ಶನಿವಾರ, ಜೂನ್ 12, 2021
28 °C

‘ಆಮ್‌ ಆದ್ಮಿ ಪಕ್ಷದಿಂದ ರಾಜಕಾರಣಕ್ಕೆ ಹೊಸ ಬೆಳಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಭಾರತದ ರಾಜಕಾರಣದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಆಮ್‌ ಆದ್ಮಿ ಪಕ್ಷದಿಂದ ಇಲ್ಲಿನ ರಾಜಕಾರಣಕ್ಕೆ ಹೊಸ ಬೆಳಕು ಮೂಡಿ ಬಂದಿದೆ ಎಂದು ಆಮ್ ಆದ್ಮಿ ಪಕ್ಷದ ಸ್ಥಳೀಯ ಪ್ರಮುಖರಾದ ಪರಮೇಶ್ವರ ದೂಗೂರು ಹೇಳಿದರು.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅಗತ್ಯವಿರುವ ಹಣಕಾಸಿನ ನೆರವು ನೀಡಲು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಶುಕ್ರವಾರ  ಅವರು ಮಾತನಾಡಿದರು. ಭಾರತದ ರಾಜಕಾರಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿರುವ ಏಕೈಕ ಪಕ್ಷ ನಮ್ಮದಾಗಿದೆ ಎಂದರು.ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಆಡಳಿತವನ್ನು ನೋಡಿ ದೇಶದ ಜನ ಬೇಸತ್ತಿದ್ದಾರೆ. ಬಂಡವಾಳಶಾಹಿಗಳ ನೆರವಿನೊಂದಿಗೆ ಚುನಾವಣೆ ನಡೆಸುವ ಹಾಗೂ ಅಧಿಕಾರಕ್ಕೆ ಬಂದ ನಂತರ ಅವರ ಪರವಾಗಿಯೆ ಆಡಳಿತ ನಡೆಸುವ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸೈದ್ಧಾಂತಿಕವಾಗಿ ಯಾವುದೆ ವ್ಯತ್ಯಾಸ ವಿಲ್ಲ. ಬಂಡವಾಳಶಾಹಿಗಳ ಮತ್ತು ರಾಜಕಾರಣಿಗಳ ನಡುವಣ ಅನೈತಿಕ ಮೈತ್ರಿಯನ್ನು ಬಯಲು ಮಾಡುವ ಶಕ್ತಿ ಇರುವುದು ಆಮ್‌ ಆದ್ಮಿ ಪಕ್ಷಕ್ಕೆ ಮಾತ್ರ ಎಂದು ಹೇಳಿದರು.ಆಮ್‌ ಆದ್ಮಿ ಪಕ್ಷದ ಮುಖಂಡ ಅಮೃತರಾಸ್ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಅಭಿವೃದ್ಧಿಯ ಪರ ಮಾತನಾಡುತ್ತಿವೆ. ಆದರೆ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕದೆ ಇದ್ದಲ್ಲಿ ಯಾವುದೆ ಅಭಿವೃದ್ಧಿ ಸಾಧಿಸಿದರೂ ಅದರಿಂದ ಪ್ರಯೋಜನವಿಲ್ಲ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಬಗ್ಗೆ ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿವೆ ಎಂದು ಟೀಕಿಸಿದರು.ಭಾರತದಲ್ಲಿ ಸದ್ಯದ ಮಟ್ಟಿಗೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ರೂಪಿಸುವ ಸಾಮರ್ಥ್ಯ ಇರುವುದು ಆಮ್‌ ಆದ್ಮಿ ಪಕ್ಷಕ್ಕೆ ಮಾತ್ರ. ರಾಜಕೀಯ ರಂಗದ ಶುದ್ಧೀಕರಣಕ್ಕೆ ಆಮ್‌ ಆದ್ಮಿ ಪಣ ತೊಟ್ಟಿದೆ. ಆತ್ಮ ಸಾಕ್ಷಿಯುಳ್ಳ ಮತದಾರರ ಬೆಂಬಲ ನಮ್ಮ ಪಕ್ಷಕ್ಕಿದೆ ಎಂದು ಅವರು ಹೇಳಿದರು.ಆಮ್‌ ಆದ್ಮಿ ಪಕ್ಷದ ಪ್ರಮುಖರಾದ ಎನ್.ಡಿ.ವಸಂತ್‌ಕುಮಾರ್‌, ಮಹಾಬಲೇಶ್‌, ಲಕ್ಷ್ಮಣ್‌ ಕಂಬಳಿಕೊಪ್ಪ ಇನ್ನಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.