ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

7
ಏಳು ತಿಂಗಳ ನಂತರ ಜಲಾಶಯಕ್ಕೆ ಬಂದ ನೀರು; ಏಳು ವರ್ಷದ ನಂತರ ದಾಖಲೆ; 428 ಕ್ಯುಸೆಕ್‌ ಹರಿವು

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

Published:
Updated:
ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

ಆಲಮಟ್ಟಿ: ಕಳೆದ ವರ್ಷ ಅಕ್ಟೋಬರ್‌ನಿಂದ ಬಂದಾಗಿದ್ದ ಆಲಮಟ್ಟಿ ಜಲಾಶಯದ ಒಳಹರಿವು ಭಾನುವಾರ ರಾತ್ರಿಯಿಂದ ಆರಂಭಗೊಂಡಿದೆ. 2011ರಲ್ಲಿ ಮೇ 30ರಂದು ಒಳಹರಿವು ಆರಂಭವಾಗಿದ್ದು ಬಿಟ್ಟರೆ, ನಂತರದ ವರ್ಷಗಳಲ್ಲಿ ಜೂನ್‌ 14ರ ನಂತರವೇ ಪ್ರಾರಂಭಗೊಂಡಿತ್ತು.

ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯ ಕಾರಣ ಈ ಒಳಹರಿವು ಆರಂಭಗೊಂಡಿದ್ದು, ಇನ್ನೂ ಮಹಾರಾಷ್ಟ್ರದ ಜಲಾಶಯದಿಂದ ನೀರು ಹರಿದು ಬಿಟ್ಟಿಲ್ಲ. ಸೋಮವಾರ ಆಲಮಟ್ಟಿ ಜಲಾಶಯಕ್ಕೆ 428 ಕ್ಯುಸೆಕ್‌ ನೀರು ಹರಿದು ಬರಲಾರಂಭಿಸಿದೆ. ಮಳೆ ಮುಂದುವರಿದರೆ ಒಳಹರಿವು ಹೆಚ್ಚಾಗಲಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಕಳೆದ ವರ್ಷ (2017) ರಲ್ಲಿ ಜೂನ್‌ 19ರಿಂದ ಜಲಾಶಯದ ಒಳಹರಿವು ಆರಂಭಗೊಂಡಿತ್ತು. ಆಗ 1,875 ಕ್ಯುಸೆಕ್‌ ಒಳಹರಿವು ಇತ್ತು. ಈ ಬಾರಿ ಕಾಲುವೆಗೆ ವಾರಾಬಂಧಿ ಪ್ರಕಾರ ನೀರು ಹರಿಸಿದ್ದರಿಂದ ಹಾಗೂ ನೀರು ನಿರ್ವಹಣೆ ಕಟ್ಟುನಿಟ್ಟಾಗಿ ಜಾರಿಗೆ ತಂದ ಕಾರಣ ಜೂನ್ ಬಂದರೂ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿರಲಿಲ್ಲ. ಈಗ ಒಳಹರಿವು ಆರಂಭಗೊಂಡಿದೆ.

519.60 ಮೀ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಸೋಮವಾರ 508.11 ಮೀ ವರೆಗೆ ನೀರು ಇತ್ತು. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ 21.20 ಟಿಎಂಸಿ ಅಡಿ ನೀರು ಇದೆ. 428 ಕ್ಯುಸೆಕ್‌ ಒಳಹರಿವು ಇದ್ದು, ಹೊರಹರಿವು ಇನ್ನೂ ಆರಂಭಗೊಂಡಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಬಿ. ಬಿಜಾಪುರ ತಿಳಿಸಿದರು. ಕಳೆದ ವರ್ಷ ಇದೇ ದಿನದಂದು ಆಲಮಟ್ಟಿ ಜಲಾಶಯದಲ್ಲಿ 503.70 ಮೀ ವರೆಗೆ ನೀರು ಇತ್ತು.

ನೀರು ನಿರ್ವಹಣೆ ಮುಂಬೈನಲ್ಲಿ ಸಭೆ: ಸದ್ಯ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದು ಪ್ರವಾಹ ಭೀತಿ ಎದುರಾಗುತ್ತದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಕೃಷ್ಣಾ ನದಿ ಪಾತ್ರದ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರದ ನೀರಾವರಿ

ಅಧಿಕಾರಿಗಳ ಅಂತರ್ ರಾಜ್ಯ ಅಧಿಕಾರಿಗಳ ಸಭೆಯೂ ಕಳೆದ ವಾರ ಮುಂಬೈನಲ್ಲಿ ನಡೆದಿದೆ. ಕೃಷ್ಣಾ ನದಿಯಲ್ಲಿ ಯಾವುದೇ ರೀತಿಯ ಪ್ರವಾಹ ಸ್ಥಿತಿ ಉಂಟಾಗದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಚರ್ಚೆಯೂ ನಡೆದಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಆಲಮಟ್ಟಿ ಅಣೆಕಟ್ಟು ವಲಯದ ಪ್ರಭಾರಿ ಮುಖ್ಯ ಎಂಜಿನಿಯರ್‌ ಎಸ್‌.ಎಚ್‌. ಮಂಜಪ್ಪ ತಿಳಿಸಿದರು.

ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಯಾವುದೇ ಪ್ರವಾಹವಾಗದಂತೆ ಪ್ರತಿ ವರ್ಷವೂ ನೀರು ಬರುವ ಅವಧಿಯಲ್ಲಿ ದಿನದ 24 ಗಂಟೆಯೂ ಒಳಹರಿವಿನ ಮೇಲೆ ನಿಗಾ ಇಟ್ಟು ಪೂರಕ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಚಂದ್ರಶೇಖರ ಕೋಳೇಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry