ಮಂಗಳವಾರ, ಸೆಪ್ಟೆಂಬರ್ 28, 2021
23 °C
ಬಾಲ್ಯದಲ್ಲೇ ಬಣ್ಣ ಹಚ್ಚಲು ಪ್ರೇರಣೆ ನೀಡಿದ ಶಾಲಾ ನಾಟಕಗಳು, ರಂಗಗೀತೆ ಹಾಡುವುದರಲ್ಲೂ ಮಹದೇವಪ್ಪ ಎತ್ತಿದ ಕೈ

ಪೌರಾಣಿಕ ನಾಟಕಗಳ ಅಭಿನಯ ಚತುರ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಶಾಲೆಯಲ್ಲಿ ಕಲಿಸುತ್ತಿದ್ದ ಸಾಮಾಜಿಕ ನಾಟಕಗಳಿಂದ ಪ್ರೇರೇಪಿತರಾಗಿ ನೂರಕ್ಕೂ ಹೆಚ್ಚು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ ಸಂತೇಮರಹಳ್ಳಿಯ ಗೌಡಗೆರೆ ಮಹದೇವಪ್ಪ.

ವೃತ್ತಿಯಲ್ಲಿ ಸರ್ಕಾರಿ ರೇಷ್ಮೆ ಕಾರ್ಖಾನೆಯಲ್ಲಿ ಮೇಲ್ವಿಚಾರಕರಾಗಿ, ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದರಾಗಿ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಪೌರಾಣಿಕ ನಾಟಕಗಳನ್ನು ಅಭಿನಯಿಸುವುದರ ಜತೆಗೆ ರಂಗ ಗೀತೆಗಳನ್ನು ಹಾಡುತ್ತಾ ಉತ್ತಮ ಕಲಾವಿದರೆನಿಸಿಕೊಂಡಿದ್ದಾರೆ.

 ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಸಂದರ್ಭದಲ್ಲಿ ಶಾಲೆಯಲ್ಲಿ ಕಲಿಸುತ್ತಿದ್ದ ಸಣ್ಣ ಪುಟ್ಟ ನಾಟಕಗಳು ಇವರನ್ನು ಪೌರಾಣಿಕ ನಾಟಕಗಳಲ್ಲಿ ಬಣ್ಣ ಹಚ್ಚುವಂತೆ ಮಾಡಿತು. ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ‘ಕಂಬಳಿ ನಾಗಿದೇವ’ ಎಂಬ ಶರಣರ ನಾಟಕ ಇವರನ್ನು ನಾಟಕದಲ್ಲಿ ತೊಡಗಿಸಿಕೊಳ್ಳಲು ಮತ್ತಷ್ಟು ಹುರಿದುಂಬಿಸಿತ್ತು.

ನಂಜನಗೂಡಿನ ಶ್ರೀಕಂಠೇಶ್ವರ ನಾಟಕ ಕಂಪನಿಯ ಹೆಸರಾಂತ ಕಲಾವಿದ ನಾಗಪ್ಪ ಅವರು ಆರಂಭಿಸಿದ್ದ ಕಂಪನಿಗೆ ಸೇರಿ ಪೌರಾಣಿಕ ನಾಟಕಗಗಳಲ್ಲಿ ಬಣ್ಣ ಹಚ್ಚಲು ಆರಂಭಿಸಿದರು. ಬೇಡರ ಕಣ್ಣಪ್ಪ, ಧಕ್ಷಯಜ್ಞ, ಸುಭದ್ರ ಪರಿಣಯ, ಶಿವಕುಮಾರ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬೇಡರ ಕಣ್ಣಪ್ಪ ನಾಟಕದಲ್ಲಿ ಪೂಜಾರಿ ಪಾತ್ರವನ್ನು 50ಕ್ಕೂ ಹೆಚ್ಚು ಬಾರಿ ಅಭಿನಯಿಸಿದ್ದಾರೆ. ಧಕ್ಷಯಜ್ಞದಲ್ಲಿ ಭೃಗು, ವಿಷ್ಣು, ಸುಭದ್ರ ಪರಿಣಯದಲ್ಲಿ ಕರ್ಣ ಹಾಗೂ ಇತರೆ ನಾಟಕಗಳಲ್ಲಿ ಈಶ್ವರ, ಕುಬೇರನಂತಹ ಪಾತ್ರಗಳಲ್ಲಿ ನಟನಾ ಕೌಶಲ ಪ್ರದರ್ಶಿಸಿದ್ದಾರೆ.

ಚಾಮರಾಜನಗರ ಮಾತ್ರವಲ್ಲದೇ, ಮಂಡ್ಯ, ಮೈಸೂರು ಜಿಲ್ಲೆಗಳ ವಿವಿಧ ತಾಲ್ಲೂಕುಗಳಲ್ಲಿ ಅಭಿನಯಿಸಿ ಜನರಿಂದ ಮೆಚ್ಚುಗೆ ಗಳಿಸಿ ಮತ್ತೊಮ್ಮೆ ಅಭಿನಯಿಸುವಂತೆ ಇವರಿಗೆ ಕರೆ ಬಂದಿರುವುದುಂಟು. ಮಹದೇಶ್ವರ ಬೆಟ್ಟದ ಜಾತ್ರಾ ಸಮಯದಲ್ಲಿ, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಹಾಗೂ ಚಿಕ್ಕಲ್ಲೂರು ಜಾತ್ರೆಗಳಲ್ಲಿ ಭಕ್ತಿ ಪ್ರಧಾನವಾದ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಭಟ್ಟಿ ಮಹದೇವಪ್ಪ, ಸರ್ವಮಂಗಳಾ... ಮುಂತಾದ ಪ್ರಸಿದ್ಧ ನಟರೊಂದಿಗೆ ಅಭಿನಯಿಸಿದ ಕೀರ್ತಿಯೂ ಮಹದೇವಪ್ಪ ಅವರಿಗಿದೆ.

ಇವರ ಅಭಿನಯನವನ್ನು ಕರ್ನಾಟಕ ನಾಟಕ ಅಕಾಡೆಮಿ ಗುರುತಿಸಿ ಗೌರವಿಸಿದೆ. ಸುತ್ತೂರು ಹಾಗೂ ಸಿದ್ಧಗಂಗೆ ಮಠಗಳು ಕೂಡ ಇವರ ಕಲಾ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೌರವಕ್ಕೂ ಇವರು ಭಾಜನರಾಗಿದ್ದಾರೆ. 

ಇವರನ್ನು ಗುರುತಿಸಿ ಪ್ರಶಸ್ತಿ ನೀಡಿರುತ್ತಾರೆ. ನೆರೆಯ ಜಿಲ್ಲೆಗಳು ಹಾಗೂ ವಿವಿಧ ತಾಲ್ಲೂಕಿನ ಕಲಾ ಸಂಘ ಸಂಸ್ಥೆಗಳು ಇವರ ಅಭಿನಯವನ್ನು ಗುರುತಿಸಿ ಬಹುಮಾನ ನೀಡಿ ಪ್ರೋತ್ಸಾಹಿಸಿವೆ.

ಈ ಭಾಗದಲ್ಲಿ ಯಾವುದೇ ರಂಗಭೂಮಿ ಕಾರ್ಯಕ್ರಮ ನಡೆದರೂ ಮಹದೇವಪ್ಪ ಅವರಿಗೆ ಆಮಂತ್ರಣ ಇದ್ದೇ ಇರುತ್ತದೆ. ಜಾತ್ರೆಗಳು ಹಾಗೂ ದೇವಸ್ಥಾನಗಳಲ್ಲಿ ನಡೆಯುವ ರಂಗಗೀತೆ ಗಾಯನ ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಕಂಠಸಿರಿಯಿಂದ ಕೇಳುಗರನ್ನು ರಂಜಿಸುತ್ತಾರೆ.

‘ಕಲಾವಿದರನ್ನು ಸರ್ಕಾರ ಗುರುತಿಸಬೇಕು’

‘ಇತ್ತೀಚೆಗೆ ಪೌರಾಣಿಕ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಕಡಿಮೆಯಾಗಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರನ್ನು ಗುರುತಿಸುವ ಕೆಲಸ ಮಾಡಬೇಕು. ಸರ್ಕಾರ, ಸಂಘ ಸಂಸ್ಥೆಗಳಿಂದ ಪ್ರೋತ್ಸಾಹ ಸಿಕ್ಕಿದಾಗ ಪೌರಾಣಿಕ ನಾಟಕ ಕಲೆಯನ್ನು ಜೀವಂತವಾಗಿ ಇರಿಸಲು ಸಾಧ್ಯ. ಇಲ್ಲದಿದ್ದರೆ ಅಳಿವಿನಂಚಿಗೆ ಸಾಗುತ್ತದೆ’ ಎಂದು ಮಹದೇವಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು