ಶುಕ್ರವಾರ, ಆಗಸ್ಟ್ 19, 2022
27 °C

ಆಳ–ಅಗಲ: ರಂಗು ಕಳೆದುಕೊಂಡ ದೇಸಿ ಕ್ಯಾಸಿನೊಗಳು

ಗವಿಸಿದ್ಧಪ್ಪ ಬ್ಯಾಳಿ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌ ತಾರೆಯರ ಡ್ರಗ್ಸ್‌ ಸುದ್ದಿಯ ಜತೆಯಲ್ಲಿಯೇ ಕ್ಯಾಸಿನೊ ಎಂಬ ಜೂಜು ಅಡ್ಡೆಗಳ ಮಾಯಾಲೋಕವೂ ಹೆಚ್ಚು ಸದ್ದು ಮಾಡುತ್ತಿದೆ. 

ಅಮೆರಿಕದ ಲಾಸ್‌ ವೇಗಸ್‌ನಂತೆಯೇ ಕ್ಯಾಸಿನೊಗಳೆಂಬ ಮೋಹಕ ಪ್ರಪಂಚ ತೆರೆದುಕೊಳ್ಳುವುದು ಸಿಂಗಪುರ, ಥಾಯ್ಲೆಂಡ್‌, ಮಲೇಷ್ಯಾ, ಹಾಂಗ್‌ಕಾಂಗ್‌‌, ಮಕಾವ್‌ ದ್ವೀಪದಂತಹ ರಾಷ್ಟ್ರಗಳಲ್ಲಿ. ಹಾಗಾಗಿಯೇ ಜೂಜಾಡುವವರಿಗೆ ಪೆಸಿಫಿಕ್‌ ರಾಷ್ಟ್ರಗಳು ಅಚ್ಚುಮೆಚ್ಚಿನ ಪ್ರವಾಸಿ ತಾಣಗಳು. ಈ ವಿದೇಶಿ ಜೂಜು ಅಡ್ಡೆಗಳನ್ನು ಬಿಟ್ಟರೆ ಹೆಚ್ಚು ಆಕರ್ಷಿಸಿದ್ದು ಮುಂಬೈ, ಗೋವಾದಲ್ಲಿರುವ ದೇಸಿ ಕ್ಯಾಸಿನೊಗಳು. ಶ್ರೀಲಂಕಾದಲ್ಲಿ ಈಚೆಗೆ ತಲೆ ಎತ್ತಿರುವ ಕ್ಯಾಸಿನೊಗಳು ಹಲವು ಕಾರಣಗಳಿಂದ ಸುದ್ದಿಯಲ್ಲಿವೆ.   

ವಿಡಿಯೊ ಗೇಮ್‌, ಸ್ಕಿಲ್‌ ಗೇಮ್‌ ಹಾವಳಿ ಕಡಿಮೆಯಾದ ನಂತರ ಬೆಂಗಳೂರಿನಲ್ಲಿಯೂ ಕ್ಯಾಸಿನೊಗಳು ಹುಟ್ಟಿಕೊಂಡವು. ಆದರೆ, ಇವು ಯಾವುವೂ ವಿದೇಶಿ ಕ್ಯಾಸಿನೊಗಳ ರೀತಿ ಪೂರ್ಣಪ್ರಮಾಣದ ಕ್ಯಾಸಿನೊಗಳಲ್ಲ. ಕ್ಯಾಸಿನೊ ಮಾದರಿಯ ಜೂಜು ಅಡ್ಡೆಗಳಷ್ಟೇ. ಬೆಂಗಳೂರಿನ ಜೀವನಭಿಮಾ ನಗರ, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಶಾಂತಲಾ ನಗರ, ಎಂ.ಜಿ. ರಸ್ತೆ ಸುತ್ತಮುತ್ತ ಜೂಜು ಅಡ್ಡೆಗಳು ಇವೆ. ನೆರೆಯ ಆಂಧ್ರ ಪ್ರದೇಶ, ತಮಿಳುನಾಡಿನ ಜೂಜುಪ್ರಿಯರು ವಾರಾಂತ್ಯದಲ್ಲಿ ಈ ಕೇಂದ್ರಗಳಿಗೆ ಬರತೊಡಗಿದರು. 

‘ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ಆಂಧ್ರ ಪ್ರದೇಶದ ಅನಂತಪುರ ಸುತ್ತಮುತ್ತ ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಆ ಭಾಗದವರು ಗೋಣಿಚೀಲಗಳಲ್ಲಿ ಹಣ ತುಂಬಿಕೊಂಡು ಹತ್ತಾರು ವಾಹನಗಳಲ್ಲಿ ದಂಡಿನೊಂದಿಗೆ ಬೆಂಗಳೂರಿಗೆ ಬರುತ್ತಿದ್ದರು. ವಾರಾಂತ್ಯದಲ್ಲಿ ಹಣ, ಹೆಂಡದ ಹೊಳೆಯೇ ಹರಿಯುತ್ತಿತ್ತು’ ಎಂದು ಜೂಜುಪ್ರಿಯ ವ್ಯಕ್ತಿಯೊಬ್ಬರು ಹೇಳಿದ್ದಾರೆ. 

‘ಮೂರೆಲೆ, ಅಂದರ್‌ ಬಾಹರ್‌ನಂತಹ ಇಸ್ಪೀಟ್ ಆಟದ ಜತೆಗೆ ಬ್ಯಾಂಕರ್‌, ರೋಲೆಟ್‌ ಆಟಗಳ ಮೂಲಕ ಕೋಟ್ಯಂತರ ರೂಪಾಯಿ ವಹಿವಾಟು ಆರಂಭವಾಯಿತು. ವಿದೇಶಿ ಕ್ಯಾಸಿನೊಗಳಂತೆ ಥಳಕು–ಬಳಕು ಇಲ್ಲದ ಕಾರಣ ದೇಸಿ ಕ್ಯಾಸಿನೊಗಳು ಆಕರ್ಷಣೀಯವಾಗಿರಲಿಲ್ಲ. ಮೇಲಾಗಿ ಸಣ್ಣಪುಟ್ಟ ಗಲಾಟೆ ಮತ್ತು ಪೊಲೀಸ್‌ ಶೋಧಗಳೂ‌ ಶುರುವಾದವು. ಹೀಗಾಗಿ ಇದರ ಗೊಡವೆಯೇ‌ ಬೇಡ ಎಂದು ಗೋವಾ ದಾರಿ ಹಿಡಿದೆವು’ ಎಂದು ಅವರು ಹೇಳುತ್ತಾರೆ.  

ಗೋವಾದಲ್ಲಿ ತೇಲುವ ಕ್ಯಾಸಿನೊ

ಮುಂಬೈ ಮತ್ತು ಬೆಂಗಳೂರಿಗಿಂತ ಗೋವಾದ ಕ್ಯಾಸಿನೊಗಳು ಸುರಕ್ಷಿತ ಮತ್ತು ಆಕರ್ಷಕ‌ ಎಂದು ಹೇಳಲಾಗುತ್ತಿದೆ. ಸಮುದ್ರದ ಮಧ್ಯೆ ತೇಲುವ ಹಡಗಿನಲ್ಲಿ ಸಂಜೆಯಾದರೆ ತೆರೆದುಕೊಳ್ಳುವ ಆ ಪ್ರಪಂಚವೇ ಬೇರೆ. ಅಲ್ಲಿ ಜೂಜಿನ ಜೊತೆಗೆ ಮೋಜಿಗೂ ಕೊರತೆ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪೊಲೀಸರ ಭೀತಿ ಇಲ್ಲ. ಒಂದು ವಿಶೇಷವೆಂದರೆ ಗೋವಾದ ಕ್ಯಾಸಿನೊಗಳ ಪ್ರಮುಖ ಗ್ರಾಹಕರೇ ಮುಂಬೈ ಮತ್ತು ಕರ್ನಾಟಕದವರು.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ– ಧಾರವಾಡ, ಬೆಳಗಾವಿ, ಕಾರವಾರದ ಯುವಕರಷ್ಟೇ ಅಲ್ಲ ಮಧ್ಯವಯಸ್ಕರೂ ತೇಲುವ ಕ್ಯಾಸಿನೊದ ರಂಗುರಂಗಿನ ಪ್ರಪಂಚದಲ್ಲಿ ವಾರಾಂತ್ಯದಲ್ಲಿ ತೇಲಾಡುತ್ತಿರುತ್ತಾರೆ ಎನ್ನುತ್ತಾರೆ ಆಗಾಗ ಗೋವಾಕ್ಕೆ ಭೇಟಿ ನೀಡುವ ಯುವ ಉದ್ಯಮಿಯೊಬ್ಬರು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್‌ ಮತ್ತು ಕ್ಯಾಸಿನೊಗೆ ಸಂಬಂಧಿಸಿ ತನಿಖೆ ನಡೆಯುತ್ತಿರುವುದರಿಂದ ತಮ್ಮ ಹೆಸರು ಎಲ್ಲಿಯೂ ಕಾಣಿಸಿಕೊಳ್ಳಬಾರದು ಎಂಬ ಷರತ್ತಿನೊಂದಿಗೆ ಅವರು ಅನುಭವ ಹಂಚಿಕೊಂಡರು.

ನಗರದ ಹೊರವಲಯದಲ್ಲಿರುವ ತೋಟದ ಮನೆಗಳು ಮತ್ತು ಹೃದಯಭಾಗದಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ವಾರಾಂತ್ಯದಲ್ಲಿ ಪಾರ್ಟಿ ಹೆಸರಿನಲ್ಲಿ ಜೂಜು ಸೇರಿದಂತೆ ‘ಎಲ್ಲವೂ’ ನಡೆಯುತ್ತವೆ. ಅದಕ್ಕಾಗಿಯೇ ಪ್ರತ್ಯೇಕವಾದ ಫ್ಲ್ಯಾಟ್‌ಗಳಿವೆ. ನಗರದ ಶ್ರೀಮಂತರು, ಉದ್ಯಮಿಗಳು ಸೇರುವ ಈ ಪಾರ್ಟಿಗೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಟ, ನಟಿಯರು ಪ್ರಮುಖ ಆಕರ್ಷಣೆ. ಎಲ್ಲ ರಾಜಕೀಯ ಪಕ್ಷಗಳ ರಾಜಕಾರಣಿಗಳು ಪಕ್ಷಭೇದ ಮರೆತು ತಡರಾತ್ರಿಯ ಪಾರ್ಟಿಗಳಲ್ಲಿ ಬೆರೆಯುತ್ತಾರೆ. ಇಂಥ ಪಾರ್ಟಿಗಳಿಗೆ ಪೊಲೀಸರ ಕಿರಿಕಿರಿಯೂ ಕಡಿಮೆ ಎಂದು ಆ ಯುವ ಉದ್ಯಮಿ ಹೇಳುತ್ತಾರೆ.

ಶ್ರೀಲಂಕಾ: ಕ್ಯಾಸಿನೊ ಪ್ರಿಯರ ಕನಸಿನ ತಾಣ

ಸುಂದರ ಕಡಾಲ ಕಿನಾರೆಗಳನ್ನು ಹೊಂದಿರುವ ಪುಟ್ಟ ದ್ವೀಪರಾಷ್ಟ್ರ ಶ್ರೀಲಂಕಾವು ಭಾರತೀಯರ ಅಚ್ಚುಮೆಚ್ಚಿನ ಹೊಸ ಪ್ರವಾಸಿ ಮತ್ತು ಕ್ಯಾಸಿನೊ ತಾಣವಾಗಿ ಬೆಳೆಯುತ್ತಿದೆ. 

ಸಿಂಗಪುರ, ಮಲೇಷ್ಯಾ, ಬ್ಯಾಂಕಾಕ್‌, ಹಾಂಗ್‌ಕಾಂಗ್‌ ನಂತರ ದಕ್ಷಿಣ ಭಾರತೀಯರು ಹೆಚ್ಚು ಭೇಟಿ ನೀಡುವ ರಾಷ್ಟ್ರ ಶ್ರೀಲಂಕಾ. ಉತ್ತರ ಕರ್ನಾಟಕದವರು ಕ್ಯಾಸಿನೊಗಾಗಿ ಗೋವಾಕ್ಕೆ ಹೋದರೆ, ಬೆಂಗಳೂರಿನವರು ಶ್ರೀಲಂಕಾ ಹಾದಿ ಹಿಡಿದಿದ್ದಾರೆ. ಗೋವಾ, ಮುಂಬೈ ಬಿಟ್ಟರೆ  ಕರ್ನಾಟಕದ ಜೂಜುಪ್ರಿಯರಿಗೆ ಶ್ರೀಲಂಕಾವೇ ಅತ್ಯಂತ ಹತ್ತಿರದ ಕ್ಯಾಸಿನೊ ಕೇಂದ್ರ. 

 ಶ್ರೀಲಂಕಾದಲ್ಲಿ ಪ್ರವಾಸದೋದ್ಯಮ ಗರಿಗೆದರಿದೆ. ಗೋವಾಕ್ಕೆ ಹೋಗಿ ಬರುವ ಖರ್ಚಿನಲ್ಲಿಯೇ ಶ್ರೀಲಂಕಾ ಪ್ರವಾಸ ಮಾಡಬಹುದು. ಅಲ್ಲಿ ಕನ್ನಡಿಗರ ಒಡೆತನದ ಕ್ಯಾಸಿನೊಗಳಿವೆ. ಭಾರತೀಯ ಆಹಾರ ಅದರಲ್ಲೂ ದಕ್ಷಿಣ ಭಾರತ ಶೈಲಿಯ ತಿಂಡಿ, ತಿನಿಸು ಮತ್ತು ಆಹಾರಕ್ಕೆ ಕೊರತೆ ಇಲ್ಲ ಎನ್ನುತ್ತಾರೆ ಚರ್ಚ್‌ಸ್ಟ್ರೀಟ್‌ನಲ್ಲಿರುವ ಟ್ರಾವೆಲ್‌ ಏಜೆನ್ಸಿಯ ಮಾಲೀಕ.

ಕಡಿಮೆ ಖರ್ಚಿನಲ್ಲಿ ವಿದೇಶಿ ಪ್ರವಾಸ, ಸುಂದರ ಕಡಲ ಕಿನಾರೆ, ಸ್ಟಾರ್‌ ಹೋಟೆಲ್‌ ವಾಸ್ತವ್ಯ ಮುಗಿಯುತ್ತದೆ. ಬೆಂಗಳೂರಿನಿಂದ  ಶ್ರೀಲಂಕಾಕ್ಕೆ ತೆರಳುವವರಲ್ಲಿ ಕ್ಯಾಸಿನೊ ಜೂಜು ಆಡಲೆಂದೇ ಹೋಗುವವರ ಪ್ರಮಾಣ ಶೇ 20–ಶೇ 30ರಷ್ಟಿದೆ. ಕಳೆದ ವರ್ಷ ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದ ನಂತರ ಸಂಖ್ಯೆ ಕಡಿಮೆಯಾಗಿದೆ. ಅದರಿಂದ ಬರುವ ಆದಾಯವೂ ಕುಸಿತ ಕಂಡಿದೆ. ಅದರ ಬೆನ್ನಲ್ಲೇ ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಡ್ರಗ್ಸ್‌ ಮಾಫಿಯಾ ಸುದ್ದಿಯಿಂದ ಶ್ರೀಲಂಕಾಕ್ಕೆ ಹೋಗುವವರ ಸಂಖ್ಯೆ ಇನ್ನೂ ಕಡಿಮೆಯಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ. 

‘ಪ್ರವಾಸೋದ್ಯಮದ ಜತೆಗೆ ಬ್ಲ್ಯಾಕ್‌ಜಾಕ್‌, ಸ್ಲಾಟ್‌ ಮಷೀನ್‌, ಸ್ಲಾಟ್‌ಹೌಸ್‌ ಎಡ್ಜ್‌, ರೌಲೆಟ್ಸ್‌, ಪೋಕರ್‌, ಕ್ರಾಪ್ಸ್‌, ಕಿನೊ ಮುಂತಾದ ಆಟಗಳು ಶ್ರೀಲಂಕಾಕಕ್ಕೆ ಕೋಟ್ಯಂತರ ಆದಾಯ ತಂದುಕೊಡುತ್ತಿವೆ. ಇಲ್ಲಿಂದ ಹೋದ ಕಾಯಂ ಗ್ರಾಹಕರು ಜೂಜಿನಲ್ಲಿ ಹಣ ಕಳೆದುಕೊಂಡರೆ ಮರಳಿ ಹೋಗಲು ವಿಮಾನದ ಟಿಕೆಟ್‌ ಬುಕ್ಕಿಂಗ್‌ ಮಾಡಲಾಗುತ್ತದೆ. ಖರ್ಚಿಗೆ ಹಣವನ್ನೂ ನೀಡುತ್ತಾರೆ’ ಎನ್ನುತ್ತಾರೆ ಟ್ರಾವೆಲ್‌ ಏಜೆನ್ಸಿ ಮಾಲೀಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು