ಸೋಮವಾರ, ಜೂನ್ 21, 2021
24 °C
ವಸತಿ ನಿಲಯಕ್ಕೆ ಎಲ್ಲಾ ಮಕ್ಕಳಿಗೂ ಪ್ರವೇಶ ನೀಡಲು ಆಗ್ರಹ

ಗುತ್ತಿಗೆ ನೌಕರರ ಕಾಯಂಗೊಳಿಸಿ: ದಲಿತ ಸಂಘರ್ಷ ಸಮಿತಿ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿರುವ ಎಲ್ಲರಿಗೂ ಪ್ರವೇಶ ನೀಡಬೇಕು ಹಾಗೂ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿನ ಗುತ್ತಿಗೆ ನೌಕರರನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಭೂ ಒಡೆತನ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಬೇಕು ಹಾಗೂ ಸರ್ಕಾರ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲು ಏಕ ಗವಾಕ್ಷಿ ಪದ್ಧತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಂಘಟನೆ ಜಿಲ್ಲಾ ಸಂಚಾಲಕ ಆನಂದ ದೊಡಮನಿ ಹಾಗೂ ಮುತ್ತಣ್ಣ ಮೇತ್ರಿ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪುಂಡಲೀಕ ಕವಡಿಮಟ್ಟಿ ಮಾತನಾಡಿ, ‘ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ನೂತನ ಸುತ್ತೋಲೆ ಪ್ರಕಾರ ನಿಗದಿತ ವಸತಿ ನಿಲಯಕ್ಕೆ ಗುರುತಿಸುವಷ್ಟು ಸಂಖ್ಯೆಯಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಇದರಿಂದ ಬಹಳ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಕೊರೆದ ನಂತರ ಸರ್ಕಾರ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಆದರೆ ಕೆಲವೊಂದು ಭಾಗದಲ್ಲಿ ಇನ್ನೂ ವಿದ್ಯುತ್‌ ಸಂಪರ್ಕ ನೀಡಬೇಕಿದೆ. ಹಾಗಾಗಿ ಕೊಳವೆಬಾವಿ ಇದ್ದೂ ಇಲ್ಲದಂತಾಗಿದೆ. ಆದಷ್ಟು ಬೇಗ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಹನಮಂತ ಚಿಮ್ಮಲಗಿ, ಕೃಷ್ಣ ಮೂರ್ತಿ ನಾಯ್ಕರ, ಜಿಲ್ಲಾ ಖಜಾಂಚಿ ಸಂಗಣ್ಣ ಮಡ್ಡಿ, ತಾಲ್ಲೂಕು ಸಂಚಾಲಕ ಪ್ರಭು ದೊಡಮನಿ, ಬಾದಾಮಿ ತಾಲ್ಲೂಕು ಸಂಚಾಲಕ ಯಲ್ಲಪ್ಪ ರೋಣದ, ವೈ.ವೈ.ತಿಮ್ಮಾಪೂರ, ಶ್ರೀಶೈಲ ಗಾಜಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು