ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಾಪಣೆಗೆ ಸಚಿವ ಆನಂದ್‌ ಸಿಂಗ್‌ ಸೋದರ ಅಳಿಯನಿಗೆ ಗಡುವು

Last Updated 1 ಸೆಪ್ಟೆಂಬರ್ 2021, 16:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿರುವ ಆರೋಪ ಎದುರಿಸುತ್ತಿರುವ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಸೋದರ ಅಳಿಯ ಸಂದೀಪ್‌ ಸಿಂಗ್‌ ಎರಡು ದಿನದೊಳಗೆ ಬಹಿರಂಗ ಕ್ಷಮೆಯಾಚಿಸಬೇಕೆಂದು ವಾಲ್ಮೀಕಿ ಸಮಾಜ ಗಡುವು ನೀಡಿದೆ.

ಬುಧವಾರ ಸಂಜೆ ನಗರದಲ್ಲಿ ಸಭೆ ಸೇರಿದ ತಾಲ್ಲೂಕು ವಾಲ್ಮೀಕಿ ಸಮಾಜದವರು, ಸಂದೀಪ್‌ ಸಿಂಗ್‌ ಧೋರಣೆಯನ್ನು ಕಟುವಾಗಿ ಖಂಡಿಸಿದರು. ಬಳಿಕ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಪಟ್ಟಣ ಪೊಲೀಸ್‌ ಠಾಣೆಗೆ ತೆರಳಿದರು.

‘ಸಂದೀಪ್‌ ಸಿಂಗ್‌ ಅವರನ್ನು ಕೂಡಲೇ ಠಾಣೆಗೆ ಕರೆಸಿ ಕ್ಷಮೆಯಾಚಿಸಬೇಕು’ ಎಂದು ವಾಲ್ಮೀಕಿ ಸಮಾಜದ ಮುಖಂಡರು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ವಿಶ್ವನಾಥ ರಾವ್‌ ಕುಲಕರ್ಣಿ, ‘ಒಂದಿಷ್ಟು ಕಾಲಾವಕಾಶ ಕೊಡಬೇಕು. ಈ ವಿಷಯವನ್ನು ಅವರಿಗೆ ತಿಳಿಸುತ್ತೇನೆ’ ಎಂದರು.

ಅದಕ್ಕೆ ವಾಲ್ಮೀಕಿ ಸಮಾಜದ ತಾಲ್ಲೂಕು ಉಪಾಧ್ಯಕ್ಷ ನಾಣಿಕೇರಿ ತಿಮ್ಮಯ್ಯ , ‘ನಿಮಗೆ ಸಮಾಜ ಸಂಪೂರ್ಣ ಸಹಕಾರ ನೀಡುತ್ತದೆ. ಎರಡು ದಿನದೊಳಗೆ ಸಂದೀಪ್‌ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ದೂರು ಕೊಟ್ಟು, ಕಾನೂನು ಹೋರಾಟ ನಡೆಸಲಾಗುವುದು. ಅಗತ್ಯಬಿದ್ದರೆ ಹೊಸಪೇಟೆ ಬಂದ್‌ ಕೂಡ ನಡೆಸಲಾಗುವುದು. ಅಲ್ಲಿಯವರೆಗೆ ಸಮಾಜದವರು ಶಾಂತಿಯಿಂದ ಇರಬೇಕು’ ಎಂದು ಹೇಳಿ ನಿರ್ಗಮಿಸಿದರು.

ಆಗಿದ್ದೇನು?:‘ಯಾವುದಾದರೂ ಜಾರಕಿಹೊಳಿ ಆಡಿಯೊ ಅಥವಾ ಸಿ.ಡಿ ರಿಲೀಸ್‌ ಮಾಡ್ರೋ ಇಲ್ಲ ಅಂದರೆ ಟಿ.ವಿ. ಚಾನೆಲ್‌ನವರು ಮೂರನೆ ಅಲೆ ತರ್ತಾರೆ’, ರಮೇಶ ಜಾರಕಿಹೊಳಿ ಅವರ ಛಾಯಾಚಿತ್ರದೊಂದಿಗೆ, ‘ಐ ಸ್ಟ್ಯಾಂಡ್‌ ವಿತ್‌ ರಾಜ್‌ಕುಂದ್ರಾ’, ‘ಅಂದು ನಾನಲ್ಲ, ಇಂದು ಅದು ನಾನೇ ಎಂದು ಒಪ್ಪಿಕೊಂಡ.. ತಂದೆ ಆಗುವ ಖುಷಿಯಲ್ಲಿ ಸತ್ಯ ಒಪ್ಪಿಕೊಂಡ ಜಾರಕಿಹೊಳಿ’ ಹೀಗೆ ವಿವಿಧ ರೀತಿಯ ಬರಹಗಳೊಂದಿಗೆ ಅನೇಕ ತಿಂಗಳಿಂದ ಸಂದೀಪ್‌ ಸಿಂಗ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಇದು ವಾಲ್ಮೀಕಿ ಸಮಾಜದ ಸಿಟ್ಟಿಗೆ ಮುಖ್ಯ ಕಾರಣ.

‘ರಮೇಶ ಜಾರಕಿಹೊಳಿ ಕೂಡ ಬಿಜೆಪಿಯಲ್ಲೇ ಇದ್ದಾರೆ. ಅವರ ಅವಹೇಳನ ಮಾಡುವುದು ಎಷ್ಟರಮಟ್ಟಿಗೆ ಸರಿ. ವಾಲ್ಮೀಕಿ ಸಮಾಜದ ಮತ ಪಡೆದು ಆ ಸಮಾಜಕ್ಕೆ ನೋವುಂಟು ಮಾಡುವುದು ಎಷ್ಟು ಸರಿ?’ ಎಂದು ಸಮಾಜದ ಹಲವು ಮುಖಂಡರು ಸಂದೀಪ್‌ ಸಿಂಗ್‌ ಅವರಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಸಂದೀಪ್‌ ಸಿಂಗ್‌ ಪೋಸ್ಟ್‌ ಮಾಡುವುದು ನಿಲ್ಲಿಸಿರಲಿಲ್ಲ

***

ಈ ವಿಷಯ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ಪ್ರತಿಕ್ರಿಯೆ ಕೊಡುವೆ.

–ಆನಂದ್‌ ಸಿಂಗ್‌, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT