ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಬಾಲ್ಯ ವಿವಾಹ ತಡೆಗೆ ಅಂಕಿತಾ ಸಾಧನೆ ಪ್ರೇರಣೆಯಾಗಲಿ

ಎಸ್.ಎಸ್.ಎಲ್.ಸಿ ಪರೀಕ್ಷೆ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ಸನ್ಮಾನ
Published 18 ಮೇ 2024, 13:10 IST
Last Updated 18 ಮೇ 2024, 13:10 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾಲ್ಯ ವಿವಾಹ ಹೆಚ್ಚಾಗುತ್ತವೆ ಎಂಬ ಕಳಂಕ ತೊಡೆದು ಹಾಕಲು, ಹೆಣ್ಣು ಮಕ್ಕಳಿಗೆ 18 ವರ್ಷವಾಗುವ ವರೆಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ, ಅವರ ಪಾಲಕರು ಮತ್ತು ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಹೆಣ್ಣು ಮಗುವಿಗೆ ಪ್ರೋತ್ಸಾಹ ನೀಡಿದರೆ ಅಂಕಿತಾಳಂತಹ ಹಲವಾರು ಪ್ರತಿಭೆಗಳು ಹೊರಬಹುದು. ಅದಕ್ಕೆ ಪಾಲಕರು ಮಕ್ಕಳ ಓದಿಗೆ ಪ್ರೋತ್ಸಾಹ ನೀಡಬೇಕು. ಬಾಗಲಕೋಟೆ ಜಿಲ್ಲೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 27ನೇ ಸ್ಥಾನದಲ್ಲಿತ್ತು. ಈ ಬಾರಿಗ 13ನೇ ಸ್ಥಾನಕ್ಕೆ ಬಂದಿದೆ ಎಂದರು.

ಬಾಲ್ಯ ವಿವಾಹ ಮಾಡಲು ಮುಂದಾಗುತ್ತಿರುವ ಪಾಲಕರಯ ಅಂಕಿತಾಳ ಸಾಧನೆ ಮಾದರಿಯಾಗಿ ತೆಗೆದುಕೊಳ್ಳಬೇಕು. ಅವಳ ಪಾಲಕರು ತಮ್ಮ ಕನಸನ್ನು ಮಗಳ ಮೂಲಕ ನನಸು ಮಾಡಿಕೊಂಡಿದ್ದಾರೆ. ಉಳಿದ ಪಾಲಕರು ಅದೇ ಕಾರ್ಯ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಹಲವು ದಶಕಗಳ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಾಖಲೆ ನಿರ್ಮಿಸುತ್ತಿರುವ ಶಾಲೆಗಳು ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚು ಕಂಡು ಬರುತ್ತಿದ್ದವು. ಈ ವರ್ಷ ಅಂಕಿತಾಳ ಸಾಧನೆಯಿಂದಾಗಿ ಜಿಲ್ಲೆ ಅಷ್ಟೇ ಅಲ್ಲ, ಉತ್ತರ ಕರ್ನಾಟಕ ಭಾಗವು ಶೈಕ್ಷಣಿಕವಾಗಿ ಅಭಿವೃದ್ದಿಯತ್ತ ಸಾಗುತ್ತಿರುವುದು ಕಂಡುಬಂದಿದೆ ಎಂದರು.

ಪ್ರತಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮೇಲುಸ್ತುವಾರಿಯಲ್ಲಿ ಗ್ರಂಥಾಲಯ, ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯವನ್ನು ಜಿಲ್ಲಾ ಪಂಚಾಯಿತಿಯಿಂದ ಒದಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿದರು.

ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಜು ವಾರದ ಉಪಸ್ಥಿತರಿದ್ದರು.

‘ಅಂಕವೇ ಮಹತ್ವವಲ್ಲ’

‘ನನ್ನ ಶ್ರಮದ ಜೊತೆ ಕುಟುಂಬ ಶಾಲಾ ಶಿಕ್ಷಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಯಿತು. ಸಾಧಿಸುವ ಛಲವೊಂದಿದ್ದರೆ ಮಾತ್ರ ಸಾಲದು. ಅದಕ್ಕೆ ಪೂರಕ ವಾತಾವರಣ ಹಾಗೂ ಪ್ರೇರಣೆ ಇದ್ದಾಗ ಸಾಧನೆ ಸಾಧ್ಯವಾಗುತ್ತದೆ. ನನ್ನ ಕೆಲ ಮಿತ್ರರು ಪರೀಕ್ಷೆಯ ಭಯದಲ್ಲಿ ಅಂಕಗಳನ್ನು ಪಡೆಯುವಲ್ಲಿ ವಿಫಲರಾಗಿರಬಹುದು. ಅಂಕ ಮುಖ್ಯವಾದರೂ ಅದೇ ಎಲ್ಲವೂ ಅಲ್ಲ. ಅವರು ಕೂಡ ಬುದ್ದಿವಂತರು’ ಎಂದು ಅಂಕಿತಾ ಕೊಣ್ಣೂರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT