ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ ಸುದ್ದಿ: ಗಿಗ್‌ ಆರ್ಥಿಕತೆಯಲ್ಲಿ ಚಿಲ್ಲರೆ ವ್ಯಾಪಾರದ್ದೇ ಸಿಂಹಪಾಲು

ಆಧಾರ: ನೀತಿ ಆಯೋಗದ ‘ಭಾರತದ ಉದಯೋನ್ಮುಖ ಗಿಗ್‌ ಮತ್ತು ಪ್ಲಾಟ್‌ಫಾರಂ ಆರ್ಥಿಕತೆ’ ವರದಿ
Last Updated 28 ಜೂನ್ 2022, 18:41 IST
ಅಕ್ಷರ ಗಾತ್ರ

ಗಿಗ್‌ ಆರ್ಥಿಕತೆಯಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿಸಿರುವ ವಲಯ ಚಿಲ್ಲರೆ ವ್ಯಾಪಾರ. ಗಿಗ್ ಆರ್ಥಿಕತೆಯ ಒಟ್ಟು ಉದ್ಯೋಗದಲ್ಲಿ ಸುಮಾರು ಶೇ 39ರಷ್ಟು ಪಾಲು ಚಿಲ್ಲರೆ ವ್ಯಾಪಾರದ್ದು. 2021–22ರಲ್ಲಿ ಗಿಗ್‌ ಆರ್ಥಿಕತೆಯಲ್ಲಿ ತೊಡಗಿಸಿಕೊಂಡಿದ್ದ ಚಿಲ್ಲರೆ ವ್ಯಾಪಾರಿಗಳು ಮತ್ತು ಮಾರಾಟ ಪ್ರತಿನಿಧಿಗಳ ಸಂಖ್ಯೆ 10.6 ಲಕ್ಷ. 2017-18ರ ವೇಳೆಗೆ ಇಂತಹ ಉದ್ಯೋಗಿಗಳ ಸಂಖ್ಯೆ 19.2 ಲಕ್ಷಕ್ಕೆ ಏರಿಕೆಯಾಗಿದೆ. ಆರು ವರ್ಷಗಳಲ್ಲಿ ಇಂತಹ ಉದ್ಯೋಗಿಗಳ ಸಂಖ್ಯೆಯಲ್ಲಿ 8.6 ಲಕ್ಷದಷ್ಟು ಏರಿಕೆಯಾಗಿದೆ. 2019–20ನೇ ಸಾಲಿನ ವೇಳೆಗೆ ಈ ಸ್ವರೂಪದ ಉದ್ಯೋಗಿಗಳ ಸಂಖ್ಯೆ 26.3 ಲಕ್ಷಕ್ಕೆ ಏರಿಕೆಯಾಗಿದೆ.

ಗಿಗ್‌ ಆರ್ಥಿಕತೆಯು ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ನೀತಿ ಆಯೋಗವು ಹೇಳಿದೆ. 2020–21ನೇ ಸಾಲಿನಲ್ಲಿ ಗಿಗ್‌ ಆರ್ಥಿಕತೆಯಲ್ಲಿ ತೊಡಗಿಕೊಂಡಿರುವ ಉದ್ಯೋಗಿಗಳ ಸಂಖ್ಯೆ 77 ಲಕ್ಷದಷ್ಟಿದ್ದು, 2029–30ನೇ ಸಾಲಿನಷ್ಟರಲ್ಲಿ ಈ ಸಂಖ್ಯೆ 2.35 ಕೋಟಿಗಳಿಗೆ ಏರಿಕೆಯಾಗಲಿದೆ ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿದೆ. ಗಿಗ್‌ ಆರ್ಥಿಕತೆಯಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿಸಿರುವ ವಲಯ ಚಿಲ್ಲರೆ ವ್ಯಾಪಾರ. ಗಿಗ್ ಆರ್ಥಿಕತೆಯ ಒಟ್ಟು ಉದ್ಯೋಗದಲ್ಲಿ ಸುಮಾರು ಶೇ 39ರಷ್ಟು ಪಾಲು ಚಿಲ್ಲರೆ ವ್ಯಾಪಾರದ್ದು.

2021–22ರಲ್ಲಿ ಗಿಗ್‌ ಆರ್ಥಿಕತೆಯಲ್ಲಿ ತೊಡಗಿಸಿಕೊಂಡಿದ್ದ ಚಿಲ್ಲರೆ ವ್ಯಾಪಾರಿಗಳು ಮತ್ತು ಮಾರಾಟ ಪ್ರತಿನಿಧಿಗಳ ಸಂಖ್ಯೆ 10.6 ಲಕ್ಷ. 2017-18ರ ವೇಳೆಗೆ ಇಂತಹ ಉದ್ಯೋಗಿಗಳ ಸಂಖ್ಯೆ 19.2 ಲಕ್ಷಕ್ಕೆಏರಿಕೆಯಾಗಿದೆ. ಆರು ವರ್ಷಗಳಲ್ಲಿ ಇಂತಹ ಉದ್ಯೋಗಿಗಳ ಸಂಖ್ಯೆಯಲ್ಲಿ 8.6 ಲಕ್ಷದಷ್ಟು ಏರಿಕೆಯಾಗಿದೆ. 2019–20ನೇ ಸಾಲಿನ ವೇಳೆಗೆ ಈ ಸ್ವರೂಪದ ಉದ್ಯೋಗಿಗಳ ಸಂಖ್ಯೆ 26.3 ಲಕ್ಷಕ್ಕೆ ಏರಿಕೆಯಾಗಿದೆ. ನಂತರದ ಎರಡೇ ವರ್ಷಗಳಲ್ಲಿ ಇಂತಹ ಉದ್ಯೋಗಿಗಳ ಸಂಖ್ಯೆಯಲ್ಲಿ 7.1 ಲಕ್ಷದಷ್ಟು ಏರಿಕೆಯಾಗಿದೆ.

ಅಂದರೆ, 2017–18ರ ನಂತರ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಕೊಳ್ಳುವ ಮಂದಿ‌ಯ ಸಂಖ್ಯೆ ಹೆಚ್ಚಾಗಿದೆ. ದೇಶದ ನಗರ ಮತ್ತು ಪಟ್ಟಣ ಪ್ರದೇಶದಲ್ಲಿರುವ, ಸ್ವಂತ ಉದ್ಯೋಗ–ಪಾಲುದಾರಿಕೆ ಉದ್ಯೋಗ, ಅಂಗಡಿ–ಷೋರೂಂಗಳಲ್ಲಿ ಮಾರಾಟ ಪ್ರತಿನಿಧಿಯಾಗಿ ಮಾಡುವ ಕೆಲಸವನ್ನು ಈ ವರ್ಗದಲ್ಲಿ ಗುರುತಿಸಲಾಗಿದೆ. ಈ ಸ್ವರೂಪದ ಉದ್ಯೋಗಿಗಳ ಸಂಖ್ಯೆಯೂ ಮುಂದಿನ ವರ್ಷದಲ್ಲಿ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಗಿಗ್‌ ಉದ್ಯೋಗ ಎಂದರೆ...

ಅಲ್ಪಾವಧಿಯವರೆಗೆ ಮಾತ್ರ ಇರುವ ಉದ್ಯೋಗವನ್ನು ಗಿಗ್‌ ಉದ್ಯೋಗ ಎಂದು ಜಾಗತಿಕ ಮಟ್ಟದಲ್ಲಿ ಪರಿಗಣಿಸಲಾಗುತ್ತದೆ. ಆದರೆ, ನೀತಿ ಆಯೋಗವು ಆನ್‌ಲೈನ್‌ ಪ್ಲಾಟ್‌ಫಾರಂ ಮತ್ತು ಅಂತಹ ಪ್ಲಾಟ್‌ಫಾರಂ ಇಲ್ಲದೇ ನಡೆಯುವ ಸ್ವಯಂ ಉದ್ಯೋಗಗಳನ್ನೂ ಗಿಗ್‌ ಉದ್ಯೋಗ ಎಂದು ಪರಿಗಣಿಸಿದೆ. ಭಾರತದಲ್ಲಿ ಗಿಗ್‌ ಉದ್ಯೋಗದ ಬೆಳವಣಿಗೆಯ ಸಾಧ್ಯತೆಗಳ ಬಗ್ಗೆ ನೀತಿ ಆಯೋಗವು ಪ್ರಕಟಿಸಿರುವ ವರದಿಯಲ್ಲಿ ಇಂತಹ ವ್ಯಾಖ್ಯಾನ ಇದೆ.

ಡೆಲಿವರಿ ಸೇವೆ, ಪ್ಲಂಬಿಂಗ್‌, ಎಲೆಕ್ಟ್ರೀಷಿಯನ್‌, ಗಾರ್ಡನಿಂಗ್‌, ವಿಡಿಯೊ ಬ್ಲಾಗಿಂಗ್‌, ಚಹಾ–ತಿಂಡಿ ವ್ಯಾಪಾರ, ಮಾರಾಟ ಪ್ರತಿನಿಧಿ... ಹೀಗೆ ನೀತಿ ಆಯೋಗವು ಗಿಗ್‌ ಉದ್ಯೋಗ ಎಂದು ಪರಿಗಣಿಸಿದ ಉದ್ಯೋಗಗಳ ಪಟ್ಟಿ ಬಹಳ ಉದ್ದವಿದೆ. ಇಂತಹ ಉದ್ಯೋಗದಲ್ಲಿ ತೊಡಗಿಕೊಂಡವರು ಸ್ಮಾರ್ಟ್‌ಫೋನ್‌ ಬಳಸುತ್ತಿದ್ದರೆ ಮತ್ತು ಅವರು 18–45 ವರ್ಷದವರಾಗಿದ್ದರೆ, ಅಂತಹವರನ್ನು ಗಿಗ್‌ ಉದ್ಯೋಗಿಗಳು ಎಂದು ಪರಿಗಣಿಸಲಾಗಿದೆ.

ಡೆಲಿವರಿ ಸೇವೆ

ಡೆಲಿವರಿ ಸೇವೆಯು ಗಿಗ್‌ ಆರ್ಥಿಕತೆಯ ಎರಡನೇ ಅತ್ಯಂತ ದೊಡ್ಡ ಉದ್ಯೋಗದಾತ ವಲಯವಾಗಿದೆ. ಡೆಲಿವರಿ, ಡೆಲಿವರಿ ಸಹಾಯಕ, ಲೋಡಿಂಗ್–ಅನ್‌ಲೋಡಿಂಗ್‌, ಡೆಲಿವರಿ ಸಮನ್ವಯಕಾರ, ಡೆಲಿವರಿ ವಾಹನಗಳ ಚಾಲಕ ಸಿಬ್ಬಂದಿಯ ಸಂಖ್ಯೆಯು 2019–20ರಲ್ಲಿ13 ಲಕ್ಷದಷ್ಟಿತ್ತು.

2011–12ರಲ್ಲಿ ಗಿಗ್ ಆರ್ಥಿಕತೆಯಲ್ಲಿ ಇಂತಹ ಉದ್ಯೋಗಿಗಳ ಸಂಖ್ಯೆ 5.3 ಲಕ್ಷದಷ್ಟಿತ್ತು. ಇಂತಹ ಉದ್ಯೋಗಿಗಳ ಸಂಖ್ಯೆಈಗಾಗಲೇ ದುಪ್ಪಟ್ಟಾಗಿದೆ. ಮುಂದಿನ ವರ್ಷಗಳಲ್ಲಿ, ಇಂತಹ ಉದ್ಯೋಗಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ನೀತಿ ಆಯೋಗದ ವರದಿಯಲ್ಲಿ ಅಂದಾಜಿಸಲಾಗಿದೆ.

ಮಹಿಳೆ: ಉದ್ಯಮಿಯಾಗುವ ಬಯಕೆ

ತಾವು ಪ್ಲಾಟ್‌ಫಾರಂ ಆಧಾರಿತ ಗಿಗ್ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಪ್ರಥಮ ಕಾರಣ ಏನು ಎಂಬುದನ್ನು ಸಮೀಕ್ಷೆಯಲ್ಲಿ ಮಹಿಳೆಯರು ಬಿಚ್ಚಿಟ್ಟಿದ್ದಾರೆ.

ಉದ್ಯಮಿಯಾಗಬೇಕು ಎಂಬ ಹಂಬಲದೊಂದಿಗೆ ಗಿಗ್‌ ಉದ್ಯೋಗಕ್ಕೆ ಕಾಲಿರಿಸಿರುವುದಾಗಿ ಸಮೀಕ್ಷೆಯಲ್ಲಿ ಭಾಗಿಯಾದ ಮಹಿಳೆಯರ ಪೈಕಿ ಶೇ 25ರಷ್ಟು ಮಹಿಳೆಯರು ಹೇಳಿದ್ದಾರೆ. ಬೇರೆಲ್ಲ ಕಾರಣಗಳಿಗೆ ಹೋಲಿಸಿದರೆ, ಸ್ವಂತ ಉದ್ಯಮ ಕಟ್ಟುವ ಕನಸು ಕಟ್ಟಿಕೊಂಡು ಬಂದವರೇ ಅಧಿಕ ಪ್ರಮಾಣದಲ್ಲಿದ್ದಾರೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಸದಾ ಚಟುವಟಿಕೆಯಿಂದ ಇರಬೇಕು ಎಂಬ ಕಾರಣ ನೀಡಿರುವವರ ಪ್ರಮಾಣ ಶೇ 13ರಷ್ಟಿದೆ. ಖಚಿತ ಆದಾಯ ಹಾಗೂ ಹೆಚ್ಚು ಹಣ ಗಳಿಸುವ ಉದ್ದೇಶ ಹೊಂದಿದವರು ನಂತರದ ಸ್ಥಾನಗಳಲ್ಲಿದ್ದಾರೆ. ಶೇ 39ರಷ್ಟು ಮಹಿಳೆಯರ ತಿಂಗಳ ವೇತನ ₹10,000–₹25,000ದ ಒಳಗಿದೆ. ಈ ಪೈಕಿ ಶೇ 48ರಷ್ಟು ಮಹಿಳೆಯರಿಗೆ ಗಿಗ್ ಉದ್ಯೋಗದಿಂದ ಬರುವ ವೇತನವೇ ಆದಾಯದ ಏಕೈಕ ಮೂಲವಾಗಿದೆ.

ಶೇ 90ರಷ್ಟು ಮಹಿಳೆಯರಿಗೆ ಅವಲಂಬಿತರು

ಗಿಗ್ ಉದ್ಯೋಗಗಳನ್ನು ಮಾಡುತ್ತಿರುವ ಮಹಿಳೆಯರ ಪೈಕಿ ಶೇ 90ರಷ್ಟು ಮಹಿಳೆಯರಿಗೆ ಇಬ್ಬರಿಂದ ಮೂವರು ಅವಲಂಬಿತರಿದ್ದಾರೆ. ಅವರನ್ನು ನೋಡಿಕೊಳ್ಳುವ ಹೊಣೆ ಈ ಮಹಿಳೆಯರ ಮೇಲಿದೆ. 18 ವರ್ಷ ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಅವಲಂಬಿತರನ್ನು ಹೊಂದಿರುವ ಮಹಿಳೆಯರ ಪ್ರಮಾಣ ಶೇ 80ರಷ್ಟಿದೆ. ಈ ಪೈಕಿ ಶೇ 33ರಷ್ಟು ಮಹಿಳಾ ಉದ್ಯೋಗಿಗಳು ನಾಲ್ವರು ಅವಲಂಬಿತರನ್ನು ಸಲಹುತ್ತಿದ್ದಾರೆ. ಶೇ 27ರಷ್ಟು ಮಹಿಳೆಯರ ಮನೆಗಳಲ್ಲಿ ಮೂವರು ಅವಲಂಬಿತರಿದ್ದಾರೆ. ಶೇ 10ರಷ್ಟು ಮಹಿಳೆಯರ ಮನೆಗಳಲ್ಲಿ ಅವರ ವೇತನವನ್ನು ನಂಬಿಕೊಂಡ‌ ಆರು ಅವಲಂಬಿತರು ಇದ್ದಾರೆ. ಇದರರ್ಥ, ಮಹಿಳೆಯರು ತಮ್ಮನ್ನು ನಂಬಿಕೊಂಡಿರುವ ಅವಲಂಬಿತರಿಗಾಗಿ ಗಿಗ್ ಉದ್ಯೋಗಗಳನ್ನು ಮಾಡಲೇಬೇಕಾದ ಅನಿವಾರ್ಯದಲ್ಲಿ ಇದ್ದಾರೆ ಎಂದಾಗಿದೆ.

ಕಡಿಮೆ ಕೌಶಲ ಸಾಕು

ಗಿಗ್‌ ಆರ್ಥಿಕತೆಯಲ್ಲಿ ಹೆಚ್ಚು ಕೌಶಲ ಬೇಡುವ ಉದ್ಯೋಗಗಳ ಪ್ರಮಾಣ ಕಡಿಮೆ ಇದೆ. ಸಾಧಾರಣ ಮತ್ತು ಮಧ್ಯಮ ಪ್ರಮಾಣದ ಕೌಶಲ ಅಗತ್ಯವಿರುವ ಉದ್ಯೋಗಗಳ ಪ್ರಮಾಣ ಹೆಚ್ಚು. ಜತೆಗೆ ಕಡಿಮೆ ಕೌಶಲ ಬೇಕಿರುವ ಉದ್ಯೋಗಗಳ ಪ್ರಮಾಣವೂ ಹೆಚ್ಚು. ಹೀಗಾಗಿಯೇ ಇಂತಹ ಆರ್ಥಿಕತೆಯಲ್ಲಿ ಉದ್ಯೋಗವಕಾಶ ಹೆಚ್ಚು ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT