ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: BJP ಜಿಲ್ಲಾಧ್ಯಕ್ಷರ ಮುಂದುವರಿಕೆ ಪಕ್ಷಕ್ಕೆ ಹಿನ್ನಡೆಯಾಗುವುದೇ?

Published 16 ಜನವರಿ 2024, 6:43 IST
Last Updated 16 ಜನವರಿ 2024, 6:43 IST
ಅಕ್ಷರ ಗಾತ್ರ

ಬಾಗಲಕೋಟೆ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶಾಂತಗೌಡ ಪಾಟೀಲ ಅವರನ್ನು ಮುಂದುವರೆಸಿರುವುದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯುಂಟು ಮಾಡಿದೆ. ಜಿಲ್ಲೆಯೊಳಗಿನ ಭಿನ್ನಮತ ಮುಂದುವರೆಯುವ ಲಕ್ಷಣಗಳು ಕಾಣುತ್ತಿದ್ದು, ಪಕ್ಷ ಸಂಘಟನೆಗೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜು ನಾಯ್ಕರ್ ಬಹಿರಂಗವಾಗಿಯೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವುದಾಗಿ ಹೇಳಿಕೊಂಡಿದ್ದರು. ಅವರಲ್ಲದೇ ಚಂದ್ರಶೇಖರ ಉಪಾಧ್ಯೆ, ಮೋಹನ ಜಾಧವ, ವಿಜಯಲಕ್ಷ್ಮಿ ತುಂಗಳ, ಬಸವರಾಜ ಅವರಾದಿ, ಲಕ್ಷ್ಮಿನಾರಾಯಣ ಕಾಸಟ್‌ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದರು. ವೀಕ್ಷಕ ಡಾ.ಬಸವರಾಜ ಕೆಲಗಾರ ಮುಂದೆ ತಮಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದರು. ಆದರೆ, ಅವರಿಗೆ ಮನವಿಗೆ ಮನ್ನಣೆ ಸಿಕ್ಕಿಲ್ಲ.

ವಿಧಾನಸಭಾ ಚುನಾವಣೆ ವೇಳೆ ಪಕ್ಷದ ನಾಯಕರೊಳಗಿನ ಭಿನ್ನಮತ ತಾರಕಕ್ಕೇರಿತ್ತು. ರಾಜ್ಯ ನಾಯಕರಿಗೆ ಜಿಲ್ಲೆಯ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನುಗ್ಗಬೇಕಿದ್ದ ಅಧ್ಯಕ್ಷರು, ಬಾದಾಮಿ ಕ್ಷೇತ್ರದ ಅಭ್ಯರ್ಥಿಯಾಗಿ, ಕ್ಷೇತ್ರಕ್ಕೆ ಸೀಮಿತರಾಗಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಅಧ್ಯಕ್ಷ ಬಾದಾಮಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದಾಗ ಜಿಲ್ಲೆಯಲ್ಲಿ ಪಕ್ಷದ ಎರಡನೇ ಹಂತದ ನಾಯಕರು ಅನಾಥ ಪ್ರಜ್ಞೆ ಅನುಭವಿಸಿದ್ದರು. ಪರ–ವಿರೋಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸ ಆಗದಿರುವುದು ಜಿಲ್ಲೆಯ ನಾಯಕರಿಗೆ ಬೇಸರ ತರಿಸಿದೆ.

ಸಂಘಟನೆಗಾಗಿ ಓಡಾಟ, ಪಕ್ಷದೊಳಗೆ ಭಿನ್ನಮತ ಮಾಡುವವರ ವಿರುದ್ಧ ಸೌಮ್ಯ ನೀತಿ ಅನುಸರಿಸುವುದು ಪಕ್ಷದ ಸಂಘಟನೆಗೆ ಹಿನ್ನಡೆಯನ್ನುಂಟು ಮಾಡಿವೆ. ಕೆಲವೊಮ್ಮೆ ಸೌಮ್ಯವಾಗಿದ್ದರೆ, ಕೆಲವೊಮ್ಮೆ ಕಠಿಣ ನಿಲುವು ತಾಳಬೇಕಾಗುತ್ತದೆ. ಎದುರಾಳಿ ಪಕ್ಷಗಳ ನಾಯಕರ ವಿರುದ್ಧವೂ ಅವರು ಆರ್ಭಟಿಸಿದ್ದು ಕಡಿಮೆ. ಜಿಲ್ಲೆಯ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮನೋಭಾವವನ್ನೂ ತೋರಿಸಿಲ್ಲ. ಬಿಜೆಪಿಯ ಆಕ್ರಮಣಶೀಲ ನೀತಿ ಅಧ್ಯಕ್ಷರಲ್ಲಿ ಕಾಣಸಿಗುವುದಿಲ್ಲ.

ಪಪಕ್ಷದೊಳಗಿನ ಎರಡನೇ ಹಂತದ ನಾಯಕರೂ ಟೀಕೆಗಳನ್ನು ಮಾಡಿದಾಗ ಕಾದು ನೋಡುವ ತಂತ್ರ ಅನುಸರಿಸಿದ್ದರು. ಕ್ರಮಕೈಗೊಳ್ಳುವ ವೇಳೆಗೆ ಪಕ್ಷಕ್ಕೆ ಆಗಬೇಕಾದ ಹಾನಿಯಾಗಿತ್ತು. ಬಾಗಲಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾದ ಅಭ್ಯರ್ಥಿಯೊಬ್ಬರ ಜತೆಗೆ ಇತ್ತೀಚೆಗೆ ಸಂಸದ ಪಿ.ಸಿ. ಗದ್ದಿಗೌಡರ ರಾಮ ಮಂದಿರದ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ. ಈ ಬಗ್ಗೆಯೂ ಪಕ್ಷದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. 

ವಿಧಾನಸಭಾ ಚುನಾವಣೆ ವೇಳೆ ಒಡೆದ ಮನೆಯಾಗಿದ್ದ ಬಿಜೆಪಿಯ ನಾಯಕರನ್ನು ಒಂದುಗೂಡಿಸುವ ಕೆಲಸ ಆಗಿಲ್ಲ. ರಾಜ್ಯ ಘಟಕದ ಅಧ್ಯಕ್ಷರು ಬಂದಾಗಲೂ ಈ ನಿಟ್ಟಿನಲ್ಲಿ ಕೆಲಸಗಳು ನಡೆದಂತೆ ಕಾಣುವುದಿಲ್ಲ. ಅಧ್ಯಕ್ಷ ವಿಜಯೇಂದ್ರ ಅವರು ಬಂದಾಗಲೂ ಒಂದೊಂದು ಗುಂಪು ಒಂದೊಂದು ಕಡೆ ಕಾಣಿಸಿಕೊಂಡಿತ್ತು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಪಕ್ಷ ಶಾಂತಗೌಡ ಅವರನ್ನೇ ಮುಂದುವರೆಸಿದೆ. ಪಕ್ಷದ ನಿರ್ಧಾರ ಸ್ವಾಗತಿಸುವೆ. ಒಳ್ಳೆಯ ದಿನಗಳಿಗೆ ಕಾಯುವೆ
ರಾಜು ನಾಯ್ಕರ್ ಬಿಜೆಪಿ ಮುಖಂಡ
ಶಾಂತಗೌಡ ಮತ್ತೆ ನೇಮಕ
ಬಾಗಲಕೋಟೆ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಶಾಂತಗೌಡ ಪಾಟೀಲ ಅವರನ್ನೇ ಮುಂದುವರೆಸಲಾಗಿದೆ. ಈ ಕುರಿತು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಹಲವು ನಾಯಕರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಯತ್ನಿಸಿದ್ದರು. ಪಕ್ಷ ಅವರನ್ನೇ ಮುಂದುವರೆಸಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT