ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಬರೆದ ಕೋವಿಡ್ ಪಾಸಿಟಿವ್ ಯುವತಿ

ಸಿಇಟಿ: ಜಿಲ್ಲೆಯಲ್ಲಿ ಮೊದಲ ದಿನ 1190 ವಿದ್ಯಾರ್ಥಿಗಳು ಗೈರು
Last Updated 30 ಜುಲೈ 2020, 13:27 IST
ಅಕ್ಷರ ಗಾತ್ರ

ಬಾಗಲಕೋಟೆ: ಕೋವಿಡ್ ಪಾಸಿಟಿವ್ ಹೊಂದಿದ್ದ ಬಾಗಲಕೋಟೆ ನಗರದ 21 ವರ್ಷದ ಯುವತಿಯೊಬ್ಬರು ಗುರುವಾರ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದರು. ಅದಕ್ಕಾಗಿ ನವನಗರದ ಅಲ್ಪಸಂಖ್ಯಾತರ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಜಿಲ್ಲಾಡಳಿತ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸಿತ್ತು.

ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಪಿಪಿಇ ಕಿಟ್ ಧರಿಸಿದ್ದ ಶಿಕ್ಷಕರೊಬ್ಬರು ನೇಮಕಗೊಂಡಿದ್ದರು. ಆರೋಗ್ಯ ಇಲಾಖೆಯಿಂದ ಇಬ್ಬರು ವೈದ್ಯರನ್ನು ನಿಯೋಜಿಸಲಾಗಿತ್ತು.

ಪ್ರತ್ಯೇಕ ಬಾಕ್ಸ್ ವ್ಯವಸ್ಥೆ: ವಿದ್ಯಾರ್ಥಿನಿಗೆ ಒಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಯನ್ನು ಪ್ರತ್ಯೇಕ ಬಾಕ್ಸ್‌ನಲ್ಲಿ ಹಾಕಲಾಗಿತ್ತು. ಪರೀಕ್ಷೆ ಮುಗಿದ ನಂತರ ಆಕೆಯ ಉತ್ತರ ಪತ್ರಿಕೆಯನ್ನು ಪಾಲಿಥೀನ್ ಪ್ಯಾಕ್‌ನಲ್ಲಿ ಹಾಕಿ ನಂತರ ಸ್ಯಾನಿಟೈಸ್ ಮಾಡಿ ಬಂಡಲ್‌ಗೆ ಸೇರಿಸಲಾಯಿತು. ಈ ವಿಶೇಷ ಪರೀಕ್ಷಾ ಕೇಂದ್ರದ ಉಸ್ತುವಾರಿಯನ್ನು ಸ್ವತಃ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ ಪೂಜಾರಿ ವಹಿಸಿಕೊಂಡಿದ್ದರು.ಶುಕ್ರವಾರ ಭೌತವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ. ಕೋವಿಡ್ ಪಾಸಿಟಿವ್ ವಿದ್ಯಾರ್ಥಿನಿ ಎರಡೂ ವಿಷಯಗಳ ಪರೀಕ್ಷೆಗೂ ಹಾಜರಾಗಲಿದ್ದಾರೆ ಎಂದು ಶಶಿಧರ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಮೇಲ್ವಿಚಾರಕರನ್ನು ನೇಮಿಸುವಾಗ ಅವರ ಆರೋಗ್ಯ ತಪಾಸಣೆ ಕೂಡ ನಡೆಸಲಾಗಿತ್ತು ಎಂದರು.

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಗೌಪ್ಯ ವಸ್ತುಗಳನ್ನು ಸಾಗಿಸಲು ತಹಶೀಲ್ದಾರ್ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸರ್ಕಾರಿ ಕಾಲೇಜುಗಳ ಪ್ರಾಚಾರ್ಯರನ್ನು ಒಳಗೊಂಡ ಆರು ತಂಡ ಕೆಲಸ ಮಾಡಿದವು. ಈ ತಂಡಗಳು ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಪಡೆದು ಖಜಾನೆಗೆ ತಲುಪಿಸುವ ಕಾರ್ಯ ಮಾಡಿದವು.

ಪ್ರತಿ ಪರೀಕ್ಷಾ ಕೇಂದ್ರದ ಮುಂದೆ ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪಿಸಲಾಗಿತ್ತು. ಅಲ್ಲಿ ತಲಾ ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರಿಶೀಲಿಸಿ ಕೇಂದ್ರದ ಒಳಗೆ ಬಿಟ್ಟರು. ಅಲ್ಲದೇ ತುರ್ತು ಕಾರ್ಯಕ್ಕಾಗಿ ಆಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಗಿತ್ತು. ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್ ಹಾಕಿ ಕೇಂದ್ರದ ಒಳಗೆ ಬಿಡುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT