ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೌಸ್‌ಫುಲ್ ನಾಟಕಕಾರ, ಮಸ್ತ್ ಕಲಾವಿದ

ಎರಡು ದಶಗಳಿಂದ ರಂಗಭೂಮಿ ಚಟುವಟಿಕೆಯಲ್ಲಿ ರಾಜಣ್ಣ ಜೇವರ್ಗಿ
Last Updated 20 ಫೆಬ್ರುವರಿ 2022, 5:40 IST
ಅಕ್ಷರ ಗಾತ್ರ

ಬಾದಾಮಿ: ಇವರು ಬರೆದ ನಾಟಕಗಳೆಲ್ಲವೂಬನಶಂಕರಿದೇವಿ ಜಾತ್ರೆಯಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಹಾಸ್ಯಪಾತ್ರಗಳ ಮೂಲಕ ನಟನಾ ಕೌಶಲದಲ್ಲೂ ಸೈ ಎನಿಸಿಕೊಂಡಿರುವ ಇವರು, ಕೈಕೊಟ್ಟ ಕಲಾವಿದರ ಪಾತ್ರವನ್ನು ಆ ಕ್ಷಣಕ್ಕೆ ಮಾಡಿ ಚಪ್ಪಾಳೆಗಿಟ್ಟಿಸಿಕೊಂಡಿದ್ದಾರೆ.

ನಾಟಕ ಸಾಹಿತಿ ಮತ್ತು ರಂಗಭೂಮಿ ಕಲಾವಿದ ಜೇವರ್ಗಿ ರಾಜಣ್ಣ 25ನೇ ವಯಸ್ಸಿನಲ್ಲಿಯೇ ನಾಟಕ ರಚನೆಯಲ್ಲಿ ತೊಡಗಿದವರು. ಅವರು ಬರೆದ ಮೊದಲ ನಾಟಕ ಸರಿ ಇಲ್ಲವೆಂದು ಕೆಲವರು ಮೂದಲಿಸಿದರು. ಅದನ್ನೇ ಸವಾಲಾಗಿ ಸ್ವೀಕರಿಸಿದ ಅವರು ಸುಮಾರು ಎರಡು ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. 12ಕ್ಕೂ ಅಧಿಕ ನಾಟಕಗಳನ್ನು ಬರೆದು ಪ್ರೇಕ್ಷಕರ, ರಂಗಭೂಮಿ ಸಾಧಕರ ಮನ ಸೆಳೆದಿದ್ದಾರೆ.

ಸದ್ಯ, ಇಲ್ಲಿನ ಬನಶಂಕರಿದೇವಿ ಜಾತ್ರೆಯ ಬಿ.ಎಸ್.ಆರ್. ಗುಬ್ಬಿ ನಾಟಕ ಕಂಪನಿ ಕ್ಯಾಂಪಿನಲ್ಲಿರುವ ಇವರ ‘ ಕುಡುಕ ಮಲ್ಯಾ ಸಿಡಿಕ ಮಲ್ಲಿ’ ನಾಟಕವು 100 ಪ್ರಯೋಗಗಳನ್ನು ದಾಟಿದೆ. ನಿತ್ಯ ಹೌಸ್ ಫುಲ್ ಪ್ರದರ್ಶನ ನಡೆಯುತ್ತಿವೆ.

ಜೇವರ್ಗಿಯಲ್ಲಿ ಟೇಲರಿಂಗ್ ಮಾಡುತ್ತಿದ್ದ ಅವರು ನಾಲ್ವರಿಗೆ ಉದ್ಯೋಗ ನೀಡಿದ್ದರು. ರಂಗಭೂಮಿ ಮೇಲಿನ ಆಸಕ್ತಿಯಿಂದ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಎದುರಾದ ಅವಮಾನಗಳನ್ನು ಮೆಟ್ಟಿನಿಂತ ಅವರು ‘ಅಮರ ಫಲ’, ‘ಅರ್ಥಾರ್ಥ’, ‘ಚಡ್ಡಿ ಚಿಲಿಕ್ಯಾ ಮಡ್ಡಿ ಮಲಕ್ಯಾ’ ನಾಟಕಗಳ ಮೂಲಕ ಪ್ರತಿಭೆಯ ಅನಾವರಣಗೊಳಿಸಿದರು.

‘1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ವಿಜಯಪುರ ಜಿಲ್ಲೆಯ ಇಬ್ಬರು ಯೋಧರು ಹುತಾತ್ಮರಾದರು. ಭಾರತೀಯ ಯೋಧರು ದೇಶಕ್ಕಾಗಿ ಹುತಾತ್ಮರಾದ ಕಥಾವಸ್ತುವನ್ನು ಆಧರಿಸಿಕೊಂಡು ‘ಕಾರ್ಗಿಲ್ ವೀರಯೋಧ’ ನಾಟಕ ಬರೆದೆ. ಬನಶಂಕರಿದೇವಿ ಜಾತ್ರೆಯಲ್ಲಿ ಪ್ರೇಕ್ಷಕರು ಸ್ಪಂದಿಸಿದರು ರಾಜಣ್ಣ ಹೇಳಿದರು.

‘2002 ರಲ್ಲಿ ರಾಜ್ಯದಾದ್ಯಂತ ಮತ್ತು ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶಿಸಿದಾಗ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿತು. ಸಮಕಾಲೀನ ಕಥಾವಸ್ತುವನ್ನು ಆಯ್ದುಕೊಂಡು ನಾಟಕವನ್ನು ರಚಿಸುವೆ’ ಎಂದು ತಿಳಿಸಿದರು.

ರಾಜಣ್ಣ ಅವರ ಕುಂಟ ಕೋಣ ಮೂಕ ಜಾಣ, ಪ್ಯಾಟಿ ಹುಡಿಗ್ಯಾರು, ಅಪ್ಪ ಸಂದ್ಯಾಗ ಮಗಳು ಮಂದ್ಯಾಗ, ಬಲಿಯಾಗದಿರು ಬಾಲೆ, ಶೆರೆ ಅಂಗಡಿ ಸಂಗವ್ವ, ನಗಿಸಿ ನಗಿಸಿ ಅಳಸ್ತಾಳ, ಮಂಗ್ಳೂರ ಮಾಣಿ ಹುಬ್ಬಳ್ಳಿ ರಾಣಿ, ಕಾಗಕ್ಕ ಗುಬ್ಬಕ್ಕಗಳು ಪ್ರೇಕ್ಷಕರ ಮನಸೂರೆಗೊಂಡಿವೆ.

‘ಬನಶಂಕರಿದೇವಿ ಜಾತ್ರೆಯು ರಾಜ್ಯದಲ್ಲಿಯೇ ತಿಂಗಳ ವರೆಗೆ ನಡೆಯುವ ಜಾತ್ರೆಯಾಗಿದೆ. ಪ್ರೇಕ್ಷಕರು ಇಲ್ಲಿ ನಾಟಕಗಳನ್ನು ವೀಕ್ಷಿಸಿ ಸಂಭ್ರಮಿಸಲು ಬರುವರು. ಇಷ್ಟೊಂದು ಪ್ರೇಕ್ಷಕರು ಬೇರೆ ಯಾವ ಜಾತ್ರೆಗಳಲ್ಲಿಯೂ ಬರುವುದಿಲ್ಲ. ನಾಲ್ಕೂ ಆಟಗಳು ಹೌಸ್ ಫುಲ್ ಇರುತ್ತವೆ. ವೃತ್ತಿ ರಂಗಭೂಮಿ ಕಲಾವಿದರಿಗೆ ವರ್ಷದ ಅನ್ನವನ್ನು ಕೊಡುವುದು ಬನಶಂಕರಿದೇವಿ ತಾಯಿ’ ಎಂದು ಸಂತಸ ವ್ಯಕ್ತಪಡಿಸಿದರು.

‘ಶೆರೆ ಅಂಗಡಿ ಸಂಗವ್ವ ‘ ನಾಟಕವನ್ನು ಜೇವರ್ಗಿ, ಗುಬ್ಬಿ ಮತ್ತು ಗದಗ ನಾಟಕ ಕಂಪನಿಗಳಿಂದ ರಾಜ್ಯದಾದ್ಯಂತ 16 ಸಾವಿರ ಪ್ರಯೋಗ ಮತ್ತು ‘ಕುಂಟ ಕೋಣ ಮೂಕ ಜಾಣ ‘ ನಾಟಕವನ್ನು ಸಾವಿರಕ್ಕೂ ಅಧಿಕ ಪ್ರಯೋಗಗಳನ್ನು ಪ್ರದರ್ಶಿಸಿ ದಾಖಲೆ ಬರೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT