ಅವ್ಯವಸ್ಥೆಯ ಆಗರ ಶತಮಾನದ ಶಾಲೆ

7
.

ಅವ್ಯವಸ್ಥೆಯ ಆಗರ ಶತಮಾನದ ಶಾಲೆ

Published:
Updated:
Deccan Herald

ಮಹಾಲಿಂಗಪುರ: ಸಹಸ್ರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕೊಟ್ಟ ಶತಮಾನದ ಶಾಲೆ ಈಗ ಅನಾದರಕ್ಕೆ ಒಳಗಾಗಿದೆ. ಮುರುಕು ಹಂಚು, ಸೋರುವ ಚಾವಣಿ, ಬಿರುಕು ಬಿಟ್ಟ ಗೋಡೆಗಳ ಮಧ್ಯದಲ್ಲೇ ಪಾಠ–ಪ್ರವಚನ ನಡೆಯುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

ಮಹಾಲಿಂಗಪುರದ ಪ್ರಥಮ ಜ್ಞಾನ ದೇಗುಲವಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ಎಷ್ಟೋ ಮಂದಿ ಇಂದು  ಜಿಲ್ಲಾಧಿಕಾರಿ, ವೈದ್ಯರು, ರಾಜಕಾರಣಿಗಳು, ಉದ್ಯಮಿಗಳು, ಶಿಕ್ಷಕರು, ಕಲಾವಿದರಾಗಿ ರಾಜ್ಯ, ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶತಮಾನ ಕಂಡ ಶಾಲೆಯು ಈವರೆಗೂ ಯಾರ ಗಣನೆಗೂ ಬಾರದಿರುವುದು ವಿಪರ್ಯಾಸವೇ ಸರಿ. ಇಲ್ಲಿ ಕಲಿಯುತ್ತಿರುವ ನೂರಾರು ವಿದ್ಯಾರ್ಥಿಗಳು ನಿತ್ಯ ಒಂದಿಲ್ಲೊಂದು ಸಮಸ್ಯೆಗಳ ಕೂಪದಲ್ಲಿ ಸಿಲುಕಿ, ಜ್ಞಾನಾರ್ಜನೆ ಕಾಯಕ ಮುಂದುವರೆಸಿದ್ದಾರೆ ಎಂಬುದೇ ಸಮಾಧಾನಕರ ಸಂಗತಿ.

ಬೀಳುವ ಸ್ಥಿತಿಯಲ್ಲಿ ಕೊಠಡಿ:
ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 9 ಮಂದಿ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಶಾಲೆಯಲ್ಲಿ ಇರುವ ಹಳೆಯ ಹಂಚಿನ 7 ಕೊಠಡಿಗಳಲ್ಲಿ 6 ಕೊಠಡಿಗಳು ಸಣ್ಣ ಮಳೆ ಬಂದರೂ ಸೋರಲು ಆರಂಭಿಸುತ್ತದೆ. ಚಾವಣಿ ಹಂಚುಗಳು ಹಾಳಾಗಿವೆ. ಕೊಠಡಿಗಳಲ್ಲಿ ಮಳೆ ನೀರು ಸಂಗ್ರಹಿಸಲು ಬುಟ್ಟಿಗಳನ್ನು ಇಡಬೇಕಾದ ಪರಿಸ್ಥಿತಿ ಇದೆ.

ಸಿಮೆಂಟ್‌ ಕಟ್ಟಡದ ಕೊಠಡಿಗಳಲ್ಲಿ 3 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಚಾವಣಿ ಮೇಲೆ ಬೀಳುವ ಮಳೆ ನೀರು ಹರಿದು ಹೋಗದೇ, ಗೋಡೆಗಳಲ್ಲಿ ಇಂಗಿ, ಬಿರುಕು ಬಿಟ್ಟಿವೆ. ಕೆಲ ಗೋಡೆಗಳಲ್ಲಿ ಗಿಡಗಳು ಬೆಳೆಯುತ್ತಿರುವುದರಿಂದ ಬಿರುಕು ಮತ್ತಷ್ಟು ಹೆಚ್ಚುತ್ತಿದೆ. ಕಿಟಕಿಗಳು ನೆನೆದು ಹಾಳಾಗಿ ಹೋಗಿವೆ. ಕೊಠಡಿಯೊಳಗೆ ಸ್ಲ್ಯಾಬ್‌ಗಳು ಕಳಚುತ್ತಿವೆ. ಇಷ್ಟಾದರೂ ಶಿಕ್ಷಕರು ಮತ್ತು ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಗಮನ ಹರಿಸಿಲ್ಲ. ಸಂಭವನೀಯ ಅಪಾಯ ಸಂಭವಿಸುವ ಮುನ್ನ ದುರಸ್ತಿ ಮಾಡಿಸುವಂತೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಆಗ್ರಹಿಸಿದ್ದಾರೆ.

ಆಟದ ಮೈದಾನ ಸಮಸ್ಯೆ:
ಪಟ್ಟಣದ ಡಬಲ್ ರಸ್ತೆಯ ಪಕ್ಕ ಮತ್ತು ಮಂಗಳವಾರ ಸಂತೆ ಸ್ಥಳಕ್ಕೆ ಹತ್ತಿರವೇ ಶಾಲೆ ಇರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲೆಯ ತುಂಡು ಜಾಗದಲ್ಲಿರುವ ಮೈದಾನದಲ್ಲಿ ಸ್ವಲ್ಪ ಮಳೆಯಾದರೂ ಕೆಸರು ಗದ್ದೆಯಂತಾಗುತ್ತಿದೆ.

ನೀರಿನ ಸಮಸ್ಯೆ:
ಶತಮಾನದ ಶಾಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಶಾಲೆಗೆ ಸ್ವಂತ ಕೊಳವೆಬಾವಿ ಇಲ್ಲ. ಪುರಸಭೆಯಿಂದ ನಳ ಸಂಪರ್ಕ ಪಡೆಯಲಾಗಿದೆ. ಬರಗಾಲ ಸಂದರ್ಭದಲ್ಲಿ ಅಲ್ಲೂ ನೀರು ಬರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ನೀರಿಗೆ ಪರದಾಡಬೇಕಾಗಿದೆ. ಕೆಲ ತಿಂಗಳ ಕಾಲ ಬೇರೆಡೆಯಿಂದ ನೀರು ತಂದು, ಬಿಸಿಯೂಟ ತಯಾರಿಕೆಗೆ ಬಳಸಲಾಗುತ್ತಿತ್ತು ಎಂದು ಶಾಲೆಯ ಶಿಕ್ಷಕರು ಸಮಸ್ಯೆ  ಬಿಚ್ಚಿಟ್ಟರು.

ಶಾಲೆಯ ಕೊಠಡಿಗಳ ಹಂಚುಗಳನ್ನು ಬದಲಿಸುವಂತೆ ಮತ್ತು ಸಿಮೆಂಟ್‌ ಕಟ್ಟಡದ ಶಿಥಿಲ ಕೊಠಡಿಗಳನ್ನು ದುರಸ್ತಿ ಮಾಡುವಂತೆ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯ್ತಿ ಸಿಇಒ ಅವರಿಗೆ ಮನವಿ ಸಲ್ಲಿಸಲಾಗಿದೆ. ಸದ್ಯ ದಾನಿಗಳು ನೀಡಿರುವ ದೇಣಿಗೆಯಿಂದ ಎರಡು ಕೋಠಡಿಗಳ ಚಾವಣಿ ದುರಸ್ತಿ ನಡೆಯುತ್ತಿದೆ
ಎಂ.ಎಸ್.ಹೊಸಮನಿ, ಮುಖ್ಯಗುರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !