ಶುಂಠಿಗೆ ಕಾಡುತ್ತಿದೆ ಮಹಾಕಾಳಿ ರೋಗ;ಉತ್ತಮ ಧಾರಣೆ ಸಿಕ್ಕರೆ ರೈತ ಸಂಕಷ್ಟದಿಂದ ಪಾರು

7
ಬೆಲೆಯ ದಾಖಲೆ ಹಂತ ತಲುಪಿದರೂ ಅಚ್ಚರಿ ಇಲ್ಲ...

ಶುಂಠಿಗೆ ಕಾಡುತ್ತಿದೆ ಮಹಾಕಾಳಿ ರೋಗ;ಉತ್ತಮ ಧಾರಣೆ ಸಿಕ್ಕರೆ ರೈತ ಸಂಕಷ್ಟದಿಂದ ಪಾರು

Published:
Updated:

ತೀರ್ಥಹಳ್ಳಿ: ಶುಂಠಿ ಬೆಳೆಗೆ ಮಹಾಕಾಳಿ ಕೊಳೆ ರೋಗ ಬಾಧಿಸಿದ್ದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಬೆಳೆ ಉಳಿಸಿಕೊಂಡವರಿಗೆ ಮಾತ್ರ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ.

ಮಲೆನಾಡು ಭಾಗದಲ್ಲಿ ಸುಮಾರು ಮೂರು ದಶಕಗಳಿಂದ ನೆಲೆ ಕಂಡುಕೊಂಡಿರುವ ಶುಂಠಿ ಬೆಳೆ ವಿಪರೀತ ಮಳೆ, ಪ್ರಕೃತಿ ವಿಕೋಪದಿಂದಾಗಿ ಹಲವು ರೋಗಗಳಿಗೆ ತುತ್ತಾಗಿದೆ. ಉತ್ಪಾದನೆ ಕಡಿಮೆ ಇರುವುದರಿಂದ ಬೆಳೆ ಉಳಿಸಿಕೊಂಡ ರೈತರಲ್ಲಿ ಏರುತ್ತಿರುವ ಬೆಲೆ ಸಂತಸಕ್ಕೆ ಕಾರಣವಾಗಿದೆ.

ಕೇರಳ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಮಂಗಳೂರು ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಮಹಾಕಾಳಿ ಕೊಳೆ ರೋಗಕ್ಕೆ ಶುಂಠಿ ತುತ್ತಾಗಿದೆ. ಸದ್ಯದ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಕಡೆಗೆ ಮುಖಮಾಡಿರುವ ಶುಂಠಿ ಗರಿಷ್ಠ ಬೆಲೆಯ ದಾಖಲೆ ಹಂತ ತಲುಪಿದರೂ ಅಚ್ಚರಿ ಇಲ್ಲ ಎಂಬ ಅಭಿಪ್ರಾಯವನ್ನು ಶುಂಠಿ ವ್ಯಾಪಾರಸ್ಥರು ವ್ಯಕ್ತಪಡಿಸುತ್ತಾರೆ.

ಮೂರು ವರ್ಷಗಳಿಂದ ಶುಂಠಿ ಬೆಳೆಗೆ ಹೆಚ್ಚಿನ ಧಾರಣೆ ಸಿಕ್ಕಿಲ್ಲ. ನಷ್ಟ ಅನುಭವಿಸಿದ್ದೇ ಹೆಚ್ಚು. ಹೀಗಾಗಿ ಶುಂಠಿ ಬೆಳೆಯದೇ ಇರುವುದೇ ಲೇಸು ಎಂದು ಬಹಳಷ್ಟು ರೈತರು ನಿರ್ಧರಿಸಿದ್ದರು. ಆದರೆ, ಕಳೆದ ಬೇಸಿಗೆಯಲ್ಲಿ ಹಸಿ ಶುಂಠಿ ಕ್ವಿಂಟಲ್ ಒಂದಕ್ಕೆ ಒಮ್ಮಲೇ ₹ 8 ಸಾವಿರಕ್ಕೆ ಏರಿದ್ದು ರೈತರ ಮೊಗದಲ್ಲಿ ನಗು ಮೂಡಿಸಲು ಕಾರಣವಾಗಿತ್ತು. ಈ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ಒಂದೇ ವಾರದಲ್ಲಿ ₹ 3 ಸಾವಿರಕ್ಕೆ ಬೆಲೆ ಇಳಿದ ಶುಂಠಿ ಬೆಲೆ ಮತ್ತೆ ಮೇಲೇರಿರಲಿಲ್ಲ.

ಕೊಳೆ ರೋಗಕ್ಕೆ ತುತ್ತಾದ ಶುಂಠಿಯನ್ನು ರೈತರು ಕಿತ್ತು ಮಾರಾಟಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೊಳೆ ರೋಗದ ಶುಂಠಿಯನ್ನು ಖರೀದಿದಾರರು ಶುಂಠಿಯ ಸದ್ಯದ ಗುಣಮಟ್ಟ ಆಧರಿಸಿ ಪ್ರತಿ ಕ್ವಿಂಟಲ್ ಗೆ ₹ 2 ಸಾವಿರದಿಂದ ₹ 3 ಸಾವಿರ ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ. ಶುಂಠಿ ಬೆಲೆ ಕಡಿಮೆಯಾಗಿದ್ದರಿಂದ ಹಿಂದಿನ ಸಾಲಿನಲ್ಲಿ ಬೆಳೆದ ಶುಂಠಿಯನ್ನು ಬಹುತೇಕ ರೈತರು ಕಿತ್ತು ಮಾರಾಟ ಮಾಡಿರಲಿಲ್ಲ. ಒಣ ಶುಂಠಿ ಕಳೆದ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಗೆ ₹ 9 ಸಾವಿರದಿಂದ 10 ಸಾವಿರ ಇದ್ದಿದ್ದು, ಈಗ ₹ 18 ಸಾವಿರದ ಗಡಿ ದಾಟಿದೆ.

ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಶುಂಠಿಗೆ ಬಹಳ ಬೇಡಿಕೆ ಇದ್ದು, ಪೂರೈಕೆ ಪ್ರಮಾಣ ಕಡಿಮೆ ಇದೆ. ಪ್ರಮುಖ ಮಾರುಕಟ್ಟೆ ಹೊಂದಿರುವ ದೆಹಲಿ, ಪುಣೆಯಲ್ಲಿ ಶುಂಠಿ ಖರೀದಿ ವಹಿವಾಟು ಜೋರಾಗಿರುವುದರಿಂದ ರೈತರ ಪಾಲಿಗೆ ಬೆಳೆ ವರವಾಗಿ ಪರಿಣಮಿಸಲಿದೆ.


ತೀರ್ಥಹಳ್ಳಿ ತಾಲ್ಲೂಕಿನಲ್ಲಿ ರೈತರು ಬೆಳೆದ ಶುಂಠಿ ಬೆಳೆ

ತಾಲ್ಲೂಕು ವ್ಯಾಪ್ತಿಯಲ್ಲಿ 65 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಶುಂಠಿ ಬೆಳೆಯಲಾಗಿದೆ. ಖುಷ್ಕಿ ಪ್ರದೇಶ ಶುಂಠಿ ಬೆಳೆಗೆ ಉತ್ತಮವಾಗಿದ್ದು, ಬಗರ್‌ಹುಕುಂ ಸಾಗುವಳಿಯ 100 ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಶುಂಠಿ ಬೆಳೆಯನ್ನು ರೈತರು ಬೆಳೆದಿದ್ದಾರೆ.

ಗದ್ದೆ ಹಾಗೂ ತಗ್ಗು ಪ್ರದೇಶದಲ್ಲಿ ಬೆಳೆದ ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಖುಷ್ಕಿ ಭೂಮಿಯಲ್ಲಿ ಬೆಳೆದ ಶುಂಠಿಗೆ ರೋಗ ಅಷ್ಟಾಗಿ ಬಾಧಿಸಿಲ್ಲ. ರೋಗ ನಿಯಂತ್ರಣಕ್ಕೆ ಹೆಚ್ಚು ಕ್ರಿಮಿನಾಶಕಗಳನ್ನು ರೈತರು ಬಳಸುತ್ತಾರೆ. ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ ಸಲಹೆ ಪಡೆದರೆ ಸೂಕ್ಷ್ಮ ಪೋಷಕಾಂಶಗಳನ್ನು ಕಡಿಮೆ ಖರ್ಚಿನಲ್ಲಿ ಹೇಗೆ ಮಿಶ್ರಣ ಮಾಡಬೇಕು ಎಂಬ ಮಾಹಿತಿ ಸಿಗಲಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಶುಂಠಿ ಬೆಳೆ ಮಹಾಕಾಳಿ ರೋಗಕ್ಕೆ ತುತ್ತಾಗಿ ನಾಶವಾಗಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಬೇಡಿಕೆ ಹೆಚ್ಚಾಗುವ ಎಲ್ಲಾ ಸೂಚನೆಗಳನ್ನು ಗಮನಿಸುತ್ತಿರುವ ಶುಂಠಿ ಬೆಳೆಗಾರರು ಈ ವರ್ಷ ಶುಂಠಿ ಬೆಳೆ ಬಂಪರ್ ಲಾಭ ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

* ಶುಂಠಿಗೆ ಹೆಚ್ಚು ಬೆಲೆ ಸಿಗುವ ಸಾಧ್ಯತೆ ಇದೆ. ರೈತರು ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ ಬೆಳೆಯನ್ನು ಸಂರಕ್ಷಿಸಿಕೊಳ್ಳಲು ಆಸಕ್ತಿ ತೋರಬೇಕು.
-ಟಿ.ಸಿದ್ದಲಿಂಗೇಶ್ವರ್, ಹಿರಿಯ ತೋಟಗಾರಿಕಾ ನಿರ್ದೇಶಕರು

* ಶುಂಠಿ ಬೆಳೆ ಖರೀದಿಗೆ ವ್ಯಾಪಾರಸ್ಥರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ರೈತರ ಮನೆ ಬಾಗಿಲಿಗೆ ಬಂದು ಶುಂಠಿ ಬೆಳೆಗೆ ಮುಂಗಡ ಹಣ ನೀಡಲು ಮುಂದಾಗುತ್ತಿದ್ದಾರೆ.
-ಹೊಸಕೊಪ್ಪ ಸುಂದರೇಶ್, ರೈತ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !