ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ | ಬರ: ಬಿಸಿಲಿಗೆ ಹೈರಾಣಾಗುತ್ತಿರುವ ಬೆಳೆಗಳು

ಒಣಗುತ್ತಿರುವ ದ್ರಾಕ್ಷಿ, ದಾಳಿಂಬೆ, ನಿಂಬೆ ಬೆಳೆಗಳು
Published 22 ಫೆಬ್ರುವರಿ 2024, 3:58 IST
Last Updated 22 ಫೆಬ್ರುವರಿ 2024, 3:58 IST
ಅಕ್ಷರ ಗಾತ್ರ

ಜಮಖಂಡಿ: ಬರಗಾಲದಿಂದ ತಾಲ್ಲೂಕಿನ ವಾಣಿಜ್ಯ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಬಿಸಿಲಿನ ತಾಪ ಮತ್ತು ತೇವಾಂಶದ ಕೊರತೆಯಿಂದ ಒಣಗುತ್ತಿವೆ. ಬೆಳೆ ರಕ್ಷಣೆಗಾಗಿ ಕೆಲ ರೈತರು 5 ರಿಂದ 10 ಕಿ.ಮೀ. ದೂರದಿಂದ ಟ್ಯಾಂಕರ್ ಮೂಲಕ ನೀರನ್ನು ತಂದು ಉಣಿಸುತ್ತಿದ್ದಾರೆ. ಆದರೆ, ಪ್ರಯೋಜನ ಆಗುತ್ತಿಲ್ಲ.

‘ತೋಟದಲ್ಲಿದ್ದ ಎರಡು ಎಕರೆ ದ್ರಾಕ್ಷಿ ಬೆಳೆ ತೇವಾಂಶದ ಕೊರತೆಯಿಂದ ಒಣಗಿದೆ. ಎರಡು ಕೊಳವೆ ಬಾವಿಗಳೂ ಬತ್ತಿವೆ. ಮೂರು ವರ್ಷಗಳ ಹಿಂದೆ ₹8 ಲಕ್ಷ ಖರ್ಚು ಮಾಡಿ ದ್ರಾಕ್ಷಿ ಹಚ್ಚಿದ್ದೇವೆ. ನೀರಿನ ಕೊರತೆಯಿಂದ ಒಣಗಿದೆ. ಮತ್ತೆ ಬೆಳೆಸಲು ಲಕ್ಷಗಟ್ಟಲೆ ಹಣದ ಜೊತೆಗೆ ಇದುವರೆಗೆ ಮಾಡಿದ ಶ್ರಮವೂ ವ್ಯರ್ಥವಾಗುತ್ತಿದೆ. ಅಕ್ಕಪಕ್ಕದವರ ಜಮೀನಿನಲ್ಲೂ ದ್ರಾಕ್ಷಿ, ನಿಂಬೆ, ದಾಳಿಂಬೆ ಬೆಳೆಗಳು ಒಣಗಿವೆ. ಒಣಗಿದ ಗಿಡಗಳನ್ನು ರೈತರು ಕಡಿದು ಉರುವಲಿಗೆ ಬಳಸುವಂತಾಗಿದೆ’ ಎಂದು ಸಾವಳಗಿ ಗ್ರಾಮದ ರೈತ ಆನಂದ ದೇಸಾಯಿ ಅಳಲು ತೋಡಿಕೊಂಡರು.

‘ತಾಲ್ಲೂಕಿನ ಗೋಠೆ, ಗದ್ಯಾಳ, ಕಾಜಿಬೀಳಗಿ, ಕನ್ನೋಳ್ಳಿ, ಅಡಿಹುಡಿ, ಕಲಬೀಳಗಿ, ತುಂಗಳ, ಮರೆಗುದ್ದಿ, ಕೊಣ್ಣೂರ, ಹುಲ್ಯಾಳ ಮುಂತಾದ ಗ್ರಾಮಗಳ ರೈತರೂ ಒಣಗುತ್ತಿರುವ ಬೆಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಾಗಿ ಮಾಡಿದ್ದ ಲಕ್ಷಗಟ್ಟಲೆ ಸಾಲದ ಹೊರೆಯೂ ಮೈಮೇಲೆ ಬಿದ್ದಿದ್ದು, ಪ್ರತಿವರ್ಷ ಕೆನಾಲ್ ಮೂಲಕ ನೀರು ಹರಿಸುತ್ತಿದ್ದರು. ಈ ಬಾರಿ ನೀರು ಹರಿಸದ್ದಕ್ಕೆ ತೀರಾ ನೀರಿನ ಮಟ್ಟ ಕೆಳಗೆ ಇಳಿದಿದೆ’ ಎಂದು ರೈತ ಸತೀಶ ಐನಾಪೂರ ದೂರಿದರು.

‘ಬೆಳೆ ರಕ್ಷಣೆಗಾಗಿ ಸರ್ಕಾರ ಹೊಸ ಯೋಜನೆ ರೂಪಿಸಬೇಕು. ದೀರ್ಘಕಾಲದ ತೋಟಗಾರಿಕಾ ಬೆಳೆಗಳು ಒಣಗಿದರೆ ತಾಲ್ಲೂಕಿನ ಸಾವಿರಾರು ರೈತರು ಸಂಕಷ್ಟದಲ್ಲಿ ಸಿಲುಕುವರು. ಹತ್ತಾರು ವರ್ಷಗಳಿಂದ ಜೋಪಾನ ಮಾಡಿ ಬೆಳೆಸಿದ ತೋಟದ ಬೆಳೆಗಳು ನಾಶ ಹೊಂದಿದರೆ ಮುಂದಿನ 5–10 ವರ್ಷಗಳವರೆಗೆ ಪರಿತಪಿಸ ಬೇಕಾಗುತ್ತದೆ. ಸರ್ಕಾರ ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು’ ಎಂದು ಕಾಶಿನಾಥ ಬ್ಯಾಡಗಿ ಒತ್ತಾಯಿಸಿದರು.

‘ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಒಣದ್ರಾಕ್ಷಿ ಬೆಲೆ ₹30ರಿಂದ ₹100 ಇದೆ. ಉತ್ಕೃಷ್ಟ ದರ್ಜೆಯ ಉತ್ಪನ್ನಕ್ಕೆ ₹120 ಸಿಕ್ಕರೆ, ಸಾಮಾನ್ಯ ದರ್ಜೆಯ ದ್ರಾಕ್ಷಿಗೆ ₹50ರಿಂದ ₹70 ಸಿಕ್ಕರೆ ಪುಣ್ಯ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಒಂದು ಎಕರೆ ದ್ರಾಕ್ಷಿ ತೋಟದ ವಾರ್ಷಿಕ ನಿರ್ವಹಣೆಗೆ ಕನಿಷ್ಠ ₹1.50 ಲಕ್ಷ ಬೇಕು. ಪ್ರಕೃತಿ ವೈಪರೀತ್ಯ, ನೀರಿನ ಅಲಭ್ಯತೆಯಿಂದಾಗಿ ನಿರೀಕ್ಷಿತ ಫಸಲು ಕೈ ಸೇರುವುದೇ ಅಪರೂಪವಾಗಿದೆ. ಸರ್ಕಾರ ರೈತರಿಗೆ ಸೂಕ್ತ ಬರ ಪರಿಹಾರ ನೀಡಬೇಕು’ ಎಂದು ರೈತ ಅಶೋಕ ಮಾಳಿ ಆಗ್ರಹಿಸಿದರು.

ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಆನಂದ ದೇಸಾಯಿ ಅವರ ತೋಟದಲ್ಲಿದ್ದ ಎರಡು ಎಕರೆ ದ್ರಾಕ್ಷಿ ಬೆಳೆ ತೇವಾಂಶದ ಕೊರತೆಯಿಂದ ಸಂಪೂರ್ಣ ಒಣಗಿದೆ
ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಆನಂದ ದೇಸಾಯಿ ಅವರ ತೋಟದಲ್ಲಿದ್ದ ಎರಡು ಎಕರೆ ದ್ರಾಕ್ಷಿ ಬೆಳೆ ತೇವಾಂಶದ ಕೊರತೆಯಿಂದ ಸಂಪೂರ್ಣ ಒಣಗಿದೆ

ಕಳೆದ ಎರಡು ವರ್ಷದಿಂದ ಹಸಿ ಮತ್ತು ಒಣ ದ್ರಾಕ್ಷಿ ದರ ಕುಸಿದಿದೆ. ಆದರೆ ಅದಕ್ಕೆ ಬಳಸುವ ಔಷಧ ಗೊಬ್ಬರದ ಬೆಲೆ ದುಪ್ಪಟ್ಟಾಗಿದೆ. ಇದರಿಂದ ದ್ರಾಕ್ಷಿ ತೋಟದ ನಿರ್ವಹಣೆ ಸಂಕಷ್ಟದಾಯಕವಾಗಿದೆ

–ಅಜೀತ ನ್ಯಾಮಗೌಡ ದ್ರಾಕ್ಷಿ ಬೆಳೆಗಾರ ಸಾವಳಗಿ

ಹವಾಮಾನ ಆಧರಿತ ಇನ್ಸೂರೆನ್ಸ್ ಕಟ್ಟಿದ್ದರೆ ಕೇಂದ್ರ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಎನ್ ಡಿ ಆರ್ ಎಪ್ ಪ್ರಕಾರ ಸರ್ಕಾರದಿಂದ ಹೆಕ್ಟೇರ್ ಗೆ ₹22500 ಪರಿಹಾರ ನೀಡಲಾಗುವುದು

- ಸಚಿನ ಮಾಚಕನೂರ ತೋಟಗಾರಿಕೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT