ಗಾಂಧಿನಗರದಲ್ಲಿ ಅಕ್ರಮ ಡಿಸ್ಕೋಥೆಕ್: ಸಿಸಿಬಿ ದಾಳಿ

7
ಮಾಲೀಕ ಬಂಧನ, 83 ಗ್ರಾಹಕರು ವಶಕ್ಕೆ

ಗಾಂಧಿನಗರದಲ್ಲಿ ಅಕ್ರಮ ಡಿಸ್ಕೋಥೆಕ್: ಸಿಸಿಬಿ ದಾಳಿ

Published:
Updated:
Prajavani

ಬೆಂಗಳೂರು: ಅಕ್ರಮವಾಗಿ ಡಿಸ್ಕೋಥೆಕ್ (ಡಾನ್ಸ್) ನಡೆಸುತ್ತಿದ್ದ ಗಾಂಧಿನಗರದ ಫೋರ್ಟ್‌ ಆಫ್ ಪೆವಿಲಿಯನ್ ಬಾರ್‌ ಆ್ಯಂಡ್ ರೆಸ್ಟೊರಂಟ್ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಮಾಲೀಕ ಸುದೇಶ್‌ನನ್ನು ಬಂಧಿಸಿದ್ದಾರೆ. 83 ಗ್ರಾಹಕರನ್ನು ವಶಕ್ಕೆ ಪಡೆದಿದ್ದಾರೆ.

‘ಮಂಗಳೂರಿನ ತೊಕ್ಕೂಟ್ಟುವಿನ ಸುದೇಶ್, ಗಾಂಧಿನಗರದ ಒಂದನೇ ಮುಖ್ಯರಸ್ತೆಯಲ್ಲಿರುವ ಸುಜಾತಾ ಕಾಂಪ್ಲೆಕ್ಸ್‌ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಬಾರ್ ಆ್ಯಂಡ್ ರೆಸ್ಟೊರಂಟ್ ಆರಂಭಿಸಿದ್ದ. ಹೊರ ರಾಜ್ಯಗಳಿಂದ ಮಹಿಳೆಯನ್ನು ಕರೆಸಿ, ಅವರನ್ನೇ ಪುರುಷ ಗ್ರಾಹಕರ ಜೊತೆಗಾರ್ತಿಯನ್ನಾಗಿ ಮಾಡಿ ಡಿಸ್ಕೋಥೆಕ್ ನಡೆಸುತ್ತಿದ್ದ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ದಾಳಿ ವೇಳೆ 28 ಮಹಿಳೆಯರನ್ನು ರಕ್ಷಿಸಲಾಗಿದೆ. ಆರೋಪಿಗಳಿಂದ ₹2.41 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದರು.

‘ಡಿಸ್ಕೋಥೆಕ್ ನಡೆಸಲು ಯಾವುದೇ ಪರವಾನಗಿ ಪಡೆದಿರಲಿಲ್ಲ. ಮಾಲೀಕ, ತನ್ನ ಬಳಿಯ ಹುಡುಗಿಯರಿಗೆ ಗ್ರಾಹಕರ ಜೊತೆಯಲ್ಲಿ ನೃತ್ಯ ಮಾಡುವಂತೆ ಹೇಳುತ್ತಿದ್ದ. ಇಬ್ಬರಿಂದಲೂ ಅಶ್ಲೀಲವಾಗಿ ನೃತ್ಯ ಮಾಡಿಸುತ್ತ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಹೇಳಿದರು. 

ಕೆಲವು ಪೊಲೀಸರು ಶಾಮೀಲು; ‘ಅಕ್ರಮವಾಗಿ ಡಿಸ್ಕೋಥೆಕ್ ನಡೆಯುತ್ತಿದ್ದ ವಿಷಯ ಗೊತ್ತಿದ್ದರೂ ಉಪ್ಪಾರಪೇಟೆ ಪೊಲೀಸರು ಮೌನವಾಗಿದ್ದರು. ಆರೋಪಿಗಳ ಜೊತೆ ಕೆಲವು ಪೊಲೀಸರು ಸಹ ಶಾಮೀಲಾಗಿರುವ ಅನುಮಾನವಿದೆ. ಅವರು ಯಾರು ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಫೋರ್ಟ್‌ ಆಫ್ ಪೇವಿಲಿಯನ್ ಬಾರ್‌ ಆ್ಯಂಡ್ ರೆಸ್ಟೊರಂಟ್ ಬಳಿಯೇ ಉಪ್ಪಾರಪೇಟೆ ಠಾಣೆಯ ಕೆಲವು ಪೊಲೀಸರು ನಿತ್ಯವೂ ರಾತ್ರಿ ಗಸ್ತು ತಿರುಗುತ್ತಿದ್ದರು. ಅಷ್ಟಾದರೂ ಬಾರ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಅವರಿಗೆ ವರದಿ ನೀಡಲಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !