ಮಂಗಳವಾರ, ಮಾರ್ಚ್ 2, 2021
31 °C
12 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ತೇರದಾಳ ಪುರಸಭೆಯಲ್ಲಿ ಮಾತ್ರ ಅತಂತ್ರ ಸ್ಥಿತಿ

ಬಾಗಲಕೋಟೆ: ಏಳು ಕಡೆ ಬಿಜೆಪಿ, ನಾಲ್ಕರಲ್ಲಿ ಕಾಂಗ್ರೆಸ್ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಬಿಜೆಪಿ ಏಳು ಸ್ಥಳೀಯ ಸಂಸ್ಥೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದು, ಕಾಂಗ್ರೆಸ್ ನಾಲ್ಕರಲ್ಲಿ ಅಧಿಕಾರ ಹಿಡಿಯಲಿದೆ. ಒಂದರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಐದು ನಗರಸಭೆ, ಐದು ಪುರಸಭೆ ಹಾಗೂ ಎರಡು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 312 ಸ್ಥಾನಗಳಲ್ಲಿ 161ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಾಂಗ್ರೆಸ್ 122, ಜೆಡಿಎಸ್ 10, ಪಕ್ಷೇತರರು 18 ಸ್ಥಾನ ಪಡೆದಿದ್ದಾರೆ. ಜಮಖಂಡಿಯಲ್ಲಿ ಪ್ರಜಾ ಪರಿವರ್ತನಾ ಪಕ್ಷ ಒಂದು ಸ್ಥಾನ ಗಳಿಸಿದೆ. 

ಬಾದಾಮಿ ಶಾಸಕ ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಹಾಲಿ ಶಾಸಕರೇ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಉಳಿಸಿಕೊಂಡಿದ್ದು, ಶಾಸಕ ಸಿದ್ದು ನ್ಯಾಮಗೌಡ ಅಕಾಲಿಕ ನಿಧನದ ಅನುಕಂಪದ ಲಾಭ ಜಮಖಂಡಿಯಲ್ಲಿ ಕಾಂಗ್ರೆಸ್‌ಗೆ ಸಿಕ್ಕಿದೆ.

ನಗೆ ಬೀರಿದ ಕಮಲ: ಬಾಗಲಕೋಟೆ ಸೇರಿದಂತೆ ಮುಧೋಳ, ರಬಕವಿ–ಬನಹಟ್ಟಿ, ಇಳಕಲ್ ನಗರಸಭೆಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಮಹಾಲಿಂಗಪುರ ಪುರಸಭೆ, ಬೀಳಗಿ, ಕೆರೂರು ಪಟ್ಟಣ ಪಂಚಾಯ್ತಿಗಳಲ್ಲಿ ಕಮಲ ಅರಳಿದೆ. ಜಮಖಂಡಿ ನಗರಸಭೆ, ಬಾದಾಮಿ, ಗುಳೇದಗುಡ್ಡ, ಹುನಗುಂದ ಪುರಸಭೆ ಕಾಂಗ್ರೆಸ್ ಪಾಲಾಗಿವೆ. ತೇರದಾಳ ಪುರಸಭೆಯಲ್ಲಿ ಅತಂತ್ರ ಸ್ಥಿತಿ ಇದೆ. ಮೂರು ಸ್ಥಾನಗಳಲ್ಲಿ ಗೆದ್ದಿರುವ ಪಕ್ಷೇತರರು ನಿರ್ಣಾಯಕರಾಗಿದ್ದಾರೆ.

ಸಿದ್ದರಾಮಯ್ಯಗೆ ಬಲ:

ಬಾದಾಮಿ ಕ್ಷೇತ್ರದ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಪೈಕಿ, ಗುಳೇದಗುಡ್ಡ ಹಾಗೂ ಬಾದಾಮಿ ಪುರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸಿದ್ದರಾಮಯ್ಯ ಕೈ ಬಲಗೊಂಡಿದೆ. ಕೆರೂರು ಪಟ್ಟಣ ಪಂಚಾಯ್ತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರೂ ಮೂವರು ಬಿಜೆಪಿ ಬೆಂಬಲಿತ ಪಕ್ಷೇತರರೇ ಗೆದ್ದಿರುವುದರಿಂದ ಸದ್ಯಕ್ಕೆ ಅಧಿಕಾರ ಹಿಡಿಯಲು ಪಕ್ಷದ ಹಾದಿ ಸುಗಮವಾಗಿದೆ. ಗುಳೇದಗುಡ್ಡ ಪುರಸಭೆಯಲ್ಲಿ ಕಳೆದ ಎರಡು ಅವಧಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಈ ಬಾರಿ ಮುಗ್ಗರಿಸಿದೆ. ಕೇವಲ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದೆ. ಸಿದ್ದರಾಮಯ್ಯ ಭಂಟ ಹೊಳೆಬಸುಶೆಟ್ಟರ ಅಲ್ಲಿ ಚುನಾವಣೆ ಉಸ್ತುವಾರಿ ಹೊತ್ತಿದ್ದರು. 

ಬಾಗಲಕೋಟೆ ನಗರಸಭೆಯಲ್ಲಿ ಬಿಜೆಪಿ 29 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಮುನ್ನುಡಿ ಬರೆದಿದೆ. ಪಕ್ಷದ ಅಭ್ಯರ್ಥಿಗಳ ಪರ ಮನೆ ಮನೆ ಸುತ್ತಿದ್ದ ಶಾಸಕ ವೀರಣ್ಣ ಚರಂತಿಮಠ, ವಿಧಾನಸಭೆ ಚುನಾವಣೆಯಲ್ಲಿ ನಗರ ವ್ಯಾಪ್ತಿಯಲ್ಲಿ ಬಿಜೆಪಿಗೆ ದೊರೆತ ಬೆಂಬಲ ಆಕಸ್ಮಿಕವಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಮಾಜಿ ಶಾಸಕ ಪಿ.ಎಚ್.ಪೂಜಾರ ಹಾಗೂ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರೊಂದಿಗೆ ಕೈ ಜೋಡಿಸಿದ್ದು ನೆರವಾಗಿದೆ. ಆದರೆ ಬಿಜೆಪಿಯ ಭದ್ರ ನೆಲೆಯಾದ ವಾರ್ಡ್ ನಂ 6ರಲ್ಲಿ ತಪಶೆಟ್ಟಿ ಸಹೋದರ ಬಸವರಾಜ ಸೋತಿರುವುದು ಚರ್ಚೆಗೆ ಗ್ರಾಸವಾಗಿದೆ. ಮುಖಂಡರ ನಡುವಿನ ಆಂತರಿಕ ಕಚ್ಚಾಟ, ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನ ಕಾಂಗ್ರೆಸ್‌ನ ಕಳಪೆ ಫಲಿತಾಂಶಕ್ಕೆ ಕಾರಣ ಎಂದು ಪಕ್ಷದ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಪುತ್ರ ಆನಂದ್ ಅಲ್ಲಿನ ನಗರಸಭೆ ಚುನಾವಣೆಯ ಉಸ್ತುವಾರಿ ಹೊತ್ತಿದ್ದರು. ಅಲ್ಲಿ ಪಕ್ಷ ಭರ್ಜರಿ ಜಯಗಳಿಸಿದೆ. ಇದು ಮುಂಬರುವ ಉಪಚುನಾವಣೆಯ ಫಲಿತಾಂಶದ ಮುನ್ಸೂಚನೆಯ ಜೊತೆಗೆ ನ್ಯಾಮಗೌಡ ಕುಟುಂಬಕ್ಕೆ ಟಿಕೆಟ್ ಖಾತರಿಗೊಳಿಸಿದೆ ಎನ್ನಲಾಗುತ್ತಿದೆ.

ಸ್ವಂತ ಊರು ಹುನಗುಂದದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಿಡಿತ ಮುಂದುವರೆಸಿದ್ದಾರೆ. ಅಲ್ಲಿನ ಪುರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಆದರೆ ಇಳಕಲ್ ನಗರಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ಕೈ ತಪ್ಪಿದ್ದು, ಬಿಜೆಪಿ ವಿಜಯದ ನಗೆ ಬೀರಿ ಶಾಸಕ ದೊಡ್ಡನಗೌಡ ಪಾಟೀಲ ಮೇಲುಗೈ ಸಾಧಿಸಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಶಾಸಕ ಸಿದ್ದು ಸವದಿ ಹಾಗೂ ಮಾಜಿ ಸಚಿವೆ ಉಮಾಶ್ರೀ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ರಬಕವಿ–ಬನಹಟ್ಟಿಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲುಂಟಾಗಿದೆ. ತೇರದಾಳದಲ್ಲಿ ಸಮಬಲ ಸಾಧಿಸಿದ್ದು, ಮಹಾಲಿಂಗಪುರ ಪುರಸಭೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ.

ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ಮುಧೋಳ ನಗರಸಭೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಶಾಸಕ ಗೋವಿಂದ ಕಾರಜೋಳ ಯಶಸ್ವಿಯಾಗಿದ್ದಾರೆ. ನಗರಸಭೆ, ತಾಲ್ಲೂಕು ಪಂಚಾಯ್ತಿಯನ್ನು ಪಕ್ಷದ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದೇ ಕಾರಜೋಳ ಈ ಹಿಂದೆ ಹಿನ್ನಡೆ ಅನುಭವಿಸಿದ್ದರು. ಹಾಗಾಗಿ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಉಮೇದಿಯಲ್ಲಿದ್ದರು. ಮುಧೋಳ ಕಾರಜೋಳ ಹಾಗೂ ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ನಡುವಿನ ಪ್ರತಿಷ್ಠೆಯ ಕಣವಾಗಿತ್ತು. ಕಾಂಗ್ರೆಸ್‌ನ ಪೈಪೋಟಿಯ ನಡುವೆ ನಗರಸಭೆಯಲ್ಲಿ ಕಮಲ ಅರಳಿದೆ.

ಬೀಳಗಿ ಪಟ್ಟಣ ಪಂಚಾಯ್ತಿಯಲ್ಲಿ ಶಾಸಕ ಮುರುಗೇಶ ನಿರಾಣಿ ಪ್ರಾಬಲ್ಯ ಮೆರೆದಿದ್ದು, ಆಡಳಿತ ಬಿಜೆಪಿ ಪಾಲಾಗಿದೆ.

ಚೀಟಿ ಎತ್ತಿ ಗೆಲ್ಲಿಸಿದರು!.

ರಬಕವಿ–ಬನಹಟ್ಟಿ ನಗರಸಭೆ ವಾರ್ಡ್ ಸಂಖ್ಯೆ 18ರಲ್ಲಿ ಬಿಜೆಪಿಯ ಯೂನಿಸ್ ಚೌಗುಲಾ ಹಾಗೂ ಕಾಂಗ್ರೆಸ್‌ನ ಶೇಖರ ಹಳಿಂಗಳಿ ತಲಾ 762 ಮತ ಗಳಿಸಿ ಸಮಬಲ ಸಾಧಿಸಿದ್ದರು. ಕೊನೆಗೆ ವಿಜಯಿಯನ್ನು ನಿರ್ಧರಿಸಲು ಚೀಟಿ ಎತ್ತಿದಾಗ ಬಿಜೆಪಿಯ ಯೂನಿಸ್ ಗೆಲುವಿನ ನಗೆ ಬೀರಿದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು