ಬುಧವಾರ, ಮಾರ್ಚ್ 29, 2023
26 °C
ಜ.21ಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಆಗಮನ

‘ವಿಜಯ ಸಂಕಲ್ಪ ಅಭಿಯಾನ’ 21ರಿಂದ: ಚಾಲನೆ ನೀಡಲಿರುವ ಬಿಎಲ್‌ ಸಂತೋಷ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ಉದ್ದೇಶದಿಂದ ಬಿಜೆಪಿ ಹಮ್ಮಿಕೊಂಡಿರುವ ‘ವಿಜಯ ಸಂಕಲ್ಪ ಅಭಿಯಾನ’ಕ್ಕೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಶನಿವಾರ ಚಾಲನೆ ನೀಡಲಿದ್ದಾರೆ.

‘ಬೂತ್‌ ವಿಜಯ ಅಭಿಯಾನದ ಮುಂದುವರಿದ ಭಾಗವಾಗಿ ಜ.21ರಿಂದ 29ರವರೆಗೆ ಇದನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಬೂತ್‌ನ ಮನೆಗಳನ್ನು ತಲುಪುವುದು ಇದರ ಉದ್ದೇಶ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಿಂದಗಿಯಲ್ಲಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಚಿತ್ರದುರ್ಗದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮುಂಬರುವ ಚುನಾವಣೆಯ ತಯಾರಿಯ ಭಾಗವಾಗಿ ಈ ಅಭಿಯಾನ ನಡೆಯುತ್ತಿದೆ. ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್‌, ಫಸಲ್ ಬೀಮಾ, ಕಿಸಾನ್ ಸನ್ಮಾನ, ಕೋವಿಡ್ ಲಸಿಕೆ, ಉಚಿತ ಪಡಿತರ ಹೀಗೆ ಹಲವು ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ. ಬೂತ್‌ ಹಂತದ ಶೇ 60ರಷ್ಟು ಮತಗಳನ್ನು ಸೆಳೆಯುವ ಗುರಿ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ಬೂತ್‌ನ ಸರಾಸರಿ 50 ಕುಟುಂಬ ಬಿಜೆಪಿಯೊಂದಿಗೆ ಸಂಪರ್ಕದಲ್ಲಿವೆ. ಇವನ್ನೂ ಒಳಗೊಂಡಂತೆ ಎಲ್ಲ ಮನೆಗಳನ್ನು ಬಿಜೆಪಿ ಕಾರ್ಯಕರ್ತರು ತಲುಪಲಿದ್ದಾರೆ. ‘ಈ ಬಾರಿ ಬಿಜೆಪಿ’, ‘ಅಭಿವೃದ್ಧಿಗಾಗಿ ಬಿಜೆಪಿ’ ಎಂಬ ಸ್ಟಿಕ್ಕರ್ ನೀಡಲಿದ್ದೇವೆ. ಮನೆ, ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಇವನ್ನು ಅಂಟಿಸಿಕೊಳ್ಳಬಹುದು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಯ ಕರಪತ್ರ ನೀಡಲಿದ್ದೇವೆ. ಗೋಡೆ ಬರಹ ಮಾಡಲಿದ್ದೇವೆ’ ಎಂದು ವಿವರಿಸಿದರು.

‘ಬಿಜೆಪಿ ಶಕ್ತಿ ಕೇಂದ್ರದ ಎಲ್ಲ ಪದಾಧಿಕಾರಿಗಳು, ಪಕ್ಷದ ನಾಯಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.29ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ಕಿ ಬಾತ್‌ ಕಾರ್ಯಕ್ರಮ ಆಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುತ್ತೇವೆ. ಸದಸ್ಯತ್ವ ಅಭಿಯಾನ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ. ಹೊಸ ಮತದಾರರನ್ನು ತಲುಪುವ ಹಾಗೂ ಸೆಳೆಯುವ ಕಾರ್ಯ ನಡೆಯಲಿದೆ’ ಎಂದರು.

‘ಜಿಲ್ಲೆಯಲ್ಲಿ ಬೂತ್ ವಿಜಯ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಜಿಲ್ಲೆಯ 1,648 ಬೂತ್‌ ಪೈಕಿ ಸಾವಿರಕ್ಕೂ ಅಧಿಕ ಬೂತ್‌ಗಳಲ್ಲಿ ಕಾರ್ಯಕ್ರಮ ಮಾಡಿದ್ದೇವೆ. 954 ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದು, ಪಕ್ಷದ ಸಂದೇಶ ಹಾಗೂ ಸರ್ಕಾರದ ಸಾಧನೆಗಳನ್ನು ತಲುಪಿಸುತ್ತಿದ್ದೇವೆ. ಪ್ರತಿ ಬೂತ್‌ನ 25 ಮನೆಗೆ ಧ್ವಜ ಕಟ್ಟಲಾಗಿದೆ. ಚಳ್ಳಕೆರೆ ಕ್ಷೇತ್ರದಲ್ಲಿ ಇನ್ನೂ 69 ಬೂತ್‌ ತಲುಪಲು ಸಾಧ್ಯವಾಗಿಲ್ಲ. ಈ ಬಗ್ಗೆ ರಾಜ್ಯ ಸಮಿತಿ ಗಮನ ಹರಿಸಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಅಧ್ಯಕ್ಷ ಜಿ.ಟಿ.ಸುರೇಶ್‌, ಮುಖಂಡರಾದ ನರೇಂದ್ರ, ಹರೀಶ್, ನಾಗರಾಜ್‌ ಬೇದ್ರೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು