ಅನುಭಾವಪೀಠದ ಅಸೀಮ ಮಾತೆ

ಶನಿವಾರ, ಮಾರ್ಚ್ 23, 2019
31 °C

ಅನುಭಾವಪೀಠದ ಅಸೀಮ ಮಾತೆ

Published:
Updated:
Prajavani

ಬಾಗಲಕೋಟೆ: ಬಸವ ತತ್ವದೆಡೆಗೆ ಅಚಲ ನಿಷ್ಠೆ ಹಾಗೂ ಅಲೌಕಿಕ ಬದುಕಿನಡೆಗೆ ಕೈ ಹಿಡಿದು ನಡೆಸಿದ ಗುರು ಲಿಂಗಾನಂದರು ತೋರಿದ ದಾರಿಯಲ್ಲಿ ಬದುಕಿನುದ್ದಕ್ಕೂ ಅಸೀಮ ಬದ್ಧತೆಯೊಂದಿಗೆ ಸಾಗಿಬಂದವರು ಮಾತೆ ಮಹಾದೇವಿ.

ಈ ವೇಳೆ ಸಂಪ್ರದಾಯಕ್ಕೆ ಕಟ್ಟುಬಿದ್ದ ಪಟ್ಟಭದ್ರರೊಂದಿಗೆ ಮುಖಾಮುಖಿಯಾಗುತ್ತಲೇ ನಿಂದನೆ, ಬೆದರಿಕೆ, ಅಪಹಾಸ್ಯಗಳಿಗೆ ತುತ್ತಾದರೂ ಅದಕ್ಕೆ ಸೊಪ್ಪು ಹಾಕಲಿಲ್ಲ. ಟೀಕೆ– ವಿಮರ್ಶೆಗಳಿಗೆ ಜಗ್ಗದೇ ದಿಟ್ಟವಾಗಿ ನಿಲ್ಲುವ ನೇರ ಸ್ವಭಾವ, ಅಗಾಧ ಓದು, ನಿಷ್ಠುರ ಮಾತು, ಕೆಲವೊಮ್ಮೆ ವೈರುಧ್ಯದ ಭಾವ ಅವರ ವ್ಯಕ್ತಿತ್ವದ ಹೂರಣವಾಗಿದ್ದವು.

ಶರಣರ ಅನುಭಾವಗಳನ್ನು ಜನಸಾಮಾನ್ಯರಿಗೆ ಸರಳವಾಗಿ ದಾಟಿಸುವ ಭಾಷಾ ಪ್ರೌಢಿಮೆ, ಸಂಕಷ್ಟಗಳಿಗೆ ಮಿಡಿಯುವ ಮಾತೃಭಾವ, ವೈಚಾರಿಕ ನಿಲುವು ಕರ್ನಾಟಕದ ಉತ್ತರ ಭಾಗ ಸೇರಿದಂತೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರದಲ್ಲಿ ಮಾತೆ ಮಹಾದೇವಿ ಅವರಿಗೆ ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹುಟ್ಟುಹಾಕಿತ್ತು. ಆದರೆ ಅವರ ನಿಷ್ಠುರ ಗುಣಕ್ಕೆ ಒಗ್ಗಿಕೊಳ್ಳಲಾಗದೇ ನಾಡಿನ ಧಾರ್ಮಿಕ ವಲಯ ಮಾತ್ರ ಬಹುಕಾಲ ಪ್ರಜ್ಞಾಪೂರ್ವಕವಾಗಿ ಅಂತರ ಕಾಯ್ದುಕೊಂಡದ್ದು ವಿಪರ್ಯಾಸ.

ಸಂಘರ್ಷದ ಹಾದಿ

ಚಿತ್ರದುರ್ಗ ತಾಲ್ಲೂಕಿನ ಸಾಸಲಟ್ಟಿಯ ವೈದ್ಯ ಬಸಪ್ಪ– ಗಂಗಮ್ಮ ದಂಪತಿ ಪುತ್ರಿ ರತ್ನಾ (ಮಾತೆ ಮಹಾದೇವಿ), ಬಿಎಸ್‌ಸಿ ಓದುವಾಗ ಅದೊಮ್ಮೆ ಲಿಂಗಾನಂದ ಶ್ರೀಗಳ ಪ್ರವಚನ ಕೇಳಿ ಬಸವತತ್ವದೆಡೆಗೆ ಆಕರ್ಷಿತರಾಗಿ ಅಲೌಕಿಕ ಬದುಕು ಆಯ್ಕೆ ಮಾಡಿಕೊಂಡು ಮನೆ ಬಿಟ್ಟು ಹೊರಟಿದ್ದರು. ಆಗಲೇ ಪೋಷಕರಿಂದ ವಿರೋಧ ಎದುರಾಗಿತ್ತಾದರೂ ಅದು ಸಹಜವಾಗಿತ್ತು.

ಆದರೆ 1970ರಲ್ಲಿ ಧಾರವಾಡದಲ್ಲಿ ಅಕ್ಕಮಹಾದೇವಿ ಅನುಭಾವಪೀಠಕ್ಕೆ ಮೊದಲ ಪೀಠಾಧ್ಯಕ್ಷರಾಗಿ ನೇಮಕ ಗೊಂಡಾಗ ಮಾತ್ರ ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿದ್ದರು. ಮಹಿಳೆಯೊಬ್ಬರನ್ನು ಕಾವಿ ಬಟ್ಟೆಯಲ್ಲಿ ನೋಡುವುದು ಆಗ ಅಸಹಜ. ‘ಮುಟ್ಟು, ಬಸಿರು, ಬಾಣಂತನ ಎಂದು ಮನೆಯಲ್ಲಿ ಇರಬೇಕಾದವರು ಮಠದಲ್ಲಿ ಕುಳಿತು ಪ್ರವಚನ ಏನು ಮಾಡುತ್ತಾರೆ’ ಎಂದು ಬಹಿರಂಗವಾಗಿಯೇ ಕೆಲವರು ಆಕ್ಷೇಪಿಸಿದ್ದರು. ಆಗ ಎದುರಾದ ಟೀಕೆ, ಕುಹಕ, ವಿರೋಧಗಳನ್ನು ಎದುರಿಸಲು ಲಿಂಗಾನಂದ ಶ್ರೀಗಳ ನೈತಿಕ ಬೆಂಬಲ ನೆರವಾಗಿತ್ತು.

ಮುಂದೆ ಲಿಂಗಾನಂದರ ಸಾವಿನ ನಂತರ 1996ರ ಜನವರಿಯಲ್ಲಿ ಬಸವಧರ್ಮ ಪೀಠದ ಎರಡನೇ ಜಗದ್ಗುರು ಆಗಿ ನೇಮಕಗೊಂಡರು. ಆಗಲೂ ಇಂತಹದ್ದೇ ಸಂಕಷ್ಟ ಎದುರಾಗಿತ್ತು.

ವಚನ ನಾಮಾಂಕಿತ ವಿವಾದ

1996ರ ಆಗಸ್ಟ್ 9ರಂದು ಮಾತೆ ಮಹಾದೇವಿ ಅವರ ‘ಬಸವ ವಚನ ದೀಪ್ತಿ’ ಬಿಡುಗಡೆಯಾದಾಗ ವಿವಾದ ಭುಗಿಲೆದ್ದಿತು. ಕೂಡಲಸಂಗಮ ನಾಮಾಂಕಿತವನ್ನು ಲಿಂಗದೇವ ಎಂದು ತಿದ್ದಿದ್ದಾರೆ ಎಂದು ಆರೋಪಿಸಿ ರಾಜ್ಯದಾದ್ಯಂತ ಬಸವ ಅನುಯಾಯಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಹೋದಲ್ಲೆಲ್ಲ ವಿರೋಧ, ಧಾರ್ಮಿಕ ಮುಖಂಡರಿಂದಲೂ ಆಕ್ರೋಶ ವ್ಯಕ್ತವಾಗಿತ್ತು.

‘ಏಕೇಶ್ವರವಾದ ಮತ್ತು ಏಕದೇವೋಪಾಸನೆ ಪ್ರತಿನಿಧಿಸುವ ಕಾರಣ ‘ಲಿಂಗದೇವ’ ಪದ ಸೇರ್ಪಡೆ ಮಾಡಿರುವೆ. ಇದನ್ನು ಅಧ್ಯಾತ್ಮದ ನೆಲೆಯಲ್ಲಿ ಪರಿಗಣಿಸಿ’ ಎಂದು ಸ್ಪಷ್ಟನೆ ನೀಡಿದ್ದ ಮಾತೆ ಮಹಾದೇವಿ ತಮ್ಮ ನಿಲುವಿನಿಂದ ಹಿಂದಕ್ಕೆ ಸರಿದಿರಲಿಲ್ಲ. ಸರ್ಕಾರ ಆ ಪುಸ್ತಕ ಮುಟ್ಟುಗೋಲು ಹಾಕಿಕೊಂಡಿತ್ತು. ‘ನಾಮಾಂಕಿತ ತಿದ್ದುಪಡಿ ಸರಿಯಲ್ಲ’ ಎಂದು ಕೊನೆಗೆ ನ್ಯಾಯಾಲಯ ಹೇಳಬೇಕಾಯಿತು.

2003ರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕನ್ನಡನಾಡು ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿದ್ದು, ಲೇಖಕ ಬಂಜಗೆರೆ ಜಯಪ್ರಕಾಶ ಅವರ ‘ಆನುದೇವ ಹೊರಗಣವನು’ ಕೃತಿಯ ವಿರುದ್ಧ ಮಾತೆ ಮಹಾದೇವಿ ಬೀದಿಗೆ ಇಳಿದದ್ದು ವೈರುಧ್ಯದ ಸಂಗತಿ.

ನಾಮಾಂಕಿತ ವಿವಾದದ ನಂತರ ಶರಣ ಪರಂಪರೆಯ ಮುಖ್ಯವಾಹಿನಿಯಿಂದ ಮಾತೆ ಮಹಾದೇವಿ ದೂರವಿದ್ದರೂ, ಅಸಂಖ್ಯಾತ ಅನುಯಾಯಿಗಳು ಮಾತ್ರ ಅವರ ಕೈ ಬಿಟ್ಟಿರಲಿಲ್ಲ. ಕಳೆದ ವರ್ಷ ಬೀದರ್‌ನಲ್ಲಿ ಲಿಂಗಾಯತ ಸ್ವತಂತ್ರಧರ್ಮ ಹೋರಾಟಕ್ಕೆ ಅವರು ಮುನ್ನುಡಿ ಬರೆದಾಗಲೇ ಇದು ಮನದಟ್ಟಾಯಿತು. ಅಂದು ಅಲ್ಲಿ ನೆರೆದಿದ್ದ ಶರಣ ಗಣ ಮುಂದೆ ಹೋರಾಟದ ಬಲ ಹೆಚ್ಚಿಸಿತ್ತು. ಮಾತೆಗೆ ಮುಂಚೂಣಿ ನಾಯಕತ್ವ ದೊರಕಿಸಿತ್ತು.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಬಹಿರಂಗವಾಗಿಯೇ ಕರೆ ನೀಡಿದ್ದು, ಮತ್ತೊಮ್ಮೆ ವಿವಾದಕ್ಕೆ ತಿರುಗಿತ್ತು. ‘ನಮಗೆ ಸಹಾಯ ಮಾಡಿದವರ (ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮನ್ನಣೆ) ನೆರವಿಗೆ ನಾವು ನಿಲ್ಲುವುದು ಧರ್ಮ’ ಎಂದು ಹೇಳಿ ಆಗ ತಮ್ಮ ನಿಲುವು ಸಮರ್ಥಿಸಿಕೊಂಡಿದ್ದರು. 

ಹೀಗೆ ವಿವಾದಗಳನ್ನು ಬೆನ್ನಿಗಿಟ್ಟುಕೊಂಡೇ 53 ವರ್ಷಗಳ ಕಾಲ ತಮ್ಮೊಂದಿಗೆ ಬಸವತತ್ವದ ತೇರನ್ನು ಎಳೆದು ತಂದ ಮಾತೆ ಮಹಾದೇವಿ, ಸುದೀರ್ಘ ಪಯಣದ ಬಳಲಿಕೆಯಿಂದ ಈಗ ದಿಢೀರನೆ ನಿರ್ಗಮಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !