ಸನಾತನ ಸಂಸ್ಥೆಯೊಂದಿಗೆ ಮನೋಹರ ಸಂಪರ್ಕ

7
ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ; ವಿಜಯಪುರದ ನಂಟಿನ ಶಂಕೆ..?

ಸನಾತನ ಸಂಸ್ಥೆಯೊಂದಿಗೆ ಮನೋಹರ ಸಂಪರ್ಕ

Published:
Updated:
ಸನಾತನ ಸಂಸ್ಥೆಯೊಂದಿಗೆ ಮನೋಹರ ಸಂಪರ್ಕ

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ನಂಟಿನ ಶಂಕೆ ತಳಕು ಹಾಕಿಕೊಂಡಿದೆ. ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ಇಬ್ಬರು ಯುವಕರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿ, ವಿಚಾರಣೆಗೊಳಪಡಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಬಂಧಿತ ಯುವಕರಿಬ್ಬರೂ ಹಿಂದೂ ಪರ ಸಂಘಟನೆಗಳಿಗೆ ಸೇರಿದವರು. ಬಡತನವನ್ನೇ ಹಾಸಿ ಹೊದ್ದಿರುವ ಕುಟುಂಬದವರು. ತಿಕೋಟಾ ತಾಲ್ಲೂಕಿನ ರತ್ನಾಪುರದ ಮನೋಹರ ದುಂಡಪ್ಪ ಯಡವೆ (30) ಎಂಬಾತನನ್ನು ಕೆಲ ದಿನಗಳ ಹಿಂದಷ್ಟೇ ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ಈತ ಮಂಗಳೂರು ಬಳಿಯ ಸುರತ್ಕಲ್‌ನಲ್ಲಿರುವ ಸನಾತನ ಸಂಸ್ಥೆಯೊಟ್ಟಿಗೆ ಗುರುತಿಸಿಕೊಂಡು, ದಶಕದಿಂದಲೂ ಅಲ್ಲಿಯೇ ಇರುತ್ತಿದ್ದ.

ಇದೀಗ ಬಂಧಿತನಾಗಿರುವ ಪರಶುರಾಮ ಅಶೋಕ ವಾಘ್ಮೋರೆ (26) ಸಿಂದಗಿ ಪಟ್ಟಣದವ. ಶ್ರೀರಾಮ ಸೇನೆಯ ಸಕ್ರಿಯ ಕಾರ್ಯಕರ್ತ. ಬಿಕಾಂ ಪದವೀಧರ. ವರ್ಷದಿಂದ ಪಾತ್ರೆ ಅಂಗಡಿಯೊಂದರಲ್ಲಿ ತಂದೆ ಅಶೋಕ ಜತೆ ದುಡಿಯುತ್ತಿದ್ದ.

ಈತನಿಗೆ ಸಹೋದರನೊಬ್ಬನಿದ್ದಾನೆ ಎನ್ನಲಾಗಿದೆ. ‘ಹಿಂದೂಗಳೇ ಹಿಂದೂಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಗೌರಿ ಹತ್ಯೆಯಲ್ಲಿ ಭಾಗಿಯಾಗಿರುವೆ. ಬೈಕ್‌ನ ಹಿಂಬದಿ ಸವಾರ ನಾನಾಗಿದ್ದೆ. ಇದಕ್ಕಾಗಿಯೇ ಸ್ಕೆಚ್‌ ಹಾಕಿದ್ದೆವು. ಸಿ.ಸಿ. ಕ್ಯಾಮೆರಾ ಕಾರ್ಯ ನಿರ್ವಹಣೆಯ ಮಾಹಿತಿ ಸಂಗ್ರಹಿಸಿಯೇ, ಈ ಕೃತ್ಯ ನಡೆಸಿದ್ದೇವೆ ಎಂದು ವಾಘ್ಮೋರೆ ವಿಚಾರಣೆ ಸಂದರ್ಭ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ವಾಘ್ಮೋರೆ ಬಂಧನಕ್ಕೂ ಮುನ್ನ ಎಸ್‌ಐಟಿ ಸಿಂದಗಿಯ ಸುನೀಲ ಅಗಸರ ಎಂಬ ಶ್ರೀರಾಮಸೇನೆಯ ಕಾರ್ಯಕರ್ತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತ್ತು. ಆ ಸಂದರ್ಭ ಸುನೀಲ ಪರಶುರಾಮನ ಬಗ್ಗೆ ಮಾಹಿತಿ ನೀಡಿದ್ದ. ಎಲ್ಲವನ್ನೂ ಖಚಿತ ಪಡಿಸಿಕೊಂಡ ಬಳಿಕವೇ ಬಂಧಿಸ ಲಾಗಿದೆ’ ಎಂದು ತಿಳಿದು ಬಂದಿದೆ.

ಕಮ್ಯುನಲ್‌ ಗೂಂಡಾ: ‘ಪರಶು ರಾಮ ವಾಘ್ಮೋರೆ ಕೋಮುವಾದಿ. ಸಿಂದಗಿ ಪಟ್ಟಣದ ಕಮ್ಯುನಲ್‌ ಗೂಂಡಾ. 2012ರ ಜನವರಿ 1ರಂದು ಮಿನಿ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಆರೋಪಿಗಳಲ್ಲಿ ನಾಲ್ಕನೇಯವ. ಈ ಪ್ರಕರಣ ಹೊರತುಪಡಿಸಿದರೇ ಈತನ ಮೇಲೆ ಇದೂವರೆಗೂ ಬೇರೆ ಇನ್ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೋಹರ ಯಡವೆ ಊರು ತೊರೆದು ದಶಕ ಕಳೆದಿದೆ. ತನ್ನ ಸಂಬಂಧಿ ಸೀತಾರಾಂ ಯಡವೆ ಮೂಲಕ ಸುರತ್ಕಲ್‌ನ ಸನಾತನ ಸಂಸ್ಥೆಯ ಸಂಪರ್ಕ ಹೊಂದಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‌ಗೌರಿ ಹತ್ಯೆಗೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ವಿಜಯಪುರ ಜಿಲ್ಲೆಯ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಮಾಹಿತಿಯನ್ನು ಗೋಪ್ಯವಾಗಿಟ್ಟುಕೊಂಡಿದ್ದಾರೆ

ನಿಕ್ಕಂ ಪ್ರಕಾಶ್‌ ಅಮೃತ್, ಎಸ್‌ಪಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry