ಮುಧೋಳ: ‘ವೇಮನರ ತತ್ವ, ಹೇಮರಡ್ಡಿ ಮಲ್ಲಮ್ಮಳ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ನಡೆಸಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಬಿ.ಗೌಡಪ್ಪಗೋಳ ಹೇಳಿದರು.
ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಬೆನಕಟ್ಟಿಯ ಹೇಮ-ವೇಮನ ಸದ್ಬೋಧನ ಪೀಠದ 14 ನೇ ವಾರ್ಷಿಕೋತ್ಸವ, ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಸರ್ಗ ಚಿಕಿತ್ಸಕ ಡಾ.ಎಚ್.ಟಿ.ಮಳಲಿ ಮಾತನಾಡಿ, ‘ಮನುಷ್ಯನಿಗೆ ಇಂದು ಅಧ್ಯಾತ್ಮದ ಜ್ಞಾನ ಬೇಕಿದ್ದು, ಶಿಕ್ಷಣದಲ್ಲಿ ಆಧ್ಯಾತ್ಮಿಕ ಶಿಕ್ಷಣ ನೀಡಬೇಕಿದೆ. ಅದರಿಂದ ನೆಮ್ಮದಿ, ಆನಂದದ ಜೀವನ ಲಭಿಸಬಹುದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಯ ಅಧ್ಯಕ್ಷ ದಯಾನಂದ ಪಾಟೀಲ, ‘ಪರೋಪಕಾರದಿಂದ ಇನ್ನೊಬ್ಬರ ಬದುಕಿಗೆ ನೆರವಾಗುವುದೇ ಶ್ರೇಷ್ಠ ಕಾರ್ಯ’ ಎಂದರು.
ತೊಂಡಿಕಟ್ಟಿಯ ವೆಂಕಟೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೂವರು ಪಿಯುಸಿ ಹಾಗೂ ಮೆಡಿಕಲ್ ಓದುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಯಿತು.