ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಕಾಳ್ಗಿಚ್ಚಿಗೆ ಕಡಿವಾಣ; ಬೇಕಿದೆ ಜನಾಂದೋಲನ

Last Updated 14 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಬಳಿಯ ಮಾಕಳಿ ಬೆಟ್ಟಕ್ಕೆ ಕೀಡಿಗೇಡಿಗಳು ಈಚೆಗೆ ಹಾಕಿದ ಬೆಂಕಿಯಿಂದ ಇಡೀ ರಾತ್ರಿ ಬೆಟ್ಟ ಹೊತ್ತಿ ಉರಿಯಿತು. ಬೆಟ್ಟದಲ್ಲಿ ಬೆಳೆದು ನಿಂತಿದ್ದ ವಿವಿಧ ಜಾತಿಯ ಸಸ್ಯ, ಗಿಡ, ಪ್ರಾಣಿ, ಪಕ್ಷಿಗಳು ಸುಟ್ಟು ಭಸ್ಮವಾಗಿವೆ. ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟ ಬೂದಿಯಿಂದ ಆವರಿಸಿದೆ. ಕೃಷಿ ಭೂಮಿ ಹಸನು ಮಾಡಿಕೊಳ್ಳುವ ಉದ್ದೇಶದಿಂದ ಬೆಟ್ಟದ ತಪ್ಪಲಿನಲ್ಲಿ ಪದೇ ಪದೇ ಬೆಂಕಿ ಹಚ್ಚಲಾಗುತ್ತಿದೆ. ಗಾಳಿಯ ವೇಗಕ್ಕೆ ಬೆಂಕಿ ಇಡೀ ಬೆಟ್ಟವನ್ನೇ ಆವರಿಸಿಕೊಳ್ಳುತ್ತಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಬೆಂಕಿ ನಂದಿಸಲು ಮುಂದಾಗಲಿಲ್ಲ. ಮಾಕಳಿ ಬೆಟ್ಟ ಸಾಲಿಗೆ ಪದೇ ಪದೇ ಬೆಂಕಿ ಬೀಳುತ್ತಲೇ ಇದೆ.

ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ ಕೋರಮಂಗಲ ಅರಣ್ಯ ಪ್ರದೇಶಕ್ಕೆ ಈಚೆಗೆ ಬೆಂಕಿ ಹತ್ತಿಕೊಂಡು 30 ಎಕರೆ ನೀಲಗಿರಿ ತೋಪು ಸುಟ್ಟುಹೋಗಿದೆ. ನವಿಲು, ಜಿಂಕೆ ಸೇರಿ ಅನೇಕ ಪಶು, ಪಕ್ಷಿಗಳು ಸುಟ್ಟು ಕರಕಲಾಗಿವೆ. ಇದಕ್ಕೂ ಮೊದಲು ವಿಜಯಪುರದ ಕೋಲಾರ ರಸ್ತೆಯ ನೀಲಗಿರಿ ತೋಪಿಗೆ ಬೆಂಕಿ ಬಿದ್ದು ಮೂರು ಎಕರೆಗೂ ಹೆಚ್ಚು ನೀಲಗಿರಿ ತೋಪು ಸುಟ್ಟು ಹೋಗಿದೆ.

ರಾಮನಗರ ತಾಲ್ಲೂಕು ಒಂದರಲ್ಲಿಯೇ ಎರಡು ತಿಂಗಳಲ್ಲಿ 45 ಅಗ್ನಿ ಅವಘಡ ಪ್ರಕರಣ ಸಂಭವಿಸಿವೆ. ಈ ಪ್ರಕರಣಗಳ ಪೈಕಿ ಶೇ 75–80ರಷ್ಟು ಒಣಹುಲ್ಲಿಗೆ ಬೆಂಕಿ ತಗುಲಿದ್ದರಿಂದಲೇ ಸಂಭವಿಸಿವೆ.

ಬೆಂಕಿ ನಂದಿಸುವ ಉಪಕರಣಗಳ ಕೊರತೆ: ಅರಣ್ಯ ಸಮೃದ್ಧವಾಗಿರುವ ಹಳೆ ಮೈಸೂರು ಭಾಗದಲ್ಲಿ ಪ್ರತಿ ವರ್ಷವೂ ಎಕರೆಗಟ್ಟಲೆ ಪ್ರದೇಶ ಕಾಳ್ಗಿಚ್ಚಿಗೆ ಆಹುತಿಯಾಗುತ್ತಿದೆ. ಬೆಂಕಿ ರೇಖೆ ನಿರ್ಮಾಣ, ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ, ಅಗ್ನಿಶಾಮಕ ದಳಗಳ ನಿಯೋಜನೆ ಸೇರಿದಂತೆ ಅರಣ್ಯ ಇಲಾಖೆಯು ಕ್ರಮ ವಹಿಸಿದ್ದರೂ ಬೆಂಕಿ‌ ನಂದಿಸಲು ಅಗತ್ಯ ಸಿಬ್ಬಂದಿ, ರಕ್ಷಣಾ ಪರಿಕರಗಳು, ಹೆಲಿಕಾಪ್ಟರ್ ಸೇರಿದಂತೆ ಹಲವು ಸೌಲಭ್ಯಗಳ ಕೊರತೆ ಇದೆ. ಅದೇ ಕಾರಣಕ್ಕೆ, ಕಾಳ್ಗಿಚ್ಚು ನಂದಿಸುವ ವೇಳೆ ಸಿಬ್ಬಂದಿ ಅಸಹಾಯಕರಾಗುತ್ತಾರೆ.

ಫೆಬ್ರುವರಿಯಲ್ಲಿ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂರುಕಣ್ಣು ಗುಡ್ಡ, ವನಗೂರು ಅರಣ್ಯ ಪ್ರದೇಶದಲ್ಲಿ ಸಾವಿರಾರು ಎಕರೆ ಅರಣ್ಯ ನಾಶವಾಗಿದ್ದು, ರಣಭಿಕ್ತಿ ರಕ್ಷಿತಾರಣ್ಯದಲ್ಲಿ ಬೆಂಕಿ ನಂದಿಸುವಾಗ ಗಾಯಗೊಂಡಿದ್ದ ನಾಲ್ವರು ಸಿಬ್ಬಂದಿ ಪೈಕಿ ಅರಣ್ಯ ರಕ್ಷಕ ಸುಂದರೇಶ್ ಮೃತಪಟ್ಟರು.

‘ಮೂರು ಕಣ್ಣು ಗುಡ್ಡದಲ್ಲಿ ಬೆಂಕಿ ನಂದಿಸಲು ಯತ್ನಿಸಿದ ಸುಮಾರು 20 ಸಿಬ್ಬಂದಿಗೆ ಯಾವುದೇ ಸಲಕರಣೆ ನೀಡಿರಲಿಲ್ಲ’ ಎನ್ನುತ್ತಾರೆ ಹಾಸನದ ಮಂಕನಹಳ್ಳಿಯ ಪರಿಸರ ಪ್ರೇಮಿ ಅನಿಲ್.

ಪಶ್ಚಿಮ ಘಟ್ಟದ ಶೋಲಾ ಅರಣ್ಯದಲ್ಲಿ ವಸಂತ ಕಾಲದಲ್ಲಿ ಸಾವಿರಾರು ಪಕ್ಷಿಗಳು ಮೊಟ್ಟೆ ಇಡುತ್ತವೆ. ಈ ಬಾರಿ ಬೆಂಕಿಗೆ ಮೊಲ, ಕಾಳಿಂಗ ಸರ್ಪ, ನವಿಲು, ಕಬ್ಬೆಕ್ಕಿನಂಥ ಅನೇಕ ಪ್ರಭೇದಗಳ ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿವೆ. ಕೊಡಗು ಜಿಲ್ಲೆಯ ಬ್ರಹ್ಮಗಿರಿ, ನಾಗರಹೊಳೆ, ಪುಷ್ಪಗಿರಿ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಬೆಂಕಿ ಬೀಳುತ್ತಿದೆ.

‘ದುಬಾರೆಯಲ್ಲಿ 3 ಎಕರೆ ಹಾಗೂ ಉಳಿದ ಮೀಸಲು ಅರಣ್ಯ ಪ್ರದೇಶಗಳ 2 ಎಕರೆಗೆ ಬೆಂಕಿ ಬಿದ್ದಿದೆ. ಜಿಲ್ಲೆಯಲ್ಲಿ 30 ಸಾವಿರ ಎಕರೆ ಕಂದಾಯ ಇಲಾಖೆಗೆ ಸೇರಿದ ಪೈಸಾರಿ, ಸಿ ಮತ್ತು ಡಿ ದರ್ಜೆ ಭೂಮಿ ಇದ್ದು, ಇಲ್ಲೂ ಅರಣ್ಯ ಬೆಳೆದಿದೆ. ನಾಗರಹೊಳೆಯಲ್ಲಿ 2,450 ಕಿ.ಮೀ ಹಾಗೂ ಉಳಿದ ಕಡೆ 450 ಕಿ.ಮೀ ಬೆಂಕಿ ರೇಖೆ ಮಾಡಲಾಗಿದೆ’ ಎಂದು ಮಡಿಕೇರಿ ಸಿಸಿಎಫ್ ಬಿ.ಕೆ.ಮೂರ್ತಿ ತಿಳಿಸಿದರು‌.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕರಿಘಟ್ಟದಲ್ಲಿ 100 ಎಕರೆ ಅರಣ್ಯ ನಾಶವಾಗಿದೆ. ಮೈಸೂರು ಜಿಲ್ಲೆಯ ಚಾಮುಂಡಿಬೆಟ್ಟ, ಚಿಕ್ಕನಹಳ್ಳಿ ಮೀಸಲು ಅರಣ್ಯ, ವರಕೋಡಿನ ದೊಣ್ಣೆಕಲ್ಲು ಬೆಟ್ಟ, ವಡಕಲ್ಲು ರಾಮಸ್ವಾಮಿ ಬೆಟ್ಟ, ನಂಜನಗೂಡು ಚುಂಚನಹಳ್ಳಿ ಅರಣ್ಯ ಪ್ರದೇಶ, ಸರಗೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲೂ ಬೆಂಕಿ ಬಿದ್ದಿದೆ.

‘ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆನೆಚೌಕೂರು ವಲಯದಲ್ಲಿ 50 ಎಕರೆ ಸುಟ್ಟಿದ್ದು, ನೆಲ ಬೆಂಕಿಯಾಗಿದ್ದರಿಂದ ಹೆಚ್ಚು ನಷ್ಟವಾಗಿಲ್ಲ’ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ದಯಾನಂದ ತಿಳಿಸಿದರು.

‘ಮೈಸೂರು ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳಾಗಿದ್ದು, ಸರಾಸರಿ ಅರ್ಧ ಎಕರೆ ಅರಣ್ಯ ನಾಶವಾಗಿದೆ. 426 ಕಿ.ಮೀ ಬೆಂಕಿ ರೇಖೆ ರಚಿಸಲಾಗಿದೆ’ ಎಂದು ಡಿಸಿಎಫ್‌ ಡಾ.ಬಸವರಾಜ್ ‘ಪ್ರಜಾವಾಣಿಗೆ ತಿಳಿಸಿದರು.

ಕಲಬುರಗಿಯಲ್ಲಿ ಕಾಳ್ಗಿಚ್ಚು ಕಡಿಮೆ: ‘ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಕಡಿಮೆ ಇರುವ ಕಾರಣ ದೊಡ್ಡ ಪ್ರಮಾಣ ಕಾಳ್ಗಿಚ್ಚು ಕಾಣಿಸಿಕೊಳ್ಳುವುದಿಲ್ಲ. ಚಿಂಚೋಳಿ ತಾಲ್ಲೂಕು ಒಂದರಲ್ಲೇ 13,384 ಹೆಕ್ಟೇರ್ ಅರಣ ಪ್ರದೇಶ ಇದೆ. ಅರಣ್ಯ ಪ್ರದೇಶದಲ್ಲಿ ಅಲ್ಲದೇ ಸುತ್ತಲು ವಾಸಿಸುವ ಜನರಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚದಂತೆ ಅರಿವು ಮೂಡಿಸುತ್ತಿದ್ದೇವೆ’ ಎಂದು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ಕುಮಾರ್ ಕೆಂಚಪ್ಪನವರ್ ಹೇಳುತ್ತಾರೆ.

ಜನರೇ ಬೆಂಕಿ ಹಾಕುತ್ತಾರೆ
ರಾಜ್ಯದ ವಿವಿಧ ಭಾಗಗಳಲ್ಲಿ ಜನರು ಹಾಕುವ ಬೆಂಕಿಯಿಂದ ಅರಣ್ಯ ನಾಶವಾಗುವುದೇ ಹೆಚ್ಚು.

ಕೋಲಾರ ಜಿಲ್ಲೆಯಲ್ಲಿ ನೀಲಗಿರಿ ತೋಪಿನಲ್ಲಿ ಬಿದ್ದಿರುವ ಎಲೆ ಸುಡಲು ರೈತರೇ ಬೆಂಕಿ ಹಚ್ಚುತ್ತಾರೆ. ಈ ಬಗ್ಗೆ ಅರಣ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ತಿಂಗಳ ಹಿಂದೆ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಾಕಿದ್ದರು. ವಾಯು ವಿಹಾರಕ್ಕೆಂದು ತೆರಳಿದ್ದ ಸಾರ್ವಜನಿಕರು ಸೇರಿ ಬೆಂಕಿ ನಂದಿಸಿದ್ದರು.

ಹೊಸ ಹುಲ್ಲಿಗಾಗಿ ಬೆಂಕಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಹಳೆ ಹುಲ್ಲು ನಾಶವಾಗಿ ಹೊಸ ಹುಲ್ಲು ಬರುತ್ತದೆ ಎನ್ನುವ ನಂಬಿಕೆಯಿಂದ ಸ್ಥಳೀಯರು, ಕುರಿಗಾಹಿಗಳು ಅರಣ್ಯ ಪ್ರದೇಶ, ಬೆಟ್ಟಗಳಿಗೆ ಬೆಂಕಿ ಹಚ್ಚುತ್ತಾರೆ. ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಈ ಬೆಂಕಿ ಹಚ್ಚುವ ಕೆಲಸ ಹೆಚ್ಚು ನಡೆಯುತ್ತಿದೆ. ಪ್ರಸಿದ್ಧ ನಂದಿಗಿರಿಧಾಮದಿಂದ ಜಾಲರಿ ನರಸಿಂಹಸ್ವಾಮಿ ದೇವಾಲಯದವರೆಗೂ ಬೆಟ್ಟದ ಸಾಲುಗಳಿವೆ. ಇಲ್ಲಿನ ಒಂದು ಪ್ರದೇಶದಲ್ಲಿ ಬೆಂಕಿ ಹಚ್ಚಿದರೆ ಅದು ಹರಡುತ್ತ ಹೆಚ್ಚಿನ ಪ್ರದೇಶಗಳನ್ನು ಆಹುತಿ ತೆಗೆದುಕೊಳ್ಳುತ್ತದೆ. ಪ್ರತಿ ವರ್ಷದ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಪ್ರಕರಣ ವರದಿ ಆಗುತ್ತಿವೆ.

ಅಧಿಕಾರಿಗಳ ಮೇಲಿನ ಕೋಪಕ್ಕಾಗಿ‌ ಬೆಂಕಿ‌ ಹಚ್ಚುವವರಿದ್ದಾರೆ. ಚಾಮರಾಜನಗರದ ಮಲೆ ಮಹದೇಶ್ವರ, ಕಾವೇರಿ ವನ್ಯಜೀವಿಧಾಮ ಹಾಗೂ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ 20 ಪ್ರಕರಣ ವರದಿಯಾಗಿದ್ದು, 9 ಮಂದಿಯನ್ನು ಬಂಧಿಸಲಾಗಿದೆ. 2019ರಲ್ಲಿ ಬಂಡೀಪುರದಲ್ಲಿ 30 ಸಾವಿರಕ್ಕೂ ಹೆಚ್ಚು ಎಕರೆ ಕಾಡು ನಾಶವಾಗಿತ್ತು. ಈ ವರ್ಷ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 5 ಕಡೆ ಬೆಂಕಿ ಬಿದ್ದಿದೆ.

ಕೊಡಗಿನಲ್ಲಿ ಹಂದಿ ಬೇಟೆಯಾಡಲು ಕುರುಚಲು ಕಾಡಿಗೆ ಬೆಂಕಿ ಹಾಕಿದರೆ, ಜನ ಎಸೆಯುವ ಬೆಂಕಿ ಕಡ್ಡಿ, ಸಿಗರೇಟ್ ತುಂಡಿನಿಂದಲೂ ಬೆಂಕಿ ಹತ್ತುತ್ತಿದೆ.

ಜನರ ಸಹಕಾರವೇ ಇಲಾಖೆಗೆ ಆಧಾರ
ಅರಣ್ಯ ಇಲಾಖೆ ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಮಾರ್ಚ್ 1ರಿಂದ ಈವರೆಗೆ ಒಟ್ಟು 144 ಬೆಂಕಿ ಪ್ರಕರಣಗಳು ಘಟಿಸಿವೆ. ಸುಮಾರು 520 ಹೆಕ್ಟೇರ್ ಅರಣ್ಯಕ್ಕೆ ಹಾನಿಯಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಮೀಸಲು ಅರಣ್ಯ ಸೇರಿದಂತೆ, ಪುತ್ತೂರು, ಉಪ್ಪಿನಂಗಡಿ, ಸುಬ್ರಹ್ಮಣ್ಯ ಭಾಗದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಸಾರ್ವಜನಿಕರು, ಅಗ್ನಿಶಾಮಕ ಸಿಬ್ಬಂದಿ ಸಹಕಾರದಿಂದ ಅರಣ್ಯ ಇಲಾಖೆಗೆ ಬೆಂಕಿ ನಂದಿಸಲು ಸಾಧ್ಯವಾಗಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಆಗಾಗ ಕಾಳ್ಗಿಚ್ಚು ಪ್ರಕರಣಗಳು ದಾಖಲಾಗಿದ್ದ ಕಾರಣಕ್ಕೆ, ರೈಲು ಹಳಿಗಳು ಹಾದುಹೋಗುವ ಕಡೆ ಕಾಳ್ಗಿಚ್ಚು ತಡೆಯಲು, ಕೆಲವೊಮ್ಮೆ ಚಲಿಸುವ ರೈಲಿನಿಂದ ಹಳಿಯ ಆಸುಪಾಸಿಗೆ ನೀರನ್ನು ಚಿಮುಕಿಸಲಾಗುತ್ತಿದೆ. ಹಳಿಗಳ ಬಳಿ ಕಾಳ್ಗಿಚ್ಚು ನಂದಿಸಲು ರೈಲ್ವೆ ಇಲಾಖೆಯು ವಿಶೇಷ ತಂಡಗಳನ್ನು ರಚಿಸಿದೆ.

‘ಪ್ರತಿ ಅರಣ್ಯ ವಲಯಕ್ಕೆ ತಲಾ ಐದರಂತೆ ಬ್ಲೋವರ್‌ಗಳನ್ನು ನೀಡಲಾಗಿದೆ. ಡಿಆರ್‌ಎಫ್‌ಒ, ವಾಚರ್, ಗಾರ್ಡ್ ಒಳಗೊಂಡ ಕಾಲಭೈರವ ತಂಡ ರಚಿಸಲಾಗಿದೆ. ಅರಣ್ಯದಂಚಿನಲ್ಲಿ ವಾಸಿಸುವ ಜನರ ಜತೆ ನಿರಂತರ ಸಂಪರ್ಕ ಸಾಧಿಸಿ, ಮಾಹಿತಿ ಸಂಗ್ರಹಿಸಲಾಗುತ್ತದೆ. ಸಾರ್ವಜನಿಕರು ಅತಿ ಹೆಚ್ಚು ಸಹಕಾರ ನೀಡುತ್ತಿದ್ದಾರೆ’ ಎಂದು ದಕ್ಷಿಣ ಕನ್ನಡದ ಡಿಸಿಎಫ್ ಡಾ. ದಿನೇಶ್‌ಕುಮಾರ್ ವೈ. ಪ್ರತಿಕ್ರಿಯಿಸಿದರು.

ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ, ಅತ್ಯಾಧುನಿಕ ಉಪಕರಣಗಳು, ವಾಹನಗಳ ಕೊರತೆ ಇವೆ. ಗುಡ್ಡಗಾಡಿನ ಪ್ರದೇಶಗಳಲ್ಲಿ ಮಾರ್ಗಗಳು ಇಲ್ಲ. ಹೀಗಾಗಿ ಬೆಂಕಿ ತಡೆ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ.

‘ಈ ವರ್ಷ ಬೆಂಕಿ ಬಿದ್ದು ಸುಮಾರು 600 ಎಕರೆ ಪ್ರದೇಶದಲ್ಲಿ ಹುಲ್ಲು, ಪೊದೆಗಳು ನಾಶವಾಗಿವೆ’ ಎಂದು ಚಿಕ್ಕಮಗಳೂರು ಡಿಸಿಎಫ್‌ ಎನ್‌.ಇ.ಕ್ರಾಂತಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಭದ್ರಾ ಅರಣ್ಯದ ಹೆಬ್ಬೆ ಭಾಗದಲ್ಲಿ ನಾಲ್ಕು ಕಡೆ ಬೆಂಕಿ ಕಾಣಿಸಿಕೊಂಡಿತ್ತು. ಸುಮಾರು 20 ಎಕರೆ ಪ್ರದೇಶದಲ್ಲಿ ಪೊದೆಗಳು ಸುಟ್ಟಿವೆ’ ಎಂದು ಭದ್ರಾ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭಾಕರ್‌ ತಿಳಿಸಿದರು.

800 ಎಕರೆ ಅರಣ್ಯ ನಾಶ
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಪಶ್ಚಿಮ ಘಟ್ಟದ ಈ ಸೂಕ್ಷ್ಮ ಪ್ರದೇಶದಲ್ಲಿ ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಸುಮಾರು 800 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಹಾನಿ ಉಂಟಾಗಿದೆ.

‘ಕಾಳ್ಗಿಚ್ಚಿನಿಂದ ವನ್ಯಜೀವಿಗಳಿಗೆ ಹಾನಿಯಾದ ವರದಿ ಇಲ್ಲ. ಪ್ರತಿ ವರ್ಷ ಸರಾಸರಿ 350 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಕಾಳ್ಗಿಚ್ಚು ಹಬ್ಬುತ್ತಿದೆ. ಈ ಬಾರಿ ಮಳೆ ಪ್ರಮಾಣ ಕಡಿಮೆ ಇರುವುದು ಸಮಸ್ಯೆ ಗಂಭೀರವಾಗಲು ಕಾರಣವಾಗಿದೆ’ ಎನ್ನುತ್ತಾರೆ ಕೆನರಾ ಅರಣ್ಯ ವೃತ್ತದ ಸಿಸಿಎಫ್ ಕೆ.ವಿ.ವಸಂತ ರೆಡ್ಡಿ.

ಕಪ್ಪತಗುಡ್ಡದಲ್ಲೂ ಬೆಂಕಿ: ಕಪ್ಪತಗುಡ್ಡ ಪ್ರದೇಶದಲ್ಲಿ ಬೆಂಕಿ ಬಿದ್ದ ‍ಪರಿಣಾಮ ಒಂದು ತಿಂಗಳಲ್ಲಿ 100 ಹೆಕ್ಟೇರ್‌ನಷ್ಟು ಹಾನಿಯಾಗಿದೆ. ಕಪ್ಪತಗುಡ್ಡದಲ್ಲಿನ ಕುರುಚಲು ಪ್ರದೇಶಕ್ಕೆ ಬೆಂಕಿ ಬೀಳುವುದರಿಂದ ಹುಲ್ಲು ಮಾತ್ರ ಸುಟ್ಟು ಹೋಗುತ್ತದೆ.

‘ಸುಟ್ಟು ಕರಕಲಾದ ಯಾವುದೇ ಪ್ರಾಣಿಯ ಕಳೇಬರ ಸಿಕ್ಕಿಲ್ಲ. ಸಣ್ಣ ಹಕ್ಕಿಗಳು ಬೆಂಕಿಗೆ ಆಹುತಿ ಆಗಿರಬಹುದಷ್ಟೇ’ ಎಂದು ಡಿಸಿಎಫ್‌ ದೀಪಿಕಾ ಬಾಜಪೇಯಿ ತಿಳಿಸಿದ್ದಾರೆ.

9 ಪ್ರಕರಣ: ‘ಬೆಳಗಾವಿ ವಿಭಾಗದಲ್ಲಿ ಕಳೆದ 4 ವರ್ಷಗಳಲ್ಲಿ ದೊಡ್ಡಮಟ್ಟದ ಬೆಂಕಿ ಅವಘಡ ಪ್ರಕರಣ ದಾಖಲಾಗಿಲ್ಲ. 2019–20ರಲ್ಲಿ 3, 2020–21ರಲ್ಲಿ 4, 2021–22ರಲ್ಲಿ 2 ಸೇರಿದಂತೆ 9 ಪ್ರಕರಣ ದಾಖಲಾಗಿವೆ. ಅವು ನೆಲಮಟ್ಟದ ಬೆಂಕಿ ಅವಘಡ ಪ್ರಕರಣಗಳಾಗಿದ್ದು, ಬೆಂಕಿ ನಂದಿಸಲಾಗಿದೆ. ಆದರೆ, ಅರಣ್ಯ ನಾಶವಾಗಿಲ್ಲ. ವನ್ಯಮೃಗಗಳ ಜೀವಕ್ಕೂ ಅಪಾಯವಾಗಿಲ್ಲ’ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರತಿಕ್ರಿಯೆಗಳು
ಅರಣ್ಯಕ್ಕೆ ಬೆಂಕಿ ಬಿದ್ದಾಗ ಹತೋಟಿಗೆ ತರಲು ನಮ್ಮಲ್ಲಿರುವ ಉಪಕರಣಗಳು ಸಾಲದು. ಬೇರೆ ದೇಶಗಳಲ್ಲಿ ಅತ್ಯಾಧುನಿಕ ಸಾಧನಗಳು ಇವೆ. ನಾವೂ ಅವುಗಳನ್ನು ಬಳಸಿಕೊಂಡಲ್ಲಿ ಬೆಂಕಿಯಿಂದ ಆಗುವ ಹೆಚ್ಚಿನ ಅನಾಹುತ ತಡೆಯಬಹುದು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಅಧಿಕಾರಿಗಳೊಂದಿಗೆ ನಾಗರಿಕರು ಸಹ ಕಾಳ್ಗಿಚ್ಚು ನಿಯಂತ್ರಣದ ಬಗ್ಗೆ ಕಾಳಜಿ ವಹಿಸಬೇಕು. ಇದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಹೊಣೆಗಾರಿಕೆ.
ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

***

ಕಾಳ್ಗಿಚ್ಚಿನಿಂದ ಅರಣ್ಯಗಳನ್ನು ಕಾಪಾಡಲು ಸ್ಥಳೀಯ ಬುಡಕಟ್ಟು ಸಮುದಾಯಗಳ ವಿಶ್ವಾಸ ಗಳಿಸುವುದು ಅರಣ್ಯ ಇಲಾಖೆಯ ಆದ್ಯ ಕರ್ತವ್ಯ. ಸ್ಥಳೀಯರು ಕೂಡ ಅಡವಿಗಳು ಸರ್ಕಾರಕ್ಕೆ ಸೇರಿದ ಸ್ವತ್ತೆಂದು ಭಾವಿಸುವುದು ದೊಡ್ಡ ತಪ್ಪು. ಅರಣ್ಯಗಳು ಸಮಸ್ತ ಜನರಿಗೆ ಸೇರಿದ, ಮಾನವ ಎಂದಿಗೂ ಸೃಷ್ಟಿ ಮಾಡಲಾಗದ ಅಮೂಲ್ಯ ಸ್ಮಾರಕಗಳು. ಈ ಅರಿವನ್ನು ಅವರಲ್ಲಿ ತುರ್ತಾಗಿ ಮೂಡಿಸಬೇಕು. ಸ್ಥಳೀಯರಿಗೆ ಮಾತ್ರ ಗೊತ್ತಿರುವ ಕಾಳ್ಗಿಚ್ಚು ನಿಯಂತ್ರಣದ ತಂತ್ರಗಳನ್ನು ಇಲಾಖೆಯು ಸಮರ್ಥವಾಗಿ ಬಳಸಿಕೊಳ್ಳಲು ವಿಶ್ವಾಸ ಗಳಿಸಬೇಕು. ಆಗಷ್ಟೇ ಕಾಳ್ಗಿಚ್ಚಿನ ಸಮಸ್ಯೆಗೆ ಪರಿಹಾರ ಸಾಧ್ಯ.
–ಕೃಪಾಕರ, ‘ಗ್ರೀನ್‌ ಆಸ್ಕರ್‌’ ಪುರಸ್ಕೃತ ವನ್ಯಜೀವಿ ಛಾಯಾಗ್ರಾಹಕ

***

ಕಾಡಿಗೆ ಬೆಂಕಿ ಹಚ್ಚುವುದು ಪಾಪದ ಕೆಲಸ. ಅರಣ್ಯ ಸಂರಕ್ಷಿಸಬೇಕೇ ಹೊರತು, ಅದನ್ನು ನಾಶಪಡಿಸುವಂತಹ ಕೃತ್ಯಗಳಿಗೆ ಯಾರೂ ಕೈ ಹಾಕಬಾರದು. ಅರಣ್ಯಕ್ಕೆ ಬೆಂಕಿ ಹಚ್ಚುವವರನ್ನು ಹಿಡಿದು ಶಿಕ್ಷಿಸಬೇಕು.
–ಶಿವಕುಮಾರ ಸ್ವಾಮೀಜಿ, ನಂದಿವೇರಿ ಮಠ, ಕಪ್ಪತಗುಡ್ಡ

***

ಕಾಡಿನಲ್ಲಿ ಬೆಂಕಿ ಹೇಗೆ ಬೀಳುತ್ತದೆ ಮತ್ತು ಅದನ್ನು ಹೇಗೆ ನಿಯಂತ್ರಿಸಬೇಕು ಎಂಬ ಅರಿವು ಮತ್ತು ಚಾತುರ್ಯ ಬುಡಕಟ್ಟು ನಿವಾಸಿಗಳು ಮತ್ತು ಆದಿವಾಸಿಗಳಿಗೆ ಇರುತ್ತದೆ. ಸರ್ಕಾರದ ನೀತಿಗಳ ಕಾರಣ, ಆದಿವಾಸಿಗಳನ್ನು ಕಾಡಿನಿಂದ ಹೊರಗಟ್ಟಲಾಗಿದೆ. ಆದಿವಾಸಿಗಳನ್ನು ಕಾಳ್ಗಿಚ್ಚು ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಕಾಡಂಚಿನ ಪ್ರದೇಶದಲ್ಲಿ ರೈತರು, ದನಗಾಹಿಗಳು ಹುಲ್ಲಿಗೆ ಬೆಂಕಿ ಹಚ್ಚುತ್ತಾರೆ. ಅವರು ಹಾಗೆ ಮಾಡದಂತೆ ಅರಣ್ಯ ಇಲಾಖೆ ಸಿಬ್ಬಂದಿ ಅರಿವು ಮೂಡಿಸಬೇಕು. ಹುಲ್ಲು ಹಸಿಯಾಗಿದ್ದಾಗಲೇ ಕತ್ತರಿಸಿ, ರಸಮೇವು ಸಿದ್ಧಪಡಿಸುವ ಮತ್ತು ಅದನ್ನು ರೈತರಿಗೆ ಹಂಚುವ ಕೆಲಸವಾಗಬೇಕು.
–ಡಾ. ಅ.ನ. ಯಲ್ಲಪ್ಪ ರೆಡ್ಡಿ, ನಿವೃತ್ತ ಅರಣ್ಯಾಧಿಕಾರಿ, ಪರಿಸರ ತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT