ಮಹಾಲಿಂಗಪುರ: ‘ಭಗವಧ್ವಜ ಶೌರ್ಯ, ಜ್ಞಾನ, ತ್ಯಾಗದ ಪ್ರತೀಕವಾಗಿದೆ. ಪ್ರಭು ಶ್ರೀರಾಮ, ಅರ್ಜುನ, ಶಿವಾಜಿ ಮಹಾರಾಜರಂತಹ ಮಹಾತ್ಮರೂ ಭಗವಧ್ವಜದ ನೆರಳಿನಲ್ಲಿ ಜಯ ಕಂಡವರು. ಧರ್ಮದ ಉಳಿವಿಗಾಗಿ ಭಗವಧ್ವಜ ಅಗತ್ಯ’ ಎಂದು ಬೌದ್ಧಿಕ ವಕ್ತಾರ ಪ್ರಭು ಹೂಗಾರ ಹೇಳಿದರು.
ಪಟ್ಟಣದ ಸಿದ್ಧಾರೂಢ ಸಭಾಭವನದಲ್ಲಿ ಈಚೆಗೆ ನಡೆದ ಗುರು ಪೂಜಾ ಉತ್ಸವದಲ್ಲಿ ಅವರು ಮಾತನಾಡಿದರು.
‘ಜಗತ್ತಿಗೆ ಗುರುಪರಂಪರೆ ಕೊಟ್ಟ ದೇಶ ನಮ್ಮದು. ತ್ಯಾಗ, ಆತ್ಮ ಸಾಕ್ಷಾತ್ಕಾರಕ್ಕಾಗಿ ಭಾರತ ಮೀಸಲು. ಭಾರತಾಂಬೆಯ ಅಭಿವೃದ್ಧಿಗಾಗಿ ಸಂಘದ ಕಾರ್ಯಕರ್ತರು ಮೇಲ್ಪಂಕ್ತಿಯಾಗಬೇಕು. ದೇಶಕ್ಕೆ ಏನಾದರೂ ಕೊಡುವ ಉದ್ದೇಶದಿಂದ ಮಾತ್ರ ಸಂಘಕ್ಕೆ ಬರಬೇಕು. ಸ್ವಾರ್ಥಕ್ಕಾಗಿ ಸಂಘದ ಸೋಗು ಬೇಡ’ ಎಂದರು.
ಶಿಕ್ಷಕ ಐ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆ ಮನೆಗಳಲ್ಲಿ ಸಂಸ್ಕೃತಿಯ ಪರಂಪರೆ ಸಂಘದ ಸಂಸ್ಕಾರವಾಗಿದೆ ಎಂದರು.
ಸಂಘ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಹಾಗೂ ಗುರೂಜಿ ಗೋಳವಾಲ್ಕರ್ ಭಾವಚಿತ್ರಗಳಿಗೆ ನಮಿಸಿ ಭಗವಧ್ವಜಾರೋಹಣ, ನೆರವೇರಿಸಲಾಯಿತು.
ಸತೀಶ ಕಲಾದಗಿ ಧ್ವಜ ವಂದನೆ ಸಲ್ಲಿಸಿದರು. ಪ್ರಕಾಶ ಮಮದಾಪುರ, ಎಂ.ಎ.ಇಟ್ನಾಳ, ಮಂಜು ಶಿಂಪಿ, ವಿಜಯ ಹಿರೇಮಠ, ಮಂಜು ಗೊಂಬಿ, ಕಾರ್ತಿಕ ಗಲಗಲಿ, ಸಮರ್ಥ ಬಡಿಗೇರ, ರಾಘವೇಂದ್ರ ಶಿರೋಳ, ಸಾಗರ ತಿಪಶೆಟ್ಟಿ, ಶ್ರೀನಿಧಿ ಕುಲಕರ್ಣಿ, ಪ್ರದೀಪ ಕುರೇರ, ಈರಪ್ಪ ಹುಣಶ್ಯಾಳ, ಸಾಗರ ಭೋವಿ ಇದ್ದರು.