ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆಗಿಂತ ಮುನ್ನ ಬಂದ ಮಳೆ

ಹೆಚ್ಚಿದ ಅಂತರ್ಜಲಮಟ್ಟ: ನೀರಿನ ಸಮಸ್ಯೆಗೆ ಪರಿಹಾರ
Last Updated 22 ಮೇ 2018, 9:23 IST
ಅಕ್ಷರ ಗಾತ್ರ

ಪಡುಬಿದ್ರಿ: ಏಪ್ರಿಲ್, ಮೇ ತಿಂಗಳಲ್ಲಿ ನೀರಿಗಾಗಿ ಜನರು ಪರದಾಡುವಂತಹ ಸ್ಥಿತಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈ ಭಾರಿ ಏಪ್ರಿಲ್ ಅಂತ್ಯದಲ್ಲೇ ಮಳೆ ಆರಂಭವಾಗಿರುವುದರಿಂದ ನೀರಿನ ಭವಣೆಯ ಸಮಸ್ಯೆ ಕೊಂಚ ಪರಿಹಾರ ಕಂಡಿದ್ದು, ಕೆಲ ಗ್ರಾಮ ಪಂಚಾಯಿತಿಗಳು ನೀರು ಪೂರೈಕೆ ಸಮಸ್ಯೆಯಿಂದ ನಿರಾಳವೂ ಆಗಿವೆ.

ಕಳೆದ ವರ್ಷ ಮೇ ತಿಂಗಳಿಡಿ ನೀರಿನ ಕೊರತೆಯಿಂದ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಮುಂಜಾಗ್ರತೆ ನಡುವೆಯೂ ಸಾಕಷ್ಟು ತೊಂದರೆ ಅನುಭವಿಸಿದ್ದವು. ಕಾಪು ಪುರಸಭೆ, ಪಡುಬಿದ್ರಿ, ಹೆಜಮಾಡಿ, ಫಲಿಮಾರು, ಮುದರಂಗಡಿ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ಭಾರಿ ನೀರಿನ ಸಮಸ್ಯೆ ಕಂಡುಬಂದಿತ್ತು. ಇದರಿಂದ ಗ್ರಾಮ ಪಂಚಾಯಿತಿಗಳು ಟ್ಯಾಂಕರ್ ನೀರನ್ನು ಸರಬರಾಜು ಮಾಡುತಿದ್ದವು.  ಕೆಲವಡೆ ನಳ್ಳಿ ನೀರನ್ನು ಎರಡು ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತಿತ್ತು.

ಆದರೆ ಈ ಬಾರಿ ನಿರೀಕ್ಷೆಗಿಂತ ಮುಂಚಿತವಾಗಿಯೇ ಮಳೆಯಾಗಿದೆ. ಹೆಚ್ಚಿನೆಡೆ ಕುಡಿಯುವ ನೀರಿನ ಬವಣೆ ನೀಗಿದೆ. ಬಾವಿಗಳ ಅಂತರ್ಜಲ ಮಟ್ಟವೂ ಏರಿಕೆಯಾಗಿವೆ. ಇದರಿಂದ ಜನರೂ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆ ಆರಂಭದಿಂದ ಜನರು ಮುಂಗಾರು ಕೃಷಿ ಕಾರ್ಯಕ್ಕೂ ಚಾಲನೆ ನೀಡಿದ್ದಾರೆ. ಜಾನುವಾರು ಮೇವಿನ ಬರವೂ ನೀಗಿದೆ. ಇದೇ ರೀತಿ ಮಳೆ ಮುಂದುವರಿದರೆ ನೀರಿನ ಬರ ಶೀಘ್ರ ನೀಗಲಿದೆ.

ಫಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಫಟ್ರಾಡೊ ಮಾತನಾಡಿ, ‘ಕಳೆದ ಬಾರಿ ಅಗತ್ಯವಿರುವೆಡೆ ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡಲಾಗಿತ್ತು. ಈ ಬಾರಿ ಏಪ್ರಿಲ್, ಮೇ ತಿಂಗಳಿನಲ್ಲಿಯೇ ಮಳೆಯಾಗಿರುವುದರಿಂದ ನಾವು ನಿರಾಳರಾಗಿದ್ದೇವೆ. ಕಳೆದ ಬಾರಿ ಕೆಲ ಬಾವಿಗಳು ಬತ್ತಿತ್ತು. ಈಗ ಬಾವಿಗಳಲ್ಲಿಯೂ ಅಂತರ್ಜಲ ಏರಿಕೆಯಾಗಿದೆ. ಜನರ ಬೇಡಿಕೆಯಂತೆ ನೀರು ಪೂರೈಕೆ ಮಾಡಲಾಗುತ್ತಿದೆ. ತೋಟಗಳಿದ್ದವರಿಗೂ ಮಳೆಯಿಂದ ನೀರಿನ ಬವಣೆ ನೀಗಿದೆ’ ಎನ್ನುತ್ತಾರೆ.

‘ನಿರೀಕ್ಷೆಗಿಂತ ಮುಂಚಿತವಾಗಿ ಮಳೆ ಬಂದ ಪರಿಣಾಮ ಜನರ ನೀರಿನ ಬೇಡಿಕೆ ಕರೆಗಳು ಕಡಿಮೆಯಾಗಿವೆ. ಕಳೆದ ಬಾರಿ ಅಂತರ್ಜಲ ಮಟ್ಟ ಕುಸಿದು ಮೇ ತಿಂಗಳಿನಲ್ಲಿ ನೀರಿನ ಬೇಡಿಕೆ ಹೆಚ್ಚಾಗಿತ್ತು. ಆನರ ಬೇಡಿಕೆಗನುಗುಣವಾಗಿ ಬದಲಿ ವ್ಯವಸ್ಥೆ ಮಾಡಿ ನೀರು ಪೂರೈಕೆ ಮಾಡಲಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಸಂಪನ್ಮೂಲಗಳನ್ನು ಕ್ರೋಡೀಕರಣ ಮಾಡಿ ನೀರು ಪೂರೈಕೆಗೆ ಸಾಕಷ್ಟು ಮುತುವರ್ಜಿ ವಹಿಸಲಾಗಿದೆ’ ಎಂದು ಮುದರಂಗಡಿ ಗ್ರಾಮ ಪಂಚಾಯ್ತಿ ಪಿಡಿಒ ಅನಿಲ್ ಶೆಟ್ಟಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT