ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ: ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಪೈಪೋಟಿ

Published 17 ಆಗಸ್ಟ್ 2024, 4:27 IST
Last Updated 17 ಆಗಸ್ಟ್ 2024, 4:27 IST
ಅಕ್ಷರ ಗಾತ್ರ

ಬಾದಾಮಿ: ಒಂದೂವರೆ ವರ್ಷದ ನಂತರ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಪ್ರಕಟಿಸಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಒಳಗೊಳಗೇ ಬಿರುಸಿನ ಚಟುವಟಿಕೆಗಳು ನಡೆದಿವೆ.

ಒಂದೂವರೆ ವರ್ಷದವರೆಗೆ ಆಡಳಿತಾಧಿಕಾರಿಯಿಂದಲೇ ಪುರಸಭೆಯ ಎಲ್ಲ ಕಾಮಗಾರಿಗಳು ನಡೆದಿವೆ. ಪುರಸಭೆ ಸದಸ್ಯರು ಚಾತಕ ಪಕ್ಷಿಯಂತೆ ಮೀಸಲಾತಿ ಪ್ರಕಟಣೆಯನ್ನು ಎದುರು ನೋಡುತ್ತಿದ್ದರು. ಈಗ ಪುರಸಭೆ ಸದಸ್ಯರಲ್ಲಿ ಚಟುವಟಿಕೆ ಮತ್ತೆ ಗರಿಗೆದರಿದಂತಾಗಿದೆ.

ಮೊದಲ 30 ತಿಂಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ 15-15 ತಿಂಗಳು ಆಡಳಿತವನ್ನು ಹಂಚಿಕೊಂಡಿದ್ದರು. ಮೊದಲಿಗೆ ಮಂಜುನಾಥ ಹೊಸಮನಿ ಅಧ್ಯಕ್ಷ, ಉಪಾಧ್ಯಕ್ಷೆಯಾಗಿ ರಾಮವ್ವ ಮಾದರ. ಮತ್ತೆ 15 ತಿಂಗಳು ಆರ್.ಎಫ್. ಬಾಗವಾನ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯಾಗಿ ಶ್ಯಾವಕ್ಕ ಕಾಗಿ ಆಯ್ಕೆಯಾಗಿದ್ದರು.

ಚಾಲುಕ್ಯರ ಐತಿಹಾಸಿಕ ನಾಡಿನ ಪುರಸಭೆಗೆ 2 ನೇ ಹಂತದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿಯೇ ಒಳಗಿಂದೊಳಗೆ ತೀವ್ರ ಪೈಪೋಟಿ ನಡೆದಿದೆ.

ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಪೈಕಿ 13 ಸದಸ್ಯರು ಕಾಂಗ್ರೆಸ್ ಮತ್ತು ಬಿಜೆಪಿಯ 10 ಸದಸ್ಯರು ಇದ್ದಾರೆ. ಮೊದಲ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಹಿಂದಿನ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯ ಬಂದಿದ್ದನ್ನು ಸ್ಮರಿಸಬಹುದು.

ಸಾಮಾನ್ಯ ವರ್ಗ ಮೀಸಲಾತಿ ಇರುವುದರಿಂದ ಎಲ್ಲರೂ ಮುಸುಕಿನಲ್ಲಿಯೇ ಪೈಪೋಟಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಸದ್ಯ ಪಾಂಡು ಕಟ್ಟಿಮನಿ, ಶಂಕರ ಕನಕಗಿರಿ ಮತ್ತು ಪರಶುರಾಮ ರೋಣದ ಬಲವಾದ ಪೈಪೋಟಿ ನೀಡುತ್ತಿದ್ದಾರೆ. ಆದರೆ ಬೇರೆಯವರಾದರೂ ಸೋಜಿಗವೇನಿಲ್ಲ. ಉಪಾಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ಬಿಟ್ಟು ಕೊಡಬಹುದು.

ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಬಲ ಇರುವುದರಿಂದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಎಲ್ಲ ಸದಸ್ಯನ್ನು ಒಗ್ಗೂಡಿಸಿ ಯಾರಿಗೂ ಮನಸ್ತಾಪ ಆಗದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಬೇಕಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಪುರಸಭೆಯಲ್ಲಿ 13 ಸದಸ್ಯರು ಕಾಂಗ್ರೆಸ್ ಪಕ್ಷದವರಿದ್ದಾರೆ. ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುವದಲ್ಲಿ ಯಾವುದೇ ಸಂದೇಹವಿಲ್ಲ ಶೀಘ್ರದಲ್ಲಿ ಕಾಂಗ್ರೆಸ್ ಮುಖಂಡರ ಮತ್ತು ಸದಸ್ಯರ ಸಭೆ ಕರೆದು ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT