ಬೆಟ್ಟ ಅಗೆದರೂ ಸಿಗದ ಆನೆ ದಂತ!

7
ಹೆಚ್ಚುವರಿ ಎಸ್‌ಪಿ ತನಿಖೆ ಮಾಡಿದ ಪ್ರಕರಣ ಮತ್ತೆ ಇನ್‌ಸ್ಪೆಕ್ಟರ್ ಹೆಗಲಿಗೆ

ಬೆಟ್ಟ ಅಗೆದರೂ ಸಿಗದ ಆನೆ ದಂತ!

Published:
Updated:

ಶಿವಮೊಗ್ಗ: ‘ಬೆಟ್ಟ ಅಗೆದು ಇಲಿ ಹಿಡಿದರು’ ಎನ್ನುವುದು ಹಳೆಯ ಗಾದೆ. ಈಗ ಶಿವಮೊಗ್ಗ ಜಿಲ್ಲಾ ಪೊಲೀಸರ ವಿಚಾರದಲ್ಲಿ ‘ಬೆಟ್ಟ ಅಗೆದರೂ ಸಿಗಲಿಲ್ಲ ಆನೆ ದಂತ’ ಎಂದು ಬದಲಿಸಲಾಗಿದೆ ಎನ್ನುವುದು ಸಾರ್ವಜನಿಕರ ಅಭಿಮತ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿದ್ದ ಐತಿಹಾಸಿಕ ಶಿಲ್ಪ ಕಲಾಕೃತಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರು ವರ್ಷದ ಹಿಂದೆ ಕುವೆಂಪು ವಿಶ್ವವಿದ್ಯಾಲಯಕ್ಕೆ ದೇಣಿಗೆ ನೀಡಿದ್ದರು. ಅವರ ಈ ಕ್ರಮಕ್ಕೆ ಹಿಂದೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದರು. ಈ ಸಮಯದಲ್ಲೇ ಆನೆದಂತದ ವಿಚಾರವೂ ಪ್ರಸ್ತಾಪವಾಗಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.

ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಅಭಿನವ್ ಖರೆ ಆನೆದಂತ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಜಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್ ಅವರಿಗೆ ಸೂಚಿಸಿದ್ದರು.

ತನಿಖೆ ಆರಂಭಿಸಿದ್ದ ಮುತ್ತುರಾಜ್ ಜಿಲ್ಲಾ ಪೊಲೀಸ್‌ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಧಿಕಾರಿಗಳು, ಹಿಂದೆ ಕೆಲಸ ಮಾಡಿ, ಈಗ ನಿವೃತ್ತಿಯಾಗಿರುವ ಅಧಿಕಾರಿಗಳು, ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿದ್ದರು. ಆದರೂ, ದಂತ ಕುರಿತು ಯಾವುದೇ ಸುಳಿವು ದೊರೆತಿರಲಿಲ್ಲ. ಹಿಂದೆ ಇಲ್ಲಿ ಕೆಲಸ ಮಾಡಿದ್ದ ಐಪಿಎಸ್ ಅಧಿಕಾರಿಗಳನ್ನೂ ವಿಚಾರಣೆ ಮಾಡಲು ತಮಗೆ ಮಿತಿ ಇರುವ ಕಾರಣ ಅವರು ಒಂದು ವರ್ಷದ ಬಳಿಕ ಅಪೂರ್ಣ ವರದಿಯನ್ನೇ ಎಸ್‌ಪಿಗೆ ಸಲ್ಲಿಸಿದ್ದಾರೆ.

ಎರಡು ದಶಕಗಳ ಹಿಂದೆ ಅರಣ್ಯ ಇಲಾಖೆ ಬೆಲೆಬಾಳುವ ಜೋಡಿ ದಂತವನ್ನು ಜಿಲ್ಲಾ ಪೊಲೀಸರಿಗೆ ಕೊಡುಗೆಯಾಗಿ ನೀಡಿತ್ತು. ಅಂದಿನಿಂದಲೂ ಈ ದಂತಗಳನ್ನು ಎಸ್‌ಪಿ ಕುಳಿತುಕೊಳ್ಳುವ ಕುರ್ಚಿಯ ಹಿಂಭಾಗದ ಗೋಡೆಗೆ ಹಾಕಲಾಗಿತ್ತು.

ಎಸ್‌ಪಿ ಕಚೇರಿಗೆ ಭೇಟಿ ನೀಡಿದವರು ಈ ದಂತಗಳ ಸೌಂದರ್ಯಕ್ಕೆ ಮಾರುಹೋಗುತ್ತಿದ್ದರು. 2011ರಲ್ಲಿ ಕಚೇರಿ ನವೀಕರಣಕ್ಕಾಗಿ ಗೋಡೆಯಿಂದ ತೆಗೆಯಲಾಗಿತ್ತು. ನಂತರ ಈ ಕುರಿತು ಮಾಹಿತಿ ಇಲ್ಲ ಎಂದು ಬಹುತೇಕ ಸಿಬ್ಬಂದಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.

ದಂತ ಇದ್ದ ದಾಖಲೆಯೇ ಇಲ್ಲ:

ತಮಾಷೆಯ ಸಂಗತಿ ಎಂದರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆನೆ ದಂತ ಇತ್ತು. ಅದನ್ನು ಅರಣ್ಯ ಇಲಾಖೆ ನೀಡಿತ್ತು ಎನ್ನುವುದಕ್ಕೆ ಯಾವ ದಾಖಲೆಯೂ ಇಲ್ಲ. ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಜನರ ಹೇಳಿಕೆ ಆಧರಿಸಿ ದಂತ ಇತ್ತು. ಅದು ಕಾಣೆಯಾಗಿದೆ. ಈಗ ಹುಡುಕಬೇಕಿದೆ ಎಂಬ ವಿಚಾರಗಳು ಚರ್ಚೆಯಾಗುತ್ತಿವೆ. ಪೊಲೀಸರೂ ಇಂತಹ ಇತ್ತು, ಇಲ್ಲಗಳ ಸುತ್ತವೇ ತನಿಖೆ ನಡೆಸಿ ಕೈ ಚೆಲ್ಲಿದ್ದಾರೆ.

ಇಲ್ಲದ ದಂತಕ್ಕೆ ಪ್ರಕರಣ ದಾಖಲು:

ದಂತ ಕಾಣೆಯಾದ ವಿಚಾರ ಬೆಳಕಿಗೆ ಬಂದು ವರ್ಷದ ನಂತರ ಅಧಿಕೃತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ಎಸ್‌ಪಿ ಕಚೇರಿ ರಹಸ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಎ.ಬಿ. ಶ್ರೀನಾಥ್ ಅವರು ದೂರು ದಾಖಲಿಸಿದ್ದಾರೆ.

‘ದಂತ ಇರುವ ಕುರಿತು ಯಾವ ದಾಖಲೆಯೂ ಇಲ್ಲದಿರುವಾಗ, ಅದು ಕಾಣೆಯಾಗಿದೆ ಎಂದು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ, ಈಗಾಗಲೇ ಹೆಚ್ಚುವರಿ ಎಸ್‌ಪಿ ತನಿಖೆ ನಡೆಸಿ, ಈ ವಿಚಾರದಲ್ಲಿ ಹಿರಿಯ ಅಧಿಕಾರಿಗಳನ್ನು ವಿಚಾರಣೆ ಮಾಡುವುದು ತಮ್ಮ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ವರದಿ ನೀಡಿದ್ದಾರೆ. ಹೀಗಿದ್ದರೂ ಅವರಿಗಿಂತ ಕೆಳಗಿನ ದರ್ಜೆಯ (ಇನ್‌ಸ್ಪೆಕ್ಟರ್) ಅಧಿಕಾರಿಗೆ ತನಿಖೆಯ ಹೊಣೆ ವಹಿಸಿರುವುದು ನಗೆಪಾಟಲಿನ ಸಂಗತಿ. ಬದಲಿಗೆ ಹಿಂದೆ ಇಲ್ಲಿ ಕೆಲಸ ಮಾಡಿರುವ ಎಲ್ಲ ಐಪಿಎಸ್ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಬೇಕು. ಸರ್ಕಾರಕ್ಕೆ ಈ ಕುರಿತು ಮನವಿ ಮಾಡಬೇಕು’ ಎಂದು ಸಲಹೆ ನೀಡುತ್ತಾರೆ ಹೆಸರು ಹೇಳಲು ಇಚ್ಛಿಸದ ನಿವೃತ್ತ ಅಧಿಕಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry