ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕಲ್‍ | ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ: ಹಾಳಾಗುತ್ತಿರುವ 30 ಸಾವಿರ ಪುಸ್ತಕಗಳು

Published 20 ಜುಲೈ 2023, 6:30 IST
Last Updated 20 ಜುಲೈ 2023, 6:30 IST
ಅಕ್ಷರ ಗಾತ್ರ

ಇಳಕಲ್‍: ಲಕ್ಷ ಜನಸಂಖ್ಯೆ ಹೊಂದಿರುವ ಹಾಗೂ ತಾಲ್ಲೂಕು ಕೇಂದ್ರ ಆಗಿರುವ ಇಳಕಲ್‍ ನಗರದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲ. ಸದ್ಯ ಬಸ್ ನಿಲ್ದಾಣ ಸಮೀಪವಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಬಳಕೆಗೆ ಯೋಗ್ಯವಿಲ್ಲದ ಚಿಕ್ಕದಾದ ಹಾಗೂ ಶಿಥಿಲಗೊಂಡ ಹಳೆಯ ವಸತಿ ಗೃಹವೊಂದರಲ್ಲಿ ನಡೆಸಲಾಗುತ್ತಿದೆ.

ಮಳೆಗಾಲ ಆರಂಭವಾಗಿದ್ದು, ಸೋರುವ ಹಾಗೂ ಕತ್ತರಿಸಿಕೊಂಡು ಬೀಳುತ್ತಿರುವ ಛಾವಣಿಯಡಿ 30 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಜಾಗವಿಲ್ಲದ ಕಾರಣ ಎಲ್ಲೆಡೆ ಪುಸ್ತಕಗಳ ರಾಶಿ ಹಾಕಲಾಗಿದೆ. ತೇವಾಂಶದಿಂದಾಗಿ ಅಮೂಲ್ಯ ಪುಸ್ತಕಗಳು ಹಾಳಾಗುತ್ತಿವೆ. ಓದುಗರಿಗೆ ಕೂಡಲು ಸಹ ಸ್ಥಳಾವಕಾಶವಿಲ್ಲ.

1975ರಿಂದ 2014ರವರೆಗೆ ಸಾರ್ವಜನಿಕ ಗ್ರಂಥಾಲಯ ನಗರಸಭೆ ಹತ್ತಿರ ರವೀಂದ್ರನಾಥ ಟ್ಯಾಗೋರ್ ಜನ್ಮ ಶತಮಾನೋತ್ಸವ ಅಂಗವಾಗಿ ಕಟ್ಟಿದ್ದ ಕಲಾಮಂದಿರದಲ್ಲಿ ಇತ್ತು. 2014ರಲ್ಲಿ ಅದರ ಛಾವಣಿ ಕುಸಿದು ಬಿತ್ತು. ಅನಿವಾರ್ಯವಾಗಿ ಗ್ರಂಥಾಲಯವನ್ನು ಈಗ ಇರುವ ಲೋಕೋಪಯೋಗಿ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ಗ್ರಂಥಾಲಯದ ದುಸ್ಥಿತಿಯ ಬಗ್ಗೆ ಯಾರೊಬ್ಬರು ದನಿ ಎತ್ತಿಲ್ಲ. ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ. ಗ್ರಂಥಾಲಯ ಇಲಾಖೆಯ ಅಧಿಕಾರಿಗಳು ಸಹ ನಿರ್ಲಕ್ಷ ಮಾಡಿದ ಪರಿಣಾಮ ಗ್ರಂಥಾಲಯಕ್ಕೆ ಈವರೆಗೂ ಸ್ವಂತ ಕಟ್ಟಡ ದೊರೆತಿಲ್ಲ.

ನಗರದಲ್ಲಿ ವಿವಿಧ ಸಮುದಾಯಗಳವರು ನಗರಸಭೆಯಿಂದ ಜಾಗ, ಸರ್ಕಾರದಿಂದ ಅನುದಾನ ಪಡೆದುಕೊಂಡು ಸಮುದಾಯ ಭವನ ಹೊಂದಿವೆ. ಈ ಭವನಗಳಿಗೆ ಶಾಸಕರು, ಸಂಸದರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಿದ್ದಾರೆ. ಆದರೆ, ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಕಟ್ಟುವ ಬಗ್ಗೆ ಯಾವತ್ತೂ ಯೋಚಿಸಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಕೆಲವು ಪುಸ್ತಕಪ್ರಿಯರ ಒತ್ತಾಯ, ಪತ್ರ ವ್ಯವಹಾರ ಹಾಗೂ ಜಿಲ್ಲಾಧಿಕಾರಿ ಸೂಚನೆ ನಂತರ 3 ವರ್ಷಗಳ ಹಿಂದೆ ನಗರಸಭೆಯು ಲೋಕೋಪಯೋಗಿ ಇಲಾಖೆಯ ಕಟ್ಟಡವಿರುವ ಜಾಗವನ್ನು ಗ್ರಂಥಾಲಯ ಇಲಾಖೆಗೆ ನೀಡಲು ಠರಾವು ಮಾಡಿದೆ. ಆದರೆ, ಈವರೆಗೆ ಈ ಜಾಗ ಗ್ರಂಥಾಲಯ ಇಲಾಖೆಗೆ ಹಸ್ತಾಂತರವಾಗಿಲ್ಲ. ಕಟ್ಟಡಕ್ಕಾಗಿ ನೀಲನಕ್ಷೆ ಹಾಗೂ ಅಂದಾಜು ತಯಾರಿಸಿಕೊಡುವಂತೆ ಜಿಲ್ಲಾ ಗ್ರಂಥಾಲಯ ಇಲಾಖೆ ಮನವಿ ಮಾಡಿ 2 ವರ್ಷಗಳು ಕಳೆದರೂ ಲೋಕೋಪಯೋಗಿ ಇಲಾಖೆ ಸ್ಪಂದಿಸಿಲ್ಲ.

ರಂಗಕರ್ಮಿ ಮಹಾಂತೇಶ ಗಜೇಂದ್ರಗಡ, ಗ್ರಂಥಾಲಯ ಕಟ್ಟಡಕ್ಕಾಗಿ 5–6 ವರ್ಷಗಳಿಂದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುತ್ತಲೇ ಇದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡವಿಲ್ಲದ ಕಾರಣ ಇಲ್ಲಿಗೆ ಹೊಸ ಪುಸ್ತಕಗಳು, ಪೀಠೋಪಕರಣಗಳು ಪೂರೈಕೆಯಾಗುತ್ತಿಲ್ಲ. ಇ-ಲೈಬ್ರರಿ ಯೋಜನೆ ಅನುಷ್ಠಾನಗೊಂಡಿಲ್ಲ.

ಉತ್ತಮ ಗ್ರಂಥಾಲಯ ವ್ಯವಸ್ಥೆ ಇಲ್ಲದಿರುವ ಕಾರಣ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ, ಓದುಗರಿಗೆ, ಹಿರಿಯ ನಾಗರಿಕರಿಗೆ ತೀವ್ರ ನಷ್ಟವಾಗಿದೆ. ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮಹಾಂತೇಶ ಗಜೇಂದ್ರಗಡ, ಶಾಸಕ ವಿಜಯಾನಂದ ಕಾಶಪ್ಪನವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ಇಳಕಲ್‌ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಶಿಥಿಲಗೊಂಡಿರುವ ಪರಿಣಾಮ ಅಮೂಲ್ಯ ಪುಸ್ತಕಗಳು ಹಾಳಾಗುತ್ತಿವೆ
ಇಳಕಲ್‌ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಶಿಥಿಲಗೊಂಡಿರುವ ಪರಿಣಾಮ ಅಮೂಲ್ಯ ಪುಸ್ತಕಗಳು ಹಾಳಾಗುತ್ತಿವೆ
ಇಳಕಲ್‌ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಶಿಥಿಲಗೊಂಡಿದ್ದು ಸೋರುವ ಸೂರಿನಿಂದಾಗಿ ಪುಸ್ತಕಗಳು ಹಾಳಾಗಿವೆ
ಇಳಕಲ್‌ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಶಿಥಿಲಗೊಂಡಿದ್ದು ಸೋರುವ ಸೂರಿನಿಂದಾಗಿ ಪುಸ್ತಕಗಳು ಹಾಳಾಗಿವೆ

ಪುಸ್ತಕಗಳು ಹಾಳಾಗುವುದನ್ನು ತಡೆಯಲು ಗ್ರಂಥಾಲಯವನ್ನು ಬಾಡಿಗೆ ಕಟ್ಟಡವೊಂದಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಜಾಗ ಗ್ರಂಥಾಲಯ ಇಲಾಖೆಗೆ ಹಸ್ತಾಂತರವಾದರೆ ಶಾಸಕರ ಮೂಲಕ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ನೀಡುವಂತೆ ಸರ್ಕಾರವನ್ನು ಕೊರಲಾಗುವುದು. –ಯಮನೂರಪ್ಪ ಜಿಲ್ಲಾ ಗ್ರಂಥಾಲಯ ಅಧಿಕಾರಿ ಬಾಗಲಕೋಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT