

ಚುಂಬನದಿಂದ ದೂರವಿರಿ

ಈ ಸೋಂಕಿನ ಕುರಿತು ಬಹುತೇಕರಿಗೆ ಹಲವು ರೀತಿಯ ಅನುಮಾನಗಳು ಏಳುವುದು ಸಹಜ. ಇದು ಲೈಂಗಿಕವಾಗಿ ಹರಡುತ್ತದೆಯೇ ಎಂಬುದು ಹಲವರ ಪ್ರಶ್ನೆ. ಸದ್ಯ ಕೋವಿಡ್‌–19 ಪಿಡುಗು ಲೈಂಗಿಕ ಕ್ರಿಯೆಯಿಂದ, ಅದು ಜನನಾಂಗ ಅಥವಾ ಇನ್ನಾವುದೇ ರೀತಿಯ ಸಂಭೋಗವಿರಲಿ, ಅದರಿಂದ ಹರಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಲಭಿಸಿಲ್ಲ. ಆದರೆ ಸಂಗಾತಿಯ ಜೊತೆಗಿನ ಚುಂಬನದಿಂದ ಇದು ಹರಡಬಲ್ಲದು.

ತಜ್ಞರ ಪ್ರಕಾರ, ಸೋಂಕು ಹರಡುವುದು ಉಸಿರಾಟ ವ್ಯವಸ್ಥೆಯಲ್ಲಿರುವ ದ್ರವದ ಹನಿಯ ಮೂಲಕ. ಸೋಂಕಿತ ವ್ಯಕ್ತಿಯ ಈ ಗಂಟಲಿನ ಅಥವಾ ಒಟ್ಟಾರೆ ಉಸಿರಾಟ ವ್ಯವಸ್ಥೆಯಿಂದ ಹೊರ ದೂಡಲ್ಪಟ್ಟ ದ್ರವದ ಹನಿ ಯಾವುದೇ ವಸ್ತುವಿನ ಮೇಲ್ಮೈನಲ್ಲಿದ್ದರೆ ಅದನ್ನು ಸ್ಪರ್ಶಿಸಿದ ಸೋಂಕಿಲ್ಲದ ವ್ಯಕ್ತಿಗೂ ಈ ವೈರಸ್‌ ಹರಡುತ್ತದೆ. ಹೀಗಾಗಿ ದಂಪತಿ ಅಥವಾ ಪ್ರೇಮಿಗಳಲ್ಲಿ ಒಬ್ಬರಿಗೆ ಸೋಂಕಿದ್ದರೂ ಅವರು ಲೈಂಗಿಕ ಕ್ರಿಯೆ ಅಥವಾ ಡೇಟಿಂಗ್‌ ಮಾಡುವಾಗ ಸಾಮೀಪ್ಯದಿಂದಾಗಿ, ಒಬ್ಬರ ಉಸಿರು ಇನ್ನೊಬ್ಬರಿಗೆ ತಾಗುವುದರಿಂದ ಸಂಗಾತಿಗೆ ಹರಡುತ್ತದೆ.

ಹೀಗಾಗಿ ಈ ಸಂದರ್ಭದಲ್ಲಿ ಸಂಗಾತಿಗೆ ಸೋಂಕಿನ ಲಕ್ಷಣಗಳಿದ್ದರೆ ಕ್ವಾರಂಟೈನ್‌ ಆಗಿ ದೂರ ಇರುವುದು ಒಳಿತು.

ಗರ್ಭಿಣಿಯರಿಗೆ ಈ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎಂಬುದಾಗಲಿ ಅಥವಾ ಇದರಿಂದ ಹೆಚ್ಚು ತೊಂದರೆ ಅನುಭವಿಸುತ್ತಾರೆ ಎಂಬುದಾಗಲಿ ಸದ್ಯಕ್ಕಂತೂ ಸಾಬೀತಾಗಿಲ್ಲ. ಆದರೆ ಗರ್ಭಿಣಿಯರಿಗೆ ಕೋವಿಡ್‌ –19 ವರ್ಗಕ್ಕೆ ಸೇರಿದ ಇತರ ವೈರಸ್‌ ಸೋಂಕು ಅಥವಾ ಇನ್‌ಫ್ಲುಯೆಂಜಾ ತಗುಲಿದಾಗ ತೀವ್ರ ಸಮಸ್ಯೆ ಉಂಟಾಗುತ್ತದೆ.

ಇನ್ನು ಗರ್ಭಿಣಿಯಿದ್ದಾಗ ತಾಯಿಯಿಂದ ಗರ್ಭದೊಳಗಿನ ಶಿಶುವಿಗೆ ಸೋಂಕು ತಗುಲುವುದು ಸಾಧ್ಯವಿಲ್ಲ. ಹೆರಿಗೆಯಾದ ತಕ್ಷಣ ಬೆರಳೆಣಿಕೆಯ ಶಿಶುಗಳಿಗೆ ಈ ಸೋಂಕು ತಗುಲಿದ್ದು ವರದಿಯಾಗಿದೆ. ಆದರೆ ಇದು ಜನನಕ್ಕಿಂತ ಮೊದಲೇ ತಗುಲಿತ್ತೇ ಎಂಬುದು ಗೊತ್ತಾಗಿಲ್ಲ. ಆಮ್ನಿಯೋಟಿಕ್‌ (ಗರ್ಭಚೀಲದಲ್ಲಿ ಶಿಶುವನ್ನು ಸುತ್ತುವರಿದಿರುವ ದ್ರವ) ದ್ರವ ಮತ್ತು ಎದೆಹಾಲನ್ನು ಪರೀಕ್ಷಿಸಿದಾಗ ಅದರಲ್ಲಿ ಕೂಡ ಈ ವೈರಸ್‌ ಪತ್ತೆಯಾಗಿಲ್ಲ.

ಗರ್ಭ ಧರಿಸಿದರೆ ತೊಂದರೆ ಇಲ್ಲವೇ?
ಆದರೂ ಕೂಡ ಈ ಸಂದರ್ಭದಲ್ಲಿ ಗರ್ಭ ಧರಿಸಬಹುದೇ ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡಲು ಸಾಧ್ಯವಿಲ್ಲ. ಏಕೆಂದರೆ ಇದು ಹೊಸ ಬಗೆಯ ವೈರಸ್‌ ಸೋಂಕು. ಹೀಗಾಗಿ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ಇನ್ನೂ ನಡೆಯಬೇಕಾಗಿದೆ. ಮೇಲೆ ತಿಳಿಸಿದಂತಹ ಕೆಲವು ಅಂಶಗಳು ಬೆರಳೆಣಿಕೆಯ ಗರ್ಭಿಣಿಯರಲ್ಲಿ ಅದರಲ್ಲೂ ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ನಡೆದ ಅಧ್ಯಯನಗಳಿಂದ ಗೊತ್ತಾದಂಥವು. ಗರ್ಭ ಧರಿಸಿದ ಆರಂಭದ ದಿನಗಳಲ್ಲಿ ಮಹಿಳೆಗೆ ಸೋಂಕು ತಗುಲಿದ ಕುರಿತಂತೆ ಯಾವುದೇ ಪ್ರಕರಣಗಳು ಇನ್ನೂ ವರದಿಯಾಗಿಲ್ಲ.

(ಲೇಖಕಿ ಕನ್ಸಲ್ಟೆಂಟ್‌ ಪ್ರಸೂತಿ ತಜ್ಞೆ, ಬಿಜಿಎಸ್‌ ಗ್ಲೆನೆಗಲ್ಸ್‌ ಗ್ಲೋಬಲ್‌ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು