ಸಂಗೀತ ಕಾರಂಜಿಗೆ ಇನ್ನು ಆರ್‌ಜಿಬಿ ಬಣ್ಣದ ಮೆರಗು...

7

ಸಂಗೀತ ಕಾರಂಜಿಗೆ ಇನ್ನು ಆರ್‌ಜಿಬಿ ಬಣ್ಣದ ಮೆರಗು...

Published:
Updated:

ನಿಡಗುಂದಿ: ಬಳ್ಳಿಯ ಲತೆಯಂತೆ ಬಳಕುವ ಸಂಗೀತದ ನಿನಾದಕ್ಕೆ ಬಳಕುವ ಕಾರಂಜಿ, ಕೆಂಪು, ಹಸಿರು, ನೀಲಿ ಬಣ್ಣಗಳ (ಆರ್‌ಜಿಬಿ) ಸಂಯೋಜನೆಯಿಂದ ಉತ್ಪತ್ತಿಯಾಗುವ ಹತ್ತಾರು ವರ್ಣಗಳು. ಇದು ಆಲಮಟ್ಟಿಯ ನಯನ ಮನೋಹರ ಸಂಗೀತ ಕಾರಂಜಿಯ ಒಂದು ನೋಟ.

2009ರಲ್ಲಿಯೇ ಆರಂಭಗೊಂಡಿದ್ದ ಸಂಗೀತ ಕಾರಂಜಿಯ ತಂತ್ರಜ್ಞಾನ ಹಳೆಯದಾಗಿತ್ತು. ನಾಲ್ಕು ತಿಂಗಳ ದುರಸ್ತಿಯ ನಂತರ ಈಗ ಸಂಪೂರ್ಣ ಆಧುನೀಕರಣಗೊಂಡಿದೆ, ಅದಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಕತ್ತಲಾದಂತೆ ಸಂಜೆ 7.30ಕ್ಕೆ ಆರಂಭವಾಗುವ ಸಂಗೀತ ನಾದ ನಿನಾದಕ್ಕೆ ಕುಣಿ ಕುಣಿದು ಮನತಣಿಸಿ, ಮಣಿಸುವ ಕಾರಂಜಿಯ ಬಣ್ಣ ವೈವಿಧ್ಯ, ಥಳುಕು ಬಳುಕು ಕಣ್ಮುಂದೆ ನಿಲ್ಲುತ್ತದೆ. ಸಂಪೂರ್ಣ ಡಾಲ್ಬಿ ಧ್ವನಿವರ್ಧಕದಲ್ಲಿ ಸಂಗೀತ ಕಾರಂಜಿಯ ಹಾಡುಗಳ ನಿನಾನ ಮೈ ಜುಮ್ಮೆನ್ನುತ್ತಿದೆ. ಸದ್ಯ ಪ್ರಾಯೋಗಿಕವಾಗಿ ಐದು ಹಾಡುಗಳ ಒಂದು ಥೀಮ್ ಆರಂಭಗೊಂಡಿದ್ದು, ನಾಲ್ಕು ಕನ್ನಡ ಹಾಗೂ ಒಂದು ಹಿಂದಿ ಹಾಡು ಇವೆ. ಗೊಂಬೆ ಹೇಳತೈತಿ ಎನ್ನುವ ಹಾಡಿಗಂತೂ ಸಂಗೀತದ ಕಾರಂಜಿ ಪುಟಿದೇಳುವ ಜೊತೆ ಜೊತೆಗೆ ಜನರು ಕುಣಿದು ಕುಪ್ಪಳಿಸುವುದು ಇಲ್ಲಿ ಸಾಮಾನ್ಯ.

ಸುಮಾರು 30 ಅಡಿಗೂ ಎತ್ತರದವರೆಗೆ ಜಿಗಿಯುವ ಕಾರಂಜಿಯ ಬಣ್ಣ ಮನಸೂರೆಗೊಳಿಸುತ್ತದೆ.₹ 1.8 ಕೋಟಿ ವೆಚ್ಚದಲ್ಲಿ, ಆಲಮಟ್ಟಿ ಸಂಗೀತ ನೃತ್ಯ ಕಾರಂಜಿಗೆ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದೆ. ಪಾದಚಾರಿ ಪೆಡೆಲ್ ಲೈಟ್‌ಗಳು: ವೃತ್ತಾಕಾರದ ಒಳಾಂಗಣ ಕ್ರೀಡಾಂಗಣದಂತಿರುವ ಸಂಗೀತ ಕಾರಂಜಿಯನ್ನು ಜನ ಕುಳಿತು ವೀಕ್ಷಿಸುವ ಸ್ಟೇಡಿಯಂನಲ್ಲಿಯೂ ಕೆಳಮಟ್ಟದಲ್ಲಿ ಪಾದಚಾರಿ ರಸ್ತೆಯಲ್ಲಿಯೂ ಪೆಡೆಲ್ ಲೈಟ್‌ ಅಳವಡಿಸಲಾಗಿದ್ದು, ಕಾರಂಜಿಗೆ ಮೆರಗು ತಂದಿದೆ.

ಡಾಲ್ಬಿ ಧ್ವನಿವರ್ಧಕ::

ಧ್ವನಿ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಡಾಲ್ಬಿ ಸೌಂಡ್ ಸಿಸ್ಟಮ್ ಅಳವಡಿಸಲಾಗುತ್ತಿದ್ದು, ಇಡೀ ಸಂಗೀತ ಕಾರಂಜಿಯ 16 ಕಡೆ ಕೂಡಿಸಲಾಗಿರುವ ಸೌಂಡ್ ಸಿಸ್ಟಮ್ ಡಿಜಿಟಲೀಕರಣಗೊಳಿಸಿ ಡಾಲ್ಬಿ ಧ್ವನಿ ವ್ಯವಸ್ಥೆ ಕಲ್ಪಿಸಲಾಗಿದೆ.

ಹಾಡುಗಳ ಬದಲಾವಣೆ: ಮೊದಲಿದ್ದ ಹಾಡುಗಳನ್ನು ಬದಲಾಯಿಸಲಾಗಿದ್ದು, ಐದು ಹಾಡುಗಳ ಒಂದು ಸೆಟ್ ಮಾಡಲಾಗಿದ್ದು, ಅಂತಹ ಐದು ಸೆಟ್ ಹಾಡುಗಳ (25 ಹಾಡುಗಳ) ಡಿಜಿಟಲೀಕರಣ ಮಾಡಲಾಗಿದೆ. ಆ ಹಾಡಿಗೆ ತಕ್ಕಂತೆ ಇಲ್ಲಿಯ ಕಾರಂಜಿಗಳು ನೃತ್ಯ ಮಾಡಲಿವೆ.

ಐದು ಹಾಡುಗಳಲ್ಲಿ ಒಂದು ಹಾಡು ಕನ್ನಡ ನಾಡು ನುಡಿಯ ಕುರಿತು ಇರಲಿದೆ. ಮೂರು ಹಾಡುಗಳು ಕನ್ನಡ ಚಲನಚಿತ್ರ ಹಾಗೂ ಒಂದು ಹಿಂದಿ ಹಾಡು ಇರಲಿವೆ ಎಂಬುದು ಇಲ್ಲಿಯ ಅಧಿಕಾರಿಗಳ ಹೇಳಿಕೆ.

ಗಾಳಿಯ ಅಬ್ಬರ ಜಾಸ್ತಿ: ಜಲಾಶಯದ ಕೆಳಭಾಗದಲ್ಲಿಯೇ ಸಂಗೀತ ಕಾರಂಜಿ ಇದೆ. ಜಲಾಶಯದ ಮೇಲ್ಭಾಗದಿಂದ ಬರುವ ಗಾಳಿ ರಭಸದಿಂದ ಸಂಗೀತ ಕಾರಂಜಿಯ ಸ್ಟೇಡಿಯಂಗೆ ನುಗ್ಗುತ್ತದೆ. ಈ ಗಾಳಿಯ ಅಬ್ಬರದಿಂದ ಕಾರಂಜಿಯ ನೀರು ವೀಕ್ಷಕರ ಮೇಲೆ ನೀರಿನ ಹನಿ ಸಿಡಿಯುತ್ತದೆ. ಗಾಳಿಯ ರಭಸ ಹೆಚ್ಚಿದ್ದರೆ ಕಾರಂಜಿ ಒಂದೆಡೆ ವಾಲುತ್ತದೆ ಎಂಬುದೇ ಈ ಸಂಗೀತ ಕಾರಂಜಿಗೆ ಇರುವ ಕಪ್ಪು ಚುಕ್ಕೆ.

ಸದ್ಯಕ್ಕಂತೂ ಧ್ವನಿ ವರ್ಧಕ, ಬಣ್ಣಗಳ ಸಂಯೋಜನೆ, ಹಾಡಿಗೆ ತಕ್ಕಂತೆಯೆ ಬಳಕುವ ಕಾರಂಜಿ ಆಲಮಟ್ಟಿಯ ಸಂಗೀತ ಕಾರಂಜಿಗೆ ಮೆರಗು ನೀಡಿದೆ.

ಚಂದ್ರಶೇಖರ ಕೋಳೇಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry