ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ‘ನ್ಯಾಯ’ದ ಗೋಜಲು.. ಮೀಸಲು ಹೆಚ್ಚಳದ ದಾರಿಗಳು

Last Updated 9 ಡಿಸೆಂಬರ್ 2022, 18:50 IST
ಅಕ್ಷರ ಗಾತ್ರ

‍‍‍ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. 1950ರಲ್ಲಿನಾವೆಲ್ಲ ಒಪ್ಪಿಕೊಂಡ ನಮ್ಮ ಹೆಮ್ಮೆಯ ಸಂವಿಧಾನದ ಆಶಯಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ‘...ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ... ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ’ ಎಂದು ಸಂವಿಧಾನದ ಮೂಲತತ್ವ, ಆಶಯಗಳನ್ನು ಸಾರಾಂಶರೂಪದಲ್ಲಿ ತಿಳಿಸುವ ಪ್ರಸ್ತಾವನೆಯಲ್ಲಿ ಪ್ರತಿಪಾದಿಸಲಾಗಿದೆ. ಭಾರತ ‘ವಿಶ್ವಗುರು’ ಎಂದು ಏರು ಧ್ವನಿಯಲ್ಲಿ ಕೊಚ್ಚಿಕೊಳ್ಳುತ್ತಿದ್ದರೂಹೀನ ಜಾತಿಪದ್ಧತಿಯ ಶ್ರೇಣೀಕರಣ, ಅಸ್ಪೃಶ್ಯತೆ ಆಚರಣೆ, ಜಾತಿ ಹೆಸರಿನ ದೌರ್ಜನ್ಯ ಇನ್ನೂ ಕೊನೆಯಾಗಿಲ್ಲ. ಅಸಮಾನತೆ ತಾಂಡವವಾಡುತ್ತಲೇ ಇದೆ. ಇಂತಹ ಹೊತ್ತಿನೊಳಗೆ ಅಸಮಾನತೆ ನಿವಾರಿಸಿ, ಸಂವಿಧಾನದ ಆಶಯವನ್ನು ಸಾಕಾರಗೊಳಿಸಲು ಮೀಸಲಾತಿ ಪ್ರಬಲ ಅಸ್ತ್ರ.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ (ಪ.ಜಾ) 101, ಪರಿಶಿಷ್ಟ ಪಂಗಡದ (ಪ‍.ಪಂ) 53 ಸಮುದಾಯಗಳು ಮೀಸಲಾತಿ ಪಟ್ಟಿಯಲ್ಲಿವೆ. 1919ರಲ್ಲೇ ಮಿಲ್ಲರ್ ಸಮಿತಿ ವರದಿ ಆಧರಿಸಿ ಅಂದಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರಾಂತಿಕಾರಕವಾದ ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಸರ್ಕಾರಗಳು ಕಾಲಕಾಲಕ್ಕೆ ಮೀಸಲಾತಿಯ ಸೌಲಭ್ಯವನ್ನು ವಿಸ್ತರಿಸುತ್ತಲೇ ಬಂದಿವೆ. ಆದರೆ, ಮೀಸಲಾತಿಯ ಪರಿಧಿಯೊಳಗೆ ಬರುವ ಹತ್ತೆಂಟು ಪ್ರಬಲ ಜಾತಿಗಳವರಿಗೆ ಅದರ ಸವಲತ್ತು ಸಿಕ್ಕಿದೆಯೇ ವಿನಃ, ಎಲ್ಲ ಜಾತಿಗಳಿಗೂ ಅದರ ಪ್ರಯೋಜನ ಸಿಕ್ಕಿಲ್ಲ. ಮೀಸಲಾತಿ ಹೋಗಲಿ, ಸರ್ಕಾರದಿಂದ ಸಿಗುವ ಸೌಲಭ್ಯದ ಬಗ್ಗೆ ಗೊತ್ತೇ ಇಲ್ಲದ ಸಮುದಾಯಗಳು ಕರ್ನಾಟಕದಲ್ಲಿವೆ. ಮೀಸಲಾತಿಯೊಳಗಿರುವ ಪ್ರಬಲ ಸಮುದಾಯದ ಕೆಲವು ಕುಟುಂಬಗಳಿಗೆ ಅದರ ಲಾಭ ದಕ್ಕಿದೆಯಾದರೂ ಬಹುಸಂಖ್ಯಾತರಿಗೆ ಅದರ ಫಲ ದೊರೆತಿಲ್ಲ. ಅಧಿಕಾರದ ಎಲ್ಲ ಸ್ತರಗಳಲ್ಲಿ ಗುರುತಿಸಿಕೊಳ್ಳಲು, ನೈಜವೆನ್ನಬಹುದಾದ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ, ಸೌಲಭ್ಯದಿಂದ ವಂಚಿತರಾಗಿರುವವರಿಗೆ ಒಳಮೀಸಲಾತಿ ನೀಡುವಿಕೆ ಇನ್ನಷ್ಟೇ ಅನುಷ್ಠಾನವಾಗಬೇಕಿದೆ. ಹಾಗಾದಲ್ಲಿ ಮಾತ್ರ, ಸಂವಿಧಾನದ ಆಶಯಗಳು ಸಾಕಾರಗೊಳ್ಳುವುದು ಸಾಧ್ಯ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿಯನ್ನು ಕ್ರಮವಾಗಿ ಶೇ 17 ಹಾಗೂ ಶೇ 7ರಷ್ಟಕ್ಕೆ ಹೆಚ್ಚಿಸುವ ಚಾರಿತ್ರಿಕ ತೀರ್ಮಾನವನ್ನು ತೆಗೆದುಕೊಂಡಿದೆ. ಸದ್ಯವೇ ಎದುರಾಗಲಿರುವ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು ಈ ನಿರ್ಣಯವನ್ನು ಪ್ರಕಟಿಸಿದೆ ಎಂದು ಹೇಳಲು ಹಿಂಜರಿಕೆಯೇನೂ ಬೇಕಾಗಿಲ್ಲ. ಬಿಜೆಪಿ ಬೆನ್ನಿಗೆ ನಿಂತಿರುವ ವಾಲ್ಮೀಕಿ (ನಾಯಕ) ಸಮುದಾಯದವರು ‍‍ಪರಿಶಿಷ್ಟ ಪ‍ಂಗಡದ ಮೀಸಲಾತಿಯನ್ನು ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅನಿರ್ದಿಷ್ಟ ಕಾಲ ಧರಣಿ ನಡೆಸಿದ್ದರು. ಇದು ಸರ್ಕಾರಕ್ಕೆ ಇಕ್ಕಟ್ಟು ತಂದಿತ್ತು. ಈ ಒತ್ತಡದಲ್ಲಿ ಮೀಸಲಾತಿ ಹೆಚ್ಚಿಸುವ ತೀರ್ಮಾನವನ್ನು ಬೊಮ್ಮಾಯಿ ಸರ್ಕಾರ ಕೈಗೊಂಡಿತು. ಜತೆಗೆ, ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 2ರಷ್ಟು ಹೆಚ್ಚಿಸಿತು. ಪರಿಶಿಷ್ಟ ಜಾತಿಯವರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಪ್ರಬಲವಾಗಿ ಇರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ತೆಕ್ಕೆಗೆ ಸೇರಿದ್ದ ಎಡಗೈ ಸಮುದಾಯದವರು ಒಳ ಮೀಸಲಾತಿ ಕಲ್ಪಿಸಬೇಕು; ಅದಕ್ಕಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಹೀಗೆ ಮಾಡುವ ಮುಖೇನ, ಪರಿಶಿಷ್ಟ ಜಾತಿಯವರನ್ನು ಓಲೈಸುವ ಕೆಲಸವನ್ನು ಸರ್ಕಾರ ಮಾಡಿತು. ರಾಜಕೀಯ ಪ್ರಾತಿನಿಧ್ಯದಲ್ಲಿ ಹೆಚ್ಚಿನ ಪಾಲು ಪಡೆದವರು ಲಂಬಾಣಿ, ಬೋವಿ ಹಾಗೂ ಪರಿಶಿಷ್ಟರಲ್ಲಿ ಬಲಗೈ ಸಮುದಾಯದವರು. ಹಿಂದುಳಿದಿರುವಿಕೆಯ ಆಧಾರದ ಮೇಲೆ ಒಳಮೀಸಲಾತಿ ಕೊಟ್ಟರೆ, ಇಲ್ಲಿಯವರೆಗೆ ಮೀಸಲಾತಿಯ ಬಹುಪಾಲನ್ನು ಪಡೆದವರ ಪಾಲು ಕಡಿಮೆಯಾಗುತ್ತದೆ. ಹೀಗಾಗಿ, ಆಳುವ ಪಕ್ಷ ಯಾವುದೇ ಇದ್ದರೂ ಒಳಮೀಸಲಾತಿಯ ಸುಡುಕೆಂಡಕ್ಕೆ ಕೈಹಾಕುವ ಧೈರ್ಯವನ್ನೇ ಮಾಡುವುದಿಲ್ಲ; ಚುನಾವಣೆ ಎದುರಿಗಿರುವಾಗ ರಾಜಕೀಯದ ಗುಣಾಕಾರ, ಭಾಗಾಕಾರದ ಲೆಕ್ಕವಷ್ಟೇ ರಾಜಕಾರಣಿಗಳಿಗೆ ಮುಖ್ಯವಾಗುತ್ತದೆ. ಒಳಮೀಸಲಾತಿಯ ವಿಷಯದಲ್ಲಿ ಹುತ್ತಕ್ಕೆ ಕೈಹಾಕುವ ಧೈರ್ಯವನ್ನು ಯಾರೂ ಮಾಡಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೊಮ್ಮಾಯಿ ಅವರು ಇಂತಹದೊಂದು ನಿರ್ಧಾರ ಕೈಗೊಂಡರೆ ಅಚ್ಚರಿಯಿಲ್ಲ.

ಮೀಸಲಾತಿ ಹೆಚ್ಚಳದ ನಿರ್ಧಾರ ಹೇಗಿದೆ ಎಂದರೆ, ರಚ್ಚೆ ಹಿಡಿದ ಮಕ್ಕಳಿಗೆ ಜಾತ್ರೆಯಲ್ಲಿ ಮರಗುದುರೆ ಹತ್ತಿಸಿ ರಮಿಸುವ ಕೆಲಸದಂತಿದೆ. ಇದು ಚುನಾವಣೆ ಜಾತ್ರೆ ಸಮಯ. ಇಲ್ಲಿ ನ್ಯಾಯಕ್ಕಿಂತ ಓಲೈಕೆಯ ರಾಜಕಾರಣವೇ ಕಾಣಿಸುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಅದನ್ನೇ ಮಾಡಿದೆ. ಸ್ಪರ್ಧಾತ್ಮಕ ಯುಗದಲ್ಲಿ ಜೀವಂತ ಕುದುರೆಯನ್ನು ಕೊಟ್ಟು, ಅದನ್ನು ಓಡಿಸುವ ಕಲೆಯನ್ನು ಕಲಿಸಬೇಕೇ ವಿನಃ ಕಳ್ಳ ಕುದುರೆಯನ್ನು ಕೊಟ್ಟು, ‘ರಾಜಕಾರಣ’ದ ಆಟದಲ್ಲಿ ತಲ್ಲೀನವಾಗುವಂತೆ ಮಾಡುವುದಲ್ಲ. ಒಳಮೀಸಲಾತಿ ನೀಡಿಕೆ ಹೀಗಾಗದಂತೆ ನೋಡಿಕೊಳ್ಳಬೇಕಾದ ಹೊಣೆ ಸರ್ಕಾರದ ಮೇಲಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಮಾಡುವ ಮುನ್ನ ನ್ಯಾ. ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವನ್ನು ಸರ್ಕಾರ ರಚಿಸಿತ್ತು. ಅದರ ಶಿಫಾರಸಿನ ಆಧಾರದ ಮೇಲೆಯೇ ಮೀಸಲಾತಿ ಪ್ರಮಾಣ ಹೆಚ್ಚಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಇದನ್ನು ಹೆಚ್ಚಿಸುವ ಮೊದಲು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಿ, ಶಾಸನಾತ್ಮಕ ಅನುಮೋದನೆ ಪಡೆಯುವ ಉಸಾಬರಿಗೆ ಸರ್ಕಾರ ಹೋಗಿಲ್ಲ. ಹಾಗೆ ಮಾಡಿದಲ್ಲಿ, ವಿರೋಧ ಪಕ್ಷಗಳಿಗೂ ಇದರ ಪಾಲು ಸಿಗುತ್ತದೆ ಎಂದು ಅರಿತ ಬಿಜೆಪಿ ಸರ್ಕಾರ, ಸುಗ್ರೀವಾಜ್ಞೆ ಮೂಲಕ ಮೀಸಲಾತಿ ಹೆಚ್ಚಿಸುವ ಒಳಮಾರ್ಗ ಹಿಡಿಯಿತು. ಇದು ತನ್ನದೇ, ಕೊಡುಗೆ ಎಂದು ಬಿಂಬಿಸುವ ಲಾಭದ ಲೆಕ್ಕಾಚಾರ ಇದರ ಹಿಂದಿದೆ. ಮೀಸಲಾತಿಯನ್ನು ಹೇಗೆ ಕಲ್ಪಿಸಲಾಗುತ್ತದೆ? ಎಲ್ಲಿಂದ ಕಿತ್ತು ನೀಡಲಾಗುತ್ತದೆ? ಹೇಗೆ ಜಾರಿಯಾಗಲಿದೆ ಎಂಬ ನಿಖರ ಮಾಹಿತಿ ಸುಗ್ರೀವಾಜ್ಞೆಯಲ್ಲಿ ಇಲ್ಲ. ಸದ್ಯವೇ ಬೆಳಗಾವಿ ಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಇದನ್ನು ಮಂಡಿಸಿ, ಅನುಮೋದನೆ ಪಡೆಯುವ ಇರಾದೆ ಸರ್ಕಾರಕ್ಕೆ ಇದ್ದಂತಿದೆ.

ಅನುಷ್ಠಾನದ ಸಾಧ್ಯತೆಗಳು...

* ಮೀಸಲಾತಿಯನ್ನು ಪ್ರಶ್ನಿಸಿದ್ದ ಚಂಪಕನ್ ದೊರೈರಾಜನ್‌ ಪ್ರಕರಣದ ಬಳಿಕ 1951ರಲ್ಲಿ ಸಂವಿಧಾನಕ್ಕೆ ತಂದ ಮೊದಲ ತಿದ್ದುಪಡಿಯೇ ಮೀಸಲಾತಿಯ ಅನುಷ್ಠಾನದ ಮೈಲಿಗಲ್ಲು. ಅಂದಿನಿಂದ ಮೊನ್ನೆಯಷ್ಟೇ ಹೊರಬಂದ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್‌) ದವರಿಗೆ ನೀಡಲಾದ ಶೇ 10ರ ಮೀಸಲಾತಿ ಕುರಿತ ತೀರ್ಪಿನ ಒಳ ಆಯಾಮಗಳು, ವಿಶ್ಲೇಷಣೆ, ಅಭಿಪ್ರಾಯ, ಒಕ್ಕಣಿಕೆ, ಸಂವಿಧಾನದ ವಿವಿಧ ವಿಧಿಗಳ ಉಲ್ಲೇಖಗಳನ್ನು ಪರಾಮರ್ಶಿಸಿದರೆ ಇದರ ಅನುಷ್ಠಾನ ಅಸಾಧ್ಯವಲ್ಲ. ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳಲ್ಲಿ ಮೀಸಲಾತಿ ಬಗೆಗಿನ ನಿಲುವು, ನಿರ್ದೇಶನಗಳು ನಮ್ಮನ್ನು ಕಗ್ತತ್ತಲ ಕಾಡಿನೊಳಗೆ ಕರೆದೊಯ್ಯುತ್ತವೆ. ಕಗ್ಗಾಡಿನೊಳಗೂ ದಾರಿಗಳಿರುವಂತೆ, ಮೀಸಲಾತಿಯ ಅನುಷ್ಠಾನಕ್ಕೆ ಕಿರುದಾರಿಗಳೂ ಕಾಣಿಸಿಗುತ್ತವೆ. ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೂಲತತ್ವಗಳನ್ನೇ ಬದಿಗಿಟ್ಟು ಇಡಬ್ಲ್ಯೂಎಸ್‌ಗೆ ನೀಡಿದ ಮೀಸಲಾತಿಗೆ ಸುಪ್ರೀಂಕೋರ್ಟ್‌ ಅಸ್ತು ಎಂದಿದೆ. ಈ ದಾರಿಯನ್ನೇ ಬೊಮ್ಮಾಯಿ ಸರ್ಕಾರ ಬಳಸಿಕೊಂಡಿದೆ.

* ಸಂವಿಧಾನಕ್ಕೆ 1951ರಲ್ಲಿ ತಿದ್ದುಪಡಿ ತಂದು ವಿಧಿ 31ಬಿ ಅನ್ನು ಸೇರಿಸಲಾಯಿತು. ಇದರ ಪ್ರಕಾರ ಅನುಸೂಚಿ 9 ರಲ್ಲಿ ಸೇರಿಸಲಾದ ಶಾಸನಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಈ ಅನುಸೂಚಿಯಡಿ ಸೇರ್ಪಡೆ ಮಾಡಿದ ಶಾಸನಗಳನ್ನು ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳಿಗೆ ವಿರುದ್ಧ ಎಂಬ ಕಾರಣಕ್ಕೆ ಅನೂರ್ಜಿತಗೊಳಿಸಲಾಗದು. ಈ ಮೀಸಲಾತಿ ಹೆಚ್ಚಳ ಕುರಿತ ಮಸೂದೆಗೆ ಶಾಸನಸಭೆಗಳ ಅನುಮೋದನೆ ಪಡೆದು ಕಾಯ್ದೆ ರೂಪಿಸಿದರೆ ಅದು ನ್ಯಾಯಾಂಗದ ಪರಿಮಿತಿಯೊಳಗೆ ಬಾರದು ಎಂಬ ರಕ್ಷಣೆಯನ್ನು ಈ ತಿದ್ದುಪಡಿ ನೀಡಿದೆ.

* ಮಂಡಲ್ ವರದಿಯ ಶಿಫಾರಸ್ಸುಗಳನ್ನು ಆಧರಿಸಿ ಕೇಂದ್ರ ಸರ್ಕಾರವು 1990 ರಲ್ಲಿ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿಯನ್ನು ನೀಡಿತು. ಇದನ್ನು ಪ್ರಶ್ನಿಸಲಾದ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ತೀರ್ಪು ನೀಡಿದ ಒಂಬತ್ತು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠ ಒಟ್ಟು ಮೀಸಲಾತಿ ಶೇ 50ನ್ನು ಮೀರಬಾರದು ಎಂಬ ನಿಬಂಧನೆ ವಿಧಿಸಿದೆ. ‘ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಎಂದರೇನು?’ ಎಂದು ಈ ತೀರ್ಪು(ಕಂಡಿಕೆ 250) ವ್ಯಾಖ್ಯಾನಿಸಿದೆ. ‘ ಪ್ರಜೆಗಳಲ್ಲಿ ಹಿಂದುಳಿದ ವರ್ಗದವರನ್ನು ದೇಶದ ಇತರ ಜನರೊಂದಿಗೆ ಸಮಾನತೆಯ ಹಂತಕ್ಕೆ ಮೇಲೆ ತರುವುದಕ್ಕಾಗಿ, ತಾನು ಅವಶ್ಯವೆಂದು ಭಾವಿಸಿದಂಥ ಸಕಾರಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಅವಕಾಶವನ್ನು ಸಂವಿಧಾನವು ಪ್ರಭುತ್ವಕ್ಕೆ (ಸರ್ಕಾರ) ನೀಡಿದೆ. ಈ ಹಿಂದೆ ಅರ್ಹತೆಯನ್ನು ಆಧರಿಸಿದ ಮುಕ್ತ ಆಯ್ಕೆಗಳಲ್ಲಿ ಸಮರ್ಥವಾಗಿ ಸ್ಪರ್ಧಿಸಲು ಸಾಮರ್ಥ್ಯವಿಲ್ಲದ ಕಾರಣ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳುವ ಅವಕಾಶದಿಂದ ಹಿಂದುಳಿದ ವರ್ಗಗಳವರು ವಂಚಿತರಾಗಿದ್ದರು. ಹೀಗಾಗಿ ಉಳಿದವರನ್ನು ಹೊರತುಪಡಿಸಿ ಮತ್ತು ಅರ್ಹತೆಯ ಅಂಶಗಳನ್ನು ಪರಿಗಣಿಸದೆ ಪ.ಜಾ. ಮತ್ತು ಪ.ಪಂ.ಗಳವರಿಗೆ ಹಾಗೂ ಇತರ ಹಿಂದುಳಿದ ವರ್ಗಗಳವರಿಗೆ ಶಿಕ್ಷಣದಲ್ಲಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಕೆಲವೊಂದು ಸ್ಥಾನಗಳನ್ನು ಮೀಸಲಾಗಿಡುವ ಮುಕ್ತ ಅವಕಾಶವನ್ನು ಸರ್ಕಾರವು ಹೊಂದಿರುತ್ತದೆ’ ಎಂದು ಪ್ರತಿಪಾದಿಸಿದೆ.ಈ ಅಂಶವನ್ನೇ ಮುಂದಿಟ್ಟುಕೊಂಡು, ಪ.ಜಾ ಮತ್ತು ಪ.ಪಂ ಸಮುದಾಯದ ಮೀಸಲಾತಿ ಹೆಚ್ಚಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದೂ ವಾದಿಸುವ ಅವಕಾಶ ಇದೆ.

* ಶೇ 50ರ ಮಿತಿ ಮೀರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಇದಕ್ಕೆ ಸಮಂಜಸವಾದ ವಿವರಣೆಯನ್ನು ನೀಡಿಲ್ಲ. ‘ಸಕಾರಣ ಮಿತಿ’ ಎಂದಷ್ಟೇ ತೀರ್ಪು(ಕಂಡಿಕೆ 810) ಹೇಳಿದೆ. ‘ಶೇ.50 ಎಂಬುದು ನಿಯಮವಾಗಿದ್ದರೂ ಸಹ ಈ ದೇಶದ ಹಾಗೂ ಇಲ್ಲಿನ ಜನರ ಅಪಾರ ವೈವಿಧ್ಯತೆಯಲ್ಲಿ ಅಂತರ್ಗತವಾಗಿರುವ ಕೆಲವೊಂದು ಅಸಾಮಾನ್ಯ ಪರಿಸ್ಥಿತಿಗಳನ್ನು ಪರಿಶೀಲನೆಯಿಂದ ಹೊರಗಿಡುವ ಅಗತ್ಯವಿಲ್ಲ. ಬಹಳ ದೂರದ ಹಾಗೂ ಯಾವುದೋ ಮೂಲೆಗಳಲ್ಲಿ ನೆಲೆಸಿರುವಂಥ ಜನಸಂಖ್ಯೆಯು ರಾಷ್ಟ್ರೀಯ ಜೀವನದ ಮುಖ್ಯ ವಾಹಿನಿಯಿಂದ ಹೊರಗಿರುವ ಸಾಧ್ಯತೆ ಇದೆ. ಇವರಿಗೇ ಕೆಲವು ವಿಶಿಷ್ಟವಾದ ಪರಿಸ್ಥಿತಿಗಳಿರುವುದರಿಂದ ಇದನ್ನು ಸ್ವಲ್ಪ ಭಿನ್ನ ರೀತಿಯಲ್ಲಿ ಪರಿಶೀಲಿಸುವುದು ಅಗತ್ಯ. ಈ ಕಟ್ಟುನಿಟ್ಟಿನ ನಿಯಮದಲ್ಲಿ ಕೆಲವೊಂದು ಸಡಿಲಿಕೆಗಳನ್ನು ತರುವುದು ಅಗತ್ಯವಾಗಬಹುದು. ಹೀಗೆ ಮಾಡುವಾಗ ಬಹಳ ತೀವ್ರವಾದ ಎಚ್ಚರಿಕೆ ವಹಿಸಬೇಕು ಮತ್ತು ಇದನ್ನು ಒಂದು ವಿಶೇಷ ಸಂದರ್ಭವಾಗಿ ಪರಿಗಣಿಸಬೇಕು’ ಎಂದು ಹೇಳಿದೆ.

ಇದನ್ನು ವಿಸ್ತರಿಸುವುದಾದರೆ, ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಸಮುದಾಯಗಳನ್ನು ಭಿನ್ನ ನೆಲೆಯಲ್ಲಿ ಪರಿಗಣಿಸಬೇಕಾಗಿರುವುದರಿಂದ ಶೇ 50ರ ಮಿತಿಯನ್ನು ಸಡಿಲಿಸಬಹುದು. ಅಗತ್ಯ ದತ್ತಾಂಶವನ್ನು ವಿಶ್ಲೇಷಿಸಿ, ಮಿತಿ ಸಡಿಲಗೊಳಿಸುವ ಅಗತ್ಯವನ್ನು ಮನಗಾಣಬೇಕು ಎಂದು ವಾದಿಸಲು ಸಾಧ್ಯವಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ/ಪಂಗಡದ ಮೀಸಲಾತಿಯನ್ನು ನಿಗದಿ ಮಾಡುವಾಗ ಇದ್ದ ಜನಸಂಖ್ಯೆಗೂ, 2011ರ ಜನಗಣತಿಗೂ ಹಾಗೂ 2020ರಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಅಂದಾಜಿಸಿದ ದತ್ತಾಂಶವನ್ನು ಗಮನಿಸಿದರೆ ಈ ಸಮುದಾಯದ ಜನಸಂಖ್ಯೆ ಶೇ 25 ಅನ್ನು ದಾಟುತ್ತದೆ. ಸರ್ಕಾರದ ಸಮರ್ಥನೆಗೆ ಇದೊಂದು ದಾರಿಯೂ ಇದೆ.

*ಸಂವಿಧಾನಕ್ಕೆ 1951ರಲ್ಲಿ ತಿದ್ದುಪಡಿಯ ಪ್ರಕಾರ ಅನುಸೂಚಿ 9 ರಲ್ಲಿ ಸೇರಿಸಲಾದ ಶಾಸನಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದು. ಈ ವಿನಾಯಿತಿ ಬಳಸಿಕೊಂಡ ತಮಿಳುನಾಡು ಸರ್ಕಾರ, 1994ರಲ್ಲಿ ಮೀಸಲಾತಿಯ ಪ್ರಮಾಣವನ್ನು ಶೇ 69ಕ್ಕೆ ಏರಿಸಿದೆ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದರೂ ಈವರೆಗೂ ಇತ್ಯರ್ಥವಾಗಿಲ್ಲ. ರಾಜ್ಯ ಸರ್ಕಾರಕ್ಕೆ ಇದು ಸಹ ಪೂರಕವಾದ ಮಾರ್ಗವಾಗಿದೆ.

* ಐ.ಆರ್. ಕೋಹಿಲೊ ಪ್ರಕರಣದಲ್ಲಿ ತೀರ್ಪು ನೀಡಿದ ಸುಪ್ರೀಂಕೋರ್ಟ್, 1973ರ ಏಪ್ರಿಲ್ 23ರ ಬಳಿಕ 9ನೇ ಅನುಸೂಚಿಗೆ ಸೇರಿಸಿದ ಶಾಸನಗಳಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದರೆ ಅಥವಾ ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾಗಿದ್ದರೆ ನ್ಯಾಯಾಂಗದ ಪರಾಮರ್ಶೆಗೆ ಒಳಪಡುತ್ತವೆ ಎಂದು ಹೇಳಿದೆ. 1973ರಲ್ಲಿ ಕೇಶವಾನಂದ ಭಾರತಿ/ ಸ್ಟೇಟ್ ಆಫ್ ಕೇರಳ ಪ್ರಕರಣದಲ್ಲಿ, ತೀರ್ಪು ನೀಡಿದ ಸುಪ್ರೀಂಕೋರ್ಟ್ ಸಾಮಾಜಿಕ ನ್ಯಾಯವು ಸಂವಿಧಾನದ ಮೂಲ ತತ್ವಗಳಲ್ಲಿ ಒಂದು ಎಂದು ಹೇಳಿದೆ. ಪ.ಜಾ. ಮತ್ತು ಪ.ಪಂ.ಗಳಿಗೆ ನೀಡಿರುವ ಮೀಸಲಾತಿಯು ಸಾಮಾಜಿಕ ನ್ಯಾಯದ ಒಂದು ಭಾಗ. 1951ರಲ್ಲಿ ನೀಡಿರುವ ಶೇಕಡಾವಾರು ಮೀಸಲಾತಿಯೇ ಈಗಲೂ ಮುಂದುವರಿಯುತ್ತಿದೆ. ಆ ಬಳಿಕ ಪ.ಜಾ ಮತ್ತು ಪ.ಪಂಗ ಪಟ್ಟಿಗೆ ಇತರೆ ಜಾತಿಗಳನ್ನು ಸೇರಿಸಲಾಗಿದೆ. ಜನಸಂಖ್ಯೆ ಪ್ರಮಾಣವೂ ಹೆಚ್ಚಳವಾಗಿದೆ. ಸುದೀರ್ಘ ಅವಧಿ ಮೀಸಲಾತಿ ಕೊಟ್ಟರೂ ಅದು ತಲುಪಬೇಕಾದವರಿಗೆ ತಲುಪಿಯೇ ಇಲ್ಲ. ಹೀಗಾಗಿ, ಈ ಸಮುದಾಯದ ಶೈಕ್ಷಣಿಕ, ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಣೆಯಾಗಿಲ್ಲ. ಹೀಗಿರುವಾಗ, ಮೀಸಲಾತಿ ಪ್ರಮಾಣದ ಹೆಚ್ಚಳವು, ಸಾಮಾಜಿಕ ನ್ಯಾಯದ ಅನುಷ್ಠಾನವಾಗುತ್ತದೆಯೇ ಹೊರತು ಮೂಲಭೂತ ಹಕ್ಕುಗಳ ಉಲ್ಲಂಘನೆ ಅಥವಾ ಸಂವಿಧಾನ ಮೂಲ ತತ್ವಕ್ಕೆ ವಿರುದ್ಧವಾಗುವುದಿಲ್ಲ. ಹೆಚ್ಚಿಸಲಾದ ಮೀಸಲಾತಿ ಪ್ರಮಾಣವನ್ನು ಸಂರಕ್ಷಿಸಲು 9ನೇ ಅನುಸೂಚಿಯಲ್ಲಿ ಸೇರಿಸಿ, ನ್ಯಾಯದ ಮಾರ್ಗವನ್ನು ಎತ್ತಿ ಹಿಡಿಯುವ ಅವಕಾಶ ಸರ್ಕಾರಕ್ಕೆ ಇದ್ದೇ ಇದೆ.

* ಕೇಂದ್ರ ಸರ್ಕಾರವು 2019ರಲ್ಲಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದು ಇಡಬ್ಲ್ಯೂಎಸ್‌ಗೆ ಶೇ 10ರ ಮೀಸಲಾತಿ ಒದಗಿಸಿದೆ. ಒಟ್ಟು ಮೀಸಲಾತಿ ಪ್ರಮಾಣ ಶೇ 50 ಅನ್ನು ಮೀರಿ, ಶೇ 59.5ಕ್ಕೆ ತಲುಪಿದೆ. ಶೇ 50ರ ಮೀಸಲಾತಿಯನ್ನು ಕೆಲವು ಸಂದರ್ಭಗಳಲ್ಲಿ ಸಡಿಲಿಸಬಹುದು; ಅಗತ್ಯ ದತ್ತಾಂಶವನ್ನು ವಿಶ್ಲೇಷಿಸಿ ಮಿತಿ ಸಡಿಲಗೊಳಿಸಬಹುದು ಎಂದು ಹೇಳಿತ್ತು. ಇಡಬ್ಲ್ಯೂಎಸ್‌ಗೆ ಮೀಸಲಾತಿ ನೀಡುವಾಗ ದತ್ತಾಂಶವೂ ಇರಲಿಲ್ಲ. ಈ ಸಮುದಾಯ ರಾಷ್ಟ್ರೀಯ ಮುಖ್ಯವಾಹಿನಿಯಿಂದ ಹೊರಗೂ ಇರಲಿಲ್ಲ. ಹಾಗಿದ್ದರೂ ತಿದ್ದುಪಡಿಯನ್ನು ಕೋರ್ಟ್ ಎತ್ತಿ ಹಿಡಿದಿದೆ. ಈ ವಿಷಯದಲ್ಲಿ ಭಿನ್ನಮತದ ತೀರ್ಪು ನೀಡಿದ ನ್ಯಾ. ರವೀಂದ್ರ ಭಟ್ ಅವರು, ‘ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಮೀಸಲಾತಿಯು ‘ಉಚಿತ ಪಾಸ್’ ನೀಡುವ ರೀತಿಯದ್ದಲ್ಲ. ಅದು ನಷ್ಟ ಭರ್ತಿ ಮತ್ತು ಪರಿಹಾರ ರೂಪದ ವ್ಯವಸ್ಥೆಯಾಗಿದೆ’ ಎಂದಿದ್ದಾರೆ. ಇದು ಕೂಡ ಸರ್ಕಾರದ ತನ್ನ ನೆರವಿನ ಅಸ್ತ್ರವಾಗಬಹುದು. ಕೇಂದ್ರ ಕೊಡಮಾಡಿರುವ ಇಡಬ್ಲ್ಯೂಎಸ್ ಮೀಸಲಾತಿ ಹಾಗೂ ಸುಪ್ರೀಂಕೋರ್ಟ್ ತೀರ್ಪನ್ನೇ ಚಿಮ್ಮುಹಲಗೆಯಾಗಿ ಬಳಸುವ ಮೂಲಕ ಬಿಜೆಪಿ ಸರ್ಕಾರ ಪ.ಜಾ ಮತ್ತು ಪ.ಪಂ ಮೀಸಲಾತಿ ಹೆಚ್ಚಳದ ಪ್ರಮಾಣವನ್ನು ಸಮರ್ಥಿಸಿಕೊಳ್ಳಬಹುದು.

------------

‘ರಾಜಕೀಯ ಗಿಮಿಕ್ ಅಲ್ಲ, ಬದ್ಧತೆ’

ಬಹಳ ವರ್ಷಗಳಿಂದ ಇದ್ದ ಬೇಡಿಕೆ ಈಡೇರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮುದಾಯಗಳ ಬಗ್ಗೆ ಬದ್ಧತೆ ಇಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ. ಏಕಾಏಕಿ ಈ ನಿರ್ಧಾರ ಕೈಗೊಂಡಿಲ್ಲ. ಎಲ್ಲ ಆಯಾಮಗಳನ್ನೂ ಅವರು ಅವಲೋಕಿಸಿದ್ದಾರೆ. ಜಾರಿಗೊಳಿಸುವ ಮುನ್ನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸಕರ ಪ್ರತ್ಯೇಕ ಸಭೆ ಕರೆದು ಅಭಿಪ್ರಾಯಗಳನ್ನು ಪಡೆದರು. ಕಾನೂನಿನ ತೊಡಕು ಎದುರಾಗುವ ಬಗ್ಗೆ ಕೆಲವರು ಅನುಮಾನವನ್ನೂ ವ್ಯಕ್ತಪಡಿಸಿದರು. ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇರುವುದರಿಂದ ಕಾನೂನಿನ ತೊಡಕುನಿವಾರಿಸುವ ಕೆಲಸ ಮಾಡಲಾಗುವುದು ಎಂಬ ಭರವಸೆಯನ್ನು ಅವರು ನೀಡಿದರು. ಇದು ಒಂದೇ ರಾತ್ರಿಯಲ್ಲಿ ಆಗುವ ಕೆಲಸವಲ್ಲ, ಸಮಯ ಬೇಕಾಗುತ್ತದೆ. ಹೆಚ್ಚಿಸಿರುವ ಮೀಸಲಾತಿ ಪ್ರಮಾಣವನ್ನು ಕಾಪಾಡಬೇಕು ಎಂಬ ಇಚ್ಛಾಶಕ್ತಿ ಮುಖ್ಯಮಂತ್ರಿ ಅವರಿಗೆ ಇದೆ. ಆದ್ದರಿಂದ ಇದು ಚುನಾವಣೆ ಗಿಮಿಕ್ ಅಲ್ಲ, ಈ ಸಮುದಾಯಗಳ ಬಗ್ಗೆ ಅವರಿಗೆ ಇರುವ ಬದ್ಧತೆ.

ಬಿ.ಹರ್ಷವರ್ಧನ್,ನಂಜನಗೂಡು ಶಾಸಕ

‘ಮುಂದೆ ಸಮಸ್ಯೆಯಾದರೆ ಯಾರು ಹೊಣೆ?’

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಜಾರಿಗೆ ಸುಗ್ರೀವಾಜ್ಞೆಯ ಅಗತ್ಯವೇನಿತ್ತು? ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಿ ಸಂಸತ್‌ನಲ್ಲಿ ಮಂಡಿಸಬೇಕಿತ್ತು. ಆಗ ದೊಡ್ಡಮಟ್ಟದ ಚರ್ಚೆಯೂ ನಡೆಯುತಿತ್ತು. ರಾಷ್ಟ್ರಪತಿ ಅಂಕಿತ ಬಿದ್ದಿದ್ದರೆ ಮೀಸಲಾತಿ ನ್ಯಾಯಯುತವಾಗಿರುತ್ತಿತ್ತು.ಆ ಪ್ರಕ್ರಿಯೆಯೇ ನಡೆಯದೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿ ಮುಂದೇನಾದರೂ ಸಮಸ್ಯೆಯಾದರೆ ಯಾರು ಹೊಣೆ? ಇದು ಸಾಂವಿಧಾನಿಕ ವಿಚಾರ, ಜೊತೆಗೆ ಸಮುದಾಯದ ಭವಿಷ್ಯದ ಪ್ರಶ್ನೆ ಕೂಡ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿಯನ್ನು ವ್ಯವಸ್ಥಿತ ಪ್ರಕ್ರಿಯೆ ಮೂಲಕವೇ ಜಾರಿ ಮಾಡಿಲ್ಲವೇ? ವಿರೋಧವಿಲ್ಲದೇ ಜಾರಿಯಾಯಿತು. ಹಾಗೆಯೇ, ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳವನ್ನೂ ಇದೇ ಪ್ರಕ್ರಿಯೆಗೆ ಒಳಪಡಿಸಬೇಕಿತ್ತು. ರಾಜ್ಯ ಸರ್ಕಾರ ಇದರ ಮಹತ್ವ ಅರಿತು ಹೆಜ್ಜೆ ಇಡಬೇಕಿತ್ತು. ಕಾನೂನು ಜಾರಿಯೂ ವ್ಯವಸ್ಥಿತವಾಗಿ, ದೂರದೃಷ್ಟಿಯಿಂದ ಕೂಡಿರಬೇಕು. ಹಿಂದಿನ ಸರ್ಕಾರಗಳು ಇಂಥ ವಿಚಾರ ಬಂದಾಗ ವ್ಯವಸ್ಥಿತವಾಗಿ ಮಾಡಿದ್ದವು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಈಗ ಕೊಟ್ಟಿರುವ ಮೀಸಲಾತಿಯೂ ಕಡಿಮೆ. ಮಠಾಧೀಶರು, ಸಮುದಾಯದ ಮುಖಂಡರು ತಿಂಗಳುಗಟ್ಟಲೇ ಪ್ರತಿಭಟನೆ ನಡೆಸಿದ್ದಾರೆ. ವಿಚಾರವಂತಿಕೆಯಿಂದ ನ್ಯಾಯಯುತ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದು ಶೇ 2 ಹಾಗೂ ಶೇ 4ರಷ್ಟು ಮೀಸಲಾತಿಗಾಗಿಯೇ? ಸಮುದಾಯದ ಭವಿಷ್ಯದ ದೃಷ್ಟಿಯಿಂದ ಹೋರಾಟ ಮಾಡಿದರು. ನ್ಯಾಯ ಕೊಡುವುದೇ ಸರ್ಕಾರದ ಚಿಂತನೆಯಾಗಿದ್ದರೆ ಸಮುದಾಯದ ಜನಸಂಖ್ಯೆಯ ಅನುಪಾತ ನೋಡಬೇಕಿತ್ತು. ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿರುವುದರ ಬಗ್ಗೆಯೂ ಸಮುದಾಯದ ಮುಖಂಡರು, ಮಠಾಧೀಶರು ತಮ್ಮ ಅಭಿಪ್ರಾಯ ಹೇಳಬೇಕು.

ರೂಪಕಲಾ ಶಶಿಧರ್‌,ಶಾಸಕಿ,ಕೆಜಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT