ಸೋಮವಾರ, ಆಗಸ್ಟ್ 3, 2020
23 °C

ಕ್ರಿಕೆಟ್‌ ವೀಕ್ಷಿಸಲು ಬಂದಿದ್ದ ಮಲ್ಯ ಸುತ್ತುವರಿದು ಕಳ್ಳ, ಕಳ್ಳ ಎಂದು ಗೇಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಒವೆಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶ್ವಕಪ್‌ ಪಂದ್ಯ ವೀಕ್ಷಿಸಲು ಬಂದಿದ್ದ ವಿಜಯ್‌ ಮಲ್ಯ ತೀವ್ರ ಪೇಚಿಗೆ ಸಿಲುಕಿದ ಪ್ರಸಂಗ ನಡೆದಿದೆ. ಕ್ರೀಡಾಂಗಣದ ಹೊರಗೆ ವಿಜಯ್‌ ಮಲ್ಯರನ್ನು ಸುತ್ತುವರಿದ ಭಾರತೀಯರು ‘ದುಡ್ಡು ಕೊಡು ಮಲ್ಯ ಅಣ್ಣ, ದುಡ್ಡು ಕೊಡು' ‘ನೀನು ಕಳ್ಳ’ ಎಂದು ಗೇಲಿ ಮಾಡಿದ್ದಾರೆ.  

ವಿವಿಧ ಬ್ಯಾಂಕ್‌ಗಳಿಗೆ ₹9000 ಕೋಟಿಗಳನ್ನು ವಂಚಿಸಿ ಲಂಡನ್‌ ಸೇರಿರುವ ಮದ್ಯದ ದೊರೆ ವಿಜಯ್‌ ಮಲ್ಯ ಭಾರತಕ್ಕೆ ಬೇಕಾಗಿದ್ದಾರೆ. ಸದ್ಯದ ಕಾನೂನಿನ ರಕ್ಷಣೆಯಲ್ಲಿರುವ ಮಲ್ಯ ವಿರುದ್ಧ ಭಾರತದ ನಾಗರಿಕರಲ್ಲಿ ಸಿಟ್ಟಿದೆ. ಇದೇ ಸಿಟ್ಟು ಭಾನುವಾರ ವಿಜಯ್‌ ಮಲ್ಯರನ್ನು ಅಪಮಾನಕ್ಕೆ ದೂಡಿದೆ. 

ತನ್ನ ಪುತ್ರ ಮತ್ತು ತಾಯಿಯೊಂದಿಗೆ ಕೆನ್ನಿಂಗ್ಟನ್‌ನ ಒವಲ್‌ ಕ್ರೀಡಾಂಗಣಕ್ಕೆ ಆಗಮಿಸಿ ಕ್ರಿಕೆಟ್‌ ವೀಕ್ಷಿಸಿದ್ದ ವಿಜಯ್‌ ಮಲ್ಯ, ಕ್ರೀಡಾಂಗಣದಲ್ಲಿದ್ದುಕೊಂಡೇ ತಮ್ಮ ಪುತ್ರನೊಂದಿಗೆ ಫೋಟೋ ತೆಗೆದು ಟ್ವಿಟ್ಟರ್‌ಗೂ ಹಾಕಿದ್ದರು. ಪಂದ್ಯ ಮುಗಿದ ನಂತರ ಕ್ರೀಡಾಂಗಣದಿಂದ ಹೊರ ಬಂದ ಮಲ್ಯರನ್ನು ಜನ ಸುತ್ತುವರಿದು ಬ್ಯಾಂಕ್‌ಗಳಿಗೆ ನೀಡಬೇಕಾದ ಹಣವನ್ನು ಹಿಂದಿರುಗಿಸಬೇಕಾಗಿ ಕೂಗುತ್ತಾರೆ. ಇದನ್ನು ಅಲ್ಲಿದ್ದ ಜನರೇ ವಿಡಿಯೋ ಮಾಡಿದ್ದು, ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಮಲ್ಯರನ್ನು ತಳ್ಳಾಡುತ್ತಿರುವ ಭಾರತೀಯರು ‘ನೀನು ಕಳ್ಳ’, ‘ದುಡ್ಡೆಲ್ಲಿ ದುಡ್ಡು’, ‘ಹಣ ಕೊಡು ಮಲ್ಯ ಅಣ್ಣ,’ ಎಂದು ಕೂಗುತ್ತಾರೆ.  ಈ ಕೂಗಾಟ ಮತ್ತಷ್ಟು ಜೋರಾಗುತ್ತಲೇ, ‘ಮನುಷ್ಯನಾಗಿರು. ಮೊದಲು ದೇಶದ ಕ್ಷಮೆ ಕೇಳು,’ ಎಂಬ ಕೂಗು ಕೇಳುತ್ತದೆ. 

ಇದರ ನಡುವೆಯೇ ಮಾಧ್ಯಮಗಳು ಮಲ್ಯರನ್ನು ಮಾತೆಗೆಳೆಯಲು ಪ್ರಯತ್ನಿಸುತ್ತವೆ. ಆಗ ಪ್ರತಿಕ್ರಿಯಿಸುವ ಮಲ್ಯ, ‘ನನ್ನ ತಾಯಿ ಇದರಿಂದ ಆಘಾತಕ್ಕೊಳಗಾಗದಂತೆ ಮಾಡಬೇಕಿದೆ,’ ಎಂದು ದೌಡಾಯಿಸುತ್ತಾರೆ. 

ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿರುವ ವಿಜಯ್‌ ಮಲ್ಯರನ್ನು ಹಸ್ತಾಂತರ ಮಾಡುವ ಪ್ರಕರಣ ಸದ್ಯ ಬ್ರಿಟನ್‌ನ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು