ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ. 7.91 ಲಕ್ಷ ಉಳಿತಾಯ ಬಜೆಟ್

Last Updated 19 ಮಾರ್ಚ್ 2011, 6:55 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರಸಭೆಯು ಪ್ರಸಕ್ತ ಸಾಲಿನಲ್ಲಿ 7.91 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್‌ಗೆ ಅನುಮೋದನೆ ನೀಡಿದೆ.ನಗರಸಭೆ ಸಭಾಭವನದಲ್ಲಿ ಶುಕ್ರವಾರ ಮಂಡಿಸಲಾದ 2011-12ನೇ ಸಾಲಿನ ಬಜೆಟ್‌ಗೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ, ನೀರಿನ ತೆರಿಗೆ, ವೇತನ ಅನುದಾನ, ಎಸ್‌ಎಫ್‌ಸಿ ಅನುದಾನ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು 1812.66 ಲಕ್ಷ ರೂಪಾಯಿ ಆದಾಯವನ್ನು ನಿರೀಕ್ಷಿಸಲಾಗಿದೆ.

ವೇತನ ಭತ್ಯೆ, ವಿದ್ಯುತ್ ಬಿಲ್, ರಸ್ತೆ, ಬೀದಿದೀಪ ನಿರ್ವಹಣೆ, ವಸತಿಗೃಹ ನಿರ್ಮಾಣ ಹಾಗೂ ಇತರೆ ಆಡಳಿತಾತ್ಮಕ ವೆಚ್ಚಗಳು ಸೇರಿದಂತೆ ಒಟ್ಟು 1804.75 ಲಕ್ಷ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ.ಎಸ್‌ಎಫ್‌ಸಿ ಅನುದಾನ 626 ಲಕ್ಷ, ವೇತನ ಅನುದಾನ 300 ಲಕ್ಷ, 13ನೇ ಹಣಕಾಸಿನ ಅನುದಾನ 150 ಲಕ್ಷ ವಿದ್ಯುತ್ ಬಿಲ್ 168 ಲಕ್ಷ ಹಾಗೂ ಆಸ್ತಿ ತೆರಿಗೆ 150 ಲಕ್ಷ ರೂಪಾಯಿ ಪ್ರಮುಖ ಆದಾಯ ಮೂಲಗಳಾಗಿವೆ.

ಈ ಮೂಲಗಳಿಂದ ಒಟ್ಟು 1394 ಲಕ್ಷ ರೂಪಾಯಿ ನಗರಸಭೆಗೆ ಆದಾಯ ನಿರೀಕ್ಷಿಸಲಾಗಿದ್ದು, ಇನ್ನುಳಿದಂತೆ ನೀರಿನ ತೆರಿಗೆ ಲೈಸೆನ್ಸ್ ಶುಲ್ಕ, ಬಾಡಿಗೆ, ಕಟ್ಟಡ ಅನುಮತಿ ಶುಲ್ಕ ಹಾಗೂ ಮುಳುಗಡೆ ಪರಿಹಾರಗಳಿಂದಲೂ ವಾರ್ಷಿಕ ಖರ್ಚು ನಿಭಾಯಿಸಲು ನಿರ್ಧರಿಸಲಾಗಿದೆ.ವೇತನ ಭತ್ಯೆ 300 ಲಕ್ಷ, ಕಟ್ಟಡ-ಉದ್ಯಾನಗಳಿಗೆ 158.81 ಲಕ್ಷ, ವಿದ್ಯುತ್ ಬಿಲ್ 168 ಲಕ್ಷ, ಚರಂಡಿ-ಶೌಚಾಲಯಗಳಿಗೆ 195.08 ಲಕ್ಷ ರೂಪಾಯಿ ಇವುಗಳು ಪ್ರಸಕ್ತ ಸಾಲಿನಲ್ಲಿ ಅಂದಾಜಿಸಲಾಗಿರುವ ಪ್ರಮುಖ ವೆಚ್ಚಗಳಾಗಿವೆ.

ಯಾವುದು ‘ಇತರೆ’ ಮೂಲ?
ಬಜೆಟ್ ಮಂಡನೆ ವೇಳೆ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ‘ಇತರೆ ಆದಾಯ ಮೂಲದಿಂದ 221.96 ಲಕ್ಷ ರೂಪಾಯಿ ನಿರೀಕ್ಷಿಸಲಾಗಿದೆ. ಈ ಆದಾಯ ಮೂಲಗಳು ಯಾವವು’ ಎಂದು ಸ್ಪಷ್ಟನೆ ಕೇಳಿದರು.“ಇಷ್ಟೊಂದು ದೊಡ್ಡ ಮೊತ್ತದ ಬಗ್ಗೆ ನಿರೀಕ್ಷೆಯಿಟ್ಟುಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ. ಒಂದು ವೇಳೆ ಇತರೆ ಮೂಲದ ಆದಾಯದಲ್ಲಿ ಏರುಪೇರಾದರೆ ಇತರೆ ಖರ್ಚು-ವೆಚ್ಚಗಳ ಮೇಲೆ ಪರಿಣಾಮ ಉಂಟಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.

ಅಧಿಕಾರಿಗಳು ನೀಡಿದ ಬಜೆಟ್ ಪ್ರತಿಯಲ್ಲಿ ‘ಇತರೆ ಮೂಲದ ಆದಾಯ’ದ ಬಗ್ಗೆ ಖಚಿತ ವಿವರಣೆ ನೀಡಿರಲಿಲ್ಲ. ವಿಪರ್ಯಾಸವೆಂದರೆ ಈ ‘ಆದಾಯ ಮೂಲ’ದ ಬಗ್ಗೆ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅವರಿಗೂ ಮಾಹಿತಿ ಇರಲಿಲ್ಲ.ಒಂದು ವೇಳೆ ಈ ಆದಾಯ ಬರದಿದ್ದರೆ ಖರ್ಚುಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಅಧ್ಯಕ್ಷ-ಉಪಾಧ್ಯಕ್ಷರು ಅಥವಾ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಬರಲಿಲ್ಲ.

ಇಂತಹ ಪ್ರಮುಖ ವಿಷಯದ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲದೇ ಅಧ್ಯಕ್ಷ-ಉಪಾಧ್ಯಕ್ಷರು ಬಜೆಟ್ ಮಂಡನೆಗೆ ಮುಂದಾಗಿರುವುದು ಅಚ್ಚರಿ ಮೂಡಿಸಿತು.ಆದಾಯ ಮೂಲಗಳ ಬಗ್ಗೆಯೇ ಕೆಲಕಾಲ ಚರ್ಚೆ ನಡೆಯಿತು. ನಂತರ ಎಚ್ಚೆತ್ತುಕೊಂಡ ಪೌರಾಯುಕ್ತ ಬಿ.ಎ.ಶಿಂಧೆ, ‘ಇತರೆ ಆದಾಯ ಮೂಲ’ಗಳ ಬಗ್ಗೆ ಖಚಿತ ಅಂಕಿ-ಅಂಶಗಳ ವಿವರಣೆ ನೀಡುವುದಾಗಿ ಭರವಸೆ ನೀಡಿದರು.

ನಗರಸಭೆಯ ವಾರ್ಷಿಕ ಆದಾಯ-ಖರ್ಚುಗಳ ಲೆಕ್ಕಪತ್ರದ ಬಗ್ಗೆ ಇರಬೇಕಾದ ಕನಿಷ್ಠ ತಿಳಿವಳಿಕೆ ಅಥವಾ ಮಾಹಿತಿ ಬಹುತೇಕ ಸದಸ್ಯರಿಗೆ ಇರಲೇ ಇಲ್ಲ ಎಂಬುದು ಬಜೆಟ್ ಕುರಿತ ಚರ್ಚೆಯಲ್ಲಿ ಕಂಡುಬಂದಿತು.ಪ್ರತಿಯೊಂದು ಹೊಣೆಗಾರಿಕೆ ಅಧಿಕಾರಿಗಳ ಮೇಲೆಯೇ ಇದ್ದ ಪರಿಣಾಮ ಅವರು ತೋರಿಸಿದ್ದೇ ಆದಾಯ ಮೂಲ; ಅವರು ಮಾಡಿದ್ದೇ ಖರ್ಚು ಎಂಬಂತಾಗಿತ್ತು.

ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಶರಣಪ್ಪ ಗುಳೇದ, ಸಭಾಪತಿ ಸುರೇಶ ಕುದರಿಕಾರ, ಸದಸ್ಯರಾದ ಮುತ್ತಪ್ಪ ಪೂಜಾರಿ, ಜಯಂತ ಕುರಂದವಾಡ, ಮಂಜುಳಾ ಭೂಸಾರೆ, ಸಂಗಪ್ಪ ತಿಮ್ಮಣ್ಣವರ, ನಾಗಪ್ಪ ಯಳ್ಳಿಗುತ್ತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT