ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಸಂಜೆಯ ರಾಗಕ್ಕೆ ನಶೆಯ ಗುಂಗು!

ಮದ್ಯದ ಘಾಟಿನ ಬಿಸಿಗೆ 41 ಡಿಗ್ರಿ ಸುಡುತ್ತಿದ್ದ ಸೂರ್ಯನೂ ತಣ್ಣಗಾದ
Last Updated 5 ಮೇ 2020, 2:16 IST
ಅಕ್ಷರ ಗಾತ್ರ

ಬಾಗಲಕೋಟೆ: ಮದ್ಯದ ಘಾಟಿನ ಬಿಸಿಗೆ ಸೋಮವಾರ ಜಿಲ್ಲೆಯಲ್ಲಿ 41 ಡಿಗ್ರಿ ಸುಡುತ್ತಿದ್ದ ಸೂರ್ಯನೂ ತಣ್ಣಗಾದಂತೆ ತೋರಿದನು. ಒಣಗಿ ಬಿರುಕು ಬಿಟ್ಟ ನೆಲದಿಂದ ಅದೊಮ್ಮೆ ದಿಢೀರನೆ ಒಸರಿದ ನೀರಿನ ಪಸೆಯಿಂದ ಬಾಯಾರಿಕೆ ತಣಿಸಿಕೊಂಡವರಂತೆಮದ್ಯಪ್ರಿಯರು, ಮುಂಜಾನೆ ಬಾರ್ ಬಾಗಿಲು ತೆರೆದದ್ದು ಕಂಡು ಸಂಭ್ರಮಿಸಿದರು.

ಲಾಕ್‌ಡೌನ್ ಕಾರಣ ಬರೋಬ್ಬರಿ 50 ದಿನಗಳ ನಂತರ ಮದ್ಯದಂಗಡಿಗಳು ಬಾಗಿಲು ತೆರೆದಿದ್ದವು. ಹೀಗಾಗಿ ಮದ್ಯ ಕೊಳ್ಳಲು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತರು.ಹೊತ್ತೇರುತ್ತಿದ್ದಂತೆ ಮೈದಳೆದ ರಣ ಬಿಸಿಲ ಬೇಗೆಯನ್ನು ಮರೆತು ಕೊಳ್ಳಲು ಮುಗಿಬಿದ್ದರು.

ನಗರದಲ್ಲಿ ಮುಂಜಾನೆ ಮದ್ಯದಂಗಡಿ ಮುಂದೆ ಕಂಡ ಸ್ವಯಂ ಶಿಸ್ತಿನ ಲಕ್ಷ್ಮಣ ರೇಖೆ ಮಧ್ಯಾಹ್ನದ ವೇಳೆಗೆ ಮಾಯವಾಗಿತ್ತು. ಹೀಗಾಗಿ ಪೊಲೀಸರಿಂದ ಆಗಾಗ ಲಾಠಿ ಏಟು ದೊರೆಯಿತು. ಸಂಜೆ ಜಾಲಿ ಮೂಡಿನಲ್ಲಿ ಎಣ್ಣೆಯ ವಗರು, ಉಪ್ಪಿನಕಾಯಿಯ ರುಚಿಯಿಂದ ಒಡಮೂಡುವ ಮತ್ತಿನ ಘಮ್ಮತ್ತು ನೆನಪಿಸಿಕೊಳ್ಳುತ್ತಾ ನಿಂತವರಿಗೆ ಪೊಲೀಸರ ಬೂಟಿನ ಸಪ್ಪಳ, ಲಾಠಿಯ ಏಟು ಗೌಣವಾಗಿ ಕಂಡಿತು.

ಸ್ನ್ಯಾಕ್ಸ್ ಸಿಗಲಿಲ್ಲ

ಮನೆಗೊಯ್ಯಲು ಮದ್ಯ ಸಿಕ್ಕರೂ ಬೇಕರಿ, ಹೋಟೆಲ್‌ಗಳು ಬಾಗಿಲು ಹಾಕಿದ್ದರಿಂದ ಹಲವರಿಗೆ ಅದರೊಟ್ಟಿಗೆ ನೆಂಚಿಕೊಳ್ಳಲು ಬೇಕಾದ ಸ್ನ್ಯಾಕ್ಸ್ (ಕುರುಕಲು ತಿನಿಸು) ಸಿಗಲಿಲ್ಲ. ತಮಗೆ ನೆಲೆ ಕಲ್ಪಿಸುತ್ತಿದ್ದ ಸಾವಜಿ ಹೋಟೆಲ್‌ಗಳು ಕದ ಹಾಕಿದ್ದನ್ನು ಕಂಡು ನೊಂದುಕೊಂಡರು. ಕೊನೆಗೆ ಸೂಪರ್‌ ಮಾರ್ಕೆಟ್‌ಗೆ ಹೋಗಿ ಅಲ್ಲಿಯೂ ಸಾಲು ನಿಂತು ತಿನಿಸು ಖರೀದಿಸಿ ಮರಳಿದರು.

ಮದ್ಯ ಕೊಳ್ಳಲು ಸಾಲುಗಟ್ಟುವವರಿಗೆ ಬಿಸಿಲಿನಿಂದ ರಕ್ಷಣೆಗೆ ಕೆಲವು ಮದ್ಯದಂಗಡಿಯವರು ಬ್ಯಾರಿಕೇಡ್ ಇಟ್ಟು, ಶಾಮಿಯಾನ ಹಾಕಿದ್ದರು. ಕಾವಲುಗಾರರನ್ನು ನೇಮಿಸಿಕೊಂಡು ಸಾಲು ತಪ್ಪದಂತೆ ನೋಡಿಕೊಂಡರು. ಬಾರ್, ಎಂಎಸ್‌ಐಎಲ್‌ಗಳ ಮುಂದೆ ನಿಂತವರ ವಿಡಿಯೊ, ಫೋಟೊ ತೆಗೆಯಲು ಮಾಧ್ಯಮದವರು ಮುಂದಾದಾಗ ಹಲವರು ಮುಖ ಮುಚ್ಚಿಕೊಂಡರು. ಇನ್ನೂ ಕೆಲವರು ಮದ್ಯ ಕೊಂಡೊಯ್ಯಲು ತಂದಿದ್ದ ಬ್ಯಾಗ್‌ಗಳನ್ನು ಮುಖಕ್ಕೆ ಅಡ್ಡಲಾಗಿ ಇಟ್ಟುಕೊಂಡರು.

ಮತ್ತೆ ಕೆಲಕಾಲ ಬಾರ್‌ನ ಬಾಗಿಲು ತೆಗೆಯೊಲ್ಲವೇನೊ ಎಂಬಂತೆ ಹಲವರು ನಾಲ್ಕೈದು ಬಾಟಲಿಗಳನ್ನು ತಮ್ಮೊಂದಿಗೆ ಕೊಂಡೊಯ್ದರು. ಕೆಲವು ಎಂಎಸ್‌ಐಎಲ್ ಮಳಿಗೆಗಳಲ್ಲಿ ಗ್ರಾಹಕರು ಕೇಳಿದ ಬ್ರಾಂಡ್‌ನ ಮದ್ಯ ಸಿಗಲಿಲ್ಲ. ಹೀಗಾಗಿ ಅವರು ಕೊಟ್ಟ ಬ್ರಾಂಡ್‌ಗೆ ಕೊಳ್ಳುವವರು ತೃಪ್ತರಾಗಬೇಕಾಯಿತು.

ಕಳೆದ ಒಂದೂವರೆ ತಿಂಗಳಿನಿಂದ ಒಬ್ಬರ ಮುಖ ಮತ್ತೊಬ್ಬರು ನೋಡಲು ಸಾಧ್ಯವಾಗದೇ ಬರೀ ಫೋನ್‌ನಲ್ಲಿಯೇ ಉಭಯ ಕುಶಲೋಪರಿಗಿಳಿದಿದ್ದ ಗೆಳೆಯರ ಗುಂಪು ಮದ್ಯ ಕೊಳ್ಳುವ ನೆಪದಲ್ಲಿ ಬಾರ್ ಎದುರು ಒಂದಾಗಿತ್ತು. ಬಾಟಲಿಗಳ ಕೊಂಡವರೇ ಸುರಕ್ಷಿತ ಅಂತರ ಮರೆತು ಪಾನಗೋಷ್ಠಿಗೆ ಅಣಿಯಾಗಲು ತೆರಳಿದ್ದು ಕಂಡು ಬಂದಿತು. ಒಟ್ಟಾರೆ ಶೆರೆ ಅಂಗಡಿಯ ಮುಂದೆ ಕಲೆತವರು ಸಂಜೆ ಉಷೆಯ ರಾಗಕ್ಕೆ ನಶೆಯ ನಂಜು ಏರಿಸಲು ಹೊರಟವರಂತೆ ಕಂಡುಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT