ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ: ಹೊಣೆಗಾರಿಕೆ ನುಣುಚಿಕೊಂಡ ಆರ್‌ಬಿಐ

ರಿಪೋರ್ಟರ್ಸ್‌ ಕಲೆಕ್ಟಿವ್‌ನ ವರದಿ: ಭಾಗ–2
Last Updated 18 ಏಪ್ರಿಲ್ 2022, 18:44 IST
ಅಕ್ಷರ ಗಾತ್ರ

ಶಕ್ತಿಕಾಂತ್ ದಾಸ್‌ ನೇತೃತ್ವದ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಣದುಬ್ಬರವನ್ನು ನಿಗದಿತ ಪ್ರಮಾಣದೊಳಗೆ ಇರಿಸಿಕೊಳ್ಳಲು 2020ರಲ್ಲಿ ವಿಪಲವಾದಾಗ ಕೇಂದ್ರ ಸರ್ಕಾರವು ಕಾಯ್ದೆಯನ್ನು ಅನ್ವಯ ಮಾಡಲಿಲ್ಲ– ‘ರಿಪೋರ್ಟರ್ಸ್ ಕಲೆಕ್ಟಿವ್‌’ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪಡೆದ ದಾಖಲೆಗಳಿಂದ ಈ ಮಾಹಿತಿ ಬಹಿರಂಗವಾಗಿದೆ.

2020ರ ಜನವರಿಯಿಂದ ಸೆಪ್ಟೆಂಬರ್‌ವರೆಗಿನ ಸತತ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರವು ಕಾಯ್ದೆ ಪ್ರಕಾರ ನಿಗದಿ ಪ‍ಡಿಸಲಾದಶೇ 6ರ ಗರಿಷ್ಠ ಮಟ್ಟವನ್ನು ದಾಟಿ ಹೋಗಿತ್ತು. ಹಣದುಬ್ಬರದ ನಿಗದಿತ ಮಟ್ಟವನ್ನುಕಾಯ್ದುಕೊಳ್ಳಲು ಆರ್‌ಬಿಐ ವಿಫಲವಾದರೆ, ಒಂದು ತಿಂಗಳೊಳಗೆ ಸರ್ಕಾರಕ್ಕೆ ಲಿಖಿತ ವಿವರಣೆ ಕೊಡಬೇಕು. ದರವನ್ನು ಮತ್ತೆ ಹಳಿಗೆ ತರಲು ಅಗತ್ಯವಾದ ಯೋಜನೆಯನ್ನೂ ಸಲ್ಲಿಸಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸುವ ಆರ್‌ಬಿಐ ಮತ್ತು ಸರ್ಕಾರದ ಸಾಮರ್ಥ್ಯದ ಬಗ್ಗೆ ಉದ್ಯಮ ಮತ್ತು ಜನರಲ್ಲಿ ಇರುವ ನಂಬಿಕೆ ನಷ್ಟವಾಗದಿರಲು ಇಂತಹ ಪಾರದರ್ಶಕತೆ ಅಗತ್ಯ.

ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಒಪ್ಪಿಗೆಯ ಪ್ರಕಾರ, ಹಣಕಾಸು ಸಚಿವಾಲಯವು ಆರ್‌ಬಿಐ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬುದು ದಾಖಲೆಗಳಿಂದ ವ್ಯಕ್ತವಾಗುತ್ತದೆ.

ಆ ಅವಧಿಯ ಹಣದುಬ್ಬರದ ಅಧಿಕೃತ ಅಂಕಿ ಅಂಶಗಳನ್ನು ಅಂದಾಜಿಸುವಾಗ ಕೋವಿಡ್‌ ತಡೆಗಾಗಿ ಹೇರಿದ ಲಾಕ್‌ಡೌನ್‌ನ ತೊಡಕುಗಳು ಇದ್ದವು. ಹಾಗಾಗಿ, ಬಡ್ಡಿದರ ನಿಗದಿಗೆ ಈ ಅಂಕಿ ಅಂಶಗಳನ್ನು ಅವಲಂಬಿಸಲಾಗದು ಎಂದು ಸಚಿವಾಲಯವು ಆರ್‌ಬಿಐಗೆ ತಿಳಿಸಿತ್ತು. ಆದರೆ, ಸರ್ಕಾರದ ಎಲ್ಲ ಹಂತಗಳು ಮತ್ತು ಸರ್ಕಾರದ ಸಾಂಖ್ಯಿಕ ಸಂಸ್ಥೆಗಳು ಈ ಸಂಖ್ಯೆಗಳನ್ನು ಅನುಮೋದಿಸಿದ್ದವು. ಹಾಗೆಯೇ, ಆರ್ಥಿಕ ವಿಶ್ಲೇಷಣೆಯ ಎಲ್ಲ ಉದ್ದೇಶಗಳಿಗೂ ಈ ಅಂಕಿ ಅಂಶಗಳನ್ನು ಬಳಸಿಕೊಳ್ಳಲಾಗಿತ್ತು ಎಂಬುದನ್ನು ದಾಖಲೆಗಳು ಹೇಳುತ್ತವೆ.

ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕಾಗಿ ಬಡ್ಡಿದರ ಕಡಿತ ಆಗಬೇಕು ಎಂದು ಸರ್ಕಾರವು ಬಯಸಿದ್ದ ಸಂದರ್ಭದಲ್ಲಿ ಬಡ್ಡಿದರ ಏರಿಸಿ ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಮುಂದಾಗಿತ್ತು. ಇದು ಹಣಕಾಸು ಸಚಿವಾಲಯಕ್ಕೆ ತಲೆನೋವಾಗಿ ಪರಿಣಮಿಸಿತ್ತು ಎಂದು ಆಂತರಿಕ ದಾಖಲೆಗಳು ಹೇಳುತ್ತವೆ. ಇದರ ಕುರಿತು ಕೇಳಲಾದ ವಿವರವಾದ ಹಲವು ಪ್ರಶ್ನೆಗಳಿಗೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಉತ್ತರಿಸಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸೋಂಕು ಹರಡುವಿಕೆ ತಡೆಗೆ ಜಗತ್ತಿನಲ್ಲಿಯೇ ಅತ್ಯಂತ ಕಠಿಣವಾದ ಲಾಕ್‌ಡೌನ್‌ ಅನ್ನು 2020ರಲ್ಲಿ ಹೇರಿದ್ದರು. ಇದರಿಂದಾಗಿ ಪೂರೈಕೆಯಲ್ಲಿ ಆದ ಭಾರಿ ವ್ಯತ್ಯಯವು ಹಣದುಬ್ಬರ ನೆಗೆತಕ್ಕೆ ಕಾರಣವಾಯಿತು. ಈ ನಡುವೆ, ಹಣದುಬ್ಬರ ನಿಯಂತ್ರಣದ ಹೊಣೆಗಾರಿಕೆಯನ್ನು ಈಡೇರಿಸುವಲ್ಲಿ ಕೇಂದ್ರೀಯ ಬ್ಯಾಂಕ್‌ ವಿಫಲವಾಯಿತು. ಆರ್‌ಬಿಐ ಗವರ್ನರ್‌ ನೇತೃತ್ವದಲ್ಲಿ ಸ್ವತಂತ್ರ ಹಣಕಾಸು ನೀತಿ ಸಮಿತಿಯನ್ನು (ಎಂಪಿಸಿ) 2016ರಲ್ಲಿ ಸ್ಥಾಪಿಸಿದ ಬಳಿಕ, ಹಣದುಬ್ಬರವನ್ನು ಮಿತಿಯೊಳಗೆ ಇರಿಸಿಕೊಳ್ಳವಲ್ಲಿ ಆರ್‌ಬಿಐ ಮೊದಲ ಬಾರಿಗೆ ವಿಫಲವಾಯಿತು. ಆರ್‌ಬಿಐ, ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚು ಕಡಿಮೆ ಮಾಡುವ ಮೂಲಕ ಹಣದುಬ್ಬರವನ್ನು ನಿಗದಿತ ಪ್ರಮಾಣದಲ್ಲಿಯೇ ಉಳಿಸಿಕೊಳ್ಳುವುದು ಎಂಪಿಸಿಯ ಹೊಣೆಗಾರಿಕೆ.

ಪ್ರಕ್ರಿಯೆ ಏನು?

ಚಿಲ್ಲರೆ ಹಣದುಬ್ಬರವನ್ನು ಶೇ 4ರಲ್ಲಿ ಇರಿಸಿಕೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಗರಿಷ್ಠ ಮತ್ತು ಕನಿಷ್ಠ ಮಟ್ಟವು ಕ್ರಮವಾಗಿ ಶೇ 6 ಮತ್ತು ಶೇ 2 ಆಗಿರುವುದರಿಂದ ಆರ್‌ಬಿಐಗೆ ಸ್ವಲ್ಪ ಮಟ್ಟಿನ ಒತ್ತಡ ಕಡಿಮೆ ಆಗುತ್ತದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರವು ಈ ನಿಗದಿತ ಮಿತಿಗಿಂತ ಹೆಚ್ಚಾದರೆ, ಆರ್‌ಬಿಐ ವಿಫಲವಾಗಿದೆ ಎಂದು ಪರಿಗಣಿಸಬೇಕು ಎಂದು ಕಾಯ್ದೆಯು ಹೇಳುತ್ತದೆ. ಬಡ್ಡಿದರವು ಕಡಿಮೆಯಾದರೆ ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ; ಇದರಿಂದಾಗಿ ಹಣದುಬ್ಬರದ ಒತ್ತಡ ಹೆಚ್ಚುತ್ತದೆ. ಬಡ್ಡಿದರವನ್ನು ಹೊಂದಾಣಿಕೆ ಮಾಡುವ ಮೂಲಕ ಕೇಂದ್ರೀಯ ಬ್ಯಾಂಕ್‌ ಹಣದುಬ್ಬರವನ್ನು ನಿಯಂತ್ರಿಸುತ್ತದೆ.

2016ರಲ್ಲಿ ಹಣಕಾಸು ನೀತಿ ಚೌಕಟ್ಟಿನ ನಿಯಮಗಳನ್ನು ರೂಪಿಸಲಾಗಿತ್ತು. ಆಗ ಹಣಕಾಸು ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ, ಈಗ ಆರ್‌ಬಿಐ ಗವರ್ನರ್ ಆಗಿರುವ ಶಕ್ತಿಕಾಂತ ದಾಸ್‌ ಅವರು , ಒಂದು ತಿಂಗಳ ಗಡುವಿನ ವಾಗ್ದಾನವನ್ನು ಆರ್‌ಬಿಐನಿಂದ ಪಡೆದುಕೊಂಡಿದ್ದರು ಎಂಬುದು ರಿಪೋರ್ಟರ್ಸ್‌ ಕಲೆಕ್ಟಿವ್‌ಗೆ ಸಿಕ್ಕ ದಾಖಲೆಗಳಲ್ಲಿ ಇದೆ. ಉತ್ತರದಾಯಿತ್ವ ವರದಿಯನ್ನು ಬಹಿರಂಗಪಡಿಸುವುದಕ್ಕೂ ಆರ್‌ಬಿಐ ಒಲವು ವ್ಯಕ್ತಪಡಿಸಿತ್ತು ಎಂಬುದು ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ನಡುವೆ 2016ರಲ್ಲಿ ನಡೆದ ಪತ್ರವ್ಯವಹಾರದಿಂದ ಸ್ಪಷ್ಟವಾಗುತ್ತದೆ.

ಎಂಪಿಸಿಯ ಉತ್ತರದಾಯಿತ್ವ ಕ್ರಮಗಳ ಕುರಿತಂತೆ ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್‌ ಅವರು ಆರ್‌ಬಿಐನ ಗವರ್ನರ್‌ ಆಗಿದ್ದ ರಘುರಾಮ್‌ ರಾಜನ್‌ ಅವರಿಗೆ 2016ರ ಜೂನ್‌ನಲ್ಲಿ ಬರೆದ ಪತ್ರ ಎಂಬ ಹೆಸರಿನ ಕಡತವೂ ಇದೆ.

‘ಹಣದುಬ್ಬರವನ್ನು ನಿಗದಿತ ದರದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ ಒಂದು ತಿಂಗಳ ಒಳಗೆ ಉತ್ತರದಾಯಿತ್ವ ವರದಿ ಸಲ್ಲಿಕೆಗೆ ಆರ್‌ಬಿಐ ತನ್ನ ಒಪ್ಪಿಗೆಯನ್ನು ಸೂಚಿಸಿದೆ. ಅದನ್ನು ಬಹಿರಂಗಪಡಿಸುವುದಕ್ಕೂ ಸಮ್ಮತಿ ಕೊಟ್ಟಿದೆ. ಹಾಗಾಗಿ, ಈ ಅಂಶವನ್ನು ನಿಯಮಗಳಲ್ಲಿ ಸೇರಿಸಲಾಗಿಲ್ಲ. ಆಡಳಿತಾತ್ಮಕವಾಗಿ ಅದನ್ನು ನಿಭಾಯಿಸಬಹುದು’ ಎಂದು ಶಕ್ತಿಕಾಂತ ದಾಸ್‌ ಅವರು ಆಗ ಆರ್‌ಬಿಐ ಗವರ್ನರ್‌ ಆಗಿದ್ದ ರಘುರಾಮ್‌ ಅವರಿಗೆ 2016ರ ಜೂನ್‌ 27ರಂದು ಬರೆದ ಪತ್ರದಲ್ಲಿ ಹೇಳಿದ್ದರು.

ಉತ್ತರದಾಯಿತ್ವ ವ್ಯವಸ್ಥೆಯ ಕುರಿತು ಸರ್ಕಾರಕ್ಕೆ ಬಹಿರಂಗ ಪತ್ರ ಬರೆಯುವ ನಡೆಯನ್ನು ಇಂಡೊನೇಷ್ಯಾ, ಫಿಲಿಪ್ಪೀನ್ಸ್‌, ಬ್ರೆಜಿಲ್‌, ಬ್ರಿಟನ್‌, ನ್ಯೂಜಿಲೆಂಡ್‌, ನಾರ್ವೆ, ಟರ್ಕಿ ಮತ್ತು ಇತರ ದೇಶಗಳ ಕೇಂದ್ರೀಯ ಬ್ಯಾಂಕುಗಳು ಅನುಸರಿಸುತ್ತಿವೆ.

ಕೋವಿಡೋತ್ತರ ಹಣಕಾಸು ನೀತಿ

2020ರ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಹೇರಿಕೆಯಾಗುವ ಮುನ್ನವೇ ಭಾರತದಲ್ಲಿ ಹಣದುಬ್ಬರವು ನಿಗದಿತ ಪ್ರಮಾಣಕ್ಕಿಂತ ಹೆಚ್ಚೇ ಆಗಿತ್ತು. ಗ್ರಾಹಕ ಬೆಲೆ ಸೂಚ್ಯಂಕವು 2019ರ ಅಕ್ಟೋಬರ್‌–ಡಿಸೆಂಬರ್‌ನಲ್ಲಿ ಶೇ 5.8ರಷ್ಟು ಇತ್ತು. 2020ರ ಜನವರಿ–ಮಾರ್ಚ್‌ ಅವಧಿಯಲ್ಲಿ ಅದರ ಸರಾಸರಿಯು ಶೇ 6.7ರಷ್ಟು ಇತ್ತು.

ದೇಶವ್ಯಾಪಿ ಲಾಕ್‌ಡೌನ್‌ ಘೋಷಣೆಯಾದ ಕೆಲವೇ ದಿನಗಳಲ್ಲಿ ಆರ್‌ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು (ಆರ್‌ಬಿಐನಿಂದ ಬ್ಯಾಂಕುಗಳು ಪಡೆಯುವ ಸಾಲದ ಬಡ್ಡಿದರ) ಶೇ 0.75ರಷ್ಟು ಇಳಿಸಿತು. ಇದರಿಂದಾಗಿ ರೆಪೊ ದರವು ಶೇ 4.4ಕ್ಕೆ ಇಳಿಯಿತು. ಮೇಯಲ್ಲಿ ಮತ್ತೊಮ್ಮೆ ರೆಪೊ ದರ ಕಡಿತ ಮಾಡಲಾಯಿತು. ರೆಪೊ ದರವು ದಾಖಲೆಯ ಶೇ 4ರಷ್ಟಕ್ಕೆ ಕುಸಿಯಿತು.

ಸುಮಾರು ಇದೇ ಹೊತ್ತಿಗೆ, ಬ್ರೆಜಿಲ್‌, ಮೆಕ್ಸಿಕೊ, ದಕ್ಷಿಣ ಆಫ್ರಿಕಾದ ಕೇಂದ್ರೀಯ ಬ್ಯಾಂಕುಗಳು ರೆಪೊ ದರವನ್ನು ಶೇ 2ರಷ್ಟು ಕಡಿತ ಮಾಡಿದ್ದವು. ಈ ದೇಶಗಳಲ್ಲಿನ ಹಣದುಬ್ಬರ ದರವು 2020ರಲ್ಲಿಯೂ ಸಾಂಕ್ರಾಮಿಕ ಪೂರ್ವದಲ್ಲಿ ಇದ್ದ ಮಟ್ಟದಲ್ಲಿಯೇ ಇತ್ತು. ಅಷ್ಟೇ ಅಲ್ಲದೆ, ಆಯಾ ಕೇಂದ್ರೀಯ ಬ್ಯಾಂಕುಗಳಿಗೆ ನಿಗದಿಪಡಿಸಿದ ಪ್ರಮಾಣದ ಒಳಗೇ ಇತ್ತು. ಆದರೆ, ಭಾರತದಲ್ಲಿ ಹಣದುಬ್ಬರ ದರವು 2020ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಶೇ 6.6ಕ್ಕೆ ಏರಿತ್ತು. ಅದೇ ವರ್ಷದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಶೇ 6.9ಕ್ಕೆ ಏರಿಕೆ ಆಗಿತ್ತು. ಜನವರಿ–ಮಾರ್ಚ್‌ ತ್ರೈಮಾಸಿಕದ ಹಣದುಬ್ಬರವನ್ನೂ (ಶೇ 6.7) ಗಣನೆಗೆ ತೆಗೆದುಕೊಂಡರೆ ಸತತ ಮೂರು ತ್ರೈಮಾಸಿಕದಲ್ಲಿಯೂ ಹಣದುಬ್ಬರವು ನಿಗದಿತ ಪ್ರಮಾಣಕ್ಕಿಂತ ಹೆಚ್ಚೇ ಇತ್ತು. ಇದರಿಂದಾಗಿ ಕಾಯ್ದೆಯ ಉಲ್ಲಂಘನೆಯಾಗಿದೆ.

ಆಗಸ್ಟ್‌ನಲ್ಲಿ ಸಭೆ ನಡೆದಾಗ, ಕಾಯ್ದೆ ಉಲ್ಲಂಘನೆಯ ಅಂಚಿನಲ್ಲಿ ತಾನು ಇದ್ದೇನೆ ಎಂಬ ಅರಿವು ಎಂಪಿಸಿಗೆ ಇತ್ತು. ಹಣದುಬ್ಬರವು ಗರಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ಆರ್‌ಬಿಐನ ಉಪ ಗವರ್ನರ್‌ ಮೈಖೆಲ್‌ ಪಾತ್ರ ಒಪ್ಪಿಕೊಂಡಿದ್ದರು. ಆದರೆ, ಏಪ್ರಿಲ್‌–ಜೂನ್‌ ಅವಧಿಯ ದತ್ತಾಂಶಗಳನ್ನು ಸಾಂಖ್ಯಿಕ ಸಚಿವಾಲಯವು ಅಂದಾಜು ಮೌಲ್ಯ ನಿರ್ಣಯದ ಭಿನ್ನ ವಿಧಾನ ಅನುಸರಿಸಿ ಪಡೆದುಕೊಂಡಿದೆ ಎಂಬ ಕಾರಣ ಕೊಟ್ಟು ಗಣನೆಗೆ ತೆಗೆದುಕೊಳ್ಳದಿರಲು ಎಂಪಿಸಿ ನಿರ್ಧರಿಸಿತು.

ಹೊಣೆಗಾರಿಕೆ ಕಸರತ್ತು

ಹಣಕಾಸು ಸಚಿವಾಲಯವು ‘ಹಣಕಾಸು ನೀತಿ ಚೌಕಟ್ಟಿನ ಅಡಿಯಲ್ಲಿ ಹಣದುಬ್ಬರ ನಿಯಂತ್ರಣ ವೈಫಲ್ಯದ ಪರಿಣಾಮಗಳು’ ಎಂಬ ಹೆಸರಿನ ಆಂತರಿಕ ಟಿಪ್ಪಣಿಯಲ್ಲಿ ಆರ್‌ಬಿಐನ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಹಣದುಬ್ಬರವು ಕೃತಕವಾಗಿ ಏರಿಕೆಯಾಗಿದ್ದು, ಅದು ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ ಎಂದುಸೆಪ್ಟೆಂಬರ್‌ ನಲ್ಲಿ ಬರೆದ ಟಿಪ್ಪಣಿಯಲ್ಲಿ ಹೇಳಿತ್ತು.

ಆರ್ಥಿಕತೆ ಈಗಾಗಲೇ ಬಿಕ್ಕಟ್ಟಿಗೆ ಸಿಲುಕಿರುವ ಈ ಸಮಯದಲ್ಲಿ, ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರೀಯ ಬ್ಯಾಂಕ್ ಮತ್ತೆ ಬಡ್ಡಿದರಗಳನ್ನು ಏರಿಕೆಮಾಡುವ ಸಾಧ್ಯತೆಯಿದೆ ಎಂಬ ಭೀತಿ ಕೇಂದ್ರ ಸರ್ಕಾರದ್ದಾಗಿತ್ತು. ಏಕೆಂದರೆ, ಬಡ್ಡಿದರ ಕಡಿತಕ್ಕೆ ಮುಕ್ತ ಅವಕಾಶ ನೀಡುವ ಹೊಂದಾಣಿಕೆ ನಿಲುವನ್ನುಆರ್‌ಬಿಐ ಅಳವಡಿಸಿಕೊಂಡಿತ್ತು.

ಹಣಕಾಸು ನೀತಿಯನ್ನು ರೂಪಿಸಲು ಅಂದಾಜು ಮೌಲ್ಯ ಆಧಾರಿತವಾದ ಗ್ರಾಹಕ ಬೆಲೆ ಸೂಚ್ಯಂಕದಂತಹ ಅನರ್ಹ ವಿಧಾನವನ್ನು ಅವಲಂಬಿಸಬಾರದು. ಆರ್ಥಿಕ ಪರಿಸ್ಥಿತಿಯು ದುರ್ಬಲವಾಗಿರುವ ಸಂದರ್ಭದಲ್ಲಿ ಇಂತಹ ಕ್ರಮವನ್ನು ಅನುಸರಿಸಿದರೆ, ಫಲಿತಾಂಶವು ಕೆಟ್ಟದಾಗಬಹುದು ಮತ್ತು ಗೊಂದಲಕಾರಿ
ಯಾಗಬಹುದು. ಇಂತಹ ಅಂಕಿ ಅಂಶಗಳ ಅವಲಂಬನೆಯು ಬಡ್ಡಿದರ ಏರಿಕೆಯ ನಿರ್ಧಾರಕ್ಕೆ ಕಾರಣವಾಗಿ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಅದೇ ಟಿಪ್ಪಣಿಯಲ್ಲಿ ಹೇಳಲಾಗಿತ್ತು.

ಹಣಕಾಸು ಸಚಿವಾಲಯವು, ಹಣದುಬ್ಬರದ ದತ್ತಾಂಶಗಳನ್ನು ತಿರಸ್ಕರಿಸುವ ತನ್ನ ನಿರ್ಧಾರದ ಬಗ್ಗೆ ಅಭಿಪ್ರಾಯವನ್ನು ತಿಳಿಸುವಂತೆ ಸಾಂಖ್ಯಿಕ ಸಚಿವಾಲಯವನ್ನು ಕೋರಿತ್ತು. ಆದರೆ, ತನ್ನ ದತ್ತಾಂಶಗಳಿಗೆ ಬದ್ಧವಾಗಿರುವುದಾಗಿ ತಿಳಿಸಿದ ಸಾಂಖ್ಯಿಕ ಸಚಿವಾಲಯ, ಒಪ್ಪಿಗೆ ಪಡೆದ ಬಳಿಕವೇ ದತ್ತಾಂಶಗಳನ್ನು ಬಿಡುಗಡೆ ಮಾಡಲಾಗಿದೆ ಎಂಬುದನ್ನು ಹಣಕಾಸು ಸಚಿವಾಲಯಕ್ಕೆ ನೆನಪಿಸಿತು. ಎರಡು ತಿಂಗಳ ಹಣದುಬ್ಬರದ ಅಂದಾಜು ಸಂಖ್ಯೆಯನ್ನು ಸರ್ಕಾರದ ತಜ್ಞರ ಸಂಖ್ಯಾ
ಶಾಸ್ತ್ರೀಯ ಸಂಸ್ಥೆಯಾದ ‘ಬೆಲೆಗಳು ಮತ್ತು ಜೀವನವೆಚ್ಚದ ದತ್ತಾಂಶಗಳ ತಾಂತ್ರಿಕ ಸಲಹಾ ಸಮಿತಿ’ಯ ಒಪ್ಪಿಗೆ ಪಡೆದು ಬಿಡುಗಡೆ ಮಾಡಲಾಗಿತ್ತು. ಸಾಮಾನ್ಯ ಜನರನ್ನುಬೆಲೆ ಏರಿಕೆ ಹೈರಾಣಾಗಿಸುತ್ತದೆ ಎಂದು ಹಲವು ಸಂಸ್ಥೆಗಳು ಬೊಟ್ಟು ಮಾಡಿದ್ದವು.

ಏಪ್ರಿಲ್–ಜೂನ್ ತ್ರೈಮಾಸಿಕದ ಚಿಲ್ಲರೆ ಹಣದುಬ್ಬರವು ಅಧಿಕೃತ ಅಂದಾಜಿಗಿಂತ ಸಾಕಷ್ಟು ಅಧಿಕವಾಗಿದೆ ಎಂದು 2020ರ ತನ್ನ ಅಧ್ಯಯನ ವರದಿಯಲ್ಲಿ ಭಾರತದ ಅತಿದೊಡ್ಡ ಬ್ಯಾಂಕ್ ಆದ, ಭಾರತೀಯ ಸ್ಟೇಟ್ ಬ್ಯಾಂಕ್ಅಭಿಪ್ರಾಯಪಟ್ಟಿತ್ತು. ಏಪ್ರಿಲ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕವು (ಸಿಪಿಐ) ಶೇ 9.68ರಷ್ಟಿತ್ತು. ಆದರೆ ಅಧಿಕೃತ ದತ್ತಾಂಶಗಳಲ್ಲಿ ಅದು ಶೇ 7.22ರಷ್ಟಿದೆ. ಹಾಗೆಯೇ ಮೇ ತಿಂಗಳಲ್ಲಿ ಶೇ 7.82ರಷ್ಟಿದ್ದು, ಅಧಿಕೃತ ದತ್ತಾಂಶಗಳಲ್ಲಿ ಶೇ 6.27ರಷ್ಟಿದೆ ಎಂದು ವರದಿ ಉಲ್ಲೇಖಿಸಿತ್ತು.

ಆದರೆ, ಏಪ್ರಿಲ್–ಜೂನ್ ತ್ರೈಮಾಸಿಕದ ಹಣದುಬ್ಬರ ದತ್ತಾಂಶವನ್ನು ಕೈಬಿಡಲು ಹಣಕಾಸು ಸಚಿವಾಲಯ ಹಾಗೂ ಆರ್‌ಬಿಐ ನಿರ್ಧರಿಸಿದ್ದವು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಒಪ್ಪಿಗೆಯೊಂದಿಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಪತ್ರ ಬರೆದಿದ್ದ ಅಂದಿನ ಹಣಕಾಸು ಕಾರ್ಯದರ್ಶಿ ತರುಣ್ ಬಜಾಜ್ (ಈಗಿನ ಕಂದಾಯ ಕಾರ್ಯದರ್ಶಿ), ‘2020ರ ಏಪ್ರಿಲ್–ಜೂನ್ ಹಣದುಬ್ಬರ ದತ್ತಾಂಶಗಳು ಪ್ರಸ್ತುತ ಬೆಲೆಯನ್ನು ಪ್ರತಿಬಿಂಬಿ
ಸುವುದಿಲ್ಲ’ ಎಂದು ಉಲ್ಲೇಖಿಸಿದ್ದರು. 2020ರ ಜುಲೈ ತ್ರೈಮಾಸಿಕದ ಆರಂಭದಿಂದ ಹಣದುಬ್ಬರ ಗುರಿ ಹೊಣೆಗಾರಿಕೆ ಅನ್ವಯವಾಗುತ್ತದೆ ಎಂದು ಬಜಾಜ್ ಹೇಳಿದ್ದರು. ಹೀಗಾಗಿ ಹೊಣೆಗಾರಿಕೆ ನಿಗದಿ ಕ್ರಮ ಕೈಬಿಟ್ಟುಹೋಯಿತು.

ಪಾರದರ್ಶಕತೆಯ ಕೊರತೆ

ಹಣದುಬ್ಬರದ ಗರಿಷ್ಠ ಪ್ರಮಾಣ ನಿಗದಿಯ ಬಳಿಕ, 2016ರಿಂದ 2020ರ ಅವಧಿಯಲ್ಲಿ ಎಂಪಿಸಿಯಿಂದ ಯಾವುದೇ ವೈಫಲ್ಯವಾಗಿಲ್ಲ ಎಂಬುದಾಗಿ2021ರ ಫೆಬ್ರುವರಿಯಲ್ಲಿ ಆರ್‌ಬಿಐ ತನ್ನ ಹಣಕಾಸು ನೀತಿ ಚೌಕಟ್ಟು ಪರಾಮರ್ಶೆ ವರದಿಯ ಹೊಣೆಗಾರಿಕೆ ಅಧ್ಯಾಯದಲ್ಲಿ ತಿಳಿಸಿತ್ತು. 2020ನೇ ಏಪ್ರಿಲ್ ತ್ರೈಮಾಸಿಕದ ಎಂಪಿಸಿಯ ವಿವಾದಾತ್ಮಕವಾದ ದಾಖಲೆಗಳನ್ನು ವರದಿ ಕೈಬಿಟ್ಟಿತ್ತು.

ಜಗತ್ತಿನ ಇತರ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರ ನಿಯಂತ್ರಣದಲ್ಲಿ ಆಗಿರುವ ವೈಫಲ್ಯದಲ್ಲಿ ತಮ್ಮ ಹೊಣೆಗಾರಿಕೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದವು. ಬ್ರಿಟನ್‌ನ ಬ್ಯಾಂಕ್ ಆಫ್ ಇಂಗ್ಲೆಂಡ್ 2020ರಲ್ಲಿ ಹಣದುಬ್ಬರವನ್ನು
ನಿಯಂತ್ರಣದಲ್ಲಿ ಇರಿಸುವಲ್ಲಿ ವಿಫಲವಾಗಿತ್ತು. ಬ್ರಿಟನ್ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವೈಫಲ್ಯದ ಕಾರಣಗಳನ್ನು ವಿವರಿಸಿತ್ತು.

2016ರಿಂದ 2020ರವರೆಗೆ ಎಂಪಿಸಿ ಸದಸ್ಯರಾಗಿದ್ದ ಭಾರತೀಯ ಸಾಂಖ್ಯಿಕ ಸಂಸ್ಥೆಯ ಪ್ರಾಧ್ಯಾಪಕ ಚೇತನ್ ಘಾಟೆ ಅವರು 2021ರ ಆಗಸ್ಟ್‌ನಲ್ಲಿ ಇನ್‌ಫಾರ್ಮಿಸ್ಟ್ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಎಂಪಿಸಿ ವಿಶ್ವಾಸಾರ್ಹತೆ ಕುರಿತು ಮಾತನಾಡಿದ್ದರು. ಹಣದುಬ್ಬರವನ್ನು ನಿರ್ವಹಣೆ ಮಾಡುವಲ್ಲಿ ಆಗಿರುವ ವೈಫಲ್ಯವನ್ನು ಎಂಪಿಸಿ ಒಪ್ಪಿಕೊಳ್ಳುವ ಧೈರ್ಯ ಮಾಡಿದ್ದರೆ, ಅದರ ಬಗೆಗಿನ ವಿಶ್ವಾಸಾರ್ಹತೆ ಹೆಚ್ಚಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಆದರೆ, ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಸದಸ್ಯರಾಗಿದ್ದ ವಿಲಿಯಂ ಬೈಟರ್ ಅವರು ಆರ್‌ಬಿಐ ಆಹ್ವಾನದ ಮೇಲೆ ನೀಡಿದ್ದ ಉಪನ್ಯಾಸದಲ್ಲಿ, ಹಣದುಬ್ಬರವು ನಿಗದಿತ ಪ್ರಮಾಣಕ್ಕಿಂತ ಸ್ವಲ್ಪ ಏರಿಕೆ ಆಗಿದ್ದಕ್ಕೆ ಆರ್‌ಬಿಐ ತೀರಾ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ‘ವೈಫಲ್ಯ, ಪರಿಹಾರ ಕ್ರಮಗಳನ್ನು ಕುರಿತು ಸರ್ಕಾರಕ್ಕೆ ಬಹಿರಂಗ ಪತ್ರ ಬರೆಯುವುದರಿಂದ ಆರ್‌ಬಿಐಗೆ ವಿನಾಯಿತಿ ನೀಡುವ ಅಗತ್ಯವಿಲ್ಲ. 2020ರ ಮಾರ್ಚ್‌ನಿಂದ ಎದುರಾದ ಅಸಾಧಾರಣ ಸಂದರ್ಭಗಳನ್ನು ಆರ್‌ಬಿಐ ಪತ್ರ ಬರೆದು ವಿವರಿಸಬೇಕು. ಒಂದು ಅರ್ಥದಲ್ಲಿ ಈ ತಾಂತ್ರಿಕ ‘ವೈಫಲ್ಯ’ವು ಸಾಧಾರಣ ಯಶಸ್ಸು’ ಎಂದು ಅವರು ವಿಶ್ಲೇಷಿಸಿದ್ದರು.

(ರಿಪೋರ್ಟರ್ಸ್‌ ಕಲೆಕ್ಟಿವ್‌ನ ಈ ವರದಿಯ ಇಂಗ್ಲಿಷ್‌ ಅವತರಣಿಕೆಯು ‘ಅಲ್‌ ಜಝೀರಾ’ದಲ್ಲಿ ಪ್ರಕಟವಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT