ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಕೋವಿಡ್ ಗೆದ್ದವರ ಬರಮಾಡಿಕೊಂಡ ಐಜಿಪಿ

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಜಿಲ್ಲಾ ಆಸ್ಪತ್ರೆ ಆವರಣ
Last Updated 5 ಮೇ 2020, 16:14 IST
ಅಕ್ಷರ ಗಾತ್ರ

ಬಾಗಲಕೋಟೆ: ಪೊಲೀಸ್ ಬ್ಯಾಂಡ್‌ನಲ್ಲಿ ’ಸಾರೆ ಜಹಾಂಸೆ ಅಚ್ಛಾ‘ ಗೀತೆ ಮೊಳಗುತ್ತಿದ್ದಂತೆಯೇ ಮಂಗಳವಾರ ಸಂಜೆ ಇಲ್ಲಿನ ಕೋವಿಡ್ ಆಸ್ಪತ್ರೆ (ಜಿಲ್ಲಾ ಆಸ್ಪತ್ರೆ) ಆವರಣ ಭಾವಪೂರ್ಣ ಕ್ಷಣಕ್ಕೆ ಸಾಕ್ಷಿಯಾಯಿತು.

ಕೋವಿಡ್–19 ಸೋಂಕು ಬಾಧಿತರಾಗಿ 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಗುಣಮುಖರಾದ ಮುಧೋಳದ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಸಮವಸ್ತ್ರ ಧರಿಸಿ ಆಸ್ಪತ್ರೆಯಿಂದ ಹೊರಗೆ ಬಂದಾಗ ಅವರನ್ನು ಸ್ವಾಗತಿಸಲು ಹೂಗುಚ್ಛ ಹಿಡಿದು ಸ್ವತಃ ಬೆಳಗಾವಿ ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್ ನಿಂತಿದ್ದರು.

ಹಿರಿಯ ಅಧಿಕಾರಿಯೇತಮ್ಮನ್ನು ಎದುರುಗೊಳ್ಳಲು ಬಂದಿದ್ದು ಕಂಡು ಇಬ್ಬರೂ ಸಿಬ್ಬಂದಿ ಭಾವುಕರಾದರು. ಎಂದಿನ ಶೈಲಿಯಲ್ಲಿಯೇ ಸೆಲ್ಯೂಟ್ ಹೊಡೆದು ನಮಿಸಿದರು. ಅವರನ್ನು ಅಭಿನಂದಿಸಿ ಕುಶಲೋಪರಿ ನಡೆಸಿದ ರಾಘವೇಂದ್ರ ಸುಹಾಸ್, ಮುಂದೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು. ಈ ವೇಳೆ ಅಲ್ಲಿ ನೆರೆದಿದ್ದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯಿಂದ ಚಪ್ಪಾಳೆಯ ಸದ್ದು ಅನುರಣಿಸಿತು.ಇಬ್ಬರಿಗೂ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್ ಪ್ರಮಾಣಪತ್ರ ವಿತರಿಸಿದರು.

ಸೈನಿಕರಂತೆ ದುಡಿಯುತ್ತೇವೆ

ಮನೆಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಸಕಾರಾತ್ಮಕ ಚಿಂತನೆ ಹಾಗೂ ಧೈರ್ಯ ಇವೆರಡೂ ಕೋವಿಡ್–19 ಎದುರಿಸಲು ಪರಿಣಾಮಕಾರಿ ಮದ್ದು ಎಂದು ಹೇಳಿದ ಕಾನ್‌ಸ್ಟೆಬಲ್, ನಾವು ಮತ್ತೆ ಕರ್ತವ್ಯಕ್ಕೆ ಮರಳುತ್ತೇವೆ. ನಮ್ಮ ದೇಶವನ್ನು ಕಾಡುತ್ತಿರುವ ಈ ಪಿಡುಗಿನ ವಿರುದ್ಧ ಸೈನಿಕರಂತೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಸೋಂಕು ದೃಢಪಟ್ಟ ದಿನ ಮನಸ್ಸಿಗೆ ಅಘಾತವಾಗಿತ್ತು. ಎಸ್ಪಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ವೈದ್ಯರು ನೀಡಿದ ನೈತಿಕ ಬೆಂಬಲದಿಂದಬಹುಬೇಗನೆ ಅದರಿಂದ ಹೊರಗೆ ಬಂದೆವು. ಲಾಕ್‌ಡೌನ್ ಘೋಷಣೆಯಾದ ದಿನದಿಂದ ಪತ್ನಿ ಹಾಗೂ ಮಕ್ಕಳನ್ನು ವಿಜಯಪುರದ ತವರು ಮನೆಗೆ ಕಳಿಸಿದ್ದೆನು. ಹೀಗಾಗಿ ನನಗೆ ಸೋಂಕು ತಗುಲಿದರೂ ಅವರು ಸುರಕ್ಷಿತವಾಗಿದ್ದಾರೆ ಎಂದು ಮತ್ತೊಬ್ಬ ಕಾನ್‌ಸ್ಟೆಬಲ್ ಹೇಳಿದರು.

ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ನಾಲ್ವರು ಕೋವಿಡ್–19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT